Search
  • Follow NativePlanet
Share
» »ವಿಶ್ವದ ಹಲವು ನಗರಗಳಲ್ಲಿ ಏರ್ ಟ್ಯಾಕ್ಸಿ ಸೇವೆ ಶೀಘ್ರದಲ್ಲೇ ಆರಂಭ; ಇಲ್ಲಿದೆ ನೋಡಿ ಪಟ್ಟಿ

ವಿಶ್ವದ ಹಲವು ನಗರಗಳಲ್ಲಿ ಏರ್ ಟ್ಯಾಕ್ಸಿ ಸೇವೆ ಶೀಘ್ರದಲ್ಲೇ ಆರಂಭ; ಇಲ್ಲಿದೆ ನೋಡಿ ಪಟ್ಟಿ

Air Taxi in Bengaluru: ತಂತ್ರಜ್ಞಾನವು ಪ್ರಪಂಚದಾದ್ಯಂತ ಸಾಕಷ್ಟು ಪ್ರಗತಿ ಸಾಧಿಸುತ್ತಿದೆ. ಅಸಾಧ್ಯ ಎನ್ನುವ ಸಂಗತಿಗಳು ಸಾಧ್ಯವಾಗಿವೆ. ಬಹುಶಃ ಒಂದು ಕಾಲದಲ್ಲಿ ಜನರಿಗೆ ಇಂತಹ ವಿಚಾರಗಳು ಯೋಚಿಸಲು ಸಹ ಅಸಾಧ್ಯವೆಂದು ತೋರುತಿತ್ತು. ಹೌದು, ಹಿಂದೆ ಜನರು ಆಕಾಶದಲ್ಲಿ ಹೇಗೆ ಪ್ರಯಾಣಿಸಬೇಕು ಎಂದು ಯೋಚಿಸುತ್ತಿರುವಾಗಲೇ ರೈಟ್ ಸಹೋದರರ ಆವಿಷ್ಕಾರದ ನಂತರ, ಈ ಕೆಲಸವೂ ಸಾಧ್ಯವಾಯಿತು. ಈಗ ನೋಡಿದರೆ ವಿಮಾನಗಳು ಮಾತ್ರವಲ್ಲದೆ ಗಾಳಿಯಲ್ಲಿ ಹಾರುವ ವಿವಿಧ ರೀತಿಯ ವಾಹನಗಳು ತಯಾರಾಗುತ್ತಿವೆ. ಮೊದಲೆಲ್ಲಾ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತೆರಳಲು ಟ್ಯಾಕ್ಸಿ, ಆಟೋ ಬುಕ್ ಮಾಡುತ್ತಿದ್ದೆವು. ಆದರೆ ಇದರಿಂದ ಜನರು ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳಬೇಕಾಗಿತ್ತು. ಆಗ ಸಮಯಕ್ಕೆ ಸರಿಯಾಗಿ ತಲುಪಿಸುವ ವಾಹನ ಬರಬಾರದೇ ಅಂದುಕೊಳ್ಳುವವರಿಗಾಗಿಯೇ ರಚನೆಯಾಗಿದ್ದು ಏರ್‌ ಟ್ಯಾಕ್ಸಿ.

