ಪಾಲಿ -ಉದ್ಯಮ ನಗರಿ

ಮುಖಪುಟ » ಸ್ಥಳಗಳು » ಪಾಲಿ » ಮುನ್ನೋಟ

ಪಾಲಿ ಎಂಬುದು ರಾಜಸ್ಥಾನದಲ್ಲಿರುವ ಒಂದು ನಗರ. ಇದು ಈ ರಾಜ್ಯದ “ ಕೈಗಾರಿಕಾ ನಗರ” ವೆಂದು ಸಹ ಖ್ಯಾತಿ ಪಡೆದಿದೆ. ಅಲ್ಲದೆ ಇದು ಪಾಲಿ ಜಿಲ್ಲೆಯ ಆಡಳಿತಾತ್ಮಕ ಕೇಂದ್ರವಾಗಿ ಸಹ ಕಾರ್ಯ ನಿರ್ವಹಿಸುತ್ತಿದೆ. ಈ ಪ್ರಮುಖ ಯಾತ್ರಾಸ್ಥಳವು ಬಂಡಿ ನದಿಯ ದಂಡೆಯ ಮೇಲೆ ನೆಲೆಗೊಂಡಿದೆ. ಮೊದಲಿಗೆ ಈ ಪ್ರದೇಶವು ಪಲ್ಲಿಕಾ ಮತ್ತು ಪಲ್ಲಿ ಎಂದು ಕರೆಯಲ್ಪಡುತ್ತಿತ್ತು. ಪ್ರಾಚೀನ ಕಾಲದಲ್ಲಿ ಇಲ್ಲಿ ನೆಲೆಸಿದ್ದ ಪಲಿವಾಲ್ ಬ್ರಾಹ್ಮಣರಿಂದಾಗಿ ಈ ಪ್ರಾಂತ್ಯಕ್ಕೆ ಈ ಹೆಸರು ಬಂದಿತಂತೆ. ಪ್ರಾಚೀನ ಕಾಲದಿಂದಲು ಈ ಸ್ಥಳವು ಜವಳಿ ಉದ್ದಿಮೆ, ವ್ಯಾಪಾರ ಮತ್ತು ಕೈಗಾರಿಕೆಗಳಿಗಾಗಿ ಖ್ಯಾತಿ ಪಡೆದಿತ್ತು. ಈಗ ಇಲ್ಲಿ ಅಸಂಖ್ಯಾತ ಜವಳಿ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ.

ಈ ಊರು ಇಲ್ಲಿರುವ ಜೈನ ದೇವಾಲಯಗಳಿಗೆ, ಕೋಟೆಗಳಿಗೆ, ಉದ್ಯಾನವನಗಳಿಗೆ ಮತ್ತು ವಸ್ತು ಸಂಗ್ರಹಾಲಯಗಳಿಗಾಗಿ ಖ್ಯಾತಿ ಪಡೆದಿದೆ. ನವಲಖ ದೇವಾಲಯವು ಪಾಲಿಯಲ್ಲಿರುವ ದೇವಾಲಯಗಳಲ್ಲಿಯೆ ಹೆಚ್ಚಿನ ಪ್ರಸಿದ್ಧಿ ಪಡೆದಿದೆ. ಇದನ್ನು ನೌಲಖ ಜೈನದೇವಾಲಯವೆಂದು ಸಹ ಕರೆಯುತ್ತಾರೆ. ಜೈನರ 23 ನೇ ತೀರ್ಥಂಕರರಿಗಾಗಿ ನಿರ್ಮಿಸಲ್ಪಟ್ಟಿರುವ ಈ ಜೈನ ದೇವಾಲಯವು ತನ್ನ ವಾಸ್ತುಶಿಲ್ಪದಿಂದಾಗಿ ಗಮನ ಸೆಳೆಯುತ್ತಿದೆ. ಪರಶುರಾಮ್ ಮಹಾದೇವ್ ದೇವಾಲಯ, ಚಾಮುಂಡ ಮಾತಾ ದೇವಾಲಯ, ಸೋಮನಾಥ್ ದೇವಾಲಯ ಮತ್ತು ಹತುಂಡಿ ರಾತಾ ಮಹಾಬೀರ್ ಸ್ವಾಮಿ ದೇವಾಲಯಗಳು ಇಲ್ಲಿರುವ ಇನ್ನಿತರ ಪ್ರಮುಖ ದೇವಾಲಯಗಳಾಗಿವೆ.

ಇವುಗಳೊಂದಿಗೆ ಬಾಂಗೂರ್ ವಸ್ತುಸಂಗ್ರಹಾಲಯವು ಪಾಲಿಯಲ್ಲಿ ನೋಡಲೆಬೇಕಾದ ಸ್ಥಳಗಳಲ್ಲಿ ಒಂದಾಗಿದೆ. ಈ ವಸ್ತುಸಂಗ್ರಹಾಲಯವು ನಗರದ ಹಳೆ ಬಸ್ ನಿಲ್ದಾಣಕ್ಕೆ ಅತ್ಯಂತ ಸನಿಹದಲ್ಲಿ ನೆಲೆಗೊಂಡಿದೆ. ಪ್ರವಾಸಿಗರು ಇಲ್ಲಿ ಐತಿಹಾಸಿಕ ಕಲಾವಸ್ತುಗಳನ್ನು, ಪುರಾತನ ನಾಣ್ಯಗಳನ್ನು, ರಾಜರ ಧಿರಿಸುಗಳನ್ನು ಮತ್ತು ಆಭರಣಗಳನ್ನು ಕಾಣಬಹುದು. ಪ್ರವಾಸಿಗರು ಪಾಲಿ ನಗರದ ಹೃದಯಭಾಗದಲ್ಲಿರುವ ಲಖೋಟಿಯ ಉದ್ಯಾನವನವನ್ನು ಸಹ ವೀಕ್ಷಿಸಬಹುದು. ಈ ಉದ್ಯಾನವನದಲ್ಲಿರುವ ಪುರಾತನ ಶಿವನ ದೇವಾಲಯಕ್ಕೆ ಭಕ್ತಾಧಿಗಳು ತಂಡೋಪತಂಡವಾಗಿ ಆಗಮಿಸುತ್ತಿರುತ್ತಾರೆ.

