ಜೋಧಪುರ್ - ನೀತಿ ಕಥೆಗಳ ನೀಲಿ ನಗರ

ಜೈಪುರದ ನಂತರ ಜೋಧಪುರವು ರಾಜಸ್ತಾನದ ಪ್ರಮುಖ ನಗರ. ಈ ನಗರಕ್ಕೆ ಸೂರ‍್ಯ ನಗರ  ಮತ್ತು ನೀಲಿ ನಗರ ಎಂದೂ ಕರೆಯಲಾಗುತ್ತದೆ. ಸನ್‌ ಸಿಟಿ ಎಂದು ಹೆಸರು ಬಂದಿದ್ದು, ಇಲ್ಲಿನ ವಾತಾವರಣವು ಬಿಸಿಲಿನಿಂದ ಕೂಡಿರುವುದರಿಂದಾಗಿ. ನೀಲಿ ನಗರ ಎಂದು ಹೆಸರು ಬಂದಿದ್ದು, ಇಲ್ಲಿನ ಮೆಹ್ರಾನಗಢ ಕೋಟೆಯ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಎಲ್ಲಾ ಮನೆಗಳು ನೀಲಿ ಬಣ್ಣದಿಂದ ಕೂಡಿರುವುದರಿಂದಾಗಿ. ಥಾರ‍್ ಮರುಭೂಮಿಗೆ ಜೋಧ್‌ಪುರ ಪ್ರವೇಶದ್ವಾರ ಎಂದು ಗುರುತಿಸಲ್ಪಟ್ಟಿದೆ. ಇಲ್ಲಿಂದಲೇ ಥಾರ‍್ ಮರುಭೂಮಿ ಶುರುವಾಗುತ್ತದೆ. 1459 ರಲ್ಲಿ ಈ ನಗರವನ್ನು ನಿರ್ಮಿಸಿದ್ದು ರಾವ್‌ ಜೋಧಾ. ಈತ ರಾಥೋಡ್‌ ಕುಟುಂಬದ ಮುಖ್ಯಸ್ಥ. ಈ ನಗರವು ಮಾರ‍್ವಾರ‍್ ಎಂದು ಕರೆಯಲ್ಪಟ್ಟಿತ್ತು. ಸದ್ಯದ ಹೆಸರನ್ನು ರಜಪೂತ ಮುಖಂಡ ರಾವ್ ಜೋಧಾ ಹೆಸರಿನಿಂದ ಪಡೆಯಲಾಗಿದೆ.

ಸಾಂಪ್ರದಾಯಿಕ ತಿನಿಸುಗಳು

ಜೊಧಪುರಕ್ಕೆ ಬರುವ ಪ್ರವಾಸಿಗರು ಮಖನಿಯಾ ಲಸ್ಸಿಯಂತ ವಿಶಿಷ್ಟ, ಸಾಂಪ್ರದಾಯಿಕ ತಿನಿಸುಗಳನ್ನು ಸವಿಯಬಹುದು. ಇದನ್ನು ಮೊಸರು ಮತ್ತು ಸಕ್ಕರೆಯನ್ನು ಹಾಕಿ ಮಾಡಲಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಮಾವಾ ಕಚೋರಿ, ಪ್ಯಾಜ್‌ ಕಿ ಕಚೋರಿ ಮತ್ತು ಮಿರ್ಚಿ ಬಡಾವನ್ನೂ ಕೂಡಾ ಪ್ರವಾಸಿಗರು ಸವಿಯಬಹುದು. ರಾಜಸ್ತಾನಿ ತಿಂಡಿಗಳ ಜೊತೆಗೆ ಪ್ರವಾಸಿಗರು ಕರಕುಶಲ ಸಾಮಗ್ರಿಗಳು, ಎಂಬ್ರಾಯ್ಡರಿ ಶೂಗಳು ಮತ್ತು ಗಿಫ್ಟ್‌ಗಳನ್ನು ಕೂಡಾ ಖರೀದಿಸಬಹುದು. ಈ ನಗರದಲ್ಲಿ ಶಾಪಿಂಗ್‌ಗೆ ಎಂದು ಸಜೋತಿ ಗೇಟ್‌, ಸ್ಟೇಷನ್‌ ರಸ್ತೆ, ಟ್ರಿಪೋಲಿಯಾ ಬಜಾರ‍್, ಮೋಚಿ ಬಜಾರ‍್, ನಾಯಿ ಸಾರಕ್‌ ಮತ್ತು ಕ್ಲಾಕ್‌ ಟವರುಗಳಿವೆ. ಈ ನಗರವು ಕೆಂಪು ಮೆಣಸಿನ ಅತಿ ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ.

