ಮೌಂಟ್ ಅಬು - ಅಚ್ಚರಿಗಳಿಂದ ತುಂಬಿದ ದಿಬ್ಬ

ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿರುವ ಮೌಂಟ್ ಅಬು ಎಂಬುದು ಒಂದು ಪ್ರಸಿದ್ಧ ಗಿರಿಧಾಮವಾಗಿದೆ. ತನ್ನ ಸ್ವಾಭಾವಿಕವಾದ ಸೌಂದರ್ಯ, ಹಿತವಾದ ವಾತಾವರಣ, ಹಚ್ಚ ಹಸಿರಿನಿಂದ ಕೂಡಿದ ಬೆಟ್ಟಗಳು, ಪ್ರಶಾಂತವಾದ ಕೆರೆಗಳು, ವಾಸ್ತುಶಿಲ್ಪದಿಂದ ಗಮನ ಸೆಳೆಯುವ ದೇವಾಲಯಗಳು ಮತ್ತು ಹಲವು ಧಾರ್ಮಿಕ ಕೇಂದ್ರಗಳಿಂದ ಕೂಡಿದೆ. ಈ ಸ್ಥಳವು ಜೈನರ ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಅರಾವಳಿ ಪರ್ವತ ಶ್ರೇಣಿಯಲ್ಲಿರುವ ಈ ಗಿರಿಧಾಮವು ಸಮುದ್ರ ಮಟ್ಟದಿಂದ 1220 ಮೀಟರ್ ಎತ್ತರದಲ್ಲಿದೆ. ಮೌಂಟ್ ಅಬು ತನ್ನ ವಿವರಣಾತ್ಮಕವಾದ ಇತಿಹಾಸದಿಂದಾಗಿ, ಪ್ರಾಚೀನ ವಾಸ್ತುಶಿಲ್ಪಗಳನ್ನು ಹೊಂದಿರುವ ಸ್ಮಾರಕಗಳಿಂದಾಗಿ ಮತ್ತು ಅದ್ಭುತವಾದ ಹವಾಮಾನದಿಂದಾಗಿ ರಾಜಸ್ಥಾನದ ಅತಿದೊಡ್ಡ ಪ್ರವಾಸಿ ಆಕರ್ಷಣೆಗಳಲ್ಲಿ ಒಂದು ಎಂಬ ಸ್ಥಾನಮಾನವನ್ನು ತನ್ನ ಮುಡಿಗೇರಿಸಿಕೊಂಡು ಬೀಗುತ್ತಿದೆ. ಬೇಸಿಗೆ ಮತ್ತು ಮಳೆಗಾಲಗಳಲ್ಲಿ ಸಾವಿರಾರು ಪ್ರವಾಸಿಗರು ಮತ್ತು ಭಕ್ತಾಧಿಗಳು ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಕಳೆದ ದಶಕದಲ್ಲಿ ಈ ಗಿರಿಧಾಮವು ಬೇಸಿಗೆಯ ಮತ್ತು ಮಧುಚಂದ್ರದ ತಾಣವಾಗಿ ಬೆಳೆದಿದೆ.

ಪುರಾಣದಲ್ಲಿ ಮೌಂಟ್ ಅಬು

ಪುರಾಣಗಳ ಪ್ರಕಾರ ಈ ಸ್ಥಳಕ್ಕೆ ’ಅರ್ಬುದ’ ಎಂಬ ಸರ್ಪದೇವತೆಯಿಂದಾಗಿ ’ಅರ್ಬುದಾರಣ್ಯ’ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ದಂತ ಕತೆಗಳ ಪ್ರಕಾರ ಈ ಸರ್ಪ ದೇವತೆಯು ಪರಶಿವನ ವಾಹನವಾದ ನಂದಿಗೆ ರಕ್ಷಣೆ ಒದಗಿಸುವ ಸಲುವಾಗಿ ಇಲ್ಲಿಗೆ ಆಗಮಿಸಿತಂತೆ. ’ಅರ್ಬುದಾರಣ್ಯ’ ಹೆಸರು ಕಾಲನುಕ್ರಮದಲ್ಲಿ ’ ಅಬು ಪರ್ವತ್’ ಅಥವಾ ’ ಮೌಂಟ್ ಅಬು’ ಎಂದು ಬದಲಾಯಿತು. ಐತಿಹಾಸಿಕವಾಗಿ ಈ ಸ್ಥಳವು ಗುರ್ಜರರ ಅಥವಾ ಗುಜ್ಜಾರರು ಮತ್ತು ಅವರಿಗೆ ಸಂಬಂಧಿಸಿದವರಿಗೆ ಸೇರಿತ್ತು ಎಂದು ತಿಳಿದುಬಂದಿದೆ. ಅರ್ಬುದ ಪರ್ವತದ ಕುರಿತಾಗಿ ಹಲವಾರು ಬರಹಗಳು ಮತ್ತು ಶಾಸಗಳು ಈ ಪ್ರಾಂತ್ಯದಲ್ಲಿ ಕಂಡು ಬರುತ್ತವೆ.

