ಕಾಂಚನಜುಂಗಾದ ಕೆಳಗೊಂದು ಸುಂದರ ನಗರಿ ಗ್ಯಾಂಗ್ಟಾಕ್...

ಬುದ್ಧರ ಪ್ರಮುಖ ಯಾತ್ರಾ ಸ್ಥಳ, ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿರುವ ಸಿಕ್ಕಿಂನ ರಾಜ್ಯದ ಅತ್ಯಂತ ದೊಡ್ಡ ನಗರವಾಗಿರುವ ಗ್ಯಾಂಗ್ಟಾಕ್, ಹಿಮಾಲಯ ಪರ್ವತ ಶ್ರೇಣಿಯ ಈಶಾನ್ಯದಲ್ಲಿರುವ ಶಿವಲಿಕ್ ಬೆಟ್ಟದಲ್ಲಿದೆ. 1980 ರಲ್ಲಿ ಎಂಚಿ ಎನ್ನುವ ಬೌದ್ಧ ಮಂದಿರವನ್ನು ಇಲ್ಲಿ ಕಟ್ಟಿದ ಬಳಿಕ ಇದು ಬೌದ್ಧರ ಯಾತ್ರಾ ಸ್ಥಳವಾಗಿ ಜನಪ್ರಿಯವಾಗಿದೆ.

18ನೇ ಶತಮಾನದಿಂದಲೂ ಗ್ಯಾಂಗ್ಟಾಕ್ ನಗರ ಹೆಚ್ಚಿನ ಪ್ರಾಮುಖ್ಯತೆ ಪಡೆದಿತ್ತು. 1894ರಲ್ಲಿ ಸಿಕ್ಕಿಂನ್ನು ಆಳುತ್ತಿದ್ದ ಸಿಕ್ಕಿಂ ಚೋಗ್ಯಲ್ ಥೌತೊಬ್ ನಮ್ಗಾಯಲ್ ಗ್ಯಾಂಗ್ಟಾಕ್ ನ್ನು ಸಿಕ್ಕಿಂನ ರಾಜಧಾನಿಯಾಗಿ ಘೋಷಿಸಿದ್ದರು. ಆದರೂ ಸಿಕ್ಕಿಂ ಸ್ವತಂತ್ರ ರಾಜಪ್ರಭುತ್ವದಂತೆ ಕಾರ್ಯನಿರ್ವಹಿಸುತ್ತಿತ್ತು. 1947ರಲ್ಲಿ ಭಾರತ ಸ್ವಾತಂತ್ರ್ಯವನ್ನು ಪಡೆದ ಬಳಿಕ ಗ್ಯಾಂಗ್ಟಾಕ್ ಸಿಕ್ಕಿಂನ ರಾಜಧಾನಿಯಾಯಿತು. 1975ರಲ್ಲಿ ಭಾರತದೊಂದಿಗೆ ಏಕೀಕರಣವಾದ ಮೇಲೆ ಗ್ಯಾಂಗ್ಟಾಕ್ ನ್ನು 22ನೇ ರಾಜ್ಯ ರಾಜಧಾನಿಯೆಂದು ಘೋಷಿಸಲಾಯಿತು. ಗ್ಯಾಂಗ್ಟಾಕ್ ಇಂದು ಹಲವಾರು ವಿಷಯಗಳಿಗೆ ಪ್ರಾಮುಖ್ಯತೆ ಪಡೆದುಕೊಂಡಿದ್ದು, ಇದು ಪೂರ್ವ ಸಿಕ್ಕಿಂನ ಕೇಂದ್ರ ಕಚೇರಿಯೂ ಹೌದು. ಇಲ್ಲಿ ವಿವಿಧ ಧಾರ್ಮಿಕ, ಧಾರ್ಮಿಕ ಶೈಕ್ಷಣಿಕ ಕೇಂದ್ರ ಮತ್ತು ಟಿಬೆಟ್ ಕೇಂದ್ರಗಳ ಇರುವಿಕೆಯಿಂದ ಇದೊಂದು ಬೌದ್ಧ ಸಂಸ್ಕೃತಿಯ ಕಲಿಕಾ ಕೇಂದ್ರವಲ್ಲದೆ ಸಿಕ್ಕಿಂನ ಪ್ರವಾಸೋದ್ಯಮದ ಪ್ರಮುಖ ನೆಲೆಯಾಗಿದೆ.

