ವಿರಾಟ್ ನಗರ್ - ಅದ್ಭುತಗಳ ತಾಣ

ರಾಜಸ್ಥಾನದ 'ಪಿಂಕ್ ಸಿಟಿ' ಜೈಪುರ್ ನಿಂದ 75 ಕಿ.ಮೀ ದೂರದಲ್ಲಿರುವ ವಿರಾಟ್ ನಗರ್ ಒಂದು ಪ್ರವಾಸಿ ತಾಣವಾಗಿ ಚಿಗುರೊಡೆಯುತ್ತಿರುವ ಪ್ರದೇಶ. 'ಬೈರಾತ್' ಎಂಬ ಹೆಸರಿನಿಂದಲೂ ಜನಪ್ರಿಯವಾಗಿರುವ ಈ ಪ್ರದೇಶವು ಸರಿಸ್ಕಾ, ಸಿಲಿಸೇರ್, ಅಜಬ್ಗಡ್-ಭಾನ್ಗಡ್ ಮತ್ತು ಅಲ್ವಾರ್ ನಂತಹ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಹತ್ತಿರದಲ್ಲಿದೆ. ವಿರಾಟ್ ನಗರದ ಇತಿಹಾಸವು ಮಹಾಭಾರತದ ಯುಗಕ್ಕೆ ಕರೆದೊಯ್ಯುತ್ತದೆ. ಪುರಾಣದ ಪ್ರಕಾರ, ಈ ಸ್ಥಳವನ್ನು ರಾಜಾ ವಿರಾಟನು ಸ್ಥಾಪಿಸಿದ್ದನು ಮತ್ತು ಅವನ ರಾಜ್ಯದಲ್ಲಿಯೇ ಪಾಂಡವರು ಒಂದು ವರ್ಷಗಳ ಕಾಲ 'ಅಜ್ಞಾತವಾಸ'ವನ್ನು ಅನುಭವಿಸಿದ್ದರು.

ಇತಿಹಾಸದಲ್ಲಿ ವಿರಾಟ್ ನಗರ್

ಇತಿಹಾಸದ ಪ್ರಕಾರ, ಈ ಸ್ಥಳವು ಮಹಾಜಾನಪದ ಅಥವಾ ಪ್ರಾಚೀನ ರಾಜ್ಯದ ರಾಜಧಾನಿಯಾಗಿತ್ತು ಮತ್ತು ಸುಮಾರು 5ನೇ ಶತಮಾನದಲ್ಲಿ ಚೆದಿ ವಂಶವು ಇದನ್ನು ವಶಪಡಿಸಿಕೊಂಡಿತು. ತದನಂತರ ಮೌರ್ಯರು ಇದನ್ನು ಆಕ್ರಮಿಸಿದರು. ವೈಭವಯುತ ಇತಿಹಾಸವನ್ನು ಹೊಂದಿರುವ ಈ ಸ್ಥಳದಲ್ಲಿ ಪ್ರವಾಸಿಗರು ಅಶೋಕ ಶಿಲಾಲೇಖವನ್ನೂ ಸಹ ಕಾಣಬಹುದು. ಇದೊಂದು ಕಲ್ಲಿನಲ್ಲಿ ಕೆತ್ತಲಾದ ರಾಜಶಾಸನವಾಗಿದ್ದು, ಮೌರ್ಯ ವಂಶದ ರಾಜ ಅಶೋಕನು ಆಜ್ಞೆಮಾಡಿದ ನಿಯಮಗಳು, ಉಪದೇಶಗಳು ಮತ್ತು ಘೋಷಣೆಗಳನ್ನು ಅನಾವರಣಗೊಳಿಸುತ್ತದೆ.

ವಿರಾಟ್ ನಗರ್ ಆಕರ್ಷಣೆಗಳು

ಪ್ರವಾಸಿಗರು, ವಿರಾಟ್ ನಗರ್ ನಲ್ಲಿ ಇತಿಹಾಸ ಪೂರ್ವದಲ್ಲಿ ಸ್ವಾಭಾವಿಕವಾಗಿ ರಚನೆಗೊಂಡಂತಹ ಗುಹೆಗಳನ್ನು ಇಲ್ಲಿಯ ಹಲವು ಬೆಟ್ಟ ಗುಡ್ಡಗಳಲ್ಲಿ ಕಾಣಬಹುದು. ಗುಹೆಗಳನ್ನು ಹೊರತುಪಡಿಸಿ, ಜನಪ್ರಿಯ ಪ್ರವಾಸಿ ತಾಣವಾದ ಭೀಮ್ ಕಿ ಡುಂಗಾರಿ ಅಥವಾ ಪಾಂಡುಸ್ ಹಿಲ್ಲ್ ಗೂ ಸಹ ಭೇಟಿ ನೀಡಬಹುದಾಗಿದೆ. ಇದೊಂದು ದೊಡ್ಡ ಗುಹೆಯಾಗಿದ್ದು, ಪಾಂಡವರಲ್ಲಿ ಒಬ್ಬನಾದ ಭೀಮನು ಇಲ್ಲಿ ವಾಸಿಸುತ್ತಿದ್ದನೆಂದು ನಂಬಲಾಗಿದೆ. ಇದರ ಬಳಿಯೆ ಭೀಮನ ಸಹೋದರರಿಗೆಂದು ಚಿಕ್ಕ ಕೋಣೆಗಳಿರುವುದನ್ನು ನೋಡಬಹುದಾಗಿದೆ.