ಈಗ ಬೆಂಗಳೂರು ನಗರದಲ್ಲಿಯೂ ಏರ್ ಟ್ಯಾಕ್ಸಿ ಪ್ರಾರಂಭವಾಗಲಿದ್ದು, ಇದರಿಂದಾಗಿ ಗಂಟೆಗಳ ಪ್ರಯಾಣವನ್ನು ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳಿಸಬಹುದು. ಏರ್‌ಟ್ಯಾಕ್ಸಿಯ ಈ ಯೋಜನೆಯು ಇನ್ನೂ ಆರಂಭಿಕ ಹಂತದಲ್ಲಿದೆ. ಈ ಏರ್‌ ಟ್ಯಾಕ್ಸಿಯ ಮೂಲಮಾದರಿಯನ್ನು ಇನ್ನೂ ತಯಾರಿಸಬೇಕಾಗಿದೆ. ಅಲ್ಲದೆ, ನಿಯಂತ್ರಕ ಅನುಮೋದನೆ ಪಡೆಯಲು ಕೆಲವು ವರ್ಷಗಳು ತೆಗೆದುಕೊಳ್ಳಬಹುದು. ಬಿಐಎಎಲ್ ಪ್ರಕಾರ, ಬೆಂಗಳೂರಿನಲ್ಲಿ ಈ ಸೇವೆ ಪ್ರಾರಂಭವಾಗಲು ಸುಮಾರು ಎರಡರಿಂದ ಮೂರು ವರ್ಷಗಳು ಬೇಕಾಗಬಹುದು. ಆದರೆ ಅದಾಗಲೇ ಏರ್ ಟ್ಯಾಕ್ಸಿ ಪ್ರಾರಂಭಿಸಲು ಯೋಜಿಸುತ್ತಿರುವ ಹಾಗೂ ಪ್ರಾರಂಭಿಸಿರುವ ದೇಶಗಳ ಪಟ್ಟಿ ಇಲ್ಲಿದೆ ನೋಡಿ...

ನ್ಯೂಯಾರ್ಕ್‌ನಲ್ಲಿ ಮೊದಲ ಪರೀಕ್ಷಾ ಹಾರಾಟ

ನವೆಂಬರ್ 2023 ರಲ್ಲಿ ಜಾಬಿ ಏವಿಯೇಷನ್ ನ್ಯೂಯಾರ್ಕ್‌ನಲ್ಲಿ ತನ್ನ ಮೊದಲ ಪರೀಕ್ಷಾ ಹಾರಾಟವನ್ನು ಪೂರ್ಣಗೊಳಿಸಿತು. ಇದು ಮ್ಯಾನ್‌ಹ್ಯಾಟನ್‌ನಿಂದ ಹೊರಟಿತು. ಅಲ್ಲಿಂದ ಜಾನ್ ಎಫ್ ಕೆನಡಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಮಾನ್ಯ ಒಂದು ಗಂಟೆಯ ಪ್ರಯಾಣ ಏಳು ನಿಮಿಷವಾಗುತ್ತದೆ ಎಂದು ಜಾಬಿ ಹೇಳಿಕೊಂಡಿದೆ.

airtaxi newyork

ಲಾಸ್ ಏಂಜಲೀಸ್‌ನಲ್ಲಿ 2026 ರ ವೇಳೆಗೆ ಸಿದ್ಧ

ಆರ್ಚರ್ ಏವಿಯೇಷನ್ 2026 ರ ವೇಳೆಗೆ ಲಾಸ್ ಏಂಜಲೀಸ್‌ನಲ್ಲಿ ಏರ್ ಟ್ಯಾಕ್ಸಿ ನೆಟ್‌ವರ್ಕ್ ಅನ್ನು ಪ್ರಾರಂಭಿಸಲು ಯೋಜಿಸಿದೆ. ಸಾಮಾನ್ಯವಾಗಿ ರಸ್ತೆ ಮೂಲಕ ತೆಗೆದುಕೊಳ್ಳುವ ಎರಡು ಗಂಟೆಗಳ ಪ್ರಯಾಣನ್ನು ಇದು 10-20 ನಿಮಿಷಕ್ಕೆ ಬದಲಾಯಿಸುವ ಗುರಿ ಹೊಂದಿದೆ. 30 ಕ್ಕೂ ಹೆಚ್ಚು US ವಿಮಾನ ನಿಲ್ದಾಣಗಳನ್ನು ಸಿದ್ಧಪಡಿಸಲು ಅಟ್ಲಾಂಟಿಕ್ ಏವಿಯೇಷನ್‌ನೊಂದಿಗೆ ಪಾಲುದಾರಿಕೆ ಹೊಂದಲಿದ್ದು, ಲಿಲಿಯಮ್ ತನ್ನ ಲಿಲಿಯಮ್ ಜೆಟ್ ಅನ್ನು ಖಾಸಗಿ, ಪ್ರೀಮಿಯಂ ಅಥವಾ ಶಟಲ್ ಕಾರ್ಯಾಚರಣೆಗಳಿಗಾಗಿ ತಯಾರಿಸಲು ಮತ್ತು ಮಾರಾಟ ಮಾಡಲು ಯೋಜಿಸಿದೆ.