ಗ್ಯಾಂಗ್ಟಾಕ್ ನ ಇತಿಹಾಸ...

ಸಿಕ್ಕಿಂ ರಾಜ್ಯದ ಹೆಚ್ಚಿನ ಪ್ರಸಿದ್ಧ ನಗರಗಳಿಗೆ ಇತಿಹಾಸದಲ್ಲಿ ಸೂಕ್ತ ದಾಖಲೆಗಳಿಲ್ಲ. ಗ್ಯಾಂಗ್ಟಾಕ್ ಕೂಡ ಈ ಪಟ್ಟಿಯಲ್ಲಿದೆ. ಗ್ಯಾಂಗ್ಟಾಕ್ ನಗರದ ಇತಿಹಾಸದ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಗ್ಯಾಂಗ್ಟಾಕ್ ನಗರದ ದಾಖಲೆಗಳನ್ನು ತಿರುವಿ ಹಾಕಿದಾಗ 1716ರಲ್ಲಿ ಹೆರ್ಮಿಟಿಕ್ ಗ್ಯಾಂಗ್ಟಾಕ್ ಧಾರ್ಮಿಕ ಕೇಂದ್ರ ನಿರ್ಮಾಣವಾದ ದಿನದಂದು ಗ್ಯಾಂಗ್ಟಾಕ್ ನಗರ ಕೂಡ ಉದಯವಾಯಿತೆಂದು ತಿಳಿದುಬರುತ್ತದೆ. ಆದರೆ ಈ ನಗರ ಎಂಚಿ ಧಾರ್ಮಿಕ ಕೇಂದ್ರ ನಿರ್ಮಾಣವಾಗುವ ತನಕ ಈ ನಗರ ತೆರೆಮರೆಯ ಕಾಯಿಯಂತಿತ್ತು. ಆದಾಗ್ಯೂ 1894ರಲ್ಲಿ ಗ್ಯಾಂಗ್ಟಾಕ್ ನಗರವನ್ನು ಸಿಕ್ಕಿಂನ ರಾಜಧಾನಿಯೆಂದು ಘೋಷಿಸಿದ ಬಳಿಕ ಗ್ಯಾಂಗ್ಟಾಕ್ ನಗರಕ್ಕೆ ಪ್ರಾಮುಖ್ಯತೆ ಸಿಗಲು ಆರಂಭವಾಯಿತು.

ಗ್ಯಾಂಗ್ಟಾಕ್ ನಗರ ಹಲವಾರು ವಿಪತ್ತುಗಳು ಹಾಗೂ ಭೂಕುಸಿತವನ್ನು ಎದುರಿಸಿದೆ. 1977ರಲ್ಲಿ ನಡೆದ ಭೂಕುಸಿತ ಅತ್ಯಂತ ದೊಡ್ಡ ಪ್ರಮಾಣದ್ದಾಗಿದೆ. ಈ ಭೂಕುಸಿತದಲ್ಲಿ ಸುಮಾರು 38 ಮಂದಿ ಮೃತಪಟ್ಟಿದ್ದು, ಹಲವಾರು ಕಟ್ಟಡಗಳು ನೆಲಸಮವಾಗಿದ್ದವು. ಗ್ಯಾಂಗ್ಟಾಕ್ ನಗರ ಬೆಟ್ಟದ ಒಂದು ಬದಿಯಲ್ಲಿರುವ ಕಾರಣದಿಂದಾಗಿ ಇಂತಹ ವಿಪತ್ತುಗಳು ಆಗಾಗ ಸಂಭವಿಸುತ್ತಿರುತ್ತದೆ.

