ಕುಲ್ಲು - ಇದುವೇ ಹಿಮಾಲಯದ ಸ್ವರ್ಗ!

ಕುಲ್ಲು "ದೇವತೆಗಳ ಕಣಿವೆ" ಎಂದು ಖ್ಯಾತಿ ಪಡೆದಿರುವ ಹಿಮಾಚಲ್ ಪ್ರದೇಶದ ಒಂದು ಸುಂದರವಾದ ಜಿಲ್ಲೆಯಾಗಿದೆ. ನಂಬಿಕೆಗಳ ಪ್ರಕಾರ, ಈ ಕಣಿವೆಯು ಒಂದಾನೊಂದು ಕಾಲದಲ್ಲಿ ಹಿಂದೂ ದೇವಾನುದೇವತೆಗಳ ಆವಾಸ ಸ್ಥಾನವಾಗಿತ್ತು ಎಂದು ನಂಬಲಾಗಿದೆ. ಬಿಯಾಸ್ ನದಿಯ ದಂಡೆಯ ಮೇಲೆ, ಸಮುದ್ರ ಮಟ್ಟದಿಂದ 1230 ಮೀಟರ್ ಎತ್ತರದಲ್ಲಿರುವ ಈ ಸ್ಥಳವು ತನ್ನ ಸುತ್ತ ಮುತ್ತಲವಿರುವ ಸುಂದರ ಪರಿಸರಕ್ಕಾಗಿ ಹೆಸರುವಾಸಿಯಾಗಿದೆ.

ಮೂಲತಃ ಕುಲ್ಲು ’ಕುಲ್-ಅಂತಿ-ಪೀಠ’ವೆಂದೆ ಕರೆಯಲ್ಪಡುತ್ತಿತ್ತು. ಅದರರ್ಥ 'ದೂರದಲ್ಲಿರುವ ಮಾನವನ ವಾಸ ಯೋಗ್ಯ ಸ್ಥಳ' ವೆಂದಾಗುತ್ತದೆ. ಕುಲ್ಲುವಿನ ಕುರಿತಾಗಿ ವಿಷ್ಣು ಪುರಾಣ, ರಾಮಾಯಾಣ ಮತ್ತು ಮಹಾಭಾರತದ ಮಹಾಕಾವ್ಯಗಳಲ್ಲಿಯೂ ಸಹ ಉಲ್ಲೇಖಗಳಿವೆ. ಇಲ್ಲಿನ ಸ್ಥಳೀಯರಾದ ತ್ರಿಪುರ ಅಥವಾ ಬೆಹಂಗಮನಿ ಪಾಲ್‍ರಿಂದ ಸ್ಥಾಪಿತವಾದ ಈ ಗಿರಿಧಾಮವು ಸುಮಾರು 1ನೇ ಶತಮಾನದಷ್ಟು ಹಿಂದಿನ ಇತಿಹಾಸವನ್ನು ಹೊಂದಿದೆ. ನಂಬಿಕೆಗಳ ಪ್ರಕಾರ, ಈ ಪ್ರಾಂತ್ಯಕ್ಕೆ 1947ರಲ್ಲಿ ಭಾರತ ಸ್ವಾತಂತ್ರ್ಯ ಗಳಿಸುವವರೆಗು ಪ್ರವೇಶಿಸುವುದು ದುಸ್ಸಾಧ್ಯವಾಗಿತ್ತು ಎಂದು ನಂಬಲಾಗಿದೆ.

ಈ ಸುಂದರವಾದ ಬೇಸಿಗೆ ವಿಹಾರ ತಾಣವು ಕಡಿದಾದ ಬೆಟ್ಟಗಳು, ದೇವಾದಾರು ಮರಗಳ ಕಾಡುಗಳು, ನದಿಗಳು ಮತ್ತು ಸೇಬಿನ ತೋಟಗಳಿಂದ ಸುತ್ತುವರೆದಿದೆ. ಈ ಸ್ಥಳವು ತನ್ನ ಪ್ರಾಕೃತಿಕ ಸೌಂದರ್ಯದಿಂದಾಗಿ ವಿಶ್ವದೆಲ್ಲೆಡಿಯಲ್ಲಿರುವ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಇದರ ಜೊತೆಗೆ ಕುಲ್ಲು ತನ್ನಲ್ಲಿರುವ ಪ್ರಾಚೀನ ಕೋಟೆಗಳು, ಧಾರ್ಮಿಕ ಸ್ಥಳಗಳು, ವನ್ಯಜೀವಿಧಾಮಗಳು ಮತ್ತು ಜಲಾಶಯಗಳಿಗೆ ಖ್ಯಾತಿಪಡೆದಿದೆ.

