ಶೇಖಾವತಿ- ದಿಟ್ಟ ಹೋರಾಟಗಾರರ ಮತ್ತು ಪ್ರಾಚೀನ ಸ್ಮಾರಕಗಳ ನಾಡು

ಶೇಖಾವತಿ ಎಂಬುದು ಈಶಾನ್ಯ ರಾಜಸ್ಥಾನದಲ್ಲಿರುವ ಒಂದು ಪ್ರಾಂತ್ಯವಾಗಿದೆ. ತನ್ನ ಐತಿಹಾಸಿಕ ಮಹತ್ವಪೂರ್ಣತೆಯಿಂದಾಗಿ ಇದು ಈ ರಾಜ್ಯದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಶೇಖಾವತಿಯ ಬಗ್ಗೆ ಮಹಾಭಾರತದಲ್ಲಿ ಸಹ ಉಲ್ಲೇಖಗಳಿವೆ. ಹಿಂದೂಗಳ ಪವಿತ್ರಗ್ರಂಥಗಳಾದ ವೇದಗಳನ್ನು ಈ ಪ್ರಾಂತ್ಯದಲ್ಲಿಯೆ ರಚಿಸಲಾಯಿತು ಎಂದು ತಿಳಿದುಬಂದಿದೆ. ಶೇಖಾವತಿಗೆ ಈ ಹೆಸರು ಇಲ್ಲಿನ ಪ್ರಾಂತ್ಯವನ್ನು ಆಳಿದ ಶೇಖಾವತ್ ರಜಪೂತರಿಂದ ಬಂದಿದೆ.

ಶೇಖಾವತಿಯಲ್ಲಿ ನೋಡಲು ಏನೇನಿದೆ?

ಶೇಖಾವತಿಯು ರಾಜಸ್ಥಾನದ " ತೆರೆದ ಕಲಾಶಾಲೆ" ಯೆಂಬ ಖ್ಯಾತಿಯನ್ನು ಮುಡಿಗೇರಿಸಿಕೊಂಡಿದೆ. ಮುಖ್ಯವಾಗಿ ಶೇಖಾವತಿಯು ತನ್ನಲ್ಲಿರುವ ಸುಂದರ ಹವೇಲಿಗಳಿಗೆ, ಕೋಟೆಗಳಿಗೆ ಮತ್ತು ಐತಿಹಾಸಿಕ ಕಟ್ಟಡಗಳಿಗೆ ಪ್ರಸಿದ್ಧವಾಗಿದೆ. ಯುವರಾಜ ನಡಿನೆ ಹವೇಲಿ, ಮೊರರ್ಕ ಹವೇಲಿ ವಸ್ತು ಸಂಗ್ರಹಾಲಯ, ಡಾ. ರಾಮನಾಥ್ ಎ ಪೊಡ್ಡರ್ ಹವೇಲಿ ವಸ್ತು ಸಂಗ್ರಹಾಲಯ, ಜಗನ್ನಾಥ್ ಸಿಂಗಾನಿಯಾ ಹವೇಲಿ ಮತ್ತು ಖೇತ್ರಿ ಮಹಲ್‌ಗಳು ಇಲ್ಲಿರುವ ಹವೇಲಿಗಳಲ್ಲಿ ಪ್ರಸಿದ್ಧವಾಗಿವೆ.

ಯುವರಾಜ ನಡಿನೆ ಹವೇಲಿಯನ್ನು 1802 ರಲ್ಲಿ ನಿರ್ಮಿಸಲಾಯಿತು. ನಂತರ ಇದನ್ನು ಒಬ್ಬ ಫ್ರೆಂಚ್ ಕಲಾವಿದರೊಬ್ಬರು ಕೊಂಡುಕೊಂಡರು. ಅವರು ಈ ಹವೇಲಿಯನ್ನು ಒಂದು ಕಲಾಶಾಲೆ ಮತ್ತು ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾರ್ಪಾಡು ಮಾಡಿದರು. ಡಾ. ರಾಮನಾಥ್ ಎ ಪೊಡ್ಡರ್ ಹವೇಲಿ ವಸ್ತುಸಂಗ್ರಹಾಲಯವು ರಾಜಸ್ಥಾನಿ ಸಂಸ್ಕೃತಿಯ ಕುರಿತಾಗಿ ಹಲವಾರು ಮೊಗಸಾಲೆಗಳನ್ನು ಹೊಂದಿದೆ. ಮೊರರ್ಕ ಹವೇಲಿ ವಸ್ತು ಸಂಗ್ರಹಾಲಯವು ಸುಮಾರು 250 ವರ್ಷಗಳಷ್ಟು ಹಳೆಯದಾದ ಕೋಟೆಯಾಗಿದೆ. ಇನ್ನು ಖೇತ್ರಿ ಹವೇಲಿಯು ಅತ್ಯಂತ ಸುಸಜ್ಜಿತವಾದ ಹವೇಲಿಯಾಗಿದ್ದು, ಸುಮಾರು 1770 ರಲ್ಲಿ ನಿರ್ಮಾಣಗೊಂಡಿದೆ. ಇದು ಗತಕಾಲದ ವಾಸ್ತುಶಿಲ್ಪದ ಅತ್ಯಂತ ಸುಂದರವಾದ ನೋಟಗಳನ್ನು ಒದಗಿಸುತ್ತದೆ.

