ಕೋಟಾ – ಅರಮನೆ,ಆರು ಮೊಳದ ಅದ್ಭುತ ಮತ್ತು ಕೋಟೆ ಕೊತ್ತಲಗಳ ನಾಡು.

ಮುಖಪುಟ » ಸ್ಥಳಗಳು » ಕೋಟಾ » ಮುನ್ನೋಟ

ಕೋಟಾ ಎಂಬುದು ರಾಜಸ್ಥಾನದ ಒಂದು ಪ್ರಮುಖ ನಗರವಾಗಿದ್ದು, ಚಂಬಲ್ ನದಿಯ ದಂಡೆಯಲ್ಲಿ ನೆಲೆಗೊಂಡಿದೆ. ಹಲವಾರು ವಿದ್ಯುತ್ ಕೇಂದ್ರಗಳಿಗೆ ಮತ್ತು ಕೈಗಾರಿಕೆಗಳಿಗೆ ನೆಲೆಕಲ್ಪಿಸಿರುವ ಈ ನಗರವು ’ರಾಜಸ್ಥಾನದ ಕೈಗಾರಿಕಾ ರಾಜಧಾನಿ” ಎಂದು ಖ್ಯಾತಿ ಪಡೆದಿದೆ. ಏಶಿಯಾದ ಬೃಹತ್ ರಸಗೊಬ್ಬರ ಕಾರ್ಖಾನೆಯು ಕೋಟಾದಲ್ಲಿದೆ. ಕೋಟಾವು ಗುಜಾರಾತ್ ಮತ್ತು ದೆಹಲಿ ನಡುವಿನ ವ್ಯಾಪಾರ ಮತ್ತು ವಹಿವಾಟಿನ ಪ್ರಮುಖ ಕೇಂದ್ರವಾಗಿದೆ. ಅಲ್ಲದೆ ಈ ಊರು ಇಲ್ಲಿರುವ ಹಲವಾರು ಇಂಜಿನಿಯರಿಂಗ್ ಕಾಲೇಜು ಹಾಗು ಇನ್ನಿತರ ಶೈಕ್ಷಣಿಕ ಸಂಸ್ಥೆಗಳ ಸಲುವಾಗಿ ರಾಜಸ್ಥಾನದ ಪ್ರಮುಖ ಶೈಕ್ಷಣಿಕ ಕೇಂದ್ರವಾಗಿ ಸಹ ಪರಿಗಣಿಸಲ್ಪಟ್ಟಿದೆ.

ಕೋಟಾದಲ್ಲಿ ನೋಡಲು ಏನೇನಿದೆ?

ಕೋಟಾ ರಾಜಸ್ಥಾನದಲ್ಲಿರುವುದರಿಂದಾಗಿ, ಈ ರಾಜ್ಯದ ಇತರ ನಗರಗಳಂತೆ ಹವೇಲಿಗಳು, ಅರಮನೆಗಳು, ಕೋಟೆಗಳು ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಸ್ಥಾನಪಡೆದಿವೆ. ಇದರ ಹೊರತಾಗಿ ಹಲವಾರು ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಕೋಟಾ ಖ್ಯಾತಿ ಪಡೆದಿದೆ. ಗುರುದ್ವಾರ ಅಝಮ್ ಘರ್ ಸಾಹಿಬ್, ಗೋದಾವರಿ ಧಾಮ್ ದೇವಾಲಯ, ಗರಡಿಯ ಮಹಾದೇವ್ ದೇವಾಲಯ ಮತ್ತು ಮಥುರಾಧೀಶ್ ಮಂದಿರ್ ಗಳು ಕೋಟಾದಲ್ಲಿರುವ ಇತರ ಪ್ರಸಿದ್ಧ ಧಾರ್ಮಿಕ ಸ್ಥಳಗಳಾಗಿವೆ. ಅಝಾಮ್ ಘರ್ ಸಾಹಿಬ್ ಗುರುದ್ವಾರವು ಕೋಟಾದಲ್ಲಿರುವ ಅತ್ಯಂತ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಅಲ್ಲದೆ ಈ ಗುರುದ್ವಾರದಲ್ಲಿ ಇಡಲಾಗಿರುವ ಕಠಾರಿ ಮತ್ತು ಮರದ ಪಾದರಕ್ಷೆಗಳು ಸಿಖ್ಖರ 10ನೇ ಗುರುವಾದ ಗುರುನಾನಕ್ ರಿಗೆ ಸೇರಿದ್ದೆಂದು ನಂಬಲಾಗಿದೆ. ಅಲ್ಲದೆ ಈ ಸ್ಥಳವು ಪ್ರಸಿದ್ಧ ಕವಿ ಅಯೋಧ್ಯ ಸಿಂಗರ ಜನ್ಮ ಸ್ಥಳವಾದ “ಹರಿಊದ್” ಗಾಗಿ ಸಹ ಪ್ರಸಿದ್ಧವಾಗಿದೆ. ಇವುಗಳೊಂದಿಗೆ ಕೃತಕವಾಗಿ ನಿರ್ಮಿಸಲಾದ ನಯನ ಮನೋಹರವಾದ ಕಿಶೋರ್ ಸಾಗರ್ ಕೆರೆಯಲ್ಲಿರುವ, ಕಣ್ಮನಸೆಳೆಯುವ ಕೆಂಪುಕಲ್ಲಿನ ಸ್ಮಾರಕ ಜಗಮಂದಿರ್ ಅರಮನೆಯು ತನ್ನ ಐತಿಹಾಸಿಕ ಮಹತ್ವದ ಸಲುವಾಗಿ ಇಡಿ ಕೋಟಾದಲ್ಲಿಯೆ ಅತ್ಯಂತ ಹೆಸರುವಾಸಿಯಾದ ಸ್ಮಾರಕವಾಗಿ ಪರಿಗಣಿಸಲ್ಪಟ್ಟಿದೆ. ಪ್ರವಾಸಿಗರು ಈ ಅರಮನೆಗೆ ದೋಣಿಗಳ ಮುಖಾಂತರ ತಲುಪಬಹುದು. ಈ ಸ್ಥಳವು ಸರ್ಕಾರಿ ಮತ್ತು ಮಹಾರಾವ್ ಮಾಧೊ ಸಿಂಗ್ ವಸ್ತು ಸಂಗ್ರಹಾಲಯಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕೋಟಾ ಸೀರೆಗಳು