ಸುಲ್ತಾನ್‍ಪುರ್ ಅರಮನೆ ಅಥವಾ ರುಪಿ ಅರಮನೆಯೆಂದು ಕರೆಯಲ್ಪಡುವ ಅರಮನೆಯು ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಆದಾಗಿಯು ಈ ಅರಮನೆಯು 1905 ರಲ್ಲಿ ಸಂಭವಿಸಿದ ಭಾರೀ ಭೂಕಂಪದಿಂದ ನಾಶವಾಯಿತು. ಆನಂತರ ಇದನ್ನು ತನ್ನ ಮೂಲರೂಪದಲ್ಲಿಯೆ ಪುನರ್ ನಿರ್ಮಾಣ ಮಾಡಲಾಯಿತು.

ರಘುನಾಥ್ ದೇವಾಲಯವು ಕುಲ್ಲುವಿನ ಪ್ರಮುಖ ಆಕರ್ಷಣೆಯಾಗಿದೆ. ಇದು ಶ್ರೀ ರಾಮರ ದೇವಾಲಯವಾಗಿದೆ. ರಾಜಹ್ ಜಗತ್ ಸಿಂಗ್‍ರಿಂದ 17ನೇ ಶತಮಾನದಲ್ಲಿ ನಿರ್ಮಾಣಗೊಂಡ ಈ ದೇವಾಲಯವು ಪಿರಮಿಡ್ ಮತ್ತು ಪಹರಿ ವಾಸ್ತು ಶೈಲಿಯ ಒಂದು ಅತ್ಯುತ್ತಮ ಉದಾಹರಣೆಯಾಗಿ ನಿಂತಿದೆ.

ಇಲ್ಲಿನ ಮತ್ತೊಂದು ಆಕರ್ಷಣೆಯೆಂದರೆ ಬಿಜಿಲಿ ಮಹಾದೇವ್ ದೇವಾಲಯ. ಇದು ಇಲ್ಲಿನ ಸ್ಥಳೀಯರು ಮತ್ತು ಪ್ರವಾಸಿಗರ ವಲಯದಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ಲಯಕಾರಕನಾದ ಶಿವನಿಗಾಗಿ ನಿರ್ಮಿಸಲಾದ ಈ ದೇವಾಲಯವು ಬಿಯಾಸ್ ನದಿಯ ದಂಡೆಯ ಮೇಲೆ ನಿರ್ಮಾಣಗೊಂಡಿದೆ. ದಂತ ಕತೆಗಳ ಪ್ರಕಾರ, ಇಲ್ಲಿರುವ ಶಿವಲಿಂಗವು ಸಿಡಿಲಿನ ಹೊಡೆತಕ್ಕೆ ಚೂರು ಚೂರಾಯಿತಂತೆ. ಅನಂತರ ಈ ದೇವಾಲಯದ ಅರ್ಚಕರುಗಳು ಲಿಂಗದ ಚೂರುಗಳನ್ನೆಲ್ಲ ಬೆಣ್ಣೆಯ ಸಹಾಯದಿಂದ ಮರುಜೋಡಣೆ ಮಾಡಿದರಂತೆ.