ಮಂಡ್ವ ಕೋಟೆ, ಮುಕುಂದ್ ಘಡ್ ಕೋಟೆ ಮತ್ತು ದುಂಡ್ಲೋರ್ಡ್ ಕೋಟೆಗಳು ಈ ಪ್ರಾಂತ್ಯದಲ್ಲಿರುವ ಪ್ರಮುಖ ಕೋಟೆ - ಕೊತ್ತಲಗಳಾಗಿವೆ. ಮಂಡ್ವ ಕೋಟೆಯನ್ನು ಈಗ ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸಲಾಗಿದೆ. ಅಲ್ಲದೆ ದುಂಡ್ಲೋರ್ಡ್ ಕೋಟೆಯಲ್ಲಿ ಯೂರೋಪಿಯನ್ ವರ್ಣಚಿತ್ರಗಳನ್ನು ಹೊಂದಿರುವ ವಿಶ್ವವಿಖ್ಯಾತವಾದ ಗ್ರಂಥಾಲಯವಿದೆ. ಮುಕುಂದ್ ಘಡ್ ಕೋಟೆಯು ಸುಮಾರು 8000 ಚ. ಮೀ ಗಳಷ್ಟು ವ್ಯಾಪಿಸಿದ್ದು, ಹಲವಾರು ದೊಡ್ಡ ಸಭಾಂಗಣಗಳನ್ನು, ಹಜಾರಗಳನ್ನು ಮತ್ತು ಮೊಗಸಾಲೆಗಳನ್ನು ಹೊಂದಿದೆ.

ಇದರೊಂದಿಗೆ ಇಲ್ಲಿರುವ ಅದ್ವಿತೀಯ ಮಸೀದಿಗಳು ಮತ್ತು ಜಿಂಕೆ ವನ್ಯಧಾಮಗಳಿಗು ಸಹ ಭೇಟಿಕೊಡುವುದು ಅತ್ಯವಶ್ಯಕ. ಒಂಟೆಯ ಮೇಲೆ ಮರುಭೂಮಿ ಸಫಾರಿ ಮಾಡುತ್ತ, ಮರುಭೂಮಿಯ ಸುಂದರ ನೋಟಗಳನ್ನು ಆಸ್ವಾದಿಸುವುದು ಇಲ್ಲಿಗೆ ಬರುವ ಪ್ರವಾಸಿಗರ ಪ್ರಮುಖ ಇಚ್ಛೆಯಾಗಿರುತ್ತದೆ. ಇಲ್ಲಿರುವ ಅಸಂಖ್ಯಾತ ಅರಮನೆಗಳನ್ನು ಈಗ ಪಾರಂಪರಿಕ ಹೋಟೆಲ್ಗಗಳಾಗಿ ಪರಿವರ್ತಿಸಲಾಗುತ್ತಿದೆ. ಇವುಗಳೆಲ್ಲವು ಸೇರಿ, ಇಲ್ಲಿಗೆ ಭೇಟಿ ಕೊಡುವ ಪ್ರವಾಸಿಗರಿಗೆ ಮಂತ್ರ ಮುಗ್ಧಗೊಳಿಸುವಂತಹ ಅನುಭವವನ್ನು ಒದಗಿಸುತ್ತವೆ.

ಹಬ್ಬಗಳು, ಜಾತ್ರೆಗಳು ಮತ್ತು ಮನೋರಂಜನೆಗಳು

ಇಲ್ಲಿ ಫೆಬ್ರವರಿ ತಿಂಗಳಿನಲ್ಲಿ ನಡೆಯುವ ವಾರ್ಷಿಕ ಮರುಭೂಮಿ ಜಾತ್ರೆಯು ಶೇಖಾವತಿ ಜಾತ್ರೆ ಎಂದೇ ಖ್ಯಾತಿ ಪಡೆದಿದ್ದು, ತನ್ನಲ್ಲಿ ನಡೆಯುವ ವಿವಿಧ ಬಗೆಯ ಸಾಂಸ್ಕೃತಿಕ ಚಟುವಟಿಕೆಗಳಿಂದಾಗಿ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಈ ಉತ್ಸವವನ್ನು ರಾಜಸ್ಥಾನದ ಪ್ರವಾಸೋದ್ಯಮ ಇಲಾಖೆ ಮತ್ತು ಸಿಕರ್, ಚುರು ಮತ್ತು ಜುನ್ಜುನು ಜಿಲ್ಲೆಗಳ ಜಿಲ್ಲಾಡಳಿತದ ಜಂಟಿ ಸಹಯೋಗದಲ್ಲಿ ನಡೆಸಲಾಗುತ್ತದೆ.

