ರಾವಂಗ್ಲಾ

ದಕ್ಷಿಣ ಸಿಕ್ಕಿಂನಲ್ಲಿ ಪೆಲ್ಲಿಂಗ್ ಮತ್ತು ಗ್ಯಾಂಗ್‍ಟಕ್ ನಗರಗಳ ಮಧ್ಯೆ ನೆಲೆಗೊಂಡಿರುವ ರಾವಂಗ್ಲಾಗೆ ಭೇಟಿಕೊಡಲು ಪ್ರವಾಸಿಗರು ದೇಶ- ವಿದೇಶಗಳಿಂದ ಆಗಮಿಸುತ್ತಿರುತ್ತಾರೆ. ಇದು ಸಮುದ್ರ ಮಟ್ಟದಿಂದ ಸುಮಾರು 7000 ಅಡಿ ಎತ್ತರದಲ್ಲಿ ನೆಲೆಗೊಂಡಿದೆ. ಇಲ್ಲಿನ ಸ್ಥಳೀಯ ರೈತಾಪಿ ಜನರು ತಾವು ಬೆಳೆದ ಬೆಳೆ ಮತ್ತು ಶುಂಠಿ, ಏಲಕ್ಕಿಗಳಂತಹ ವಾಣಿಜ್ಯ ಬೆಳೆಗಳನ್ನು ಮಾರಲು ಬಳಸಿದ ಒಂದು ಸಣ್ಣ ಮಾರುಕಟ್ಟೆಯೇ ಈ ಪಟ್ಟಣದ ನಿರ್ಮಾಣಕ್ಕೆ ಬುನಾದಿಯಾಯಿತು. ಇತ್ತೀಚಿನ ದಿನಗಳಲ್ಲಿ ಈ ಪಟ್ಟಣವು ವಾಣಿಜ್ಯ ಮತ್ತು ವ್ಯವಹಾರದ ದೃಷ್ಟಿಯಿಂದ ಅತ್ಯಂತ ಪ್ರಭಾವಶಾಲಿಯಾಗಿ ಅಭಿವೃದ್ಧಿಗೊಂಡಿದೆ.

ರಾವಂಗ್ಲಾದಲ್ಲಿ ಏನೇನು ಮಾಡಬೇಕು

ರಾವಂಗ್ಲಾವು ಒಂದು ಸುಂದರವಾದ ಪ್ರದೇಶವಾಗಿದ್ದು, ಲಘು ಚಾರಣ ಮಾಡಲು ಹೇಳಿ ಮಾಡಿಸಿದ ಬೆಟ್ಟಗಳನ್ನು ಹೊಂದಿದೆ. ಈ ಪಟ್ಟಣವು ಸುತ್ತಲೂ ದಟ್ಟ ಅರಣ್ಯ ಮತ್ತು ಬೆಟ್ಟಗಳನ್ನು ಹೊಂದಿದ್ದು, ನೋಡುಗರಿಗೆ ಸ್ವರ್ಗ ಸದೃಶ್ಯ ಅನುಭವವನ್ನೊದಗಿಸುತ್ತದೆ. ಪ್ರವಾಸಿಗರು ಇಲ್ಲಿ ಕಾಣಸಿಗುವ ಅಪರೂಪದ ಪಕ್ಷಿಗಳನ್ನು ನೋಡಲು ಮತ್ತು ಕಾಂಚನಜುಂಗಾ, ಪಂಡಿಮ್ ಮತ್ತು ಸಿನಿಯಲ್ಚು ಪರ್ವತಗಳ ನೋಟವನ್ನು ನೋಡುವ ಸಲುವಾಗಿ ಆಗಮಿಸುತ್ತಿರುತ್ತಾರೆ.

