ಬಾಡಮೇರ್

ರಾಜಸ್ಥಾನದ ಬಾಡಮೇರ್ ಜಿಲ್ಲೆಯಲ್ಲಿರುವ ಬಾಡಮೇರ್ ಒಂದು ಪುರಾತನ ನಗರ. ಬಹಾಡ ರಾವ್ ಅಥವಾ ಬಾರ್ ರಾವ್ ನಿಂದ 13 ನೇ ಶತಮಾನದಲ್ಲಿ ಈ ನಗರವು ಸ್ಥಾಪಿಸಲ್ಪಟ್ಟಿತು. ಮೂಲತಃ ವಾಗಿ ಈ ಪಟ್ಟಣಕ್ಕೆ ಅವನ ಸ್ಮರಣಾರ್ಥವಾಗಿ 'ಬಹಾಡಮೇರ' ಅಂದರೆ ಬಹಾಡದ ಬೆಟ್ಟದ ಕೋಟೆ ಎಂಬ ಹೆಸರನ್ನಿಡಲಾಗಿತ್ತು. ಕಾಲಕ್ರಮೇಣ ಇದಕ್ಕೆ ಬಾಡಮೇರ್ ಎಂಬ ಹೆಸರು ಜಾರಿಗೆ ಬಂದಿತು. ರಾಜಸ್ಥಾನದ ಈ ಪ್ರದೇಶವು ವಿಶೇಷವಾಗಿ ಸಾಂಪ್ರದಾಯಿಕ ಕಲೆ ಹಾಗು ಕರಕುಶಲ ವಸ್ತುಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಉಪಸ್ಥಿತವಿರುವ ಅನೇಕ ಐತಿಹಾಸಿಕ ತಾಣಗಳೂ ಕೂಡ ಈ ಪ್ರದೇಶವನ್ನು ಮತ್ತಷ್ಟು ಮಹತ್ವವನ್ನಾಗಿಸುತ್ತದೆ.

ಇತಿಹಾಸದ ಒಂದು ಸೂಕ್ಷ್ಮ ನೋಟ

ಐತಿಹಾಸಿಕವಾಗಿ ಮಹತ್ವವಾಗಿರುವ ಈ ಪ್ರದೇಶವು ಅನೇಕ  ಆಡಳಿತಗಾರರ ಅಳಿವು-ಉಳಿವುಗಳನ್ನು ಕಂಡಿದೆ. ಪುರಾತನ ಬಾಡಮೇರ್ ನಗರವು ಸ್ಥಳಗಳಾದ ಖೇದ್, ಕಿರಾಡು, ಪಚ್ ಪದ್ರಾ, ಜಸೋಲ್, ತಿಲ್ವಾರಾ, ಶಿಯೊ, ಬಲೊತಾರಾ ಮತ್ತು ಮಲ್ಲಾನಿಗಳ ವರೆಗೂ ಹರಡಿತ್ತು.

ಬ್ರಿಟೀಷರ ಆಗಮನದ ನಂತರ 1836 ರಲ್ಲಿ ಬಾಡಮೇರ್ ನಗರವು ಸುಪ್ರಿಟೆಂಡೆಂಟ್ ಆಡಳಿತಕ್ಕೆ ಒಳಪಟ್ಟಿತು. ನಂತರ ಬಾಡಮೇರ ಅನ್ನು 1891 ರಲ್ಲಿ ಜೋಧ್ ಪುರ್ ರಾಜ್ಯದಲ್ಲಿ ವಿಲೀನಗೊಳಿಸಲಾಯಿತು. 1947 ಭಾರತ ಸ್ವಾತಂತ್ರ್ಯ ಹೊಂದಿದ ತರುವಾಯ ಬಾಡಮೇರ ಮತ್ತು ಜೋಧಪುರ್ ಎರಡನ್ನೂ ರಾಜಸ್ಥಾನ ರಾಜ್ಯದಲ್ಲಿ ವಿಲೀನಗೊಳಿಸಲಾಯಿತು. ಇಂದು ಬಾಡಮೇರ್ ಜಿಲ್ಲೆಯಲ್ಲಿ ಐತಿಹಾಸಿಕ ಸ್ಥಳಗಳಾದ ಮಲ್ಲಾನಿ ಶಿವ್, ಪಚಪದ್ರಾ, ಸಿವಾನಾ ಮತ್ತು ಚೊಹತಾನ್ ಪ್ರದೇಶವನ್ನು ನೋಡಬಹುದಾಗಿದೆ.