ಭೌಗೋಳಿಕತೆ

1,676 ಮೀ. ಎತ್ತರದಲ್ಲಿ ಗ್ಯಾಂಗ್ಟಾಕ್ ನಗರ ಹಿಮಾಲಯದ ಕೆಳಭಾಗದಲ್ಲಿ ಕಾಣಬಹುದಾಗಿದೆ. ಉತ್ತರದಲ್ಲಿ 27.33 ಡಿಗ್ರಿಯಲ್ಲಿ ಮತ್ತು ಪೂರ್ವದಲ್ಲಿ 88.62 ಡಿಗ್ರಿಯಲ್ಲಿ ನಗರ ನೆಲೆಗೊಂಡಿದೆ. ಬೆಟ್ಟದ ಒಂದು ಬದಿಯಲ್ಲಿ ರಾಜ್ಯಪಾಲ ಮನೆ ಮತ್ತು ಇನ್ನೊಂದು ಬದಿಯಲ್ಲಿ ಅರಮನೆಯನ್ನು ಕಾಣಬಹುದಾಗಿದೆ.

ರೊರೊ ಚು ಮತ್ತು ರಾಣಿಖೊಲಾ ಹೊಳೆಗಳು ಕ್ರಮವಾಗಿ ಗ್ಯಾಂಗ್ಟಾಕ್ ನ ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿದೆ. ಇದು ರಾಣಿಪಾಲ್ ನ್ನು ಸಂಧಿಸಿದ ಬಳಿಕ ದಕ್ಷಿಣಕ್ಕೆ ಹರಿಯುತ್ತದೆ.ಗ್ಯಾಂಗ್ಟಾಕ್ ಮಾತ್ರವಲ್ಲದೆ ಸಿಕ್ಕಿಂನ ವಿವಿಧ ಭಾಗಗಳು ಇಳಿಜಾರು ಪ್ರದೇಶಗಳಾಗಿರುವ ಕಾರಣದಿಂದಾಗಿ ಇದು ಭೂಕುಸಿತಗಳಿಗೆ ಒಳಗಾಗುತ್ತಿರುತ್ತದೆ. ಇದಕ್ಕಾಗಿ ಫಿಲ್ಲಿಟೆಸ್ ಮತ್ತು ಸಚಿಸ್ಟ್ ಹೊಂದಿರುವ ಪೂರ್ವ ಕ್ಯಾಂಬ್ರಿಯನ್ ಬಂಡೆಗಳಿಂದ ನಗರವನ್ನು ನಿರ್ಮಿಸಲಾಗಿದೆ. ನೈಸರ್ಗಿಕ ಹೊಳೆಗಳು ಮತ್ತು ಮಾನವ ನಿರ್ಮಿತ ಕಾಲುವೆಗಳಿಂದ ಮತ್ತಷ್ಟು ಭೂಕುಸಿತಗಳು ಸಂಭವಿಸುತ್ತದೆ. ಗ್ಯಾಂಗ್ಟಾಕ್ ನ ಪಶ್ಚಿಮ ಭಾಗಕ್ಕೆ ಹೋದರೆ ವಿಶ್ವದ ಮೂರನೇ ಅತ್ಯಂತ ಎತ್ತರದ ಶಿಖರ ಕಾಂಚನಜುಂಗಾವನ್ನು ವೀಕ್ಷಿಸಬಹುದು.