ಕೋಟಾ ಸೀರೆಗಳು ಕೇವಲ ಈ ಪ್ರಾಂತ್ಯದ ಜನಪದ ಹೆಂಗಸರಿಂದ ಮಾತ್ರವಲ್ಲದೆ, ದೇಶ-ವಿದೇಶಗಳ ಹೆಂಗಳೆಯರ ಮನೆ–ಮನಗಳಲ್ಲಿ ಸ್ಥಾನಪಡೆದಿದೆ. ಈ ಸೀರೆಗಳನ್ನು “ಕೋಟಾ ದೊರಿಯ” ಎಂದು ಸಹ ಕರೆಯಲಾಗುತ್ತದೆ. ’ದೊರಿಯ’ ಎಂದರೆ ದಾರ ಅಥವಾ ನೂಲು ಎಂದರ್ಥ.ಈ ಸೀರೆಗಳ ಹುಟ್ಟು ಕುತೂಹಲದಾಯಕವಾಗಿದೆ. ಮೂಲತಃ ಮೈಸೂರಿನಲ್ಲಿ ತೆಗೆಯಲಾದ ನೂಲನ್ನು ಮೊಘಲ್ ಸೇನಾಧಿಪತಿ ರಾವ್ ಕಿಶೋರ್ ಸಿಂಗ್ ನೇಕಾರರೊಂದಿಗೆ ಮೈಸೂರಿನಿಂದ ಕೋಟಾಗೆ ತೆಗೆದುಕೊಂಡು ಹೋದನಂತೆ. ಹೀಗಾಗಿ ಕೋಟಾದಲಿ ಸೀರೆಗೆ ’ಮಸೂರಿಯ’ ( ಮೈಸೂರಿನಿಂದಾಗಿ) ಎಂದು ಕರೆಯುತ್ತಾರೆ. ಆದರು ಸಹ ದೇಶದ ಇತರೆಡೆಗಳಲ್ಲಿ ಇದನ್ನು ’ಕೋಟಾ ದೊರಿಯ’ ಎಂದು ಕರೆಯುತ್ತಾರೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಇದನ್ನು ಹತ್ತಿ ಮತ್ತು ರೇಷ್ಮೆಯಲ್ಲಿ ಸೃಷ್ಟಿಸಲಾದ ಆರು ಮೊಳದ ಅದ್ಭುತವೆಂದು ಕರೆಯಬಹುದು.

ಕೋಟಾಗೆ ತಲುಪುವುದು ಹೇಗೆ

ಪ್ರವಾಸಿಗರು ಕೋಟಾಗೆ ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು. ಕೋಟಾ ರೈಲ್ವೆ ನಿಲ್ದಾಣ ಮತ್ತು ಜೈಪುರ್ ವಿಮಾನ ನಿಲ್ದಾಣ ಇಲ್ಲಿಗೆ ಸಮೀಪದ ರೈಲು ಹಾಗು ವಿಮಾನ ನಿಲ್ದಾಣಗಳಾಗಿವೆ. ಚಿತ್ತೋಡ್ ಘಡ್, ಜೈಪುರ್, ಅಜ್ಮೀರ್, ಜೋಧ್ ಪುರ್, ಬಿಕನೇರ್ ಮತ್ತು ಉದಯ್ ಪುರ್ ಗಳಿಂದ ಬಸ್ಸುಗಳ ಮೂಲಕ ಕೋಟಾಗೆ ಸುಲಭವಾಗಿ ತಲುಪಬಹುದು.

ಕೋಟಾದ ಹವಾಗುಣ

ಕೋಟಾ ಅತಿಯೆನ್ನಿಸುವಂತಹ ಬೇಸಿಗೆ ಮತ್ತು ಚಳಿಗಾಲಗಳ ಅನುಭವವನ್ನು ನೀಡುತ್ತದೆ. ಇಲ್ಲಿಗೆ ಭೇಟಿ ಕೊಡಲು ಅಕ್ಟೋಬರ್ ನಿಂದ ಮಾರ್ಚ್ ವರೆಗಿನ ಚಳಿಗಾಲದ ಅವಧಿ ಅತ್ಯಂತ ಸೂಕ್ತವಾಗಿದೆ.

Please Wait while comments are loading...