airtaxi dubai started

ದುಬೈನಲ್ಲಿ ಮೊದಲು ಆರಂಭ

ವಿಶ್ವದ ಮೊದಲ ಹಾರುವ ಟ್ಯಾಕ್ಸಿ ಸೇವೆ ದುಬೈನಲ್ಲಿ ಆರಂಭವಾಗಲಿದೆ. ಫೆಬ್ರವರಿಯಲ್ಲಿ, 2025 ರ ವೇಳೆಗೆ ದುಬೈನಲ್ಲಿ ಸೇವೆಯನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಅಮೆರಿಕದ ಜಾಬಿ ಏವಿಯೇಷನ್‌ ಕಂಪೆನಿ ಹೇಳಿಕೊಂಡಿತ್ತು. ಆರ್‌ಟಿಎ ಏರ್ ಟ್ಯಾಕ್ಸಿ ಸೇವೆಯು ಮುಂದಿನ ವರ್ಷದ ಅಂತ್ಯದ ವೇಳೆಗೆ ಕಾರ್ಯಾರಂಭ ಮಾಡಲಿದ್ದು, ಎಮಿರೇಟ್‌ನ ಪ್ರಮುಖ ನಗರಗಳ ನಡುವೆ ಸುರಕ್ಷಿತವಾಗಿ ಓಡಾಡುವ ಭರವಸೆ ನೀಡಿದೆ. ಏರ್ ಟ್ಯಾಕ್ಸಿಗಳಲ್ಲಿ ಪ್ರಯಾಣಿಸಲು ಪ್ರತಿ ವ್ಯಕ್ತಿಗೆ ಕನಿಷ್ಠ 350 ದಿರ್ಹಮ್ ವೆಚ್ಚವಾಗುತ್ತದೆ. ಯುಎಸ್ ಮೂಲದ ವಿಮಾನಯಾನ ಕಂಪನಿ ಜಾಬಿ ಏವಿಯೇಷನ್‌ ಈ ಯೋಜನೆಯನ್ನು ನಡೆಸಲಿದೆ.

ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ಅಧ್ಯಯನ ಆರಂಭ

ರಾಯಿಟರ್ಸ್ ವರದಿಗಳ ಪ್ರಕಾರ ವಿಸ್ಕ್ ಏರೋ ಇತ್ತೀಚೆಗೆ ಏರ್ ಟ್ಯಾಕ್ಸಿಗಳು ಮತ್ತು ಇತರ ಸ್ವಾಯತ್ತ ವಿಮಾನಗಳನ್ನು ದೇಶದ ವಾಯುಪ್ರದೇಶದಲ್ಲಿ ಹೇಗೆ ಸಂಯೋಜಿಸಬಹುದು ಎಂಬುದನ್ನು ಅಧ್ಯಯನ ಮಾಡಲು ಸರ್ಕಾರಿ ಸಂಸ್ಥೆ ಏರ್‌ಸರ್ವಿಸಸ್ ಆಸ್ಟ್ರೇಲಿಯಾದೊಂದಿಗೆ ಪಾಲುದಾರಿಕೆ ಹೊಂದಿದೆ ಎಂದು ಹೇಳಿದೆ. ಬ್ರಿಸ್ಬೇನ್ 2032 ರ ಒಲಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟದ ಮೊದಲು ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ ತಯಾರಕ ತನ್ನ ನಾಲ್ಕು ಆಸನಗಳ ಸ್ವಾಯತ್ತ ವಿಮಾನವನ್ನು ಆಸ್ಟ್ರೇಲಿಯಾದಲ್ಲಿ ಪ್ರಾರಂಭಿಸುವ ಗುರಿಯನ್ನು ಹೊಂದಿರುವುದರಿಂದ ಈ ಕ್ರಮ ಕಂಡುಬಂದಿದೆ. ವಿಸ್ಕ್ ಹಲವಾರು ಎಲೆಕ್ಟ್ರಿಕ್ ವರ್ಟಿಕಲ್ ಟೇಕ್-ಆಫ್ ಮತ್ತು ಲ್ಯಾಂಡಿಂಗ್ (eVTOL) ವಿಮಾನ ತಯಾರಕರಲ್ಲಿ ಒಂದಾಗಿದೆ, ಇದು ದಟ್ಟಣೆಯ ನಗರಗಳಲ್ಲಿ ಪರಿಸರ ಸ್ನೇಹಿ ಸಾರಿಗೆ ವಿಧಾನವನ್ನು ಒದಗಿಸುವ ಭರವಸೆಯೊಂದಿಗೆ ಕಳೆದ ಕೆಲವು ವರ್ಷಗಳಿಂದ ಹೊರಹೊಮ್ಮಿದೆ.

ಯುನೈಟೆಡ್ ಕಿಂಗ್ಡಮ್‌ನಲ್ಲಿ ಯಾವಾಗ?

ಬಿಬಿಸಿ ವರದಿಗಳ ಪ್ರಕಾರ ಮೊದಲ ಹಾರುವ ಟ್ಯಾಕ್ಸಿ 2026 ರ ವೇಳೆಗೆ ಯುಕೆನಲ್ಲಿ ಟೇಕ್ ಆಫ್ ಆಗಬಹುದು. ಏರೋಸ್ಪೇಸ್ ಉದ್ಯಮದೊಂದಿಗೆ ಅಭಿವೃದ್ಧಿಪಡಿಸಲಾದ ಫ್ಯೂಚರ್ ಆಫ್ ಫ್ಲೈಟ್ ಕ್ರಿಯಾ ಯೋಜನೆಯು ಡ್ರೋನ್‌ಗಳು ಮತ್ತು ಇತರ ಹಾರುವ ವಾಹನಗಳು ಹೆಚ್ಚು ಸ್ವಾಯತ್ತವಾಗುತ್ತವೆ ಎಂದು ಹೇಳುತ್ತದೆ. ಮೊದಲ ಪೈಲಟ್ ರಹಿತ ಫ್ಲೈಯಿಂಗ್ ಟ್ಯಾಕ್ಸಿ 2030 ರಲ್ಲಿ ಟೇಕ್ ಆಫ್ ಆಗಲಿದೆ ಎಂದು ಅದು ಭವಿಷ್ಯ ನುಡಿದಿದೆ.

ಈ ರೀತಿಯಾಗಿ ಪ್ರಪಂಚದಲ್ಲಿ ಏರ್ ಟ್ಯಾಕ್ಸಿ ಸೇವೆಯು ಇನ್ನೂ ತನ್ನ ಆರಂಭಿಕ ಹಂತದಲ್ಲಿದೆ ಎಂದು ಹೇಳಬಹುದು. ಆದರೆ ಇದುವರೆಗಿನ ಅಭಿವೃದ್ಧಿ ಪಯಣ ಮುಂಬರುವ ವರ್ಷಗಳಲ್ಲಿ ವಿಶ್ವದ ಹಲವು ನಗರಗಳಲ್ಲಿ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿಗಳು ಆಕಾಶದಲ್ಲಿ ಹಾರಾಡಲಿವೆ ಎಂಬ ಭರವಸೆ ಮೂಡಿಸಿದೆ.

More News

Read more about: air taxis airports bengaluru
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+