ಬಿಕಾನೇರ್-  ರಾಜರ ಕೋಟೆಗಳು, ಕಥೆಗಳು ಮತ್ತು ಉತ್ಸವಗಳ ಬೀಡು.

ಬಿಕಾನೇರ್ ಎಂಬುದು ರಾಜಸ್ಥಾನದ ಒಂದು ಪಟ್ಟಣ. ಇಲ್ಲಿರುವ ಮರುಭೂಮಿಯಲ್ಲಿ ಚಾಚಿಕೊಂಡು ಮಲಗಿರುವ ಹೊಂಬಣ್ಣದ ಮರಳಿನ ಅಲೆಗಳು, ಹೊಡೆದಾಡುವ ಒಂಟೆಗಳು ಮತ್ತು ರಜಪೂತ ದೊರೆಗಳ ಸಾಹಸ ಕಥೆಗಳಿಂದ ಕೂಡಿ,  ಈ ಊರಿನ ಬಗ್ಗೆ ಅಸೂಯೆ ಪಡುವಷ್ಟು ಇಷ್ಟವಾಗುತ್ತದೆ. ಈ ಮರುಭೂಮಿ ಪಟ್ಟಣವು ರಾಜಸ್ಥಾನದ ಈಶಾನ್ಯ ಭಾಗದ ಕಡೆ ಇರುವ, ಥಾರ್ ಮರುಭೂಮಿಯ ನಟ್ಟ ನಡುವೆ ನೆಲೆಗೊಂಡಿದೆ.  ಈ ನಗರವನ್ನು 1488ರಲ್ಲಿ ರಾಥೋಡ್ ಯುವರಾಜ ರಾವ್ ಬೀಕಾಜಿ ನಿರ್ಮಿಸಿದನು. ಈ ನಗರವು ಸ್ವಾದಿಷ್ಟವಾದ ಭುಜಿಯಗಳು, ವರ್ಣರಂಜಿತ ಉತ್ಸವಗಳು, ಮನ ಮೋಹಕ ಅರಮನೆಗಳಿಗೆ, ಸುಂದರವಾದ ಶಿಲ್ಪಗಳಿಗೆ ಮತ್ತು ಹೆಮ್ಮೆಯಿಂದ ನಿಂತಿರುವ ಮರಳುಗಲ್ಲಿನಿಂದ ನಿರ್ಮಾಣಗೊಂಡಿರುವ ಕೋಟೆಗಳಿಗೆ ಹೆಸರುವಾಸಿಯಾಗಿದ್ದು, ರಜಪೂತರ ಶ್ರೀಮಂತ ಸಂಸ್ಕೃತಿಯ ಪ್ರತೀಕವಾಗಿದೆ.

ಬಾಯಿಯಲ್ಲಿ ನೀರೂರಿಸುವ ಸಾಂಪ್ರದಾಯಿಕ ಆಹಾರಗಳು.

ಬಿಕಾನೇರ್ ಎಂಬುದು ಬೃಹತ್ ಪ್ರಮಾಣದ ಭುಜಿಯ ಉದ್ಯಮದ ತವರೂರು. ಈ ಉದ್ಯಮದ ಪ್ರಾರಂಭವು ಇಲ್ಲಿನ ರಾಜನಾದ ಶ್ರೀ ಡುಂಗರ್ ಸಿಂಗ್‍ನ ಆಡಳಿತಾವಧಿಯಲ್ಲಿ, ಅಂದರೆ 1877 ರಷ್ಟು ಹಿಂದೆಯೆ ಆಗಿತ್ತು.  ಈ ಭುಜಿಯಾವನ್ನು ಮೊಟ್ಟಮೊದಲ ಬಾರಿಗೆ ರಾಜನ ಅತಿಥಿಗಳಿಗೆ "ಡುಂಗರ‍್‍ಶಾಹಿ ಭುಜಿಯಾ" ಎಂಬ ಹೆಸರಿನಲ್ಲಿ ತಯಾರಿಸಿ, ಉಣಬಡಿಸಲಾಗುತ್ತಿತ್ತು. ಬಿಕಾನೇರ್ ಆಹಾರಪ್ರಿಯರ ಬಾಯಿಯಲ್ಲಿ ನೀರೂರಿಸುವ ಬಿಕಾನೇರ್ ಭುಜಿಯಗೆ ಹಾಗು ಸಿಹಿ ಮತ್ತು ಕುರುಕಲು ತಿಂಡಿಗಳಿಗೆ ಜಗತ್ಪ್ರಸಿದ್ಧವಾಗಿದೆ. ಈ ಕಾರಣದಿಂದಾಗಿ ಈ ಊರು ಪ್ರಪಂಚಾದಾದ್ಯಂತ ಖ್ಯಾತಿಗಳಿಸಿರುವ "ಬೀಕಾಜಿ" ಮತ್ತು " ಹಲ್ದಿರಾಮ್ಸ್" ನಂತಹ ಬ್ರಾಂಡ್‍ಗಳಿಗೆ ಖ್ಯಾತಿ ಪಡೆದಿದೆ. ಬಿಕಾನೇರ್ ಭುಜಿಯಾವು ಒಂದು ಪ್ರಸಿದ್ಧವಾದ ಗರಿಗರಿಯಾದ ಕುರುಕಲು ತಿಂಡಿಯಾಗಿದ್ದು, ಕಡಲೆ ಹಿಟ್ಟು, ಮಸಾಲೆ, ಹೆಸರು ಬೇಳೆ, ಎಣ್ಣೆ, ಉಪ್ಪು, ಕೆಂಪು ಮೆಣಸಿನಕಾಯಿ, ಕರಿ ಮೆಣಸು , ಏಲಕ್ಕಿ ಮತ್ತು ಲವಂಗಗಳನ್ನು ಹಾಕಿ ತಯಾರಿಸಲಾಗುತ್ತದೆ. ಸಿಹಿ ಮತ್ತು ಕುರುಕಲು ತಿಂಡಿ ಕ್ಷೇತ್ರದಲ್ಲಿನ ಖ್ಯಾತ ಕೈಗಾರಿಕೆಯಾದ " ಹಲ್ದಿರಾಮ್ಸ್" ಅನ್ನು ಗಂಗಾಬಿಸೆನ್ಜಿ ಅಗರ‍್‍ವಾಲ್‍ರವರು ಬಿಕನೇರಿನಲ್ಲಿ 1937 ರಲ್ಲಿ ಪ್ರಾರಂಭಿಸಿದರು.

