ರಣಥಂಬೋರ್ - ವನ್ಯಜೀವ ಮತ್ತು ಅಪುರೂಪತೆಯ ಸಮ್ಮಿಶ್ರಣ

ರಣಥಂಬೋರ್ ಮತ್ತು ರಥಂಬೋರ್ ಎಂದು ಸಹ ಕರೆಯಲ್ಪಡುವ ರಣಥಂಬೋರ್ ರಾಜಸ್ಥಾನದ ಒಂದು ನಯನ ಮನೋಹರವಾದ ಪ್ರವಾಸಿ ತಾಣವಾಗಿದೆ. ಇದು ಸವಾಯಿ ಮಾಧೋಪುರದಿಂದ 12 ಕಿ.ಮೀ ದೂರದಲ್ಲಿ ನೆಲೆಸಿದೆ. ಈ ಸ್ಥಳದ ಹೆಸರು ಇಲ್ಲಿರುವ “ರಣ್” ಮತ್ತು “ ಥಾಂಬೊರ್” ಎಂಬ ಎರಡು ಬೆಟ್ಟಗಳ ನಡುವೆ ನೆಲೆಸಿದೆ.  

ವಿಶ್ವವಿಖ್ಯಾತ ಹುಲಿ ಸಂರಕ್ಷಿತ ಅರಣ್ಯ

ಈ ಸ್ಥಳವು ವಿಶ್ವವಿಖ್ಯಾತ ಹುಲಿ ಸಂರಕ್ಷಿತ ಅರಣ್ಯ ಮತ್ತು ರಣಥಂಬೋರ್ ರಾಷ್ಟ್ರೀಯ ಉದ್ಯಾನವನಕ್ಕೆ ಖ್ಯಾತಿ ಪಡೆದಿದ್ದು, ಪ್ರಸಿದ್ಧ ಯಾತ್ರಾಸ್ಥಳವಾಗಿಯು ಸಹ ಖ್ಯಾತಿಪಡೆದಿದೆ. ಈ ಉದ್ಯಾನವನವು ಅರಾವಳಿ ಪರ್ವತ ಶ್ರೇಣಿ ಮತ್ತು ವಿಂಧ್ಯ ಪ್ರಸ್ಥಭೂಮಿ ಕೂಡುವ ಸ್ಥಳದಲ್ಲಿ ತಲೆ ಎತ್ತಿದೆ. ಈ ಉದ್ಯಾನವನವು ಸವಾಯಿ ಮಾಧೋಪುರದಿಂದ 14 ಕಿ.ಮೀ ದೂರದಲ್ಲಿದೆ. ಮೊದಲಿಗೆ ಈ ಉದ್ಯಾನವನವನ್ನು  ’ಸವಾಯಿ ಮಾಧೋಪುರ್ ಕ್ರೀಡಾ ವನ್ಯಧಾಮ’ವೆಂಬ ಹೆಸರಿನಲ್ಲಿ  1955ರಲ್ಲಿ ಸ್ಥಾಪಿಸಲಾಯಿತು. ನಂತರ 1973ರಲ್ಲಿ ಇದನ್ನು ಹುಲಿ ಯೋಜನೆಯಡಿಯಲ್ಲಿ ಬರುವ ಸಂರಕ್ಷಿತ ಅರಣ್ಯವೆಂದು ಘೋಷಿಸಲಾಯಿತು. 1980ರಲ್ಲಿ ಇದು ರಾಷ್ಟ್ರೀಯ ಉದ್ಯಾನವನವೆಂಬ ಸ್ಥಾನಮಾನವನ್ನು ಗಳಿಸಿತು.