ಮನರಂಜನೆ, ಮೇಳಗಳು ಮತ್ತು ಹಬ್ಬಗಳು

ಜೋಧಪುರವು ಹಲವು ಹಬ್ಬಗಳಿಗೆ ಜನಪ್ರಿಯ. ಈ ಹಬ್ಬಗಳು ವರ್ಷಗಳವರೆಗೆ ನಡೆಯುತ್ತವೆ. ಇಂಟರ್‌ನ್ಯಾಷನಲ್ ಡಸರ್ಟ್‌ ಕೈಟ್ ಫೆಸ್ಟಿವಲ್‌ನ್ನು ಜನವರಿ 14 ರಂದು ಪೋಲೋ ಗ್ರೌಂಡ್‌ನಲ್ಲಿ ನಡೆಸಲಾಗುತ್ತದೆ. ಇದು ಮೂರು ದಿನಗಳ ಹಬ್ಬವಾಗಿದ್ದು ಗಾಳಿಪಟ ಸ್ಫರ್ಧೆಯನ್ನು ನಡೆಸಲಾಗುತ್ತದೆ. ಈ ಮೇಳದಲ್ಲಿ ಭಾಗವಹಿಸಲು ಜಗತ್ತಿನ ವಿವಿಧೆಡೆಯಿಂದ ಸ್ಪರ್ಧಿಗಳು, ಜನರು ಆಗಮಿಸುತ್ತಾರೆ. ಏರ‍್ ಫೋರ್ಸ್‌‌ನಿಂದ ಬಣ್ಣಬಣ್ಣದ ಗಾಳಿಪಟವನ್ನು ಹೆಲಿಕಾಪ್ಟರಿನ ಮೂಲಕ ಹಾರಿಬಿಡಲಾಗುತ್ತದೆ. ಪ್ರವಾಸಿಗರು ಮಾರ್ವಾರ ಹಬ್ಬವನ್ನು ಕೂಡಾ ನೋಡಹುದು. ಇದು ಆಶ್ವಿನಿ ಮಾಸದಲ್ಲಿ, ಅಂದರೆ ಸಪ್ಟೆಂಬರ‍್-ಅಕ್ಟೋಬರ‍್ ತಿಂಗಳಿನಲ್ಲಿ ನಡೆಯುತ್ತದೆ. ಈ ಎರಡು ದಿನದ ಹಬ್ಬವು ಜಾನಪದ ಸಂಗೀತ ಮತ್ತು ರಾಜಸ್ತಾನಿ ನೃತ್ಯವನ್ನು ನೋಡುವ ಅವಕಾಶವನ್ನು ಪ್ರವಾಸಿಗರಿಗೆ ಕಲ್ಪಿಸುತ್ತದೆ. ಇದರ ಜೊತೆಗೆ, ಜೋಧಪುರದ ನಾಗ್ಪುರ ಮೇಳವು ಕೂಡಾ ಎರಡನೇ ಅತಿ ದೊಡ್ಡ ಹಬ್ಬವಾಗಿದೆ.ಈ ಹಬ್ಬವನ್ನು ಜನವರಿಯಿಂದ ಫೆಬ್ರುವರಿ ಅವಧಿಯಲ್ಲಿ ನಡೆಸಲಾಗುತ್ತದೆ. ಇದನ್ನು ಕ್ಯಾಸಲ್‌ ಫೇರ‍್ ಆಫ್‌ ನಾಗ್ಪುರ ಎಂದು ಕರೆಯಲಾಗುತ್ತದೆ. ಸುಮಾರು 70 ಸಾವಿರದ ವರೆಗೆ ಕೋಣಗಳು, ಒಂಟೆಗಳು ಮತ್ತು ಕುದುರೆಗಳ ವ್ಯಾಪಾರವು ಈ ಹಬ್ಬದಲ್ಲಿ  ನಡೆಯುತ್ತದೆ. ಈ ಹಬ್ಬಕ್ಕಾಗಿ ಪ್ರಾಣಿಗಳನ್ನು ಚೆಂದವಾಗಿ ಶೃಂಗರಿಸಲಾಗುತ್ತದೆ. ಒಂಟೆ ರೇಸ್‌, ಕೋಣದ ರೇಸ್‌ಗಳೂ ಸೇರಿದಂತೆ ಹಲವು ಆಕರ್ಷಣೆಗಳು ಈ ಹಬ್ಬದಲ್ಲಿವೆ.