ಒಂಟೆ ಮತ್ತು ಜೀಪ್ ಸಫಾರಿಗಳು ಶೇಖಾವತಿಯಲ್ಲಿ ನಡೆಯುವ ಮನೋರಂಜನೆ ಮತ್ತು ಉತ್ಸವಗಳ ಒಂದು ಪ್ರಧಾನ ಅಂಗವಾಗಿರುತ್ತದೆ. ಈ ಉತ್ಸವವು ಈ ಪ್ರಾಂತ್ಯದಲ್ಲಿನ ಗ್ರಾಮೀಣ ಜನರ ಜೀವನ ಶೈಲಿಯನ್ನು ಪ್ರವಾಸಿಗರಿಗೆ ಪರಿಚಯಿಸುತ್ತದೆ. ಹಲವಾರು ಗ್ರಾಮೀಣ ಆಟಗಳನ್ನು, ಹವೇಲಿ ಸ್ಪರ್ಧೆಗಳನ್ನು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು, ತೋಟಗಳಿಗೆ ಭೇಟಿಕೊಡುವುದು ಮತ್ತು ಬಾಣಬಿರುಸುಗಳನ್ನು ಹಾರಿಸುವುದು ಈ ಉತ್ಸವದ ಪ್ರಮುಖ ಆಕರ್ಷಣೆಯಾಗಿರುತ್ತದೆ. ಈ ಉತ್ಸವಗಳನ್ನು ನಾಲ್ಕು ಸ್ಥಳಗಳಲ್ಲಿ ನಡೆಸಲಾಗುತ್ತದೆ. ಅವುಗಳೆಂದರೆ ನವಾಲ್ ಘಡ್,ಜುಂಜುನು, ಸಿಕರ್ ಮತ್ತು ಚುರು.ಶೇಖಾವತಿ ಉತ್ಸವದ ಜರುಗುವ ಪ್ರಮುಖ ಸ್ಥಳಗಳಲ್ಲಿ ನವಾಲ್ ಘಡ್ ಮುಖ್ಯವೆನಿಸಿದೆ.  ಜೈಪುರದಿಂದ 150 ಕಿ.ಮೀ ದೂರದಲ್ಲಿರುವ ಈ ಊರಿಗೆ ರಸ್ತೆ ಮತ್ತು ರೈಲಿನಲ್ಲಿ ಸುಲಭವಾಗಿ ತಲುಪಬಹುದು.

ಶೇಖಾವತಿಗೆ ಯಾವಾಗ ಭೇಟಿಕೊಡಬಹುದು

ಶೇಖಾವತಿಗೆ ಭೇಟಿಕೊಡಲು ನವೆಂಬರ್ ನಿಂದ ಫೆಬ್ರವರಿಯವರೆಗಿನ ತಿಂಗಳುಗಳು ಅನುಕೂಲಕರವಾಗಿರುತ್ತವೆ. ಆಗ ಇಲ್ಲಿನ ಹವಾಗುಣವು ವರ್ಷದಲ್ಲಿಯೆ ಅತ್ಯಂತ ತಂಪಾಗಿರುತ್ತದೆ. ಇಲ್ಲಿ ಬೇಸಿಗೆಯು ಅತ್ಯಂತ ಬೇಗೆಯಿಂದ ಕೂಡಿರುತ್ತದೆ. ಆಗ ಇಲ್ಲಿನ ಉಷ್ಣಾಂಶವು 43°ಸೆಲ್ಶಿಯಸ್ ನಷ್ಟು ಇರುತ್ತದೆ. ಹಾಗಾಗಿ ಈ ಸಮಯದಲ್ಲಿ ಇಲ್ಲಿಗೆ ಭೇಟಿಕೊಡದಿರುವುದು ಉತ್ತಮ.

ಶೇಖಾವತಿಗೆ ಹೋಗುವುದು ಹೇಗೆ

ಶೇಖಾವತಿಯು ಜೈಪುರ್ ಮತ್ತು ಬೀಕನೇರ್ ನಗರಗಳೊಂದಿಗೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಈ ನಗರಗಳಿಂದ ಸ್ಥಳೀಯ ರೈಲುಗಳು ನಿಮ್ಮನ್ನು ಶೇಖಾವತಿಗೆ ತಲುಪಿಸಲು ನೆರವಾಗುತ್ತವೆ. ಈ ಪ್ರಾಂತ್ಯದಲ್ಲಿ ಅತಿಹೆಚ್ಚಾಗಿ ರಾಜಸ್ಥಾನಿಗಳು ಮತ್ತು ಮಾರವಾಡಿಗಳು ವಾಸಿಸುತ್ತಿದ್ದಾರೆ. ಇಲ್ಲಿ ರಾಜಸ್ಥಾನಿ ಭಾಷೆಯನ್ನು ಅತಿ ಹೆಚ್ಚಾಗಿ ಮಾತನಾಡಲಾಗುತ್ತದೆ.

Please Wait while comments are loading...