ಲಾಡನೂ - ಜೈನ ದೇವತೆಗಳ ಪೂಜ್ಯ ಭೂಮಿ

ರಾಜಸ್ಥಾನಿನ ನಗೌರ್ ಜಿಲ್ಲೆಯಲ್ಲಿರುವ ಲಾಡನೂ ಒಂದು ಪ್ರವಾಸಿ ನಗರ. ಮೊದಲಿಗೆ ಈ ಪಟ್ಟಣವನ್ನು ಚಾಂದೇರಿ ನಗರ ಎಂದು ಕರೆಯಲಾಗುತ್ತಿತ್ತು. ಅಷ್ಟೆ ಅಲ್ಲ, ಜನರಿಂದ ಹೆಚ್ಚಾಗಿ ಗೌರವಿಸಲ್ಪಡುವ ಮತ್ತು ಅನುವ್ರತಾ ಹಾಗು ಜೈನ ವಿಶ್ವಭಾರತಿ ವಿಶ್ವವಿದ್ಯಾನಿಲಯದ ಸಂಸ್ಥಾಪಕರೂ ಆದ ಆಚಾರ್ಯ ತುಳಸಿ ಅವರ ಹುಟ್ಟೂರು ಕೂಡ ಇದೆ ಆಗಿದೆ. ಈ ಮಹಾನ್ ವ್ಯಕ್ತಿಯನ್ನು ಮಾಜಿ ರಾಷ್ಟ್ರಪತಿಗಳಾಗಿದ್ದ Dr. ರಾಧಾಕೃಷ್ಣನ್ ಅವರು ತಮ್ಮ ಪ್ರಸಿದ್ಧ ಕೃತಿಯಾದ "ಲಿವಿಂಗ್ ವಿಥ್ ಪರ್ಪಸ್" ನಲ್ಲಿ ಜಗತ್ತಿನ 15 ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರೆಂದು ಹೇಳಿದ್ದಾರೆ.

ಇತಿಹಾಸದಲ್ಲಿ ಲಾಡ್ನೂ

ಲಾಡ್ನೂ ಇತಿಹಾಸವು ನಮ್ಮನ್ನು ಮಹಾಕಾವ್ಯವಾದ 'ಮಹಾಭಾರತ'ಕ್ಕೆ ಕೊಂಡೊಯ್ಯುತ್ತದೆ. ಈ ಮಹಾಕಾವ್ಯದಲ್ಲಿ ವಿವರಿಸಲಾಗಿರುವ ಶಿಷುಪಾಲ ರಾಜ್ಯವು, ಸುಮಾರು 12ನೇ ಶತಮಾನದಲ್ಲಿ ಲಾಡ್ನೂ ಪ್ರದೇಶವನ್ನು ವಶಪಡಿಸಿಕೊಂಡಿತ್ತು. ತದನಂತರ 16 ರ ಶತಕದಲ್ಲಿ ಲಾಡ್ನೂ ಜೋಧಪುರ್ ನ ಭಾಗವಾಯಿತು.