ಸಂಪ್ರದಾಯಕ್ಕೆ ವಾಸ್ತುಶಿಲ್ಪದ ಮಿಶ್ರಣ

ಬಾಯಲ್ಲಿ ನೀರೂರಿಸುವ ತಿನಿಸುಗಳು, ಶಾಪಿಂಗ್‌ ಮತ್ತು ಹಬ್ಬಗಳು... ಇವೆಲ್ಲದರ ಹೊರತಾಗಿ ಜೋಧ್‌ಪುರದಲ್ಲಿ ಹಳೆಯ ರಾಜರ ಕಾಲದ ಕೋಟೆಗಳು, ಸುಂದರವಾದ ಅರಮನೆಗಳು, ಉದ್ಯಾನಗಳು, ದೇವಸ್ಥಾನಗಳು ಮತ್ತು ಹೋಟೆಲ್‌ಗಳನ್ನು ಕಾಣಬಹುದು. ಈ ಪ್ರವಾಸಿ ತಾಣಗಳಲ್ಲಿ ಉಮೈದ್‌ ಭವನ್‌ ಅರಮನೆಯು ನೋಡಲೇಬೇಕಾದ ಸ್ಥಳ. ಈ ಸುಂದರವಾದ ಅರಮನೆಯು ಇಂಡೋ ಕೊಲೋನಿಯಲ್‌ ವಾಸ್ತುಶಿಲ್ಪಕ್ಕೆ ಸೂಕ್ತವಾದ ಉದಾಹರಣೆ. ಈ ಸುಂದರವಾದ ವಾಸ್ತುಶಿಲ್ಪ ಶೈಲಿಯು ಕಟ್ಟಡಕ್ಕೆ ಒಂದು ಅದ್ಭುತ ನೋಟವನ್ನು ನೀಡುತ್ತದೆ. ಪ್ರವಾಸಿಗರು ಮಾದರಿ ವಿಮಾನಗಳನ್ನು, ಆಯುಧಗಳನ್ನು, ಪುರಾತನ ಗಡಿಯಾರಗಳನ್ನು, ಬಾಬ್ ವಾಚ್‌ಗಳನ್ನು, ಕ್ರಾಕೆರಿಗಳನ್ನು ಮತ್ತು ಫೊಟೋಗಳನ್ನು ನೋಡಬಹುದು. ಈ ಎಲ್ಲವುಗಳನ್ನು ಉಮೈದ್‌ ಭವನ ಅರಮನೆಯಲ್ಲಿರುವ ಉಮೈದ್‌ ಭವನ್‌ ಅರಮನೆಯ ಮ್ಯೂಸಿಯಂನಲ್ಲಿ ಕಾಣಸಿಗುತ್ತವೆ.ಮೆಹ್ರಾನಗಢ ಕೋಟೆಯು ಜೊಧ್‌ಪುರದಲ್ಲೇ ಅತ್ಯಂತ ಪ್ರಸಿದ್ಧ ಕೋಟೆ. ಈ ಕೋಟೆಯು ಸುಂದರವಾದ ಅರಮನೆಗಳಿಗೆ ಜನಪ್ರಿಯವಾಗಿದೆ. ಇಲ್ಲಿ ಮೋತಿ ಮಹಲ್‌, ಫೂಲ್‌ ಮಹಲ್‌, ಶೀಶ್ ಮಹಲ್‌ ಮತ್ತು ಝಾಂಕಿ ಮಹಲ್‌ಗಳಿವೆ. ಕೋಟೆಗೆ ಏಳು ಪ್ರವೇಶದ್ವಾರಗಳಿವೆ. ಇವಕ್ಕೆ ಐತಿಹಾಸಿಕ ಮಹತ್ವವಿದೆ. ಕೋಟೆಯ ಒಳಗೆ ಮ್ಯೂಸಿಯಂ ಇದ್ದು, ಈ ಮ್ಯೂಸಿಯಂನಲ್ಲಿ ಅರಮನೆಗೆ ಸಂಬಂಧಿಸಿದ ವಿಶಿಷ್ಟ, ಅಪರೂಪದ ಕಲಾಕೃತಿಗಳಿವೆ. 14 ಪ್ರದರ್ಶನಾ ಕೋಣೆಗಳು ಇಲ್ಲಿದೆ. ಇವುಗಳಲ್ಲಿ ರಾಜರ ಕಾಲದ ಆಯುಧಗಳು, ಆಭರಣಗಳು ಮತ್ತು ಪ್ರಸಾದನಗಳಿವೆ.

