Search
  • Follow NativePlanet
Share
» »ಕರ್ನಾಟದಕ ಈ ರಮಣೀಯ ಸ್ಥಳಗಳು - ಛಾಯಾಚಿತ್ರಗಾರರ ಪಾಲಿನ ಸ್ವರ್ಗತಾಣಗಳು

ಕರ್ನಾಟದಕ ಈ ರಮಣೀಯ ಸ್ಥಳಗಳು - ಛಾಯಾಚಿತ್ರಗಾರರ ಪಾಲಿನ ಸ್ವರ್ಗತಾಣಗಳು

ಭಾರತದ ಅತ್ಯಂತ ಸುಂದರ, ರಮಣೀಯ ಹಾಗೂ ನೈಸರ್ಗಿಕ ತಾಣಗಳು ಯಾವುವು ಎಂಬ ಪ್ರಶ್ನೆಗೆ ಗೋವಾ, ಕಾಶ್ಮೀರ, ಊಟಿ ಮೊದಲಾದ ಜನಪ್ರಿಯ ತಾಣಗಳ ಹೆಸರೇ ಪ್ರಮುಖವಾಗಿ ಕಾಣಿಸಿಕೊಳ್ಳುತ್ತವೆ. ಆದರೆ ಈ ಹೆಸರುಗಳು ಮಾತ್ರವೇ ಹೆಚ್ಚಾಗಿ ಕಾಣಿಸಿಕೊಳ್ಳಲು ಇವುಗಳಿಗೆ ನೀಡಿದ ಅಬ್ಬರದ ಪ್ರಚಾರ ಮತ್ತು ಅಲ್ಲಿ ಲಭ್ಯವಿರುವ ಸೌಲಭ್ಯಗಳೇ ಮುಖ್ಯವಾಗಿ ಕಾರಣವಾಗಿವೆ. ಈ ಕೊರತೆಯನ್ನು ಹೊಂದಿರುವ ಇನ್ನೆಷ್ಟೋ ತಾಣಗಳು ಇದಕ್ಕೂ ಸುಂದರವಾಗಿದ್ದರೂ ಇನ್ನೂ ಜನಸಾಮಾನ್ಯರ ಪಾಲಿಗೆ ಅಪರಿಚಿತವಾಗಿಯೇ ಉಳಿದಿವೆ. ನಮ್ಮ ಕರ್ನಾಟಕದಲ್ಲಿಯೇ ಇಂತಹ ಅತ್ಯದ್ಭುತವಾದ ತಾಣಗಳು ಎಷ್ಟೋ ಇವೆ. ಊಟಿಯ ಬಳಿ ದೊಡ್ಡಬೆಟ್ಟ ಎಂಬ ಬೆಟ್ಟದ ಮೇಲಿನ ತಾಣವಿದೆ. ಸಾಕಷ್ಟು ಎತ್ತರದ ಈ ಸ್ಥಳದಿಂದ ಮೂರು ರಾಜ್ಯಗಳ ದೃಶ್ಯಗಳು ಕಾಣಬರುತ್ತವೆ. ಈ ಮಾಹಿತಿ ಮತ್ತು ಮೇಲೆ ಸಾಗಲು ಇರುವ ರಸ್ತೆ ಮತ್ತು ಇತರ ಸೌಲಭ್ಯಗಳು ಊಟಿಯ ಬಳಿಯ ರಮಣೀಯ ಸ್ಥಳಗಳಲ್ಲಿ ಇದನ್ನು ಪ್ರಮುಖವಾಗಿಸಿದೆ. ಆದರೆ ಇದಕ್ಕೂ ಎಷ್ಟೂ ಪಟ್ಟು ಹೆಚ್ಚು ಎತ್ತರದಲ್ಲಿರುವ, ಮೋಡಗಳು ಕೈಗೇ ಸಿಗುವಷ್ಟು ಎತ್ತರದ ಸ್ಥಳವೊಂದು ನಮ್ಮ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಸಂಸೆ ಎಂಬ ಹಳ್ಳಿಯ ಬಳಿಯಲ್ಲಿದೆ. ಒಂದು ವೇಳೆ ದೊಡ್ಡಬೆಟ್ಟಕ್ಕೆ ಸಿಗುವಷ್ಟು ಸೌಲಭ್ಯಗಳನ್ನುಇಲ್ಲಿ ಒದಗಿಸುವಂತಾದರೆ ಇದು ದೊಡ್ಡಬೆಟ್ಟಕ್ಕೂ ಹೆಚ್ಚಿನ ಖ್ಯಾತಿಯನ್ನು ಪಡೆದೀತು. ಇವುಗಳ ಪ್ರಾಮುಖ್ಯತೆ ಮತ್ತು ಇತರ ವಿವರಗಳನ್ನು ಜಗತ್ತಿಗೆ ವಿವರಿಸುವಲ್ಲಿ ಛಾಯಾಚಿತ್ರಗಾರರ ಪಾತ್ರ ಹಿರಿದು.