ಕಲೆ, ಕ್ರಾಫ್ಟ್ ಹಾಗು ಸಂಗೀತದಲ್ಲಿ ಸೃಜನಶೀಲತೆ

ಬಾಡಮೇರ್ ಪಟ್ಟಣವು ಕರಕುಶಲ, ಕಸೂತಿ ಕೆಲಸ ಮತ್ತು ಇನ್ನಿತರ ಸಾಂಪ್ರದಾಯಿಕ ಕಲೆಯ ವಸ್ತುಗಳಿಗೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಬಾಡಮೇರ್ ಜಾನಪದ ನೃತ್ಯ ಮತ್ತು ಸಂಗೀತಕ್ಕೆ ನಂಟನ್ನೂ ಹೊಂದಿದೆ. ಇಲ್ಲಿನ ಜಾನಪದ ಸಂಗೀತಗಾರರು ಕೇವಲ ಒಂದೇ ಸಮುದಾಯದವರಾಗಿಲ್ಲ. ವಿಭಿನ್ನ ಪಂಗಡಗಳಿಂದ ಬಂದ ಈ ಸಂಗೀತಗಾರರಲ್ಲಿ ಭೋಪಾ ಮತ್ತು ಢೋಲಿ ಜನಾಂಗದವರು ಮುಖ್ಯವಾಗಿರುವರು. ಭೋಪಾಸ್ ಗಾಯಕರು ನಾಯಕರ ಮತ್ತು ದೇವರುಗಳ ಮೇಲೆ ಹಾಡನ್ನು ಹಾಡಿದರೆ, ಇನ್ನೊಂದೆಡೆ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಢೋಲಿಸ್ ಜಾನಪದ ಸಂಗೀತ ಮಾಧ್ಯಮದ ಮೂಲಕ ತಮ್ಮ ಜೀವನ ಸಾಗಿಸುತ್ತಾರೆ.

ಬಾಡಮೇರ್, ಫಾಬ್ರಿಕ್ ಮತ್ತು ಫರ್ನೀಚರ್ ಗಳ ಮೇಲೆ ಕೈನಿಂದ ಮಾಡಲಾಗುವ ಬ್ಲಾಕ್ ಗಳ ಮುದ್ರಣಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಜನರ ಸೃಜನಶೀಲತೆಯ ಲಕ್ಷಣಗಳು, ಇವರು ನಿರ್ಮಿಸಿರುವ ಮಣ್ಣಿನ ಗುಡಿಸಲುಗಳ ಗೋಡೆಗಳನ್ನು ಗಮನಿಸಿದಾಗ ಅನಾವರಣಗೊಳ್ಳುತ್ತವೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ರಾಜಸ್ಥಾನದ ಸಂಸ್ಕೃತಿ ಮತ್ತು ಸಂಪ್ರದಾಯದ ಸಾರಾಂಶ