ಆಕರ್ಷಣೆಗಳ ವರ್ಗೀಕರಣ

ಪ್ರವಾಸಿಗರು ಜೋಧ್‌ಪುರಕ್ಕೆ ರಜಾಕಾಲದ ಪ್ರವಾಸ ಕೈಗೊಂಡಾಗ, ಸುಮಧುರವಾದ ಮಂಡೋರ‍್ ಉದ್ಯಾನವನ್ನು ನೋಡಬೇಕು. ಇಲ್ಲಿ ಜೋಧ್‌ಪುರ ರಾಜರ ಸಮಾಧಿಗಳಿವೆ. ಮಹಾಮಂದಿರ ದೇವಸ್ಥಾನ, ರಸಿಕ್ ಬಿಹಾರಿ ದೇವಸ್ಥಾನ, ಗಣೇಶ ದೇವಸ್ಥಾನ, ಬಾಬಾ ರಾಮದೇವ ದೇವಸ್ಥಾನ, ಸಂತೋಷಿ ಮಾತಾ ದೇವಸ್ಥಾನ, ಚಾಮುಂಡ ಮಾತಾ ದೇವಸ್ಥಾನ ಮತ್ತು ಅಚಲ್‌ ನಾಥ ಶಿವಾಲಯವು ಜೋಧ್‌ಪುರದ ಪ್ರಸಿದ್ಧ ಧಾರ್ಮಿಕ ಸ್ಥಳಗಳು.ಬಲ್ಸಾಮಂದ್‌ ಕೆರೆಯು ಈ ಸುತ್ತಮುತ್ತಲಿನ ಪ್ರದೇಶಕ್ಕೆ ಅತ್ಯುತ್ತಮವಾದ ನೀರಿನ ಮೂಲ. ಪ್ರವಾಸಿಗರು ಬಲ್ಸಾಮಂದ್‌ ಕೆರೆ ಅರಮನೆಯ ಮೂಲಕ ಕೆರೆಯನ್ನು ನೋಡಬಹುದು. ಈ ಅರಮನೆಯು ಈಗ ಹೋಟೆಲ್‌ ಆನ್ನಾಗಿ ಪರಿವರ್ತಿತವಾಗಿದೆ. ರಜಪೂತ ಶೈಲಿಯ ವಾಸ್ತುಶಿಲ್ಪಕ್ಕೆ ಇದು ಹೆಸರಾಗಿದೆ. ಇನ್ನೊಂದು ಪ್ರಮುಖ ನೀರಿನ ಮೂಲ ಕೈಲಾನಾ ಕೆರೆ. ಈ ಕೆರೆಯು ತನ್ನ ಸೌಂದರ್ಯಕ್ಕೆ ಜನಪ್ರಿಯವಾಗಿದೆ. ಇನ್ನು, ಪ್ರವಾಸಿಗರು ಕೆರೆಯಲ್ಲಿ ಬೋಟಿಂಗ್ ಹೋಗುವುದರ ಜೊತೆಗೆ ಕೆರೆ ದಂಡೆಯ ಮೇಲೆ ವಾಕ್ ಕೂಡಾ ಮಾಡಬಹುದು.ಗುಡಾ ಬಿಶ್ನೋಯಿ ಹಳ್ಳಿಯು ಜೋಧ್‌ಪುರಕ್ಕೆ ದೇಶಾದ್ಯಂತದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿನ ಸ್ಥಳೀಯರ ಜೊತೆಗೆ ಚಿಂಕಾರಾಗಳನ್ನು ನೋಡಬಹುದು. ಪ್ರಾಣಿಪ್ರಿಯರು ಇಲ್ಲಿ ನವಿಲುಗಳು, ಬ್ಲ್ಯಾಕ್‌ ಬಕ್‌ಗಳನ್ನು, ಮತ್ತು ಇತರ ವಲಸೆ ಹಕ್ಕಿಗಳನ್ನು ನೋಡಬಹುದು. ಇದೇ ವೇಳೆ ಜೋಧ್‌ಪುರಕ್ಕೆ ಭೇಟಿ ನೀಡುವ ಪ್ರಾಣಿಪ್ರಿಯರು ವಿವಿಧ ಬಗೆಯ ಹಲ್ಲಿಗಳನ್ನು, ಮರುಭೂಮಿಯ ತೋಳಗಳನ್ನು, ಬ್ಲ್ಯೂ ಬುಲ್‌ಗಳನ್ನು, ಮುಂಗುಸಿಗಳನ್ನು, ಮಂಗಗಳನ್ನು ಮಚಿಯಾ ಸಫಾರಿ ಪಾರ್ಕ್‌‌ನಲ್ಲಿ ನೋಡಿ ಆನಂದಿಸಬಹುದು. ಈ ಪಾರ್ಕ್‌ ಜೋಧ್‌ಪುರ-ಜೈಸಲ್ಮೇರ ರಸ್ತೆಯಲ್ಲಿದೆ. ಜೋಧ್‌ಪುರ ನಗರದಿಂದ ಸುಮಾರು 9 ಕಿ.ಮೀ ದೂರದಲ್ಲಿ ಈ ಪಾರ್ಕ್‌ ಇದೆ.ಪ್ರವಾಸಿಗರು ರಾಜಾ ಅಭಯ್‌ ಸಿಂಗ್‌ ನಿರ್ಮಿಸಿದ ಸುಂದರವಾದ ಚೊಕೆಲಾವ್‌ ಬಾಗ್‌ ಅನ್ನು ನೋಡಬಹುದು. ಈ ಉದ್ಯಾನದಲ್ಲಿ ಮೂರು ಟೆರೇಸ್‌ ಇದೆ. ಪ್ರತಿ ಟೆರೇಸ್‌ ವಿಶಿಷ್ಟ ಉದ್ದೇಶವನ್ನು ಹೊಂದಿದೆ. ಇದರ ಜೊತೆಗೆ ಜಸ್ವಂತ್‌ ಥಾಡಾ ಕೂಡಾ ಪ್ರವಾಸಿಗರಿಗೆ ಉತ್ತಮ ಸ್ಥಳ. ಈ ಕಟ್ಟಡವು ತಾಜ್‌ ಮಹಲ್‌ ಆಫ್‌ ಮಾರ‍್ವಾರ‍್ ಎಂದು ಕರೆಯಲ್ಪಟ್ಟಿದೆ. ಇದನ್ನು ಸುಂದರವಾದ ಮಾರ್ಬಲ್‌ನಿಂದ ನಿರ್ಮಿಸಲಾಗಿದೆ. ಇತರ ಪ್ರವಾಸಿ ಆಕರ್ಷಣೆಗಳೆಂದರೆ ಝೀನಾನಾ ಮಹಲ್‌, ಲೋಹಾ ಪೋಲ್‌, ಸರ್ಕಾರಿ ಮ್ಯೂಸಿಯಂ, ಘಂಟಾ ಘರ‍್, ಜಸ್ವಂತ್‌ ಸಾಗರ ಆಣೆಕಟ್ಟು, ರಾಯ್‌ ಕಾ ಬಾಗ್‌ ಅರಮನೆ ಮತ್ತು ಉಮೆದ್‌ ಗಾರ್ಡನ್‌.