ಮೌಂಟ್ ಅಬುನಲ್ಲಿ ಇರುವ ಪ್ರೇಕ್ಷಣಿಯ ಸ್ಥಳಗಳು

ಈ ಸ್ಥಳದಲ್ಲಿರುವ ಪ್ರಮುಖ ಪ್ರೇಕ್ಷಣಿಯ ಸ್ಥಳಗಳಲ್ಲಿ ನಕ್ಕಿ ಕೆರೆ, ಸೂರ್ಯಾಸ್ತಮಾನ ಸ್ಥಳ(ಸನ್ ಸೆಟ್ ಪಾಯಿಂಟ್), ಮಂಡೂಕ ಬಂಡೆ, ಅಬು ರಸ್ತೆಯ ನಗರ, ಗುರು ಶಿಖರ್ ಶೃಂಗ ಮತ್ತು ಮೌಂಟ್ ಅಬು ವನ್ಯ ಜೀವಿಧಾಮ. ಮೌಂಟ್ ಅಬು ಐತಿಹಾಸಿಕವಾಗಿ ಮತ್ತು ಧಾರ್ಮಿಕವಾಗಿ ಖ್ಯಾತಿ ಪಡೆದ ಹಲವಾರು ಸ್ಮಾರಕಗಳನ್ನು ಹೊಂದಿರುವ ಹೆಗ್ಗಳಿಕೆಯನ್ನು ಹೊಂದಿದೆ. ಈ ಪಟ್ಟಿಯಲ್ಲಿ ದಿಲ್ವಾರ ಜೈನ ದೇವಾಲಯಗಳು, ಆಧಾರ್ ದೇವಿ ದೇವಾಲಯ, ಧೂಧ್ ಬಾವ್ರಿ, ಶ್ರೀ ರಘುನಾಥಜೀ ದೇವಾಲಯ ಮತ್ತು ಅಚಲಘಡ್ ಕೋಟೆಗಳು ಸೇರಿವೆ.

ಮೌಂಟ್ ಅಬುಗೆ ತಲುಪುವುದು ಹೇಗೆ

ಮೌಂಟ್ ಅಬುಗೆ ರಸ್ತೆ ,ರೈಲು ಮತ್ತು ವಿಮಾನಗಳ ಮೂಲಕ ತಲುಪಬಹುದು. ಇಲ್ಲಿಗೆ ವಿಮಾನ ಮಾರ್ಗದಲ್ಲಿ ತಲುಪಬೇಕೆಂದರೆ ,ಇಲ್ಲಿಂದ 185 ಕಿ,ಮೀ ದೂರದಲ್ಲಿರುವ ಉದಯ್ ಪುರಕ್ಕೆ ಬಂದು ಅಲ್ಲಿಂದ ಮೌಂಟ್ ಅಬುಗೆ ಬರಬಹುದು. ಈ ಸ್ಥಳವು ವರ್ಷಪೂರ್ತಿ ಹಿತವಾದ ವಾತಾವರಣವನ್ನು ಹೊಂದಿರುತ್ತದೆ. ಆದರು ಬೇಸಿಗೆಕಾಲವು ಇಲ್ಲಿಗೆ ಭೇಟಿಕೊಡಲು ಅತ್ಯುತ್ತಮ ಕಾಲವಾಗಿದೆ.

Please Wait while comments are loading...