ಪಾಲಿಯಲ್ಲಿ ಹಲವಾರು ಮೆಟ್ಟಿಲುಗಳುಳ್ಳ ಬಾವಿಗಳಿವೆ. ಸ್ಥಳೀಯವಾಗಿ ಬಾವ್ರಿಗಳೆಂದು ಕರೆಯಲ್ಪಡುವ ಇವುಗಳು, ತನ್ನಲ್ಲಿರುವ ಪ್ರತಿ ಮೆಟ್ಟಿಲುಗಳಿಗು ವಿಶೇಷವಾದ ಕೆತ್ತನೆಗಳನ್ನು ಹೊಂದಿರುತ್ತವೆ. ಅಲ್ಲದೆ ಮೆಹಂದಿ ಬೆಳೆಗೆ ಖ್ಯಾತಿ ಪಡೆದಿರುವ ಸೊಜತ್ ಸಹ ಪಾಲಿಯ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಇದರ ಜೊತೆಗೆ ನಿಂಬೂ ಕಾ ನಾಥ್, ಆದೀಶ್ವರ್ ದೇವಾಲಯ ಮತ್ತು ಸೂರ್ಯ ನಾರಾಯಣ್ ದೇವಾಲಯಗಳು ಇಲ್ಲಿನ ಪ್ರಮುಖ ದೇವಾಲಯಗಳಾಗಿವೆ.

ಪಾಲಿಗೆ ವಿಮಾನದಲ್ಲಿ, ರೈಲಿನಲ್ಲಿ ಮತ್ತು ರಸ್ತೆ ಮಾರ್ಗದ ಮೂಲಕ ಸುಲಭವಾಗಿ ತಲುಪಬಹುದು. ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವು ಜೋಧ್‍ಪುರದಲ್ಲಿದೆ. ಈ ವಿಮಾನ ನಿಲ್ದಾಣವು ದೆಹಲಿ, ಬೆಂಗಳೂರು, ಕೊಲ್ಕತ್ತಾ ಮತ್ತು ಮುಂಬಯಿ ವಿಮಾನ ನಿಲ್ದಾಣಗಳೊಂದಿಗೆ ನಿಯಮಿತವಾಗಿ ವಿಮಾನಗಳ ಸಂಚಾರವನ್ನು ಹೊಂದಿದೆ. ಪ್ರವಾಸಿಗರು ಇಲ್ಲಿಗೆ ರೈಲಿನಲ್ಲಿ ಸಹ ಆಗಮಿಸಬಹುದು. ರಾಷ್ಟ್ರೀಯ ಹೆದ್ದಾರಿ 111 ಪಾಲಿಯನ್ನು ಬಿಲಾಸ್‍ಪುರ್ ಮತ್ತು ಅಂಬಿಕಾಪುರಗಳ ನಡುವೆ ಸಂಪರ್ಕಿಸುತ್ತದೆ. ಪ್ರವಾಸಿಗರು ಉದಯ್‍ಪುರ್ ಮತ್ತು ಜೋಧ್‍ಪುರಗಳಿಂದ ಬಸ್ಸಿನಲ್ಲಿ ಪಾಲಿಗೆ ತಲುಪಬಹುದಾಗಿದೆ.

ಮರುಭೂಮಿ ಪ್ರಾಂತ್ಯದಲ್ಲಿರುವ ಕಾರಣದಿಂದಾಗಿ ಪಾಲಿಯ ಹವಾಗುಣವು ಒಣ ಮತ್ತು ಸುಡುವ ಬಿಸಿಲಿನಿಂದ ಕೂಡಿರುತ್ತದೆ. ಬೇಸಿಗೆಕಾಲದಲ್ಲಿ ಇಲ್ಲಿ ಸುಡುವ ಬಿಸಿಲಿದ್ದು, ಉಷ್ಣಾಂಶವು 46° ಸೆಲ್ಶಿಯಸ್ ಇರುತ್ತದೆ. ಚಳಿಗಾಲವು ಪಾಲಿಗೆ ಭೇಟಿಕೊಡಲು ಬಯಸುವವರಿಗೆ ಹೇಳಿ ಮಾಡಿಸಿದ ಅವಧಿಯಾಗಿರುತ್ತದೆ. ಅಕ್ಟೋಬರ್ ನಿಂದ ಫೆಬ್ರವರಿ ಅಂತ್ಯದ ನಡುವಿನ ಕಾಲವು ಇಲ್ಲಗೆ ಭೇಟಿಕೊಡಲು ಸೂಕ್ತಕಾಲವಾಗಿದೆ.

Please Wait while comments are loading...