ಕೇರಳ ದಕ್ಷಿಣ ಭಾರತದ ಪ್ರಮುಖ ಹಾಗೂ ಅತ್ಯಂತ ಸುಂದರವಾದ ರಾಜ್ಯವಾಗಿದೆ. ಕೇರಳದಲ್ಲಿರುವ ಭವ್ಯವಾದ ಮತ್ತು ಆಕರ್ಷಕ ಸ್ಥಳಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಸಾಮಾನ್ಯವಾಗಿ ಇಲ್ಲಿಗೆ ಭೇಟಿ ನೀಡುವ ಅನೇಕರು ಮೊದಲು ಮುನ್ನಾರ್ (ವಯನಾಡ್ ಹಿಲ್ ಸ್ಟೇಷನ್ ಎಂದೂ ಕರೆಯುತ್ತಾರೆ) ನೋಡಲು ಇಷ್ಟಪಡುತ್ತಾರೆ. ಆದರೆ ಈಗ ಪ್ರವಾಸಿಗರ ಮೊದಲ ಆಯ್ಕೆ ಮುನ್ನಾರ್ ಅಲ್ಲ, ಲಕ್ಕಿಡಿಯಾಗಿದೆ. ಹೌದು, ಕೇರಳದಲ್ಲಿರುವ ಲಕ್ಕಿಡಿ ಕೂಡ ಸುಂದರವಾದ ಗಿರಿಧಾಮವಾಗಿದ್ದು, ಇದರ ಸೌಂದರ್ಯದ ಬಗ್ಗೆ ಕೆಲವೇ ಜನರಿಗೆ ಮಾತ್ರ ತಿಳಿದಿದೆ. ಆದರೆ ಲಕ್ಕಿಡಿ ಎಷ್ಟು ಚೆನ್ನಾಗಿದೆಯೆಂದರೆ ಇದರ ಸೊಬಗನ್ನು ನೋಡಿದ ನಂತರ ಕೇರಳದ ಅನೇಕ ಸ್ಥಳಗಳನ್ನು ನೀವು ಮರೆತುಬಿಡುತ್ತೀರಿ ಎಂದು ಹೇಳಲಾಗುತ್ತದೆ.
ಹಾಗಾದರೆ ಬನ್ನಿ...ಈ ಲೇಖನದಲ್ಲಿ ನಾವು ಲಕ್ಕಿಡಿ ಗಿರಿಧಾಮದ ವಿಶೇಷತೆ ಮತ್ತು ಇಲ್ಲಿರುವ ಕೆಲವು ಅತ್ಯುತ್ತಮ ಸ್ಥಳಗಳ ಬಗ್ಗೆ ತಿಳಿದುಕೊಳ್ಳೋಣ. ಚಳಿಗಾಲದಲ್ಲಿ ಬೆಚ್ಚನೆಯ ಅನುಭವ ಆನಂದಿಸಬೇಕೆಂದರೆ ನೀವು ಸಹ ಇಲ್ಲಿಗೆ ಬರಬಹುದು.
ಲಕ್ಕಿಡಿ ಗಿರಿಧಾಮ ಫೇಮಸ್ ಆಗಲು ಕಾರಣ
ಲಕ್ಕಿಡಿಯ ವಿಶೇಷತೆಯನ್ನು ಹೇಳುವ ಮೊದಲು ಇದು ಎಲ್ಲಿದೆ ಎಂದು ಮೊದಲು ತಿಳಿದುಕೊಳ್ಳೋಣ. ಲಕ್ಕಿಡಿ ಕೇರಳದ ವಯನಾಡ್ ನಗರದಿಂದ ಸ್ವಲ್ಪ ದೂರದಲ್ಲಿರುವ ಚಿಕ್ಕ, ಆದರೆ ಅತ್ಯಂತ ಆಕರ್ಷಕ ಮತ್ತು ಸುಂದರವಾದ ಗಿರಿಧಾಮ. ಎತ್ತರದ ಪರ್ವತಗಳು, ಹುಲ್ಲುಗಾವಲುಗಳು, ದಟ್ಟವಾದ ಕಾಡುಗಳು ಮತ್ತು ಕಾಡುಗಳ ಮೂಲಕ ಹಾದುಹೋಗುವ ಅಂಕುಡೊಂಕಾದ ರಸ್ತೆಗಳು ಈ ಗಿರಿಧಾಮದ ಸೌಂದರ್ಯವನ್ನು ಹೆಚ್ಚಿಸಿವೆ. ಅದರಲ್ಲೂ ಇಲ್ಲಿನ ಶಾಂತ ಮತ್ತು ಪರಿಶುದ್ಧ ಪರಿಸರ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. ಈ ಗಿರಿಧಾಮವನ್ನು ಪ್ರಕೃತಿ ಪ್ರಿಯರಿಗೆ ಸ್ವರ್ಗವೆಂದು ಪರಿಗಣಿಸಲಾಗಿದೆ.