ಬೀಜಕ್ ಕಿ ಪಹಾಡಿ, ವಿರಾಟ್ ನಗರ್ ನ ಮತ್ತೊಂದು ಆಕರ್ಷಣೀಯ ಪ್ರವಾಸಿ ತಾಣ. ಪ್ರವಾಸಿಗರು ಇಲ್ಲಿ ಬೌದ್ಧ ಧರ್ಮದ ಅವಶೇಷಗಳನ್ನು ಕಾಣಬಹುದಾಗಿದೆ. ಗಣೇಶ ಗಿರಿ ದೇವಸ್ಥಾನ ಮತ್ತು ಮ್ಯೂಸಿಯಮ್, ಜೈನ ನಸಿಯಾ ಮತ್ತು ಜೈನ ದೇವಸ್ಥಾನ ಇಲ್ಲಿರುವ ಇತರೆ ಪ್ರವಾಸಿ ತಾಣಗಳು.

ವಿರಾಟ್ ನಗರ್ ತಲುಪುವ ಬಗೆ

ವಿರಾಟ್ ನಗರ್ ಅನ್ನು ವಿಮಾನ, ರೈಲು ಮತ್ತು ರಸ್ತೆಯ ಮೂಲಕ ತಲುಪಬಹುದಾಗಿದೆ. ಜೈಪುರ್ ನ ಸಂಗನೇರ್ ವಿಮಾನ ನಿಲ್ದಾಣವು ಇದಕ್ಕೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಪ್ರವಾಸಿಗರು ಜೈಪುರ್ ರೈಲು ನಿಲ್ದಾಣಕ್ಕೂ ಸುಲಭವಾಗಿ ತಲುಪಬಹುದಾಗಿದೆ. ಈ ಎರಡೂ ವಿಮಾನ ಹಾಗು ರೈಲು ನಿಲ್ದಾಣಗಳಿಂದ ವಿರಾಟ್ ನಗರ್ ತಲುಪಲು ಟ್ಯಾಕ್ಸಿ ಹಾಗು ಕ್ಯಾಬ್ ಗಳು ದೊರೆಯುತ್ತವೆ. ಅಷ್ಟೆ ಅಲ್ಲ, ಈ ನಿಲ್ದಾಣಗಳು ಭಾರತದ ಪ್ರಮುಖ ನಗರಗಳಾದ ಕೊಲ್ಕತ್ತಾ, ದೆಹಲಿ, ಮುಂಬೈ ಮತ್ತು ಚೆನ್ನೈಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಜೈಪುರ್ ವರೆಗೆ ಲಕ್ಸುರಿ ಬಸ್ಸುಗಳ ಸೌಲಭ್ಯವಿದ್ದು, ಅಲ್ಲಿಂದ ಪ್ರವಾಸಿಗರು ವಿರಾಟ್ ನಗರ್ ತಲುಪಲು ಕ್ಯಾಬ್ ಗಳನ್ನು ಬಾಡಿಗೆಗೆ ಪಡೆಯಬಹುದಾಗಿದೆ.

ಹವಾಮಾನ

ಬೇಸಿಗೆ ಮತ್ತು ಚಳಿಗಾಲದ ಸಮಯದಲ್ಲಿ ವಿರಾಟ್ ನಗರ್ ನ ಹವಾಮಾನವು ಅತಿರೇಕವಾಗಿರುತ್ತದೆ. ಬೇಸಿಗೆಯಲ್ಲಿ ಅತಿಶಯವಾದ ಉಷ್ಣತೆಯಿದ್ದು, ಚಳಿಗಾಲದಲ್ಲಿ ಅತಿಶಯವಾದ ಚಳಿಯಿರುತ್ತದೆ ಮತ್ತು ಒಮ್ಮೊಮ್ಮೆ ತಾಪಮಾನವು 5° C ಗೂ ಜಾರುತ್ತದೆ. ಮಾರ್ಚ್ ಮತ್ತು ಅಕ್ಟೋಬರ್ ಮಧ್ಯದ ಅವಧಿಯು ಇಲ್ಲಿಗೆ ಭೇಟಿ ನೀಡಲು ಪ್ರಶಸ್ತವಾಗಿರುತ್ತದೆ.

Please Wait while comments are loading...