ಗ್ಯಾಂಗ್ಟಾಕ್ ನ ಹವಾಮಾನ

ವರ್ಷದ ಯಾವುದೇ ಸಮಯದಲ್ಲೂ ಗ್ಯಾಂಗ್ಟಾಕ್ ಗೆ ಪ್ರವಾಸಿಗಳು ಭೇಟಿ ನೀಡಬಹುದು. ವರ್ಷದ ಎಲ್ಲಾ ಕಾಲದಲ್ಲೂ ಇಲ್ಲಿನ ಹವಾಮಾನ ಹಿತಕರವಾಗಿರುತ್ತದೆ. ಈ ಪಟ್ಟಣ ಮನ್ಸೂನ್ ಪ್ರಭಾವಿತ ಉಷ್ಣವಲಯದ ಹವಾಮಾನವನ್ನು ಹೊಂದಿದೆ.

ಬೇಸಿಗೆ, ಚಳಿಗಾಲ, ಮಾನ್ಸೂನ್, ಶರತ್ಕಾಲ ಹಾಗೂ ವಸಂತ ಋತುಗಳು ಸುತ್ತಮುತ್ತಲಿನ ಇತರ ಪಟ್ಟಗಳಂತೆ ಇರುತ್ತದೆ. ಚಳಿಗಾಲದಲ್ಲಿ ವಾತಾವರಣ ಹೆಚ್ಚು ತಂಪಾಗಿರುತ್ತದೆ. 1990, 2004, 2005 ಮತ್ತು 2011ರಲ್ಲಿ ಇಲ್ಲಿ ಹಿಮಪಾತ ಆಗಿದೆ. ಮನ್ಸೂನ್ ಮತ್ತು ಚಳಿಗಾಲದಲ್ಲಿ ಪಟ್ಟಣ ಮಂಜಿನಿಂದ ಮುಸುಕಿರುತ್ತದೆ.

ಗ್ಯಾಂಗ್ಟಾಕ್ ಜನರ ಸಂಸ್ಕೃತಿ

ಗ್ಯಾಂಗ್ಟಾಕ್ ನಲ್ಲಿನ ಸಂಸ್ಕೃತಿ ಭವ್ಯ ಹಾಗೂ ಅನನ್ಯವಾಗಿದೆ. ನಗರವೂ ಹಿಂದೂ ಹಬ್ಬಗಳಾದ ದೀಪಾವಳಿ, ದಸರಾ, ಹೋಳಿ ಹಾಗೆಯೇ ಕ್ರಿಸ್ಮಸ್ ನ್ನು ಮತ್ತು ಸ್ಥಳೀಯ ಹಬ್ಬಗಳನ್ನು ಆಚರಿಸಲಾಗುತ್ತದೆ.ಗ್ಯಾಂಗ್ಟಾಕ್ ನಲ್ಲಿರುವ ಟಿಬೆಟಿಯನ್ನರು ಜನವರಿ ಮತ್ತು ಫೆಬ್ರವರಿ ಮಧ್ಯಭಾಗದಲ್ಲಿ  ಲೋಸರ್ ಎಂದು ಕರೆಯುವ ಹಬ್ಬದೊಂದಿಗೆ ಹೊಸ ವರ್ಷವನ್ನು ಆಚರಿಸುತ್ತಾರೆ. ಸಾಂಪ್ರದಾಯಿಕ ಪ್ರೇತ ನೃತ್ಯ ಹೊಸ ವರ್ಷಾಚರಣೆಯ ವಿಶೇಷಗಳಲ್ಲಿ ಒಂದು. ಲೆಪ್ಚಾಗಳು ಮತ್ತು ಭೂಟಿಯಾಗಳು ಜನವರಿಯಲ್ಲೇ ಹೊಸ ವರ್ಷಾಚರಣೆ ಮಾಡುತ್ತಾರೆ. ಇವಿಷ್ಟಲ್ಲದೆ ನೇಪಾಳಿ ಹಬ್ಬಗಳಾದ ಮಾಘೆ ಸಂಕ್ರಾಂತಿ ಮತ್ತು ರಾಮ ನವಮಿಯಲ್ಲಿ ಗ್ಯಾಂಗ್ಟಾಕ್ ನಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ.