ಲಕ್ಕಿಡಿ ಗಿರಿಧಾಮದಲ್ಲಿ ಭೇಟಿ ನೀಡಬೇಕಾದ ಸ್ಥಳಗಳು
ಲಕ್ಕಿಡಿ ಗಿರಿಧಾಮದಲ್ಲಿ ಅನೇಕ ಅದ್ಭುತ ಸ್ಥಳಗಳಿವೆ. ಈ ಮೊದಲೇ ಹೇಳಿದ ಹಾಗೆ ಬಹುಶಃ ನೀವು ಇಲ್ಲಿಗೆ ಭೇಟಿ ನೀಡಿದ ನಂತರ ಮುನ್ನಾರ್‌ನಂತಹ ಪ್ರಸಿದ್ಧ ಗಿರಿಧಾಮವನ್ನು ಮರೆತುಬಿಡುತ್ತೀರಿ. ಬನ್ನಿ ಆ ಸ್ಥಳಗಳಾವುವು..ಇಲ್ಲಿ ಒಂದೊಂದಾಗಿ ನೋಡೋಣ...
ಪೂಕೊಡೆ ಲೇಕ್ ಅಥವಾ ಸರೋವರ
ಲಕ್ಕಿಡಿಯಲ್ಲಿ ಅನೇಕ ಜನರು ಮೊದಲು ತಲುಪುವ ಸ್ಥಳವೆಂದರೆ ಪೂಕೊಡೆ ಲೇಕ್. ಪರ್ವತಗಳ ಮಧ್ಯದಲ್ಲಿರುವ ಈ ಸರೋವರವು ತನ್ನ ಸೌಂದರ್ಯದಿಂದ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪೂಕೊಡೆ ಸರೋವರವು ಶುದ್ಧ ನೀರಿಗೆ ಹೆಸರುವಾಸಿಯಾಗಿದೆ. ಈ ಸರೋವರದ ಸುತ್ತಲಿನ ಹಸಿರು ಪ್ರವಾಸಿಗರನ್ನು ಬಹಳ ಆಕರ್ಷಿಸುತ್ತದೆ. ಅಷ್ಟೇ ಅಲ್ಲ, ಸರೋವರವನ್ನು ವಲಸೆ ಹಕ್ಕಿಗಳ ತವರೂರು ಎಂದೂ ಹೇಳಲಾಗುತ್ತದೆ. ಸರೋವರದ ದಡದಲ್ಲಿ ನೀವು ವಿಶ್ರಾಂತಿ ಕ್ಷಣವನ್ನು ಕಳೆಯಬಹುದು.

