ಖಿಮ್ಸರ್ - ಮರಳು ದಿಬ್ಬಗಳು ಮತ್ತು ಅದ್ಭುತವಾದ ಕೋಟೆ

ರಾಜಸ್ಥಾನ ರಾಜ್ಯದ, ಥಾರ್ ಮರುಭೂಮಿಯ ತುತ್ತ ತುದಿಯಲ್ಲಿರುವ ಒಂದು ಪುಟ್ಟ ಪ್ರದೇಶವೆಂದರೆ ಖಿಮ್ಸರ್. ಮರುಭೂಮಿಯ ಒಯಸಿಸ್ ನಂತೆ, ಈ ಹಳ್ಳಿಯ ಮಧ್ಯಭಾಗವು ಒಂದು ನೀರಿನ ಮೂಲವನ್ನು ಹೊಂದಿದ್ದು, ಅದ್ಭುತವಾದ ಚಿತ್ರಣವನ್ನು ನಮ್ಮ ಮುಂದೆ ತೆರೆದಿಡುತ್ತದೆ. ಒಂದಾನೊಂದು ಕಾಲದಲ್ಲಿ ಈ ಪ್ರದೇಶದ ಠಾಕುರರು ಇದರ ಆಡಳಿತಗಾರರಾಗಿದ್ದರು ಮತ್ತು ಇದು ಒಂದು ಸ್ವತಂತ್ರವಾದ ರಾಜ್ಯವಾಗಿತ್ತು.

ಖಿಮ್ಸರ್ ನ ಒಳಗೆ ಹಾಗು ಹೊರಗೆ

ಖಿಮ್ಸರ್ ನ ಇತಿಹಾಸವು ನಮ್ಮನ್ನು ಖಿಮ್ಸರ್ ಕೋಟೆಯ ಕಾಲವಾದ 16ನೇ ಶತಮಾನಕ್ಕೆ ಕೊಂಡೊಯ್ಯುತ್ತದೆ. ಈ ಕೋಟೆಯು ಗತಿಸಿಹೋದ ಕಾಲದಲ್ಲಿಯ ಹಲವಾರು ಯುದ್ಧಗಳಿಗೆ ಸಾಕ್ಷಿಯಾಗಿ ನಿಂತಿದೆ. ಈ ಕೋಟೆಯ ಗೋಡೆಗಳ ಮೇಲೆ ಯುದ್ಧದ ಕುರುಹುಗಳನ್ನು ಪ್ರವಾಸಿಗರು ಇಂದಿಗೂ ನೋಡಬಹುದಾಗಿದೆ. ಈ ಕೋಟೆಯನ್ನು ಮುಖ್ಯವಾಗಿ ಖಿಮ್ಸರ್ ಪ್ರದೇಶವನ್ನು ಶತ್ರುಗಳಿಂದ ರಕ್ಷಿಸುವ ಉದ್ದೇಶದಿಂದ ಕಟ್ಟಲಾಗಿದ್ದರೂ, 1940 ರಲ್ಲಿ ಮಹಿಳೆಯರಿಗೆಂದು ಜನಾನಾ ಎಂಬ ಭಾಗವನ್ನು ಇದಕ್ಕೆ ಸೇರಿಸಿದ್ದರಿಂದ ಇದೊಂದು ನಿವಾಸಯೋಗ್ಯ ಅರಮನೆಯಾಗಿ ಬದಲಾಯಿತು. ಪ್ರಸಕ್ತ, ಕೋಟೆಯ ಒಂದು ಭಾಗ ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿತವಾಗಿದ್ದು, ಇನ್ನುಳಿದ ಭಾಗದಲ್ಲಿ ಖಿಮ್ಸರ್ ರಾಜವಂಶದ ಕುಟುಂಬವು ವಾಸಿಸುತ್ತಿದೆ.