ಛಾಯಾಚಿತ್ರಗಾರರಿಗೆ ಇಂತಹ ತಾಣಗಳೆಂದರೆ ಅಚ್ಚುಮೆಚ್ಚು. ಇವರು ಕಣಿವೆ, ಜಲಪಾತ, ಗೊಂಡಾರಣ್ಯ, ಜುಳುಜುಳು ಹರಿವ ನದಿ, ತೊರೆ, ವನ್ಯಪ್ರಾಣಿಗಳು, ಬೆಟ್ಟದ ತುದಿ ಮೊದಲಾದ ದುರ್ಗಮ ಸ್ಥಾನಗಳಿಗೆ ತೆರಳಿ ಅತ್ಯಂತ ರಮಣೀಯವಾದ ಛಾಯಾಚಿತ್ರಗಳನ್ನು ತೆಗೆಯುತ್ತಾರೆ. ಇದಕ್ಕಾಗಿ ಇವರು ಬಹಳಷ್ಟು ಸಾಹಸ ಪಡಬೇಕಾಗುತ್ತದೆ ಹಾಗೂ ತೊಂದರೆಗಳನ್ನೂ ಎದುರಿಸಬೇಕಾಗುತ್ತದೆ. ಹೀಗೆ ಸೌಕರ್ಯಗಳ ಕೊರತೆ ಇರುವ ಸ್ಥಳಗಳಿಗೆ ಹೋಗಿ ಚಿತ್ರ ತೆಗೆಯಲು ಎಲ್ಲರಿಗೂ ಸಾಧ್ಯವಾಗಲಿಕ್ಕಿಲ್ಲ. ಕೇವಲ ಪರಿಣಿತರಿಗೆ ಮಾತ್ರವೇ ಇದು ಸಾಧ್ಯವಾಗಬಹುದು. ಉಳಿದಂತೆ, ನಿಸರ್ಗ ಛಾಯಾಚಿತ್ರಗಳನ್ನು ತೆಗೆಯುವ ಹವ್ಯಾಸಿಗಳಿಗೆ ಅತಿ ಹೆಚ್ಚಿಲ್ಲದಿದ್ದರೂ ಸಾಕಷ್ಟು ಸೌಲಭ್ಯಗಳಿರುವ ತಾಣಗಳು ಸೂಕ್ತವಾಗಿವೆ. ಇಂತಹ ಕೆಲವಾರು ತಾಣಗಳು ನಮ್ಮ ಕರ್ನಾಟಕದಲ್ಲಿಯೇ ಇವೆ, ಬನ್ನಿ, ಈ ತಾಣಗಳು ಯಾವುವು ಎಂಬುದನ್ನು ನೋಡೋಣ:

ಕೊಡಗು:

ಕೊಡಗು:

