ನಾಮ್ಚಿ - ಅತಿ ಸುಂದರ ಮನೋಹರ ತಾಣ

ಗ್ಯಾಂಗ್ಟಾಕ್ನಿಂದ 92ಕಿಮೀ ದೂರದಲ್ಲಿರುವ ನಾಮ್ಚಿಯು ಡಾರ್ಜಿಲಿಂಗ್, ಕಾಲಿಂಪೊಂಗ್ ಮತ್ತಿತರ ಹಿಮಾಚ್ಛಾದಿತ ಪರ್ವತಗಳು ಮತ್ತು ಸುಂದರ ಕಣಿವೆಗಳ ನಯನಮನೋಹರ ದೃಶ್ಯಗಳನ್ನು ಒದಗಿಸುತ್ತದೆ.

ಭೂಪ್ರದೇಶ

ನಾಮ್ಚಿ ಸಮುದ್ರ ಮಟ್ಟದಿಂದ 1675 ಅಡಿ ಎತ್ತರದಲ್ಲಿದೆ. ಇತ್ತೀಚೆಗೆ ಇಲ್ಲಿ ನಿರ್ಮಿಸಲಾಗಿರುವ ಸಿಕ್ಕಿಂನ ಸಂನ್ಯಾಸಿ ಗುರು ಪದ್ಮಸಂಭವನ ಅತಿ ಎತ್ತರದ ವಿಗ್ರಹದಿಂದ ಈ ಸ್ಥಳವು ಪ್ರಸಿದ್ಧವಾಗಿದೆ. ಈ ಸ್ಥಳವು ಬೌದ್ಧ ಮಠಗಳು, ಎತ್ತರದ ಗಿರಿಶೃಂಗಗಳಿಗೆ ಪ್ರಸಿದ್ಧವಾದದ್ದು. ಈ ಪಟ್ಟಣವು ಸಿಲಿಗುರಿಯಿಂದ 90 ಕಿಮೀ ದೂರದಲ್ಲಿದೆ. ಇದು ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನ ಮುಖ್ಯ ನಗರಗಳಿಗೂ ಸಮೀಪದಲ್ಲಿದೆ.

ಭೂತಿಯ ಭಾಷೆಯಲ್ಲಿ ನಾಮ್ಚಿಯೆಂದರೆ “ಆಕಾಶದೆತ್ತರ” ಎಂದರ್ಥ. ಈ ಸ್ಥಳವು ಪ್ರವಾಸಿಗರ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ. ತನ್ನ ಇತಿಹಾಸ ಮತ್ತು ವಿವಿಧ ಪ್ರವಾಸಿ ಆಕರ್ಷಣೆಗಳಿಂದಾಗಿ ಇದೊಂದು ಪ್ರವಾಸಿ ಸ್ಥಳವಾಗಿ ಬೆಳೆಯುತ್ತಿದೆ. ಇದಕ್ಕೂ ರಾಜಧಾನಿ ಗ್ಯಾಂಗ್ಟಾಕ್ಗೂ ಸಾಮ್ಯತೆಗಳಿದ್ದರೂ ಕೂಡ ಇದು ಗ್ಯಾಂಗ್ಟಾಕ್ಗಿಂತ ಹೆಚ್ಚು ನಿಶ್ಯಬ್ಛ ಸ್ಥಳವಾಗಿದೆ. ನಾಮ್ಚಿಯು ತನ್ನ ಪೂರ್ವದ ಕುತೂಹಲಭರಿತ ಇತಿಹಾಸ ಮತ್ತು ಪುರಾಣದ ಕತೆಗಳಿಗೆ ಕೂಡ ಪ್ರಸಿದ್ಧವಾಗಿದೆ.

ಜನಸಂಖ್ಯೆ

ಇಲ್ಲಿನ ಜನಸಂಖ್ಯೆಯಲ್ಲಿ ಬಹುಪಾಲು ಮಂದಿ ಹಿಂದೂಗಳು ಮತ್ತು ಬೌದ್ಧರಿದ್ದಾರೆ. ಇಲ್ಲಿ ನೇಪಾಳಿ, ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳು ಬಳಕೆಯಲ್ಲಿವೆ.

ಪ್ರವಾಸಿ ಆಕರ್ಷಣೆಗಳು

ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಗಳೆಂದರೆ ನಾಮ್ಚಿ ಮಠ, ರಾಲಂಗ್ ಮಠ, ಸಮ್ದ್ರುಪತ್ಸೆ ಪರ್ವತದ ನಿಷ್ಕ್ರಿಯ ಜ್ವಾಲಾಮುಖಿ, ತೆಂದೊಂಗ್ ಪರ್ವತ, ರಾಕ್ ಗಾರ್ಡನ್, ತೆಮಿ ಟೀ ಉದ್ಯಾನವನ ಮತ್ತು ಚಾರ್ಧಾಮ್.

Please Wait while comments are loading...