ನಗ್ಗರ್ - ಒಂದು ಸುಂದರ ಸುಮಧುರ ಸ್ಥಳ

ಹಿಮಾಚಲ ಪ್ರದೇಶದ ತಪ್ಪಲಿನ ಕುಲ್ಲು ಕಣಿವೆಯಲ್ಲಿರುವ ನಗ್ಗರ್ ಒಮ್ಮೆ ನೋಡಲೇಬೇಕಾದ ಪ್ರವಾಸಿ ತಾಣ. ಕುಲ್ಲುವಿನ ಹಳೆಯ ರಾಜಧಾನಿಯಾಗಿದ್ದ ನಗ್ಗರ್ ಅತ್ಯಂತ ಹಳೆಯ ಪಟ್ಟಣವಾಗಿದೆ. ಇದನ್ನು ರಾಜಾ ವಿಶುದ್ಪಾಲ್‌ ಸಂಸ್ಥಾಪಿಸಿದ. ಕ್ರಿ.ಶ. 1460 ರಲ್ಲಿ ರಾಜಾ ಜಗತ್‌ಸಿಂಗ್ ಸುಲ್ತಾನಪುರವನ್ನು ಕುಲ್ಲುವಿನ ರಾಜಧಾನಿಯಾಗಿ ಘೊಷಣೆ ಮಾಡುವವರರೆಗೂ ಈ ಪ್ರದೇಶ ಕುಲ್ಲುವಿನ ರಾಜಧಾನಿಯೆಂಬ ಪಟ್ಟವನ್ನು ಹೊತ್ತುಕೊಂಡಿತ್ತು.

ನಗ್ಗರ್‌ನ ಅತ್ಯಂತ ಜನಪ್ರಿಯ ತಾಣಗಳ ಪೈಕಿ  ಜಗತೀಪಥ್‌ ಮತ್ತು ಕ್ಯಾಸಲ್‌ ತುಂಬಾ ರಮಣೀಯವಾಗಿವೆ. ಅಂದಾಜು 500 ವರ್ಷಗಳ ಹಿಂದೆ ನಿರ್ಮಿಸಲಾದ ಕೋಟೆ ಸುಂದರವಾಗಿದೆ. ಮೊದಲು ಇದು ಕೋಟೆಯಾಗಿದ್ದರೂ ಬಳಿಕ ಇದನ್ನೇ ನವೀಕರಿಸಿ ಸಾಂಪ್ರದಾಯಿಕ ಹೋಟೆಲ್‌ ಆಗಿ ಪರಿವರ್ತಿಸಲಾಗಿದೆ. ಪ್ರಖ್ಯಾತ ರಷ್ಯನ್ ಕಲಾವಿದ ನಿಕೋಲಸ್ ರೋಲ್‌ರಿಚ್‌ ಮತ್ತು ಅವನ ಮಗನ ಪ್ರಸಿದ್ಧ ಕಲಾಕೃತಿಗಳ ಪ್ರದರ್ಶನ ನಡೆಸುವ ರೋಲ್‌ರಿಚ್‌ ಕಲಾ ಗ್ಯಾಲರಿ ಇಲ್ಲೇ ಇದೆ. ಇದು ನಗ್ಗರ್‌ನ ಪ್ರಮುಖ ಆಕರ್ಷಣೆಯಾಗಿದೆ. ಬೀಯಸ್‌ ನದಿಯ ಎಡ ದಂಡೆಯ ಮೇಲೆ ದಾಗ್ಪೋ ಶೆಡ್ರುಪ್ಲಿಂಗ್‌ ಮಠವನ್ನು ಸ್ಥಾಪಿಸಲಾಗಿದ್ದು ಇದನ್ನು 2005 ನೇ ಇಸ್ವಿಯಲ್ಲಿ ದಲಾಯಿ ಲಾಮಾ ಉದ್ಘಾಟಿಸಿದ್ದರು. ಇದು ಆಧ್ಯಾತ್ಮಿಕ ಪ್ರವಾಸಿಗರಿಗೆ ಒಂದು ಪ್ರಮುಖ ತಾಣವಾಗಿದೆ.