ಅಲ್ಲದೆ ಇಲ್ಲಿ ಸಾಂಪ್ರದಾಯಿಕವಾದ ಪಹರಿ ಶೈಲಿಯಲ್ಲಿರುವ ಜಗನ್ನಾಥ್ ದೇವಿ ಮತ್ತು ಬಾಷೇಶ್ವರ್ ಮಹಾದೇವ್ ದೇವಾಲಯಗಳಿವೆ. ಈ ದೇವಾಲಯಗಳಿಗೆ ಹಿಮಾಲಯದ ಪಾದ ತಲದಲ್ಲಿರುವ ಪ್ರದೇಶಗಳಿಂದಲು ಸಹ ಜನರು ಬರುತ್ತಿರುತ್ತಾರೆ. ಜಗನ್ನಾಥ್ ದೇವಿ ದೇವಾಲಯವು ಅತ್ಯಂತ ಪ್ರಾಚೀನವಾಗಿದ್ದು, ಸುಮಾರು 1500 ವರ್ಷಗಳ ಹಿಂದೆ ನಿರ್ಮಾಣಗೊಂಡಿತು ಎಂದು ನಂಬಲಾಗಿದೆ. ಆದಿಶಕ್ತಿಯ ಸ್ವರೂಪಿಯಾದ ದುರ್ಗಾ ಮಾತೆಯ ಚಿತ್ರಗಳನ್ನು ನಾವು ಈ ದೇವಾಲಯದ ಗೋಡೆಗಳಲ್ಲಿ ಕಾಣಬಹುದು. ಪ್ರವಾಸಿಗರು ಈ ದೇವಾಲಯವನ್ನು ತಲುಪಲು ಸುಮಾರು 90 ನಿಮಿಷಗಳ ಕಾಲ್ನಡಿಗೆಯ ಹಾದಿಯನ್ನು ಕ್ರಮಿಸಬೇಕಾಗುತ್ತದೆ. ಬಾಷೇಶ್ವರ್ ಮಹಾದೇವ್ ದೇವಾಲಯವನ್ನು ಲಯಕಾರಕನಾದ ಶಿವನಿಗಾಗಿ ಇಲ್ಲಿ ನಿರ್ಮಿಸಲಾಗಿದೆ. ಇದರ ನಿರ್ಮಾಣಕಾಲವು ಸುಮಾರು 9 ನೇ ಶತಮಾನ ಎಂದು ಪರಿಗಣಿಸಲಾಗಿದೆ. ಈ ದೇವಾಲಯದ ಕಟ್ಟಡದಲ್ಲಿ ಅತ್ಯಂತ ಸೂಕ್ಷ್ಮವಾದ ಕೆತ್ತನೆಗಳನ್ನು ನಾವು ಕಾಣಬಹುದು.

ಕೈಸ್ಧರ್, ರೈಸನ್ ಮತ್ತು ಡಿಯೊ ಟಿಬ್ಬಗಳು ಕುಲ್ಲುವಿನಲ್ಲಿರುವ ಇನ್ನಿತರ ಪ್ರವಾಸಿ ಆಕರ್ಷಣೆಗಳಾಗಿವೆ. ಈ ಸ್ಥಳಗಳು ದೇವಾದಾರು ಕಾಡುಗಳ ನಡುವೆ ನೆಲೆಸಿದ್ದು, ಹಿಮಚ್ಛಾಧಿತವಾದ ಕೆರೆಗಳ ಮೂಲಕ ಸಾಗುವ ಕಾಲು ಹಾದಿಯಲ್ಲಿ ನೆಲೆಗೊಂಡಿವೆ. ಕುಲ್ಲುಗೆ ಭೇಟಿಕೊಡುವ ಪ್ರವಾಸಿಗರಿಗೆ ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನವನದಲ್ಲಿರುವ ವಿಫುಲವಾದ ವನ್ಯಜೀವಿಗಳನ್ನು ನೋಡುವ ಭಾಗ್ಯ ದೊರೆಯುತ್ತದೆ. ಇಲ್ಲಿ ಸರಿ ಸುಮಾರು 180 ಜಾತಿಯ ಪ್ರಾಣಿಗಳು ಕಂಡು ಬರುತ್ತವೆ. ಬಿಯಾಸ್ ನದಿಯ ದಂಡೆಯ ಮೇಲೆ ಸಮುದ್ರ ಮಟ್ಟದಿಂದ 76 ಮೀಟರ್ ಎತ್ತರದಲ್ಲಿರುವ ಪಂಡೊಹ್ ಜಲಾಶಯವು ಜಲವಿದ್ಯುತ್ ಉತ್ಪಾದನಾ ಕೇಂದ್ರವನ್ನು ಹೊಂದಿದ್ದು, ಕುಲ್ಲು ಮತ್ತು ಮನಾಲಿಯ ವಿದ್ಯುತ್ ಬೇಡಿಕೆಯನ್ನು ಪೂರೈಸುತ್ತದೆ.