ಬಿಕಾನೇರ್ ಒಂಟೆಗಳ ಉತ್ಸವ

ಬಿಕಾನೇರ್ ನ ಬಾಯಿಯಲ್ಲಿ ನೀರೂರಿಸುವ ಭುಜಿಯಾ ಹೊರತು ಪಡಿಸಿದರೆ. ಇಲ್ಲಿ ನಡೆಯುವ "ಬಿಕಾನೇರ್ ಒಂಟೆಗಳ ಉತ್ಸವ"ವು ಜಗತ್ತಿನೆಲ್ಲೆಡೆಯಿಂದ ಪ್ರವಾಸಿಗರನ್ನು ಭಾರತದತ್ತ ಆಕರ್ಷಿಸುತ್ತಿದೆ. ಇದನ್ನು ನೋಡಿ ಸಂಭ್ರಮಿಸಲೆಂದೆ ಜನರು ಹೊರದೇಶಗಳಿಂದ ಈ ಮರುಭೂಮಿ ನಗರಕ್ಕೆ ಬರುತ್ತಾರೆ. ಈ ಉತ್ಸವವು "ಮರಳುಗಾಡಿನ ಒಂಟೆ" ಎಂದೆ ಖ್ಯಾತಿ ಪಡೆದಿರುವ ಒಂಟೆಗಳಿಗಾಗಿ ನಡೆಸಲಾಗುತ್ತದೆ. ಈ ಉತ್ಸವವು ಜುನಾಗಢ್‍ನ ಪ್ರಖ್ಯಾತ ಕೋಟೆಯ ಹಿನ್ನೆಲೆಯಲ್ಲಿ ನಡೆಯುವ ಮೆರವಣಿಗೆಯಿಂದ ಪ್ರಾರಂಭವಾಗುತ್ತದೆ. ಈ ಉತ್ಸವದಲ್ಲಿ ಒಂಟೆಗಳನ್ನು ಆಭರಣಗಳಿಂದ ಮತ್ತು ಸುಂದರವಾದ ವರ್ಣಮಯ ವಸ್ತ್ರಗಳಿಂದ ಅಲಂಕರಿಸಲಾಗಿರುತ್ತದೆ.  ಒಂಟೆ ಓಟ, ಒಂಟೆ ಹಾಲು ಹಿಂಡುವ ಸ್ಪರ್ಧೆ, ಒಂಟೆಗಳ ತುಪ್ಪಳವನ್ನು ಸುಂದರ ವಿನ್ಯಾಸದಲ್ಲಿ ಕತ್ತರಿಸುವ ಸ್ಪರ್ಧೆ, ಅತ್ಯುತ್ತಮ ತಳಿ ಸ್ಪರ್ಧೆ, ಒಂಟೆಗಳ ದೊಂಬರಾಟ ಮತ್ತು ಒಂಟೆ ಬ್ಯಾಂಡ್‍ಗಳು ಈ ಉತ್ಸವದ ಪ್ರಧಾನ ಆಕರ್ಷಣೆಗಳಾಗಿವೆ.

