Kundadri Betta: ಕುಂದಾದ್ರಿ ಬೆಟ್ಟ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಶಿವಮೊಗ್ಗ ಜಿಲ್ಲೆಯ ಆಗುಂಬೆ ಬಳಿಯಿರುವ ಮೋಡದೂರು ಕುಂದಾದ್ರಿ ಬೆಟ್ಟದ ನೈಸರ್ಗಿಕ ಸೌಂದರ್ಯ ಮತ್ತು ರುದ್ರರಮಣೀಯ ದೃಶ್ಯಾವಳಿಗಳು ಪ್ರವಾಸಿಗರಿಗೆ ಕೈ ಬೀಸಿ ಕರೆಯುತ್ತವೆ. ಸಮುದ್ರ ಮಟ್ಟದಿಂದ 826 ಮೀಟರ್ ಎತ್ತರದಲ್ಲಿರುವ ಈ ಪ್ರವಾಸಿ ತಾಣಕ್ಕೆ ಒಮ್ಮೆ ನೀವು ಭೇಟಿ ನೀಡಿದರೆ ಜೀವನವಿಡೀ ಸಂಭ್ರಮಿಸಬಹುದಾದ ಸ್ಮರಣೀಯ ನೆನಪುಗಳನ್ನು ಹೊತ್ತಿ ತರಬಹುದು. ಇದು ವಾರಾಂತ್ಯದ ಪ್ರವಾಸಿ ತಾಣವಾಗಿದ್ದು, ಕುಂದಾದ್ರಿ ಬೆಟ್ಟದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಕುಂದಾದ್ರಿಯಲ್ಲಿ ಏನೆಲ್ಲಾ ನೋಡಬಹುದು?
ಹೊನ್ನೇತ್ತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಪ್ರದೇಶವು ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ. ನಿತ್ಯ ನೂರಾರು ಪ್ರವಾಸಿಗರು ಬೆಟ್ಟದ ಸೌಂದರ್ಯ ಅಸ್ವಾದಿಸಲು ಇಲ್ಲಿಗೆ ಬರುತ್ತಾರೆ. ಬಹುತೇಕರು ಸೂರ್ಯೋದಯ ಮತ್ತು ಸೂರ್ಯಾಸ್ತ ವೀಕ್ಷಣೆಗಾಗಿಯೇ ಬರುವುದು ಪ್ರತೀತಿ. ಗುಡ್ಡದ ತಪ್ಪಲಿನಲ್ಲಿ ಬೃಹತ್ ಗೇಟ್ ಅಳವಡಿಸಲಾಗಿದೆ. ಕುಂದಾದ್ರಿ ಬೆಟ್ಟದಲ್ಲಿ 17 ನೇ ಶತಮಾನದ ಜೈನ ದೇವಾಲಯವನ್ನು ನೋಡಬಹುದು. ಜೈನ ದೇವಾಲಯವು 23ನೇ ತೀರ್ಥಂಕರನಾದ 'ಪಾರ್ಶ್ವನಾಥ'ನಿಗೆ ಸಮರ್ಪಿತವಾಗಿದೆ. ಇದರಿಂದಾಗಿ ಈ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜೈನ ಭಕ್ತರು ಆಗಮಿಸುತ್ತಾರೆ. ಇಲ್ಲಿ ಅನೇಕ ಕಲ್ಲಿನ ವಿಗ್ರಹಗಳೂ ಇವೆ.
ಅಲ್ಲದೆ ಎರಡು ಸುಂದರ ಸರೋವರಗಳು ಸಹ ಪ್ರವಾಸಿಗರ ಗಮನ ಸೆಳೆಯುತ್ತವೆ. ಸರೋವರಗಳಿಗೆ ಪಾಪವಿಮೋಚನಾ ಸರೋವರ ಹಾಗೂ ತಾವರೆಕೆರೆ ಎಂದು ಹೆಸರಿಡಲಾಗಿದೆ. ಅಷ್ಟೇ ಅಲ್ಲ ಸಾಹಸ ಪ್ರಿಯರಿಗೆ ಸೂಕ್ತವಾದ ಟ್ರೆಕ್ಕಿಂಗ್ ತಾಣವಾಗಿಯೂ ಇದು ಹೊರಹೊಮ್ಮಿದೆ. ಈ ಎಲ್ಲಾ ಕಾರಣಗಳಿಂದ ಇಲ್ಲಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.