ಕರ್ನಾಟದ ಕಾಶ್ಮೀರ ಎಂದೇ ಕರೆಯಲ್ಪಡುವ ಕೊಡಗು ಹಲವಾರು ನಿಸರ್ಗತಾಣಗಳನ್ನು ಹೊಂದಿದೆ. ಇದರಲ್ಲಿ ಮಡಿಕೇರಿ, ಕುಶಾಲನಗರ ನಿಸರ್ಗಧಾಮ, ನಾಗರಹೊಳೆ ಮೊದಲಾದವು ಜನನಿಬಿಡವಾದ ಸ್ಥಳಗಳಾಗಿದ್ದು ಇವುಗಳ ಚಿತ್ರಗಳು ಲಕ್ಷಾಂತರ ಸಂಖ್ಯೆಯಲ್ಲಿ ಈಗಾಗಲೇ ಇವೆ. ಆದರೆ ಕೆಲವು ಪ್ರದೇಶಗಳು ಮಾತ್ರ ಇನ್ನೂ ಗಮನಕ್ಕೆ ಬರಬೇಕಾಗಿದೆ. ಹೀಗೇ ಹವ್ಯಾಸಿ ಚಾರಣಿಗರ ಚಿತ್ರಗಳಿಂದ ಗಮನಕ್ಕೆ ಬಂದ ಮಾಂದಲ್ ಪಟ್ಟಿ ಎಂಬ ಸ್ಥಳದಲ್ಲಿ 'ಗಾಳಿಪಟ' ಎಂಬ ಚಿಲನಚಿತ್ರ ಚಿತ್ರೀಕರಣವಾದ ಬಳಿಕ ಈ ಸ್ಥಳ ಹೆಚ್ಚಿನ ಜನಪ್ರಿಯತೆ ಪಡೆದಿದೆ. ಇವು ಏನಿದ್ದರೂ ಸಮುದ್ರದ ಮೇಲೆ ತೇಲುತ್ತಿರುವ ನೀರ್ಗಲ್ಲಿನ ತುದಿ ಮಾತ್ರ, ಇಡಿಯ ಕೊಡಗಿನಲ್ಲಿ ಛಾಯಾಚಿತ್ರಕಾರರ ಕಣ್ಣಿಗೆ ಕಾಣದ ಎಷ್ಟೋ ತಾಣಗಳಿವೆ. ಇವುಗಳಲ್ಲಿ ಕೆಲವನ್ನಾದರೂ ಚಿತ್ರೀಕರಿಸಿದರೆ ಹವ್ಯಾಸಿ ಛಾಯಾಚಿತ್ರಗಾರರಿಗೆ ಬಹಳಷ್ಟೇ ಫಲ ದೊರಕಲಿದೆ.

ಚಿಕ್ಕಮಗಳೂರು:

ಚಿಕ್ಕಮಗಳೂರು:

ಕಾಫಿನಾಡು ಎಂದೇ ಪ್ರಸಿದ್ದಿ ಪಡೆದಿರುವ ಚಿಕ್ಕಮಗಳೂರು ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿದ್ದು ಸುತ್ತಮುತ್ತಲ ಹಲವಾರು ರಮಣೀಯ ಗುಡ್ಡಗಾಡುಗಳಿಗೆ ಕೇಂದ್ರವಾಗಿದೆ. ಚಾರಣಿಗರಿಗಂತೂ ಇದು ಹೇಳಿ ಮಾಡಿಸಿದ ಸ್ಥಳ. ಹಿಂದಿನ ಕೆಲವಾರು ವರ್ಷಗಳಲ್ಲಿ ಹಲವಾರು ಚಾರಣಿಗರು ಈ ಸ್ಥಳಗಳಿಗೆ ಭೇಟಿ ನೀಡಿ ತಮ್ಮ ಚಿತ್ರಗಳನ್ನು ಜನಸಾಮಾನ್ಯರಿಗೆ ಪರಿಚಯಿಸಿದ ಬಳಿಕ ಸಾವಿರಾರು ಸಂಖ್ಯೆಯಲ್ಲಿ ಚಾರಣಿಗರು ಆಗಮಿಸುತ್ತಿದ್ದಾರೆ. ಈ ಸಂಖ್ಯೆಯ ಚಾರಣಿಗರಿಗೆ ನೆರವಾಗುವಂತೆ ಇಲ್ಲಿಯ ಹಳ್ಳಿಯಲ್ಲಿದ್ದ ಮನೆಗಳಲ್ಲಿ ಬಹುತೇಕ ಮನೆಗಳು 'ಹೋಂ ಸ್ಟೇ' ಎಂಬ ಬಾಡಿಗೆ ಮನೆಯ ಸೌಲಭ್ಯವನ್ನು ನೀಡುತ್ತಿವೆ. ಹಾಗಾಗಿ ಇಂದು ಚಿಕ್ಕಮಗಳೂರನ್ನು ವೀಕ್ಷಿಸಲು ಸುಲಭಸಾಧ್ಯವಾಗಿದ್ದು ಇನ್ನೂ ಹೆಚ್ಚಿನವರ ಗಮನಕ್ಕೆ ಬರದೇ ಇರುವ ಎಷ್ಟೋ ತಾಣಗಳನ್ನು ಚಿತ್ರೀಕರಿಸಲು ವಿಫುಲ ಅವಕಾಶಗಳಿವೆ. ಕೆಮ್ಮಣ್ಣುಗುಂಡಿ, ಕುದುರೆಮುಖ ಮೊದಲಾದ ರಮಣೀಯ ತಾಣಗಳು ಅನತಿ ದೂರದಲ್ಲಿವೆ.

