ಕಿಶನ್ ಗಡ್ - ಅಮೃತಶಿಲಾ ನಗರಿ

ಕಿಶನ್ ಗಡ್ ಇದೊಂದು ಪುರಸಭೆ ಹಾಗು ನಗರವಾಗಿದ್ದು, ರಾಜಸ್ಥಾನದ ಅಜ್ಮೇರ್ ನ ವಾಯವ್ಯ ಭಾಗದಲ್ಲಿದೆ. ಜೋಧಪುರ್ ರಾಜಕುವರ ಕಿಶನ್ ಸಿಂಗ್ ನಂತರ ಇದಕ್ಕೆ ಈ ಹೆಸರು ಬಂದಿದೆ. ಕಿಶನ್ ಸಿಂಗ್ ತನ್ನ ಬುದ್ಧಿಮತ್ತೆ ಮತ್ತು ಚತುರತೆಯಿಂದ ಈ ಪ್ರದೇಶವನ್ನು ಆಕ್ರಮಿಸಿಕೊಂಡ. ಬ್ರಿಟೀಷರ ಆಡಳಿತದಲ್ಲಿ ಕಿಶನ್ ಗಡ್, ಜೋಧಪುರ್ ನ ರಾಜಧಾನಿಯಾಗಿತ್ತು.

1840 ಮತ್ತು1879 ರ ಮಧ್ಯೆ ಕಿಶನ್ ಗಡ್ ಪೃಥ್ವಿ ಸಿಂಗ್ ನ ಆಡಳಿತದಲ್ಲಿತ್ತು. ನಂತರ ಪೃಥ್ವಿ ಸಿಂಗ್ ಮಗನಾದ ಸರ್ದುಲ್ ಸಿಂಗ್ ಯಶಸ್ವಿಯಾಗಿ ಮುನ್ನಡೆಸಿದ. ಪ್ರಸ್ತುತ, ಬ್ರಿರಾಜ್ ಸಿಂಗ್ ಕಿಶನ್ ಗಡ್ ನ ಮಹಾರಾಜನಾಗಿ ಮುಂದುವರೆದಿದ್ದಾರೆ. ಇಲ್ಲಿರುವ ಫೂಲ್ ಮಹಲ್ ಅರಮನೆ, ರೂಪನ್ ಗಡ್ ಕೋಟೆ ಮತ್ತು ಕಿಶನ್ ಗಡ್ ಕೋಟೆ ಮುಂತಾದವುಗಳು, ಕಿಶನ್ ಗಡ್ ಅನ್ನು ಒಂದು ಪ್ರಸಿದ್ಧ ಪ್ರವಾಸಿ ತಾಣವನ್ನಾಗಿ ಮಾಡಿವೆ.

ಕಿಶನ್ ಗಡ್ ಶೈಲಿ ಎಂದು ಹೆಸರಿಸಲಾಗುವ ವರ್ಣಚಿತ್ರ ಮಾದರಿಯು ಹುಟ್ಟಿದ್ದು ಈ ಸ್ಥಳದಲ್ಲೆ. ಈ ಶೈಲಿಯ ವರ್ಣಚಿತ್ರವು, ಬನಿ ಥನಿ ಎಂಬ ಹೆಣ್ಣಿನ ವರ್ಣಚಿತ್ರಕ್ಕೆ ಹೆಸರುವಾಸಿಯಾಗಿದೆ. ಕಿಶನ್ ಗಡ್ ಶೈಲಿಯ ವರ್ಣಚಿತ್ರದಲ್ಲಿ ಹಸಿರು ಬಣ್ಣ ಹಾಗು ಭೂದೃಶ್ಯಗಳ ಚಿತ್ರಣವು ಹಾಸುಹೊಕ್ಕಾಗಿರುತ್ತದೆ. ಕಾಲಕ್ರಮೇಣ ಕಿಶನ್ ಗಡ್ ಭಾರತದ ಮಾರ್ಬಲ್ ಸಿಟಿ ಎಂದು ಪ್ರಸಿದ್ಧವಾಯಿತು. ಇಡೀ ಪ್ರಪಂಚದಲ್ಲಿ, ಕೇವಲ ಕಿಶನ್ ಗಡ್ ನಲ್ಲಿ ಮಾತ್ರ ಒಂಬತ್ತು ಗೃಹಗಳ ದೇವಸ್ಥಾನವಿರುವುದೆಂದು ಹೇಳಲಾಗುತ್ತದೆ.

ಕೆಂಪು ಮೆಣಸಿನಕಾಯಿಯ ಸಗಟು ವ್ಯಾಪಾರ, ಗ್ರಾನೈಟ್ ಮತ್ತು ಮಾರ್ಬಲ್ ಗಳ ವ್ಯಾಪಾರಕ್ಕಾಗಿ ಕಿಶನ್ ಗಡ್ ಹೆಸರುವಾಸಿಯಾಗಿದೆ.

135 ಕಿ.ಮೀ ದೂರದಲ್ಲಿರುವ ಜೈಪುರ್ ನ ಸಂಗನೇರ್ ವಿಮಾನ ನಿಲ್ದಾಣವು ಕಿಶನ್ಗಡ್ ಗೆ ಹತ್ತಿರದ ವಿಮಾನ ನಿಲ್ದಾಣವಾಗಿದ್ದು, 27 ಕಿ.ಮೀ ದೂರವಿರುವ ಅಜ್ಮೇರ್ ಹತ್ತಿರದ ರೈಲು ನಿಲ್ದಾಣವಾಗಿದೆ. ರಾಜ್ಯ ಸರ್ಕಾರಿ ಬಸ್ಸುಗಳು ಆಗ್ರಾ, ಬಿಕಾನೇರ್, ಜೋಧಪುರ್, ಜೈಸಲ್ಮೇರ್ ಮತ್ತು ಭರತ್ಪುರ್ ಗಳಿಂದ ಕಿಶನ್ಗಡ್ ಗೆ ಲಭ್ಯವಿದೆ. ಜುಲೈ ಮತ್ತು ಅಗಸ್ಟ್ ತಿಂಗಳುಗಳಲ್ಲಿ ಇಲ್ಲಿ ನಡೆಯುವ ಗಂಗೌರ್ ಉತ್ಸವವನ್ನು ಅತಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇದಲ್ಲದೆ, ಹೋಳಿ ಮತ್ತು ದೀಪಾವಳಿ ಉತ್ಸವಗಳನ್ನೂ ಕೂಡ ಅತಿ ಭಕ್ತಿ ಮತ್ತು ಶೃದ್ಧೆಯಿಂದ ಆಚರಿಸಲಾಗುತ್ತದೆ. ಅಕ್ಟೋಬರ್ ಮತ್ತು ಮಾರ್ಚ್ ಮಧ್ಯದ ಅವಧಿಯು ಇಲ್ಲಿಗೆ ಭೇಟಿ ನೀಡಲು ಉತ್ತಮ ಕಾಲವಾಗಿದೆ.

Please Wait while comments are loading...