ಕುಲ್ಲು ಚಾರಣ, ಪರ್ವತಾರೋಹಣ, ಶಿಖರಾರೋಹಣ, ಪ್ಯಾರಾಗ್ಲೈಡಿಂಗ್ ಮತ್ತು ರಿವರ್ ರಾಫ್ಟಿಂಗ್‍ನಂತಹ ಸಾಹಸ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಲಡಾಕ್ ಕಣಿವೆ, ಝನ್‍ಸ್ಕರ್ ಕಣಿವೆ, ಲಹೌಲ್ ಮತ್ತು ಸ್ಪಿತಿಗಳು ಇಲ್ಲಿರುವ ಪ್ರಸಿದ್ಧ ಚಾರಣದ ಹಾದಿಗಳಾಗಿವೆ. ಪ್ಯಾರಗ್ಲೈಡಿಂಗ್‍ಗೆ ಕುಲ್ಲು ಇಡೀ ದೇಶದಲ್ಲಿಯೆ ಭಾರೀ ಜನಪ್ರಿಯವಾಗಿದೆ. ಸೊಲಾಂಗ್, ಮಹಾದೇವ್ ಮತ್ತು ಬೀರ್ ಗಳಲ್ಲಿ ಮಾದರಿ ಎನಿಸುವಂತಹ ಪ್ಯಾರಾಗ್ಲೈಡಿಂಗ್‍ಗೆ ಹೇಳಿ ಮಾಡಿಸಿದ ಎತ್ತರವಾದ ಸ್ಥಳಗಳು ಇಲ್ಲಿವೆ. ಪ್ರವಾಸಿಗರು ಇಲ್ಲಿ ಹನುಮಾನ್ ಟಿಬ್ಬ, ಬಿಯಸ್ ಕುಂಡ್, ಮಲಾನ, ಡಿಯೊ ಟಿಬ್ಬ ಮತ್ತು ಚಂದ್ರತಾಲ್‍ಗಳಲ್ಲಿ ಪರ್ವತಾರೋಹಣವನ್ನು ಸಹ ಮಾಡಬಹುದು. ಇದರ ಜೊತೆಗೆ ಪ್ರವಾಸಿಗರು ಬಿಯಸ್ ನದಿಯಲ್ಲಿ ಮೀನುಗಾರಿಕೆಯನ್ನು ಸಹ ಮಾಡಬಹುದು.

ಪ್ರವಾಸಿಗರು ಕುಲ್ಲುಗೆ ವಿಮಾನಯಾನ, ರೈಲು ಮತ್ತು ರಸ್ತೆ ಮಾರ್ಗದ ಮೂಲಕ ತಲುಪಬಹುದು. ಭುಂತರ್ ವಿಮಾನ ನಿಲ್ದಾಣವು ಕುಲ್ಲುಗೆ ಸಮೀಪವಿರುವ ವಿಮಾನ ನಿಲ್ದಾಣವಾಗಿದ್ದು, ಕುಲ್ಲು ಮನಾಲಿ ವಿಮಾನ ನಿಲ್ದಾಣವೆಂದೆ ಖ್ಯಾತಿ ಪಡೆದಿದೆ. ಇದು ಕುಲ್ಲು ನಗರದಿಂದ ಕೇವಲ 10 ಕಿ.ಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣವು ದೆಹಲಿ, ಶಿಮ್ಲಾ, ಚಂಢೀಗಢ್, ಪಠಾಣ್ ಕೋಟ್ ಮತ್ತು ಧರ್ಮಶಾಲದಂತಹ ದೇಶದ ಪ್ರಮುಖ ನಗರಗಳೊಂದಿಗೆ ಉತ್ತಮ ವಿಮಾನ ಸಂಪರ್ಕವನ್ನು ಹೊಂದಿದೆ. ದೆಹಲಿ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಇದು ಈ ಸ್ಥಳವನ್ನು ವಿಶ್ವದ ಇತರೆ ಭಾಗಗಳ ಜೊತೆಗೆ ಸಂಪರ್ಕಿಸುತ್ತದೆ.