ಮೈಸೂರು:

ಮೈಸೂರು:

ಸಾಂಸ್ಕೃತಿಕ ನಗರಿ ಎಂಬ ಖ್ಯಾತಿ ಪಡೆದಿರುವ ನಮ್ಮ ಮೈಸೂರು ಪ್ರವಾಸಿ ಸ್ಥಳಗಳಿಗೆ ಪ್ರಸಿದ್ಧವಾಗಿದೆ. ಆದರೆ ನಗರದ ವಲಯವನ್ನು ದಾಟಿ ಹೊರಬರುತ್ತಿದ್ದಂತೆಯೇ ಇದೊಂದು ಅಪ್ಪಟ ನಿಸರ್ಗತಾಣ ಎಂಬ ಸತ್ಯ ಗೋಚರವಾಗುತ್ತದೆ. ಮೈಸೂರು ಸುತ್ತಮುತ್ತಲ ಹಲವಾರು ಪ್ರದೇಶಗಳು ಐತಿಹಾಸಿಕ ಮಹತ್ವ ಹೊಂದಿದ್ದು ಇವುಗಳಲ್ಲಿ ಹೆಚ್ಚಿನವು ಇಂದಿನವರಿಗೆ ಗೊತ್ತೇ ಇಲ್ಲ. ಇವುಗಳ ಬಗ್ಗೆ ಗೊತ್ತಾಗುವುದೇನಿದ್ದರೂ ಈ ಸ್ಥಳಗಳ ಮಹತ್ವದ ಬಗ್ಗೆ ಪತ್ರಿಕೆಗಳಲ್ಲಿ ಬಂದಾಗ ಮಾತ್ರ. ಉದಾಹರಣೆಗೆ ರೇಲ್ವೇ ಹಳಿ ವಿಸ್ತರಣೆಗಾಗಿ ಟಿಪ್ಪೂವಿನ ಶಸ್ತ್ರಾಗಾರವಿದ್ದ ಸ್ಥಳವನ್ನು ಅದರ ಮೂಲರೂಪಕ್ಕೆ ಧಕ್ಕೆಯಾಗದಂತೆ ಸ್ಥಳಾಂತರಿಸಿದ ವಿಷಯ ಪತ್ರಿಕೆಗಳಲ್ಲಿ ಬಂದಾಗಲೇ ಇದರ ಇರುವಿಕೆಯ ಬಗ್ಗೆ ಸ್ವತಃ ಮೈಸೂರಿನವರಿಗೇ ಗೊತ್ತಾಗಿತ್ತು. ಪಕ್ಷಿವೀಕ್ಷಕರ ಪಾಲಿಗಂತೂ ಇಲ್ಲಿ ಹಲವಾರು ತಾಣಗಳಿವೆ. ಮೈಸೂರು ಜಿಲ್ಲೆಯಾದ್ಯಂತ ನೂರಾರು ಇಂತಹ ಐತಿಹಾಸಿಕ ಮತ್ತು ಪ್ರಮುಖ ಸ್ಥಳಗಳಿವೆ. ಜಿಲ್ಲೆಯಾದ್ಯಂತ ಅಗತ್ಯ ಸೌಲಭ್ಯಗಳು ಲಭ್ಯವಿದೆ. ಈ ಮೂಲಕ ಛಾಯಾಚಿತ್ರಕಾರರಿಗೆ ಮೈಸೂರು ಸೂಕ್ತವಾದ ತಾಣವಾಗಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನ (ಈಗ ರಾಜೀವ್ ಗಾಂಧಿ ನ್ಯಾಷನಲ್ ಪಾರ್ಕ್)

