ದಸರಾ ಹಬ್ಬವನ್ನು ದೇಶದಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಮೈಸೂರಿನ ದಸರಾ ಮಾತ್ರ ಬೇರೆ ರಾಜ್ಯಗಳಿಗಿಂತ ಬಹಳ ವಿಭಿನ್ನವಾಗಿದ್ದು, ಎಲ್ಲರನ್ನೂ ಆಕರ್ಷಿಸುತ್ತದೆ. ಇಲ್ಲಿ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ವಿಶೇಷವಾಗಿ ಮೈಸೂರಿನ ದಸರಾ ನೋಡಲು ದೇಶ ಮಾತ್ರವಲ್ಲದೆ ವಿದೇಶಗಳಿಂದಲೂ ಲಕ್ಷಾಂತರ ಜನರು ಬರುತ್ತಾರೆ. ದಸರಾವನ್ನು ಭಾರತಾದ್ಯಂತ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ದಸರಾದಂದು ಕೆಲವೆಡೆ ರಾಮನನ್ನು ಪೂಜಿಸಿದರೆ, ಮತ್ತೆ ಕೆಲವೆಡೆ ರಾವಣನನ್ನು ಪೂಜಿಸಲಾಗುತ್ತದೆ. ಆದರೆ ಮೈಸೂರಿನಲ್ಲಿ ಮಾತ್ರ ದಸರಾ ಮಹೋತ್ಸವಕ್ಕೆ ಚಾಮುಂಡೇಶ್ವರಿ ದೇವಿಗೆ ಅಗ್ರ ಪೂಜೆ ಸಲ್ಲಿಸುವ ಮೂಲಕ ಸಾಂಪ್ರದಾಯಿಕವಾಗಿ ಚಾಲನೆ ನೀಡಲಾಗುತ್ತದೆ. ಹಾಗಾದರೆ ಮೈಸೂರಿನ ದಸರಾ ವಿಶೇಷತೆಗಳನ್ನು ತಿಳಿಯೋಣ...
ಚಾಮುಂಡೇಶ್ವರಿ ದೇವಿಯ ಪೂಜೆಯೊಂದಿಗೆ ಪ್ರಾರಂಭ
ಶರನ್ನವರಾತ್ರಿಯ ಶುಭಾರಂಭದ ದಿನದಂದು ಮೈಸೂರು ಅರಮನೆಯಲ್ಲಿ ರಾಜಮನೆತನದ ಖಾಸಗಿ ದರ್ಬಾರ್ ಆರಂಭವಾಗಲಿದೆ. ವಿಜಯದಶಮಿಯಂದು ಪೂಜಾ ಕೈಂಕರ್ಯಗಳು ನೆರವೇರಲಿವೆ. ಆ ನಂತರ ವಿಶ್ವವಿಖ್ಯಾತ ಜಂಬೂಸವಾರಿಗೆ ಮೈಸೂರು ಸಾಕ್ಷಿಯಾಗಲಿದೆ. ಮೈಸೂರಿನಲ್ಲಿ ದಸರಾ ಸಂದರ್ಭದಲ್ಲಿ ರಾವಣನ ಪ್ರತಿಕೃತಿಯನ್ನು ಸುಡುವುದಿಲ್ಲ. ಇಲ್ಲಿ ಚಾಮುಂಡಿ ದೇವಿಯು ರಾಕ್ಷಸ ಮಹಿಷಾಸುರನನ್ನು ಕೊಂದ ನೆನಪಿಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇಲ್ಲಿ ನವರಾತ್ರಿಯ ಮೊದಲ ದಿನದಿಂದ ಚಾಮುಂಡೇಶ್ವರಿ ದೇವಿಯ ಪೂಜೆಯೊಂದಿಗೆ ದಸರಾ ಆಚರಣೆ ಪ್ರಾರಂಭವಾಗುತ್ತದೆ.