ದ್ರುಪಕ್ ತೆಶಿ, ದಲಾಯಿ ಲಾಮ ಹುಟ್ಟುಹಬ್ಬ, ಚೊರ್ಟುಲ್ ಡುಚೆನ್, ಬುದ್ಧ ಜಯಂತಿ, ಲೂಸೊಂಗ್ ಸಗಾ ದವಾ, ಲಹಬಾಬ್ ದುಚೆನ್ ಮತ್ತು ಬುಮಚು ಗ್ಯಾಂಗ್ಟಾಕ್ ನಲ್ಲಿ ಆಚರಿಸಲ್ಪಡುವ ಇತರ ಹಬ್ಬಗಳಾಗಿವೆ.

ಗ್ಯಾಂಗ್ಟಾಕ್ ನಲ್ಲಿದ್ದಾಗ ಇವುಗಳನ್ನು ತಿನ್ನಿ...

ಗ್ಯಾಂಗ್ಟಾಕ್ ಅಲ್ಲಿನ ಆಹಾರಗಳಿಗೆ ಜನಪ್ರಿಯ. ಆಹಾಯ ಪ್ರಿಯರಾಗಿದ್ದರೆ ನೀವಿಲ್ಲಿ ವಿವಿಧ ತಿಂಡಿ-ತಿನಿಸುಗಳ ರುಚಿ ಸವಿಯಲೇಬೇಕು. ದನದ ಮಾಂಸ, ಹಂದಿ ಮಾಂಸ ಮತ್ತು ಬೇಯಿಸಿದ ತರಕಾರಿಗಳಿಗೆ ಹಿಟ್ಟನ್ನು ಸುತ್ತಿ ಕುದಿಸಿದ ಕಣಕದ ಖ್ಯಾದ ಮತ್ತು ಸೂಪ್ ಬಡಿಸಲಾಗುತ್ತದೆ. ನೂಡಲ್ಸ್ ನಿಂದ ಮಾಡಿರುವ ವಾ-ವೈ ಎನ್ನುವುದು ಇಲ್ಲಿನ ಮತ್ತೊಂದು ಜನಪ್ರಿಯ ಆಹಾರ. ಥುಪ್ಕ, ಚೌಮೀ, ಥಾಂಥುಕ್, ಫಕ್ತಹು, ವಾಂಟೊನ್ ಮತ್ತು ಗ್ಯಾಥುಕ್ ನೂಡಲ್ಸ್ ನಿಂದ ಮಾಡುವಂತಹ ಇತರ ರುಚಿಯಾದ ಆಹಾರಗಳು.

ಸಿಕ್ಕಿಂ ಪ್ರವಾಸೋದ್ಯಮ ಇಲಾಖೆ ಪ್ರತೀ ವರ್ಷ ಡಿಸೆಂಬರ್ ನಲ್ಲಿ ಗ್ಯಾಂಗ್ಟಾಕ್ ನಲ್ಲಿ ಆಹಾರ ಮತ್ತು ಸಂಸ್ಕೃತಿ ಉತ್ಸವವನ್ನು ಆಯೋಜಿಸುತ್ತದೆ. ಈ ಉತ್ಸವದಲ್ಲಿ ಸಿಕ್ಕಿಂನ ಬಹು ಸಂಸ್ಕೃತಿಯ ತಿಂಡಿ-ತಿನಿಸುಗಳನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಉಣಬಡಿಸಲ್ಪಡುತ್ತದೆ. ಇಲ್ಲಿಗೆ ಬರುವ ಪ್ರವಾಸಿಗರನ್ನು ಸಾಂಪ್ರದಾಯಿಕ ನೃತ್ಯ ಹಾಗೂ ಗಾಯನದ ಮೂಲಕ ರಂಜಿಸಲಾಗುತ್ತದೆ. ಗ್ಯಾಂಗ್ಟಾಕ್ ನಗರದ ಎಂಜಿ ನಗರದಲ್ಲಿರುವ ಟೈಟಾನಿಕ್ ಪಾರ್ಕ್ ನಲ್ಲಿ ಈ ಉತ್ಸವ ನಡೆಯುತ್ತದೆ.