ಬಿಕಾನೇರ್ ನ ಆಕರ್ಷಣೆಗಳು

ಬಿಕಾನೇರ್ ಗೆ ಭೇಟಿಕೊಡಬೇಕೆಂದು ಬಯಸುವ ಪ್ರವಾಸಿಗರು ಈ ಊರಿನಲ್ಲಿ ಕೆಂಪುಮರಳುಗಲ್ಲುಗಳಿಂದ ನಿರ್ಮಾಣವಾಗಿರುವ ಪ್ರಸಿದ್ಧ ಲಾಲ್‍ಘಡ್ ಅರಮನೆಗೆ ಭೇಟಿಕೊಡಬೇಕು. ಈ ಅರಮನೆಯ ವಾಸ್ತುಶಿಲ್ಪವು ರಜಪೂತ್, ಮೊಘಲ್ ಮತ್ತು ಯೂರೋಪಿಯನ್ ಶೈಲಿಗಳ ಸುಂದರ ಸಂಯೋಜನೆಯನ್ನು ಒಳಗೊಂಡಿದೆ. ಮೇಲ್ಮಟ್ಟದಲ್ಲಿ ತೂಗುವ ಮೊಗಸಾಲೆಗಳು ಇದರ ಅಂದವನ್ನು ಇಮ್ಮಡಿಗೊಳಿಸಿವೆ. ಬಿಕಾನೆರಿನ ರಾಜರು ಬೇಟೆ ಸಮಯದಲ್ಲಿ ಮತ್ತು ವಿಶ್ರಾಂತಿಗೋಸ್ಕರ ಬಳಸುತ್ತಿದ್ದ ಗಜ್ನೇರ್ ಅರಮನೆಯು ಸಹ ಇಲ್ಲಿನ ಪ್ರಸಿದ್ಧ ಸ್ಮಾರಕವಾಗಿದೆ. ಸೂಕ್ಷ್ಮವಾಗಿ ಕೆತ್ತಲ್ಪಟ್ಟ ಸ್ತಂಭಗಳು, ಜರೋಖಾಗಳು ಮತ್ತು ಪರದೆಗಳು ನೋಡುಗರ ಆಸಕ್ತಿಯನ್ನು ಕೆರಳಿಸುತ್ತವೆ. ಈ ಅರಮನೆಯ ಹೊರಗೆ ಭಾರತೀಯ ಜಿಂಕೆಗಳು, ಕಪ್ಪು ಜಿಂಕೆಗಳು, ನೀಲ್‍ಗಾಯ್‍ಗಳು, ಚಿಂಕಾರಗಳು, ನೀಲಿ ಎತ್ತುಗಳು ಮತ್ತು ಜಿಂಕೆಗಳನ್ನು ಕಾಣಬಹುದು.

ಬಿಕಾನೇರ್ ನ ಇನ್ನಿತರ ಆಕರ್ಷಣೆಗಳೆಂದರೆ ಜುನಾಘಡ್ ಕೋಟೆ, ಸಾದುಲ್ ಸಿಂಗ್ ವಸ್ತು ಸಂಗ್ರಹಾಲಯ, ಗಂಗಾ ಸುವರ್ಣ ಮಹೋತ್ಸವ ವಸ್ತು ಸಂಗ್ರಹಾಲಯ, ಭಂಡಾಸೆರ್ ಜೈನ್ ದೇವಾಲಯ ಮತ್ತು ಲಕ್ಷ್ಮೀ ನಾಥ್ ದೇವಾಲಯಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತವೆ. ಪ್ರವಾಸಿಗರಿಗೆ ಸಮಯಾವಕಾಶ ದೊರೆತರೆ ಬಿಕಾನೆರಿನಲ್ಲಿನ ಶಿವ್ ಬರಿ ದೇವಾಲಯ, ರತನ್ ಬೆಹರಿ ದೇವಾಲಯ, ಕೊಲಯತ್ ದೇವಾಲಯ, ಕರ್ನಿ ಮಾತಾ ದೇವಾಲಯ, ಗಜ್ನೇರ್ ವನ್ಯಧಾಮ ಮತ್ತು ಒಂಟೆ ಸಂತಾನೋತ್ಪತಿ ಕೇಂದ್ರಕ್ಕೆ ಭೇಟಿಕೊಡಬಹುದು. ಈ ಊರಿನಲ್ಲಿ ಕೆಲವು ಸಾಂಪ್ರದಾಯಿಕ ಹೋಟೆಲ್‍ಗಳಿದ್ದು, ಅವುಗಳು ಪ್ರವಾಸಿಗರಿಗೆ ಒಂಟೆ ಸಫಾರಿ, ಜೀಪ್ ಸಫಾರಿ, ರಾತ್ರಿ ಸಫಾರಿ ಮತ್ತು ಮರುಭೂಮಿಯಲ್ಲಿ ಶಿಬಿರಗಳನ್ನು ರಚಿಸಿ ಬಂದ ಪ್ರವಾಸಿಗರಿಗೆ ಮರುಭೂಮಿಯ ಸಾಮಾನ್ಯ ಜೀವನ ಶೈಲಿಯ ಪರಿಚಯವನ್ನು ಮಾಡಿಕೊಡುವ ಜೊತೆಗೆ ಮೋಜು ಮಾಡಲು ಅವಕಾಶ ಮಾಡಿಕೊಡುತ್ತವೆ.