ನಾಗರಹೊಳೆ ರಾಷ್ಟ್ರೀಯ ಉದ್ಯಾನ (ಈಗ ರಾಜೀವ್ ಗಾಂಧಿ ನ್ಯಾಷನಲ್ ಪಾರ್ಕ್)

ಹೆಸರೇ ಸೂಚಿಸುವಂತೆ ಇದು ಸಂರಕ್ಷಿತ ತಾಣವಾಗಿದೆ. ಸುಮಾರು 248 ಚದರ ಮೈಲಿ ಪ್ರದೇಶವನ್ನು ಒಳಗೊಂಡಿರುವ ಈ ಅರಣ್ಯಪ್ರದೇಶದಲ್ಲಿ ನೂರಾರು ಬಗೆಯ ವನ್ಯಮೃಗ ಮತ್ತು ಪಕ್ಷಿಗಳು ತಮ್ಮ ನೈಸರ್ಗಿಕ ತಾಣದಲ್ಲಿರುವಂತೆ ಮಾಡಲಾಗಿದೆ. ಈ ಉದ್ಯಾನದ ಇನ್ನೊಂದು ಮಹತ್ವದ ಯೋಜನೆಯಾದ ಪ್ರಾಜೆಕ್ಟ್ ಟೈಗರ್ ಅಥವಾ ಹುಲಿಗಳ ಸಂರಕ್ಷಿತ ತಾಣವಾಗಿ ಆಯ್ಕೆಯಾಗಿರುವುದು. ಇದು ಯುನೆಸ್ಕೋ ಪಟ್ಟಿಯ ವಿಶ್ವ ಪಾರಂಪಾರಿಕಾ ತಾಣವೆಂದು ಗುರುತಿಸಲ್ಪಟ್ಟಿದೆ. ಆದರೆ ಈ ಅರಣ್ಯದಲ್ಲಿ ಯಾರಿಗೂ ತಾವಾಗಿಯೇ ಹೋಗುವ ಅನುಮತಿಯಿಲ್ಲ. ಕರ್ನಾಟಕ ಅರಣ್ಯ ಇಲಾಖೆಯ ಪರವಾನಗಿ ಮತ್ತು ಸಿಬ್ಬಂದಿಯ ಜೊತೆಗೇ ಈ ವಿಸ್ತಾರ ಅರಣ್ಯವನ್ನು ನೋಡಬಹುದು. ಹಲವಾರು ವನ್ಯಮೃಗಗಳು ಮತ್ತು ಪಕ್ಷಿಗಳು ಈ ಸುಂದರ ಅರಣ್ಯಪ್ರದೇಶದಲ್ಲಿವೆ. ಪ್ರವಾಸಿಗರಿಗೆ ಜೀಪಿನ ಮೂಲಕ ಚಾರಣ ಮಾಡಿಸಲಾಗುತ್ತದೆ. ಆದರೆ ಈ ದಾರಿಯಿಂದ ದೂರವಾಗಿರುವ ಹಲವಾರು ಕಣಿವೆ ಮತ್ತು ಬೆಟ್ಟಗಳು ಹಾಗೂ ಜಲಪಾತಗಳು ಚಾರಣದ ಮೂಲಕ ಮಾತ್ರವೇ ತಲುಪಬಹುದಾಗಿದ್ದು ಛಾಯಾಚಿತ್ರಗಾರರಿಗೆ ಸವಾಲೆಸೆಯುತ್ತವೆ.