ಧಾರ್ಮಿಕ ಭಾವನೆಗಳನ್ನು ಹೊಂದಿರುವ ಪ್ರವಾಸಿಗರಿಗೂ ನಗ್ಗರ್‌ ಅವಕಾಶ ನೀಡುತ್ತದೆ. ನಗ್ಗರ್‌ ತನ್ನ ಮಡಿಲಲ್ಲಿ ಅನೇಕ ದೇವಾಲಯಗಳನ್ನು ಹೊಂದಿದೆ. ಅವುಗಳಲ್ಲಿ, ತ್ರಿಪುರ ಸುಂದರಿ ದೇವಸ್ಥಾನ, ಚಾಮುಂಡಾ ಭಗವತಿ ದೇವಸ್ಥಾನ ಮತ್ತು ಮುರಳೀಧರ ದೇವಾಲಯ ಪ್ರಮುಖವಾಗಿದ್ದು, ಅನನ್ಯವಾದ ವಾಸ್ತುಶಿಲ್ಪ ಮತ್ತು ಧಾರ್ಮಿಕ ಉತ್ಸವಗಳಿಂದಾಗಿ ಪ್ರಸಿದ್ಧವಾಗಿವೆ. ಸಾಹಸ ಯಾತ್ರೆ ಕೈಗೊಳ್ಳಬೇಕು, ಪರ್ವತಗಳ ಚಾರಣ ಮಾಡಬೇಕು... ಮೀನು ಹಿಡಿಯಬೇಕು ಇತ್ಯಾದಿ ಆಸೆಗಳಿದ್ದರೆ ನಗ್ಗರ್‌ ನಲ್ಲಿ ಅವಕಾಶವಿದೆ. ಇಲ್ಲಿನ ಭೌಗೋಳಿಕ ಸಂರಚನೆ ಈ ಎಲ್ಲ ಚಟುವಟಿಕೆಗಳಿಗೆ ಪೂರಕವಾಗಿದೆ. ಬಿಯಸ್‌ ನದಿಯಲ್ಲಿ ರಾಫ್ಟಿಂಗ್, ಮೀನುಗಾರಿಕೆ ಮನಸ್ಸಿಗೆ ಖುಷಿ ನೀಡುತ್ತದೆ. ಹಿಮಾಲಯದ ತಪ್ಪಲಿನಲ್ಲಿರುವ ಚಂದೇರ್ಖನಿ, ಜಲೋರಿ ಮತ್ತು ಪಿನ್‌ ಪಾರ್ವತಿ ಪರ್ವತಗಳಲ್ಲಿ ಚಾರಣವನ್ನು ಕೈಗೊಳ್ಳಬಹುದು.

ನಗ್ಗರ್‌ಗೆಬರುವ ಅಪೇಕ್ಷೆ ಹೊಂದಿರುವ ಪ್ರವಾಸಿಗರು ಸುಲಭವಾಗಿ ರಸ್ತೆ, ರೈಲು ಹಾಗೂ ವಿಮಾನಗಳ ಮೂಲಕ ಇಲ್ಲಿಗೆ ಬರಬಹುದು. ಏಪ್ರಿಲ್‌ನಿಂದ ಜುಲೈ ಕೊನೆಯವರೆಗೂ ನಗ್ಗರ್‌ ಅನ್ನು ಸವಿಯಲು ಉತ್ತಮವಾದ ಕಾಲ. ಚಳಿಗಾಲದಲ್ಲಿಯೂ ನಗ್ಗರ್‌ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಇಲ್ಲಿನ ಶೀತ ಹವಾಮಾನ ಅನುಭವಿಸಲು ಉತ್ತಮ ಅವಕಾಶವನ್ನು ಒದಗಿಸುತ್ತದೆ.

Please Wait while comments are loading...