ಜೈನ ದೇವಾಲಯಗಳ ಭೂಮಿ

ಈ ಆಧ್ಯಾತ್ಮಿಕ ನಗರಿಯು, ತನ್ನಲ್ಲಿರುವ ಜೈನ ಧಾರ್ಮಿಕ ಕೇಂದ್ರಗಳಿಂದಾಗಿ ಪ್ರಸಿದ್ಧಿಯಾಗಿದೆ. ಇಲ್ಲಿನ ದಿಗಂಬರ ಜೈನ ಬಾರಾ ದೇವಸ್ಥಾನವು ಹೆಚ್ಚು ಜನಪ್ರಿಯತೆ ಗಳಿಸಿದ ಸ್ಥಳ. ಈ ದೇವಸ್ಥಾನವು 100 ವರ್ಷಕ್ಕೂ ಅಧಿಕ ಹಳೆಯದಾಗಿದ್ದು, ತನ್ನಲ್ಲಿರುವ 166 ಮಾರ್ಬಲ್ ನಿಂದ ಮಾಡಲಾಗಿರುವ ಜೈನ ತೀರ್ಥಂಕರರ ಪ್ರತಿಮೆಗಳಿಂದ ಬಹು ಜನಪ್ರಿಯವಾಗಿದೆ. ಪ್ರವಾಸಿಗರು ಇಲ್ಲಿ, ಅಪುರೂಪದ ಪ್ರತಿಮೆಗಳು, ಪುರಾತನ ಕಲಾಕೃತಿಗಳು ಮತ್ತು ಜೈನ ಬರಹಗಳ ಸಂಗ್ರಹಗಳನ್ನು ಹೊತ್ತ ಕಲಾ ಗ್ಯಾಲರಿಯನ್ನೂ ಸಹ ನೋಡಬಹುದಾಗಿದೆ. ಕೊರೆದ ಖಂಬಗಳು ಮತ್ತು ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ದ್ವಾರಗಳು, ಈ ದೇಗುಲದ ಸೊಬಗನ್ನು ಮತ್ತಷ್ಟು ಹೆಚ್ಚಿಸುತ್ತವೆ. ಲಾಡ್ನೂ ನಲ್ಲಿ ಶಾಂತಿನಾಥ ದೇವಸ್ಥಾನ ಹಾಗು ಚಾರ್ಭುಜನಾಥ ದೇವಸ್ಥಾನಗಳನ್ನು ಕೂಡ ನೋಡಬಹುದಾಗಿದೆ.

ಲಾಡ್ನೂ ನಲ್ಲಿಯ ವಿಶ್ವ ಭಾರತಿ ವಿಶ್ವವಿದ್ಯಾನಿಲಯವು ಪ್ರಸಿದ್ಧ ಆಕರ್ಷಣೀಯ ಸ್ಥಳವಾಗಿದೆ. ಆಚಾರ್ಯ ತುಳಸಿಯವರು ಇದನ್ನು 1970 ರಲ್ಲಿ ಸ್ಥಾಪಿಸಿದ್ದಾರೆ. ಈ ವಿದ್ಯಾನಿಲಯವು ತನ್ನ ಉಚ್ಛ ಗುಣಮಟ್ಟದ ವಿದ್ಯಾಭ್ಯಾಸ, ಆಧ್ಯಾತ್ಮಿಕತೆ ಮತ್ತು ನೈತಿಕ ಮೌಲ್ಯಗಳಿಂದಾಗಿ ಹೆಚ್ಚು ಪ್ರಸಿದ್ಧಿಯಾಗಿದೆ. ಪ್ರವಾಸಿಗರು ವಿದ್ಯಾನಿಲಯ ಮಾತ್ರವಲ್ಲದೆ ಇಲ್ಲಿರುವ ಸುಖದೇವ್ ಆಶ್ರಮ, ಬಾಲಾಜಿ ಮಂದಿರ, ಪಾಬೊಲಾವ್, ಮಂಗಲ್ಪುರ ಬಾಗಿಚಿ, ಪೀಟ್ ವಾಲೆ ಬಾಲಾಜಿ, ದ್ರೋಣಾಚಲ್ ಅರ್ಹಮ್ ಆಶ್ರಮ, ವೆಂಕಟೇಶ ಮಂದಿರ, ಸುಜನ್ಗಡ್ ಮತ್ತು ಸಿಂಘಿ ಮಂದಿರಗಳಿಗೆ ಭೇಟಿ ನೀಡಬಹುದಾಗಿದೆ.