ವಧುವಿನಂತೆ ಕಂಗೊಳಿಸುವ ಅರಮನೆ
ದಸರಾ ಸಮಯದಲ್ಲಿ ಲಕ್ಷಾಂತರ ಪ್ರವಾಸಿಗರು ಭಾಗವಹಿಸುತ್ತಾರೆ. ದಸರಾವನ್ನು ನಾಡಹಬ್ಬ ಎಂದು ಕರೆಯಲಾಗುತ್ತದೆ. ಹಬ್ಬವು ಚಾಮುಂಡೇಶ್ವರಿ ದೇವಿಯ ದೇವಸ್ಥಾನದಲ್ಲಿ ಪೂಜೆಯೊಂದಿಗೆ ಪ್ರಾರಂಭವಾಗುತ್ತದೆ. ಚಾಮುಂಡೇಶ್ವರಿ ದೇವಿಯನ್ನು ಮೊದಲು ರಾಜಮನೆತನದವರು ಪೂಜಿಸುತ್ತಾರೆ. ಈ ಉತ್ಸವದಲ್ಲಿ ಮೈಸೂರು ಒಡೆಯರ್ ಕುಟುಂಬ ಸೇರಿದಂತೆ ಇಡೀ ಮೈಸೂರು ನಗರವು ಭಾಗವಹಿಸುತ್ತದೆ.
ದಸರಾ ಸಂದರ್ಭದಲ್ಲಿ 10 ದಿನಗಳ ಕಾಲ ಮೈಸೂರು ಅರಮನೆಯನ್ನು ವಧುವಿನಂತೆ ಅಲಂಕರಿಸಲಾಗುತ್ತದೆ. ಈ ಸಂದರ್ಭದಲ್ಲಿ ಹಲವು ರೀತಿಯ ವಸ್ತುಪ್ರದರ್ಶನಗಳು ನಡೆಯುತ್ತವೆ ಮತ್ತು ಅನೇಕ ರೀತಿಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತದೆ. ಮೈಸೂರು ಅರಮನೆ ಒಂದು ಲಕ್ಷಕ್ಕೂ ಹೆಚ್ಚು ಬಲ್ಬ್‌ಗಳಿಂದ ಕಂಗೊಳಿಸುತ್ತಿದ್ದರೆ, ಚಾಮುಂಡೇಶ್ವರಿ ಬೆಟ್ಟ ಕೂಡ ಎಲ್‌ಇಡಿ ಬಲ್ಬ್‌ಗಳಿಂದ ಪ್ರಕಾಶಿಸುತ್ತದೆ. ಅರಮನೆ ಮುಂಭಾಗದ ಮೈದಾನದಲ್ಲಿ ದಸರಾ ಕಾರ್ಯಕ್ರಮವನ್ನೂ ಆಯೋಜಿಸಲಾಗುತ್ತದೆ.

ದಸರಾ ಇತಿಹಾಸ
ಮೈಸೂರಿನ ದಸರಾ ಇತಿಹಾಸದ ಬಗ್ಗೆ ಹೇಳುವುದಾದರೆ, 14 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿ ಹರಿಹರ ಮತ್ತು ಬುಕ್ಕ ಎಂಬ ಇಬ್ಬರು ಸಹೋದರರು ನವರಾತ್ರಿಯ ಹಬ್ಬದ ಆಚರಣೆ ಪ್ರಾರಂಭಿಸಿದರು ಎಂದು ಹೇಳಲಾಗುತ್ತದೆ. ಆದರೆ ಅವರ ಸಾಮ್ರಾಜ್ಯ ಪತನಗೊಂಡ ಬಳಿಕ ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜರಾಗಿದ್ದ ಮೈಸೂರಿನ ಯದುವಂಶಸ್ಥರು ಇದನ್ನು ಮುಂದುವರೆಸಿಕೊಂಡು ಬಂದರು ಎಂದು ಇತಿಹಾಸ ಹೇಳುತ್ತದೆ. ರಾಜ ಒಡೆಯರ್ 1610 ರಲ್ಲಿ ವಿಜಯನಗರ ಪರಂಪರೆಯ ಪ್ರತೀಕವಾಗಿದ್ದ ವಿಜಯದಶಮಿ ಆಚರಣೆಯನ್ನು ಮೊದಲ ಬಾರಿಗೆ ಆಚರಿಸಿದರು. ನಂತರದ ಕಾಲಾವಧಿಯಲ್ಲಿ ಇದು ತನ್ನದೇ ಆದ ವೈಭವಪಡೆಯುವುದರೊಂದಿಗೆ ವಿಶ್ವವಿಖ್ಯಾತವಾಯಿತು.