ಬಾಡಮೇರ್ ಪ್ರವೇಶಿಸಿದ ತಕ್ಷಣ, ರಾಜಸ್ಥಾನದ ಗ್ರಾಮೀಣ ಸೌಂದರ್ಯ, ಸಂಸ್ಕೃತಿ ಮತ್ತು ಸಂಪ್ರದಾಯದ ಪರಿಚಯವಾಗುವುದು ಖಂಡಿತ. ಇಲ್ಲಿರುವ ಕೆಲವು ಪ್ರವಾಸಿ ಆಕರ್ಷಣೆಗಳೆಂದರೆ ಬಾಡಮೇರ್ ಕೋಟೆ, ರಾಣಿ ಭಾಟಿಯಾನಿ ದೇವಸ್ಥಾನ, ವಿಷ್ಣು ದೇವಸ್ಥಾನ, ದೇವ್ಕಾ-ಸೂರ್ಯ ದೇವಸ್ಥಾನ, ಜುನಾ ಜೈನ ಮಂದಿರ, ಸಫೇದ್ ಅಖಾಡಾ ಮುಂತಾದವುಗಳು.

ಬಾಡಮೇರ್ ಗೆ ತಲುಪುವ ಬಗೆ

ರೈಲು, ರಸ್ತೆ ಮತ್ತು ವಾಯು ಮಾರ್ಗಗಳ ಮುಖಾಂತರ ಬಾಡಮೇರ್ ಭಾರತದ ಇತರೆ ಭಾಗಗಳೊಂದಿಗೆ ಸಂಪರ್ಕವನ್ನು ಹೊಂದಿದೆ. ಬಾಡಮೇರ್ ರೈಲು ನಿಲ್ದಾಣವು ಮೀಟರ್ ಗೇಜ್ ಮುಖಾಂತರ ಜೋಧಪುರ್ ಗೆ ಸಂಪರ್ಕವನ್ನು ಹೊಂದಿದೆ. ಇದಲ್ಲದೆ ರಾಜಸ್ಥಾನದ ಹಲವು ಪ್ರಮುಖ ನಗರಗಳಿಂದ, ಬಾಡಮೇರ್ ಗೆ ತಲುಪಲು ಬಸ್ ಹಾಗು ಕ್ಯಾಬ್ ಸೇವೆಯು ಲಭ್ಯವಿದೆ. ಇದಕ್ಕೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಜೋಧಪುರಿನ ಸಿವಿಲ್ ಏರ್ ಪೊರ್ಟ್. ಇದು ಬಾಡಮೇರ್ ನಿಂದ 220 ಕಿ.ಮೀ ದೂರದಲ್ಲಿದೆ.

ಅಕ್ಟೋಬರ್ ಮತ್ತು ಮಾರ್ಚ್ ಮಧ್ಯದ ಅವಧಿಯು ಬಾಡಮೇರ್ ಗೆ ಹೋಗಲು ಉತ್ತಮವಾಗಿದೆ. ಈ ಸಮಯದಲ್ಲಿ ಈ ಮರಭೂಮಿ ಪ್ರದೇಶವು ಹಿತವೆನ್ನಬಹುದಾದಂತಹ ವಾತಾವರಣವನ್ನು ಹೊಂದಿರುತ್ತದೆ.

ಹಲವಾರು ಉತ್ಸವ ಮತ್ತು ಜಾತ್ರೆಗಳನ್ನು ಇಲ್ಲಿ ಅತಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ತಿಲ್ವಾರಾನಲ್ಲಿ, ರಾವಲ್ ಮಲ್ಲಿನಾಥ್ ರ ಸ್ಮರಣಾರ್ಥವಾಗಿ ಪ್ರತಿ ವರ್ಷ ಜರುಗುವ, ಮಲ್ಲಿನಾಥ್ ಹೈನು ಜಾತ್ರೆಯು ಅತ್ಯಂತ ಮಹತ್ವದ್ದಾಗಿದೆ. ವಿರಾಟರ ಮೇಲಾ ಮತ್ತು ಥಾರ್ ಉತ್ಸವವನ್ನೂ ಕೂಡ ಅಷ್ಟೇ ಉತ್ಸಾಹದಿಂದ ಆಚರಿಸಲಾಗುತ್ತದೆ.

Please Wait while comments are loading...