ಬಿಕಾನೇರ್ ಗೆ ತಲುಪುವುದು ಹೇಗೆ

ಬಿಕಾನೇರ್ ಗೆ ವಿಮಾನ, ರೈಲು ಮತ್ತು ರಸ್ತೆಗಳ ಮೂಲಕ ಸುಲಭವಾಗಿ ತಲುಪಬಹುದು. ಜೋಧ್‍ಪುರ್ ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಪ್ರವಾಸಿಗರು ಇಲ್ಲಿಂದ ಟ್ಯಾಕ್ಸಿಗಳನ್ನು ಕೈಗೆಟುಕುವ ದರದಲ್ಲಿ ಬಾಡಿಗೆ ಪಡೆದು ಬೀಕನೇರಿಗೆ ತಲುಪಬಹುದು. ಬೀಕನೇರಿನ ರೈಲು ನಿಲ್ದಾಣವು ಜೈಪುರ್, ಚುರು , ಜೋಧ್‍ಪುರ್, ದೆಹಲಿ, ಕಲ್ಕ, ಹೌರಾ ಮತು ಭತಿಂಡಗಳ ನಡುವೆ ನಿಯಮಿತವಾಗಿ  ರೈಲು ಸಂಚಾರ ಸಂಪರ್ಕವನ್ನು ಹೊಂದಿದೆ. ದೆಹಲಿ, ಜೋಧ್‍ಪುರ್, ಆಗ್ರಾ, ಅಜ್ಮೀರ್, ಅಹಮದಾಬಾದ್, ಜೈಪುರ್, ಜುನ್ಜುನು, ಜೈಸಲ್ಮೇರ್, ಬರ್ಮರ್, ಉದಯ್‍ಪುರ್ ಮತ್ತು ಕೋಟಾಗಳಿಂದ ಬಸ್ಸುಗಳು ಬೀಕನೇರಿನ ಕಡೆಗೆ ಪ್ರಯಾಣಿಸುತ್ತಿರುತ್ತವೆ.

ಹವಾಮಾನ

ಬಿಕಾನೇರ್ ಒಂದು ಮರುಭೂಮಿ ನಗರವಾಗಿದ್ದು, ಸಹಿಸಲಸಾಧ್ಯವಾದ ಬೇಸಿಗೆಯನ್ನು ಮತ್ತು ಚಳಿಗಾಲಗಳನ್ನು ಹೊಂದಿದೆ. ಬೇಸಿಗೆಯಲ್ಲಿ ದಿನದ ಉಷ್ಣಾಂಶಕ್ಕೆ ಹೋಲಿಸಿದರೆ ರಾತ್ರಿಯ ಉಷ್ಣಾಂಶವು ಹಿತಕರವಾಗಿರುತ್ತದೆ. ಮಳೆಗಾಲದಲ್ಲಿ ಈ ಪ್ರಾಂತ್ಯದಲ್ಲಿ ಸ್ವಲ್ಪ ಆರ್ದ್ರತೆಯಿದ ಕೂಡಿರುತ್ತದೆ. ಚಳಿಗಾಲವು ಇಲ್ಲಿ ಡಿಸೆಂಬರ್‍‍ನಲ್ಲಿ ಶುರುವಾಗಿ ಫೆಬ್ರವರಿ ಅಂತ್ಯದವರೆಗೆ ಇರುತ್ತದೆ. ಬೀಕನೇರಿಗೆ ಪ್ರಯಾಣ ಮಾಡುವವರು ಅಕ್ಟೋಬರ್‍‍ನಿಂದ ಮಾರ್ಚ್‍ವರೆಗಿನ ತಿಂಗಳಿನಲ್ಲಿ ಪ್ರವಾಸ ಹೋಗುವುದು ಉತ್ತಮ. ಏಕೆಂದರೆ ಈ ಸಮಯದಲ್ಲಿ ಇಲ್ಲಿ ಹವಾಮಾನವು ಹಿತಕರವಾಗಿ ಮುದನೀಡುವಂತಿರುತ್ತದೆ. ಮಳೆಗಾಲವು ಈ ಊರಿಗೆ ಕಿರು ಪ್ರವಾಸ ಹೋಗಲು ಸೂಕ್ತ ಸಮಯವಾಗಿದೆ.

Please Wait while comments are loading...