7 ಕಿಮೀ ಸುದೀರ್ಘ ಚಾರಣ
ಈ ಮೊದಲೇ ಹೇಳಿದ ಹಾಗೆ ಕುಂದಾದ್ರಿ ಬೆಟ್ಟಗಳು ಸಾಹಸ ಪ್ರಿಯರಿಗೆ ಉತ್ತಮ ಟ್ರೆಕ್ಕಿಂಗ್ ಸ್ಥಳವಾಗಿದೆ. ವಾರಾಂತ್ಯದಲ್ಲಿ ಅನೇಕ ಚಾರಣ ಉತ್ಸಾಹಿಗಳು ಇಲ್ಲಿಗೆ ಬರುತ್ತಾರೆ. ಈ ಬೆಟ್ಟಗಳ ತುದಿಯನ್ನು ತಲುಪಲು ಸುಮಾರು 3 ಗಂಟೆಗಳು ಬೇಕಾಗುತ್ತದೆ. ಸರಿಸುಮಾರು 7 ಕಿಮೀ ಅರಣ್ಯದ ಹಾದಿಯು ಕಡಿದಾದ ಭೂಪ್ರದೇಶದ ಮೂಲಕ ಸುದೀರ್ಘ ಚಾರಣವನ್ನು ಒಳಗೊಂಡಿರುತ್ತದೆ. ದಾರಿಯುದ್ದಕ್ಕೂ ನೀವು ಪ್ರತಿ ಹೆಜ್ಜೆಯಲ್ಲೂ ಆಕರ್ಷಕವಾದ ಪ್ರಾಕೃತಿಕ ದೃಶ್ಯವನ್ನು ಆನಂದಿಸುವಿರಿ.
ಹೇಗಿದೆ ಚಾರಣದ ಹಾದಿ?
ಅಂದಹಾಗೆ ಚಾರಣದ ಹಾದಿಯಲ್ಲಿ ಕೆಲವೆಡೆ ಒರಟು ಮತ್ತು ಕೆಲವೆಡೆ ಕಿರಿದಾದ ಮಾರ್ಗಗಳಿರುವುದರಿಂದ ಎಚ್ಚರಿಕೆ ವಹಿಸಬೇಕು. ಮಳೆ ಹಾಗೂ ಮಂಜು ಕವಿದ ವಾತವರಣದಲ್ಲಿ ವಾಹನೆ ಚಾಲನೆ ಮಾಡುವುದು ಸ್ವಲ್ಪ ಕಷ್ಟ. ಆದರೆ ಮಾರ್ಗವು ತುಂಬಾ ರೋಮಾಂಚನಕಾರಿ ಮತ್ತು ಆನಂದದಾಯಕವಾಗುತ್ತದೆ. ಇದು ಇಲ್ಲಿ ಟ್ರೆಕ್ಕಿಂಗ್‌ನ ಉತ್ತಮ ಅನುಭವವನ್ನು ನೀಡುತ್ತದೆ. ಒಂದು ವೇಳೆ ನಿಮಗೆ ನಡೆಯಲು ಸಾಧ್ಯವಾಗದಿದ್ದರೆ ನೀವು ಬೆಟ್ಟದ ಮೇಲೆ ಹೋಗಲು ಬೈಕು ತೆಗೆದುಕೊಳ್ಳಬಹುದು. ಇನ್ನು ರಸ್ತೆಗಳು ತುಂಬಾ ಕಡಿದಾಗಿ ಮತ್ತು ಕಿರಿದಾಗಿದ್ದು ನಡುವೆ ಹೇರ್‌ಪಿನ್ ತಿರುವುಗಳಿವೆ. ಆದ್ದರಿಂದ ನೀವು ತುಂಬಾ ಜಾಗರೂಕರಾಗಿರಬೇಕು.