ಜನಸಂಖ್ಯೆ

2011ರ ಜನಗಣತಿಯ ಪ್ರಕಾರ ಗ್ಯಾಂಗ್ಟಾಕ್ ನ ಜನಸಂಖ್ಯೆ 98,658. ಇದರಲ್ಲಿ ಶೇ.53ರಷ್ಟು ಪುರುಷರು ಮತ್ತು ಶೇ.47ರಷ್ಟು ಮಹಿಳೆಯರಿದ್ದಾರೆ. ಬ್ರಿಟಿಷ್ ಆಳ್ವಿಕೆ ಕಾಲದಲ್ಲಿ ಗ್ಯಾಂಗ್ಟಾಕ್ ನಲ್ಲಿ ನೆಲೆಸಿದ್ದ ಭಾರತ-ನೇಪಾಳಿ ಜನಾಂಗದವರು ಗ್ಯಾಂಗ್ಟಾಕ್ ನಲ್ಲಿ ಗರಿಷ್ಠ ಜನಸಂಖ್ಯೆಯಲ್ಲಿದ್ದಾರೆ. ಸ್ಥಳೀಯ ಲೆಪ್ಚಾಗಳು ಹಾಗೂ ಭೂಟಿಯಾ ಜನಾಂಗದವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಟಿಬೆಟಿನಿಂದ ವಲಸೆ ಬಂದವರೂ ಇಲ್ಲಿದ್ದಾರೆ. ಗ್ಯಾಂಗ್ಟಾಕ್ ನಲ್ಲಿರುವ ಸರಾಸರಿ ಸಾಕ್ಷರತೆ ಪ್ರಮಾಣವು ಶೇ. 82.17ರಷ್ಟಿದೆ. ಇದು ರಾಷ್ಟ್ರೀಯ ಸಾಕ್ಷರತೆ ಪ್ರಮಾಣ ಶೇ. 74ಕ್ಕಿಂತ ಹೆಚ್ಚಿದೆ.

ಆಸಕ್ತಿಯ ಸ್ಥಳಗಳು

ಸಿಕ್ಕಿಂನ ರಾಜಧಾನಿಯಾಗಿರುವ ಗ್ಯಾಂಗ್ಟಾಕ್ ಹಲವಾರು ಆಸಕ್ತಿದಾಯಕ ಹಾಗೂ ಪ್ರಾಮುಖ್ಯತೆಯ ಪ್ರದೇಶಗಳನ್ನು ಒಳಗೊಂಡಿದೆ. ಎನ್ಕಿ ಧಾರ್ಮಿಕ ಕೇಂದ್ರ, ನಥುಲಾ ಪಾಸ್, ನಮ್ಗಾಯಲ್ ಇನ್ ಸ್ಟಿಟ್ಯೂಟ್ ಆಫ್ ಟಿಬೆಟಾಲಜಿ, ಡೊ ಡ್ರುಲ್ ಚೊರ್ಟನ್, ಗಣೇಶ್ ಟೊಕ್, ಹನುಮಾನ್ ಟೊಕ್, ವೈಟ್ ವಾಲ್, ರಿಡ್ಜ್ ಗಾರ್ಡನ್, ಹಿಮಾಯನ್ ಝೂ ಪಾರ್ಕ್, ಎಂ.ಜಿ. ಮಾರ್ಗ್, ಲಾಲ್ ಬಜಾರ್ ಮತ್ತು ರುಂಟೆಕ್ ಧಾರ್ಮಿಕ ಕೇಂದ್ರ.

Please Wait while comments are loading...