ಖಿಮ್ಸರ್ ಗೆ ಹೋಗಲು ಬಯಸುವ ಪ್ರವಾಸಿಗರು, ಒಸಿಯನ್ ಎಂಬ ಸ್ಥಳಕ್ಕೂ ಭೇಟಿ ನೀಡಬಹುದಾಗಿದೆ. ಈ ಸ್ಥಳವು ಹಲವಾರು ಪುರಾತನ ಹಿಂದು ಮತ್ತು ಜೈನ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಸಮಯಾವಕಾಶವಿದ್ದರೆ, ಇಲ್ಲಿಂದ ಸ್ವಲ್ಪವೆ ದೂರದಲ್ಲಿರುವ ಸ್ಯಾಂಡ್ ಡ್ಯೂನ್ ವಿಲ್ಲೇಜ್ ಎಂಬ ಪಾರಂಪರಿಕ ಹೋಟೆಲ್ ಗೆ ಹೋಗಬಹುದಾಗಿದೆ. ಇಲ್ಲಿ ಬಂಗಾರದ ಹೊಳಪನ್ನು ಹೊಂದಿರುವ ಮರಳಿನ ಉಬ್ಬರಗಳ ಮೇಲೆ ಒಂಟೆ ಸವಾರಿ ಮಾಡಬಹುದಾಗಿದೆ.

ಜನವರಿ ಮತ್ತು ಫೆಬ್ರುವರಿ ಸಮಯದಲ್ಲಿ ನಡೆಯುವ ನಗೌರ್ ಉತ್ಸವಕ್ಕೆ, ಬಹುಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಇದೊಂದು ದನಗಳ ಉತ್ಸವವಾಗಿದ್ದು ಒಂಟೆ ಓಟ, ಎತ್ತುಗಳ ಓಟ, ಜಾನಪದ ಸಂಗೀತ ಮತ್ತು ನೃತ್ಯಗಳ ಆನಂದವನ್ನು ಪಡೆಯಬಹುದು.

ಖಿಮ್ಸರ್ ತಲುಪುವ ಬಗೆ

ಖಿಮ್ಸರ್ ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಸಂಪರ್ಕವನ್ನು ಹೊಂದಿದೆ. ಜೋಧಪುರ್ ಖಿಮ್ಸರ್ ಗೆ ಹತ್ತಿರವಾದ ವಿಮಾನ ನಿಲ್ದಾಣವಾಗಿದೆ. ಜೈಪುರ್, ಮುಂಬೈ, ದೆಹಲಿ ಮತ್ತು ಉದೈಪುರ್ ಗಳಿಂದ ಇಲ್ಲಿಗೆ ವಿಮಾನಗಳು ಲಭ್ಯವಿದೆ. ಖಿಮ್ಸರ್ ಗೆ ಹತ್ತಿರದ ರೈಲು ನಿಲ್ದಾಣವೂ ಕೂಡ ಜೋಧಪುರ್ ಆಗಿದೆ. ಪ್ರವಾಸಿಗರು ಜೋಧಪುರ್ ವಿಮಾನ ನಿಲ್ದಾಣ ಹಾಗು ರೈಲು ನಿಲ್ದಾಣಗಳಿಂದ ಟ್ಯಾಕ್ಸಿ ಅಥವಾ ಕ್ಯಾಬ್ ಮುಖಾಂತರ ಖಿಮ್ಸರ್ ಗೆ ಪ್ರಯಾಣಬೆಳೆಸಬಹುದಾಗಿದೆ.ಜೋಧಪುರ್-ನಗೌರ್-ಬಿಕಾನೇರ್ ಹೆದ್ದಾರಿಯಲ್ಲಿ ಈ ಪ್ರದೇಶ ನೆಲೆಸಿರುವುದರಿಂದ ಬಸ್ಸುಗಳ ಮೂಲಕವು ಇದನ್ನು ತಲುಪಬಹುದಾಗಿದೆ.

ಖಿಮ್ಸರ್ ವರ್ಷದ ಬಹುತೇಕ ಸಮಯ ಅತಿರೇಕ ವಾತಾವರಣವನ್ನು ಹೊಂದಿದೆ. ಭೇಟಿ ನೀಡಲು ಚಳಿಗಾಲವು ಉತ್ತಮ ಸಮಯವಾಗಿದೆ.

Please Wait while comments are loading...