ಜಂಬೂ ಸವಾರಿ
ಹಬ್ಬವನ್ನು ಜಂಬೂ ಸವಾರಿ ಎಂದೂ ಕರೆಯುತ್ತಾರೆ. ಇದರಲ್ಲಿ ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಭಾಗವಹಿಸುತ್ತಾರೆ. ವಿಶ್ವವಿಖ್ಯಾತ ದಸರಾ ಜಂಬೂ ಸವಾರಿಯ ದಿನದಂದು ಚಿನ್ನದ ಅಂಬಾರಿಯಲ್ಲಿ ಇರುವ ನಾಡ ಅಧಿದೇವತೆ ಚಾಮುಂಡಿ ತಾಯಿಗೆ ಪುಷ್ಪಾರ್ಚನೆ ಮಾಡುವ ಸಂದರ್ಭದಲ್ಲಿ ಫಿರಂಗಿಗಳ ಮೂಲಕ 21 ಕುಶಾಲತೋಪು ಸಿಡಿಸಲಾಗುತ್ತದೆ. ಅರಮನೆಯ ಪಕ್ಕದ ಮಾರಮ್ಮ ದೇವಾಲಯದ ಪಕ್ಕದಲ್ಲಿರುವ ಪಾರ್ಕಿಂಗ್ ಪ್ರದೇಶದಲ್ಲಿ ಈ ಆಚರಣೆ ನಡೆಯುತ್ತದೆ. ಜೊತೆಗೆ ಗಜಪಡೆಯು ಜನರ ಶಬ್ದಕ್ಕೆ ಹೆದರದಂತೆ ದಸರಾ ಸಮಯದಲ್ಲಿ ಮೂರು ಬಾರಿ ವಸ್ತು ಪ್ರದರ್ಶನದ ಆವರಣದಲ್ಲಿ ಗಜಪಡೆಗೆ ಸಿಡಿಮದ್ದು ತಾಲೀಮು ಕೈಗೊಳ್ಳಲು ಈ ಫಿರಂಗಿಗಳನ್ನು ಉಪಯೋಗಿಸಲಾಗುತ್ತದೆ. ಅಲ್ಲದೆ, ಪ್ರತಿನಿತ್ಯ ಅರಮನೆಯ ಒಳಗೆ ಸಿಬ್ಬಂದಿ ತಾಲೀಮು ನಡೆಸುತ್ತಾರೆ.
ಚಾಮುಂಡೇಶ್ವರಿ ದರ್ಶನಕ್ಕೆ ಕಾಯುವ ಜನರು
ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಮೆರವಣಿಗೆ ಜತೆಗೆ ತಾಯಿ ಚಾಮುಂಡೇಶ್ವರಿ ದರ್ಶನವೇ ಅಂತಿಮ ಉದ್ದೇಶ. ಇದಕ್ಕಾಗಿ ಗಂಟೆಗಟ್ಟಲೇ ಕಾಯುವ ಮಂದಿ ಸಾಕಷ್ಟು ಕಷ್ಟಪಡುತ್ತಾರೆ. ಸಿಕ್ಕ ಜಾಗದಲ್ಲೇ ನಿಂತು ಮಕ್ಕಳು, ಹಿರಿಯರೊಂದಿಗೆ ಕಾಯುವ ಆ ಕ್ಷಣ ಕಷ್ಟ ಎನ್ನಿಸಿದರೂ ಕೊನೆಗೆ ತಾಯಿ ಚಾಮುಂಡೇಶ್ವರಿ ಅಂಬಾರಿಯೊಳಗೆ ಕಂಡಾಗ ಎಲ್ಲವೂ ಮರೆತು ಹೋಗುತ್ತದೆ.


Click it and Unblock the Notifications

