ಗೋಕರ್ಣ

ಗೋಕರ್ಣ

ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಸಮುದ್ರ ತೀರದ ಈ ತಾಣ ದೇವಾಲಯಗಳಿಗಾಗಿ ಪ್ರಸಿದ್ಧಿ ಪಡೆದಿದೆ. ಆದರೆ ಪಟ್ಟಣದಿಂದ ದಕ್ಷಿಣದತ್ತ ಅಥವಾ ಉತ್ತರದತ್ತ ತೀರದುದ್ದಕ್ಕೂ ಸಾಗಿದರೆ ಇಲ್ಲಿ ಜನನಿಬಿಡತೆ ಇಲ್ಲದೇ ಇರುವ ನೂರಾರು ಸಮುದ್ರತೀರಗಳಿವೆ. ಇವುಗಳಲ್ಲಿ ಕೆಲವು ಮಾತ್ರವೇ ಸೌಲಭ್ಯಗಳಿಂದ ಕೂಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುತ್ತಿವೆ. ಕುಡ್ಲೆ ಬೀಚ್, ಹಾಫ್ ಮೂನ್ ಬೀಚ್, ಓಂ ಬೀಚ್, ದೇವಸಮುದ್ರ ಮೊದಲಾದ ತೀರಗಳಲ್ಲಿ ಖ್ಯಾತ ಸಂಸ್ಥೆಗಳು ತಮ್ಮ ಹೋಟೆಲುಗಳನ್ನು ತೆರೆದಿವೆ. ಆದರೆ ಇನ್ನೂ ಹಲವಾರು ತಾಣಗಳು ನಿರ್ಜನವಾಗಿದ್ದು ಛಾಯಾಚಿತ್ರಗಾರರ ಪಾಲಿಗೆ ಹೊಸ ಅವಕಾಶವಾಗಲಿವೆ.

ದಾಂಡೇಲಿ

ದಾಂಡೇಲಿ

ಉತ್ತರ ಕರ್ನಾಟಕದ ಪಶ್ಚಿಮ ಘಟ್ಟಗಳ ಮೇಲ್ಭಾಗದಲ್ಲಿರುವ ಈ ಪಟ್ಟಣದ ಬಗ್ಗೆ ಹೆಚ್ಚಿನವರಿಗೆ ಗೊತ್ತೇ ಇಲ್ಲ. ನಮ್ಮ ಉತ್ತರ ಕರ್ನಾಟಕದಲ್ಲಿ ನೂರಾರು ರಮಣೀಯ ತಾಣಗಳಿವೆ ಹಾಗೂ ಮುಖ್ಯವಾಗಿ ವರ್ಷವಿಡೀ ಸುರಿಯುವ ಜಲಪಾತಗಳಿವೆ. ಆದರೆ ಜಿಲ್ಲೆಯ ಬಹುತೇಕ ಭಾಗದಲ್ಲಿ ಸೂಕ್ತ ಸೌಲಭ್ಯಗಳಿಲ್ಲ. ಅಂದರೆ ಅಷ್ಟೂ ಭಾಗಗಳು ಇನ್ನೂ ಛಾಯಾಚಿತ್ರಕಾರರ ಕಣ್ಣಿಗೇ ಬಿದ್ದಿಲ್ಲ. ಹಾಗಾಗಿ ಇವರಿಗೆ ಪಶ್ಚಿಮ ಘಟ್ಟಗಳ ಅದ್ಭುತ ನೋಟಗಳು, ಜಲಪಾತಗಳು, ಕಣಿವೆಗಳು, ನದಿ, ತೊರೆ ಮತ್ತು ಇನ್ನೂ ವಿಶೇಷವಾಗಿ ನಿರ್ಜನವಾಗಿರುವ ನಡುಗಡ್ಡೆಗಳು ವಿಪುಲ ಅವಕಾಶ ಒದಗಿಸುತ್ತವೆ. ಅಷ್ಟೇ ಅಲ್ಲ, ಈ ಜಿಲ್ಲೆಯಲ್ಲಿ ನೂರಾರು ಧಾರ್ಮಿಕ ಕೇಂದ್ರಗಳು ಮತ್ತು ಜನರಿಗೆ ಅಪರಿಚಿತವಾಗಿಯೇ ಉಳಿದಿರುವ ಮಠ ಮತ್ತು ದೇವಾಲಯಗಳಿವೆ. ಇವೂ ಇನ್ನಷ್ಟು ಅವಕಾಶಗಳನ್ನು ಒದಗಿಸುತ್ತವೆ.

Read more about: karnataka photography
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X