ಜೋಗಿಂದರ್ ನಗರ್ ರೈಲ್ವೇ ಸ್ಟೇಷನ್ ಕುಲ್ಲುಗೆ ಹತ್ತಿರದ ರೈಲು ಜಂಕ್ಷನ್ ಆಗಿದ್ದು, ಇದು ಈ ನಗರದಿಂದ 125 ಕಿ.ಮೀ ದೂರದಲ್ಲಿದೆ. ಈ ರೈಲು ನಿಲ್ದಾಣವು ಚಂಢೀಗಡ್ ಮೂಲಕ ಇನ್ನಿತರ ಭಾಗಗಳನ್ನು ಸಂಪರ್ಕಿಸುತ್ತದೆ. ಹಿಮಾಚಲ್ ಪ್ರದೇಶ್ ಸಾರಿಗೆ ಸಂಸ್ಥೆಯ ಬಸ್ಸುಗಳು(ಎಚ್ ಪಿ ಟಿ ಸಿ) ನಿಮ್ಮನ್ನು ಹತ್ತಿರದ ಸ್ಥಳಗಳಿಗೆ ಕೊಂಡೊಯ್ಯಲು ಕಾದು ನಿಂತಿರುತ್ತವೆ. ಹಿಮಾಚಲ್ ಪ್ರದೇಶ ಪ್ರವಾಸೋದ್ಯಮ ಇಲಾಖೆ ನಿಗಮ (ಎಚ್ ಪಿ ಟಿ ಡಿ ಸಿ) ವು ಚಂಢೀಗಢ್, ಶಿಮ್ಲಾ, ದೆಹಲಿ ಮತ್ತು ಪಠಾಣ್ ಕೋಟ್‍ಗಳಿಂದ ಕುಲ್ಲುಗೆ ಬಂದು ಹೋಗಲು ಕೆಲವು ಡೀಲಕ್ಸ್ ಬಸ್ಸುಗಳ ಸೇವೆಯನ್ನು ಸಹ ಒದಗಿಸುತ್ತವೆ.

ಬೇಸಿಗೆಯನ್ನು ಕಳೆಯಲು ಹೇಳಿ ಮಾಡಿಸಿದಂತಹ ಸ್ಥಳವಾಗಿರುವ ಕುಲ್ಲುವಿನಲ್ಲಿ ಹವಾಮಾನವು ಬೇಸಿಗೆಯಲ್ಲಿ ಅತ್ಯಂತ ಮುದ ನೀಡುವಂತೆ ಇರುತ್ತದೆ. ಚಳಿಗಾಲವು ಇಲ್ಲಿ ಹೆಪ್ಪುಗಟ್ಟುವಷ್ಟು ಚಳಿಯನ್ನುಂಟು ಮಾಡುತ್ತದೆ. ಅಲ್ಲದೆ ಚಳಿಗಾಲದಲ್ಲಿ ಇಲ್ಲಿ ಹಿಮಪಾತವು ಸಹ ಆಗುತ್ತದೆ. ನವೆಂಬರ್, ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳುಗಳು ಇಲ್ಲಿ ಸ್ನೋ ಸ್ಕೈಯಿಂಗ್‍ಗೆ ಹೇಳಿ ಮಾಡಿಸಿದ ಸಮಯವಾಗಿದೆ.

ಮಾರ್ಚ್ ನಿಂದ ಅಕ್ಟೋಬರ್ ನಡುವಿನ ಅವಧಿಯು ಈ ಗಿರಿಧಾಮಕ್ಕೆ ಭೇಟಿಕೊಡಲು ಹೇಳಿ ಮಾಡಿಸಿದ ಸಮಯವಾಗಿದೆ. ಇಲ್ಲಿ ಹೊರಾಂಗಣ ಚಟುವಟಿಕೆಗಳು ಮತ್ತು ಸ್ಥಳ ವೀಕ್ಷಣೆಗೆ ಅತ್ಯಂತ ಅನುಕೂಲಕರವಾದ ಹವಾಮಾನವಿರುತ್ತದೆ. ಮಾರ್ಚ್ ನಿಂದ ಜೂನ್‍ವರೆಗಿನ ಅವಧಿಯು ಅತ್ಯಂತ ಉತ್ತಮವೆಂದು ಹೇಳಲಾಗುತ್ತದೆ. ಅಕ್ಟೋಬರ್ ಮತ್ತು ನವೆಂಬರ್ ಗಳು ನದಿಯಲ್ಲಿ ದೋಣಿಯಾನ ಮಾಡಲು, ಶಿಲಾರೋಹಣ, ಪರ್ವತಾರೋಹಣ ಮತ್ತು ಚಾರಣಕ್ಕೆ ಹೇಳಿ ಮಾಡಿಸಿದ ಸಮಯವಾಗಿದೆ.

Please Wait while comments are loading...