ರಣಥಂಬೋರ್ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳು ವಿಪುಲವಾದ ಸಸ್ಯ ಮತ್ತು ಪ್ರಾಣಿ ಸಂಪತ್ತಿನಿಂದ ಕೂಡಿರುವ ದಟ್ಟವಾದ ಅರಣ್ಯಗಳನ್ನು ಹೊಂದಿದೆ. ಈ ಅರಣ್ಯಗಳು ವಿವಿಧ ಬಗೆಯ ಪ್ರಾಣಿ ಮತ್ತು ಪಕ್ಷಿ ಸಂಕುಲಗಳಿಗೆ ಆಶ್ರಯವನ್ನೊದಗಿಸಿವೆ. ಈ ವನ್ಯಜೀವಿಧಾಮದಲ್ಲಿ ಸಾಂಬರ್, ಚಿರತೆ, ಕಾಡು ಹಂದಿ, ಕರಡಿ, ಪಟ್ಟೆಯಿರುವ ಕತ್ತೆಕಿರುಬ  ಮತ್ತು ಇನ್ನಿತರ ಹಲವಾರು ಕಾಡು ಪ್ರಾಣಿಗಳನ್ನು ಕಾಣಬಹುದು. ಅಲ್ಲದೆ ರಣಥಂಬೋರ್ ನಲ್ಲಿ ಪದಮ್ ತಲಾವ್, ಸುರ್ವಾಲ್ ಕೆರೆ ಮತ್ತು ಮಲಿಕ್ ತಲಾವ್ ಸೇರಿದಂತೆ ಹಲವಾರು ಕೆರೆಗಳು ಇವೆ. ಪದಮ್ ತಲಾವ್ ಈ ರಾಷ್ಟ್ರೀಯ ಉದ್ಯಾನವನದಲ್ಲಿರುವ ಅತ್ಯಂತ ದೊಡ್ಡ ಕೆರೆಯಾಗಿದೆ. ಜೋಗಿ ಮಹಲ್ ಎಂಬ ಪುರಾತನ ಅತಿಥಿಗೃಹವು ಇದರ ದಂಡೆಯಲ್ಲಿದೆ.

ರಣಥಂಬೋರ್ ಕೋಟೆ – ನೋಡಲೆ ಬೇಕಾದ ವಾಸ್ತುಶಿಲ್ಪದ ವೈಭವ

ರಣಥಂಬೋರ್ ಕೋಟೆಯು ರಣಥಂಬೋರ್ ನ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಇದನ್ನು ಕ್ರಿ.ಶ 944 ರಲ್ಲಿ ನಿರ್ಮಿಸಲಾಯಿತು. ಈ ಕೋಟೆಯು ರಾಜಸ್ಥಾನದ ಧೈರ್ಯ, ಸ್ಥೈರ್ಯ ಮತ್ತು ಐತಿಹಾಸಿಕ ಬೆಳವಣಿಗೆಗಳ ಸಾರಾಂಶವಾಗಿ ನಿಂತಿದೆ. ಪ್ರಸ್ಥಭೂಮಿಗೆ ಹೊಂದಿಕೊಂಡಂತೆ ಸುಮಾರು 700 ಅಡಿಗಳಷ್ಟು ಎತ್ತರದಲ್ಲಿರುವ ಈ ಕೋಟೆಯು, ಸುಮಾರು ದೂರಕ್ಕೆ ಚಾಚಿಕೊಂಡಂತೆ ನಿಂತಿದೆ. ರಣಥಂಬೋರ್ ಕೋಟೆಯು ತನ್ನ ಆವರಣದಲ್ಲಿ ಗಣೇಶ, ಶಿವ ಮತ್ತು ಶ್ರೀರಾಮರ ಮಂದಿರ ಗಳನ್ನು ಹೊಂದಿದೆ.  ಅತ್ಯದ್ಭುತವಾದ ರಣಥಂಬೋರ್ ಕೋಟೆಯ ಉಸ್ತುವಾರಿಯನ್ನು ಭಾರತೀಯ ಪುರಾತತ್ವ ಇಲಾಖೆಯು (ASI) ನೋಡಿಕೊಳ್ಳುತ್ತದೆ.