ಒಟ್ಟಾರೆ ಸಾಹಸ, ಆಧ್ಯಾತ್ಮಿಕತೆ ಮತ್ತು ನೈಸರ್ಗಿಕ ಸೌಂದರ್ಯದ ಮಿಶ್ರಣವಾಗಿರುವ ಕುಂದಾದ್ರಿ ಬೆಟ್ಟ ಎಲ್ಲಾ ರೀತಿಯ ಪ್ರವಾಸಿಗರು ನೋಡಲೇಬೇಕಾದ ಸ್ಥಳವಾಗಿದೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾಗಿ ನೀವು ವಾರಂತ್ಯದಲ್ಲಿ ನಿಮ್ಮ ಸ್ನೇಹಿತರು, ಕುಟುಂಬದೊಂದಿಗೆ ಒಮ್ಮೆ ಇಲ್ಲಿಗೆ ಭೇಟಿ ನೀಡಹುದು. ಅಷ್ಟೇ ಏಕೆ ಒಂದು ವೇಳೆ ಒಂಟಿಯಾಗಿ ಹೋದರೂ ಆರಾಮಾಗಿ ಎಂಜಾಯ್ ಮಾಡಬಹುದು.
ಗಮನಿಸಿ: ಅರಣ್ಯ ಪ್ರದೇಶ ಜಾಗಗಳಲ್ಲಿ ಪ್ಲಾಸ್ಟಿಕ್ ತೆಗೆದುಕೊಂಡು ಹೋಗಬೇಡಿ. ಸಾಧ್ಯವಾದಷ್ಟು ಪರಿಸರಸ್ನೇಹಿ ವಸ್ತುಗಳನ್ನು ತೆಗೆದುಕೊಂಡು ಹೋಗುವ ಮೂಲಕ ಪರಿಸರ ಸಂರಕ್ಷಿಸಿ.
ತೆರಳುವುದು ಹೇಗೆ?
ಇದು ಬೆಂಗಳೂರಿನಿಂದ ಸುಮಾರು 343.9 ಕಿಮೀ ದೂರದಲ್ಲಿದೆ. ಹಾಗಾಗಿ ವಾರಾಂತ್ಯದಲ್ಲಿ ಸುಲಭವಾಗಿ ಭೇಟಿ ನೀಡಬಹುದು. ಆದರೆ ನೀವು ಬಸ್ ಅಥವಾ ರೈಲಿನ ಮೂಲಕ ಹೋಗಲು ಬಯಸಿದರೆ ಲೇಟ್ ಆಗಬಹುದು. ಸ್ವಂತ ವಾಹನಗಳಿದ್ದರೆ ಬಳ್ಳಾರಿ, ಚಿತ್ರದುರ್ಗ ಭಾಗಗಳ ಮೂಲಕ ನೇರವಾಗಿ ಭದ್ರಾವತಿ ತಲುಪಿ ಅಲ್ಲಿಂದ ತೀರ್ಥಹಳ್ಳಿ ಮೂಲಕ ಕುಂದಾದ್ರಿ ಬೆಟ್ಟ ತಲುಪಬೇಕು. ಅಥವಾ ಬೆಂಗಳೂರಿನಿಂದ ತೀರ್ಥಹಳ್ಳಿಗೆ ನೇರ ಬಸ್ಸುಗಳಿವೆ. ಅಲ್ಲಿಂದ ನೀವು ಕುಂದಾದ್ರಿ ಬೆಟ್ಟಗಳನ್ನು ತಲುಪಬಹುದು.


Click it and Unblock the Notifications

