ಲಾಡ್ನೂ ನಲ್ಲಿ ನೋಡಬಹುದಾದ ಸ್ಥಳಗಳು

ರಮಾನಂದ ಗೋಶಾಲೆ, ಆದಿನಾಥ ಮಂದಿರ, ಚಂದ್ರಸಾಗರ ಸ್ಮಾರಕ ದೇವಸ್ಥಾನ, ಸಾಧ್ವಿ ಪನ್ನಾಜಿ ಕಿ ಸಮಾಧಿ ಮತ್ತು ನೀಲಕಂಠ ಮಹಾದೇವ್ ದೇವಸ್ಥಾನ್ ಮುಂತಾದವುಗಳು ಲಾಡ್ನೂ ನಲ್ಲಿ ನೋಡಬಹುದಾದ ಸ್ಥಳಗಳಾಗಿವೆ. ಪ್ರಮುಖ ಧಾರ್ಮಿಕ ಆಕರ್ಷಣೆಯಾದ ಸಲಸರ ಧಾಮವು ಲಾಡ್ನೂ ವಿನಿಂದ ಕೇವಲ 37 ಕಿ.ಮೀ ದೂರದಲ್ಲಿದೆ. ಲಾಡ್ನೂ ನಲ್ಲಿರುವ ಇತರೆ ಪ್ರಮುಖ ಆಕರ್ಷಣೆಗಳೆಂದರೆ ಕಾರಂತ್ ಬಾಲಾಜಿ, ವೀರ್ ಬಾಲಾಜಿ ಮಂದಿರ್, ಉಮರ್ ಶಾ ಪೀರ್ ದರ್ಗಾ ಮತ್ತು ಆರ್ಯ ಸಮಾಜ ಮಂದಿರ್.

ಲಾಡ್ನೂ ತಲುಪುವ ಬಗೆ

ಲಾಡ್ನೂ ವನ್ನು ವಿಮಾನ, ರೈಲು ಹಾಗು ಬಸ್ಸುಗಳ ಮೂಲಕ ತಲುಪಬಹುದಾಗಿದೆ. ಜೈಪುರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು, ಲಾಡ್ನೂ ಗೆ ಹತ್ತಿರದ ವಾಯು ನಿಲ್ದಾಣವಾಗಿದೆ. ರೈಲುಗಳ ಮೂಲಕವೂ ಈ ಸ್ಥಳ ಭಾರತದ ಪ್ರಮುಖ ನಗರಗಳೊಂದಿಗೆ ಸಂಪರ್ಕವನ್ನು ಹೊಂದಿದೆ. ಲಾಡ್ನೂ ನ ರೈಲು ನಿಲ್ದಾಣವು ಚಿಕ್ಕದಾಗಿದೆ. ಇದಕ್ಕೆ ಬದಲಾಗಿ, ಹತ್ತಿರದಲ್ಲಿರುವ ನಗೌರ್ ರೈಲು ನಿಲ್ದಾಣವನ್ನೂ ಕೂಡ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಜೈಪುರ್, ಅಜ್ಮೇರ್, ಸಿಕರ್, ಬಿಕಾನೇರ್, ಕುಚ್ಮನ್, ಅಹ್ಮದಾಬಾದ್, ಇಂದೋರ್ ಮತ್ತು ದೆಹಲಿಗಳಿಂದ ಲಾಡ್ನೂ ಗೆ ಬಸ್ಸುಗಳು ಲಭ್ಯವಿದೆ.

ಹವಾಮಾನ

ಬೇಸಿಗೆ, ಮಳೆಗಾಲ ಮತ್ತು ಚಳಿಗಾಲ ಈ ಮೂರು ಮುಖ್ಯ ಹವಾಮಾನ ಋತುಗಳನ್ನು ಹೊಂದಿರುವ ಲಾಡ್ನೂ ವರ್ಷಪೂರ್ತಿ ಒಣ ವಾತಾವರಣವನ್ನು ಹೊಂದಿರುತ್ತದೆ. ಚಳಿಗಾಲವು ಈ ಪ್ರದೇಶಕ್ಕೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.  

Please Wait while comments are loading...