ಗತಕಾಲದ ಅದ್ಭುತ ಸಾರಾಂಶ

ರಣಥಂಬೋರ್ ನಲ್ಲಿ ಪ್ರವಾಸಿಗರು ಸುಂದರವಾದ ಪ್ರಕೃತಿದೃಶ್ಯಗಳನ್ನು, ಬೃಹತ್ತಾದ ಹುಲ್ಲುಗಾವಲುಗಳನ್ನು, ಭೋರ್ಗರೆದು ಹರಿಯುವ ಝರಿಗಳನ್ನು, ದಟ್ಟ ಅರಣ್ಯಗಳನ್ನು ಮತ್ತು ಕಡಿದಾದ ಶಿಖರಗಳು ಮತ್ತು ಆಳವಾದ ಕೊರಕಲುಗಳನ್ನು ಕಾಣಬಹುದು. ಅಲ್ಲದೆ ಗತಕಾಲದ ಜೀವಂತ ಸಾಕ್ಷಿಗಳಾಗಿರುವ ಪಳೆಯುಳಿಕೆಗಳನ್ನು, ಭಗ್ನಾವಶೇಷಗಳನ್ನು, ಶಿಥಿಲಾವಸ್ಥೆಯಲ್ಲಿರುವ ಗೋಡೆಗಳು, ಕೋಟೆಗಳು ಮತ್ತು ಇತರ ರಾಜವಂಶದ ಅವಶೇಷಗಳನ್ನು ಪ್ರವಾಸಿಗರು ಇಲ್ಲಿ ವೀಕ್ಷಿಸಬಹುದು. ರಣಥಂಬೋರ್ ಗೆ ಭೇಟಿಕೊಡುವುದರಿಂದ ಮೈಮನಗಳಿಗೆ ಪುನಃಶ್ಚೇತನವನ್ನು ಮತ್ತು ಉತ್ಕೃಷ್ಟವಾದ ಅನುಭವವನ್ನು ನಿಮ್ಮದಾಗಿಸಿಕೊಳ್ಳಬಹುದು.

ರಣಥಂಬೋರ್ ಗೆ ತಲುಪುವುದು ಹೇಗೆ

ರಣಥಂಬೋರ್ ಗೆ ವಿಮಾನ, ರೈಲು ಮತ್ತು ರಸ್ತೆ ಮಾರ್ಗವಾಗಿ ಸುಲಭವಾಗಿ ತಲುಪಬಹುದು. ಜೈಪುರದ ಸಂಗನೇರ್ ವಿಮಾನ ನಿಲ್ದಾಣವು ರಣಥಂಬೋರ್ ಗೆ ಅತ್ಯಂತ ಹತ್ತಿರವಾದ ವಿಮಾನ ನಿಲ್ದಾಣವಾಗಿದೆ. ಸವಾಯಿ ಮಾಧೋಪುರದ ರೈಲು ನಿಲ್ದಾಣವು ರಣಥಂಬೋರ್ ಗೆ ಸಮೀಪದ ರೈಲು ನಿಲ್ದಾಣವಾಗಿದೆ.

ಈ ಸ್ಥಳವು ವರ್ಷಾಪೂರ್ತಿ ಅತ್ಯಂತ ಹಿತವಾದ ಹವಾಗುಣವನ್ನು ಹೊಂದಿರುತ್ತದೆ. ಆದರು ಇಲ್ಲಿಗೆ ಭೇಟಿಕೊಡಲು ಅಕ್ಟೋಬರ್ ಮತ್ತು ಎಪ್ರಿಲ್ ತಿಂಗಳುಗಳ ನಡುವಿನ ಅವಧಿಯು ಉತ್ತಮವಾದ ಕಾಲವಾಗಿದೆ. ಏಕೆಂದರೆ ಇಲ್ಲಿ ಸುತ್ತಾಡಲು ಹವಾಗುಣವು ಅತ್ಯಂತ ಅನುಕೂಲಕರವಾಗಿರುತ್ತದೆ.

Please Wait while comments are loading...