ಜೋಧ್‌ಪುರಕ್ಕೆ ಹೋಗುವುದು

ಜೋಧ್‌ಪುರದಲ್ಲಿ ವಿಮಾನನನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಿವೆ. ಇವು ಭಾರತದ ಪ್ರಮುಖ ನಗರಗಳಿಗೆ ಸಂಪರ್ಕವನ್ನು ಹೊಂದಿವೆ. ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಪ್ರವಾಸಿಗರು ಜೈಪುರ, ದೆಹಲಿ, ಜೈಸಲ್ಮೇರ‍್, ಬಿಕಾನೇರ‍್, ಆಗ್ರಾ, ಅಹ್ಮದಾಬಾದ್‌, ಅಜ್ಮೇರ‍್, ಉದಯಪುರ ಮತ್ತು ಆಗ್ರಾದಿಂದ ಬಸ್‌ಗಳ ಮೂಲಕ ಪ್ರಯಾಣಿಸಬಹುದು.

ವರ್ಷಪೂರ್ತಿ ಈ ಪ್ರದೇಶವು ಬಿಸಿಯಾದ ವಾತಾವರಣವನ್ನು ಹೊಂದಿರುತ್ತದೆ. ಬೇಸಿಗೆಗಾಲ ಮತ್ತು ಮಳೆಗಾಲ ಹಾಗೂ ಚಳಿಗಾಲವು ಮುಖ್ಯ ಕಾಲಮಾನಗಳು. ಜೋಧ್‌ಪುರಕ್ಕೆ ಭೇಟಿ ನೀಡುವ ಉತ್ತಮ ಕಾಲವೆಂದರೆ ಅಕ್ಟೋಬರಿನಿಂದ ಫೆಬ್ರುವರಿಯ ಅವಧಿ.

Please Wait while comments are loading...