ರಾವಂಗ್ಲಾದಲ್ಲಿ ಯಂಗಾಂಗ್, ಟಿನ್ಕಿಟಂ, ಕ್ಯುಝಿಂಗ್, ಬರ್ಫಂಗ್ ಮತ್ತು ಬಖಿಮ್‍ಗಳೆನ್ನುವ ಲೆಪ್ಛಾ ಮತ್ತು ಭುಟಿಯಾ ಗ್ರಾಮಗಳನ್ನು ಸಂದರ್ಶಿಸುವ ಅವಕಾಶ ದೊರೆಯುತ್ತದೆ.

ಸಂಸ್ಕೃತಿ ಮತ್ತು ಉತ್ಸವಗಳು

ರಾವಂಗ್ಲಾವು ತನ್ನ ಸಂಸ್ಕೃತಿ ಮತ್ತು ಉತ್ಸವಗಳಿಗೆ ಹೆಸರುವಾಸಿಯಾಗಿದೆ. ಏಪ್ರಿಲ್ ತಿಂಗಳಿನಲ್ಲಿ ರಾವಂಗ್ಲಾದ ಸ್ಥಳೀಯರು ಪ್ರವಾಸೋದ್ಯಮ, ಕರಕುಶಲ ಕಲೆ ಮತ್ತು ಸಾಂಸ್ಕೃತಿಕ ಉತ್ಸವವನ್ನು ಆಚರಿಸುತ್ತಾರೆ. ಇದರ ಜೊತೆಗೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಇಲ್ಲಿ ಪಂಗ್ ಲಾಬ್ಸೊಲ್ ಉತ್ಸವವನ್ನು ಸಹ ಆಚರಿಸಲಾಗುತ್ತದೆ. ಇದೊಂದು ಮೂರು ದಿನಗಳ ಕಾಲ ಆಚರಿಸಲ್ಪಡುವ ಉತ್ಸವವಾಗಿದ್ದು, ಕಡೆಯ  ದಿನ "ಚಾಮ್" ನೃತ್ಯದೊಂದಿಗೆ ಈ ಉತ್ಸವ ಮುಕ್ತಾಯವಾಗುತ್ತದೆ.

ರಾವಂಗ್ಲಾದ ಪ್ರವಾಸಿ ಆಕರ್ಷಣೆಗಳು

ತನ್ನಲ್ಲಿರುವ ದಟ್ಟ ಅರಣ್ಯಗಳಿಂದ ಕೂಡಿದ ಬೆಟ್ಟ ಗುಡ್ಡಗಳು ಮತ್ತು ಸುಂದರವಾದ ಟೀ ತೋಟಗಳಿಂದಾಗಿ ರಾವಂಗ್ಲಾವು ನೋಡುಗರ ಕಣ್ಣಿಗೆ ಪ್ರಾಕೃತಿಕ ಸ್ವರ್ಗವಾಗಿ ಕಂಗೊಳಿಸುತ್ತದೆ. ಇಲ್ಲಿಗೆ ಭೇಟಿ ನೀಡುವುದರಿಂದ ನೀವು ನಗರ ಜೀವನದ ದೈನಂದಿನ ಜಂಜಡಗಳಿಂದ ದೂರವಾಗಿ ನೈಜವಾದ ಗ್ರಾಮೀಣ ಜೀವನದ ಸವಿಯನ್ನು ಸವಿಯಬಹುದು. ಪ್ರವಾಸಿಗರು ಇಲ್ಲಿನ ಬೊರೊಂಗ್ ಮತ್ತು ರಲೊಂಗ್ ಎಂಬ ಬಿಸಿ ನೀರಿನ ಬುಗ್ಗೆಗಳನ್ನು ನೋಡಲು ಮತ್ತು ಬುದ್ಧ ಪಾರ್ಕ್, ಟೆಮಿ ಟೀ ತೋಟ ಹಾಗು ಕ್ಯುಝಿಂಗ್ ಗ್ರಾಮಕ್ಕೆ ಭೇಟಿಕೊಡಲು ಆಗಮಿಸುತ್ತಿರುತ್ತಾರೆ.

Please Wait while comments are loading...