ಲಕ್ಕಿಡಿ ವ್ಯೂ ಪಾಯಿಂಟ್
ಲಕ್ಕಿಡಿಯ ದಕ್ಷಿಣ ತುದಿಯಲ್ಲಿದೆ ಲಕ್ಕಿಡಿ ವ್ಯೂ ಪಾಯಿಂಟ್. ಇದು ಈ ಗಿರಿಧಾಮದ ಅತ್ಯಂತ ಅದ್ಭುತವಾದ ಸ್ಥಳಗಳಲ್ಲಿ ಒಂದಾಗಿದೆ. ಈ ಪ್ರಸಿದ್ಧ ಮತ್ತು ಸುಂದರ ತಾಣವು ಪೂಕೊಡೆ ಸರೋವರದಿಂದ ಸ್ವಲ್ಪ ದೂರದಲ್ಲಿದೆ. ಈ ವ್ಯೂ ಪಾಯಿಂಟ್ ಬೆಟ್ಟದ ತುದಿಯಲ್ಲಿದೆ. ಲಕ್ಕಿಡಿ ವ್ಯೂ ಪಾಯಿಂಟ್‌ನ ಬಗ್ಗೆ ಹೇಳುವುದಾದರೆ, ಇಡೀ ನಗರದ ಅದ್ಭುತ ನೋಟ ಇಲ್ಲಿಂದ ಗೋಚರಿಸುತ್ತದೆ. ಇಲ್ಲಿಂದ ವಯನಾಡಿನ ಸೌಂದರ್ಯವನ್ನು ಹತ್ತಿರದಿಂದ ನೋಡಬಹುದು. ಈ ವ್ಯೂ ಪಾಯಿಂಟ್ ಅನ್ನು ತಲುಪಲು ಚಾರಣ ಮಾಡಬೇಕು ಮತ್ತು ಟ್ರೆಕ್ಕಿಂಗ್ ಸಮಯದಲ್ಲಿ ಕ್ಯಾಮೆರಾದಲ್ಲಿ ಅದ್ಭುತ ದೃಶ್ಯಗಳನ್ನು ಸಹ ಸೆರೆಹಿಡಿಯಬಹುದು.
ಕುರುವ ದ್ವೀಪ
ಲಕ್ಕಿಡಿಯಿಂದ ಸುಮಾರು 48 ಕಿ.ಮೀ ದೂರದಲ್ಲಿರುವ ಕುರುವ ದ್ವೀಪವು ಸುಂದರವಾದ ಸ್ಥಳವಾಗಿದ್ದು, ಪ್ರತಿದಿನ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕುರುವ ದ್ವೀಪವು ಮುಖ್ಯವಾಗಿ ಸುಮಾರು 950 ಎಕರೆಗಳ ಸಂರಕ್ಷಿತ ನದಿ ಮುಖಜಭೂಮಿಯಾಗಿದೆ ಮತ್ತು ದಟ್ಟವಾದ ಕಾಡುಗಳಿಂದ ಆವೃತವಾಗಿದೆ. ವಯನಾಡಿನ ಕಬಿನಿ ನದಿಯ ಉಪನದಿಗಳ ದಡದಲ್ಲಿರುವ ಕುರುವ ದ್ವೀಪವು ಪ್ರಕೃತಿ ಪ್ರಿಯರ ಸ್ವರ್ಗವೆಂದು ಪರಿಗಣಿಸಲಾಗಿದೆ. ಇಲ್ಲಿಗೆ ಸ್ಥಳೀಯ ಮಾತ್ರವಲ್ಲದೆ ವಿದೇಶಿ ಪ್ರವಾಸಿಗರೂ ಭೇಟಿ ನೀಡಲು ಬರುತ್ತಾರೆ. ಆದರೆ ಕುರುವ ದ್ವೀಪಕ್ಕೆ ಭೇಟಿ ನೀಡಲು ಸ್ಥಳೀಯ ಪ್ರಾಧಿಕಾರದಿಂದ ಅನುಮತಿಯನ್ನು ತೆಗೆದುಕೊಳ್ಳಬೇಕು.
ಲಕ್ಕಿಡಿ ತಲುಪುವುದು ಹೇಗೆ?
ಲಕ್ಕಿಡಿಯನ್ನು ತಲುಪುವುದು ತುಂಬಾ ಸುಲಭ. ಮೊದಲಿಗೆ ಕೇರಳದ ವಯನಾಡ್ ತೆರಳಬೇಕು. ಆ ನಂತರ ಯಾವುದೇ ಮೂಲೆಯಿಂದ ಲಕ್ಕಿಡಿಗೆ ತಲುಪಬಹುದು. ವಯನಾಡಿನಿಂದ ಲಕ್ಕಿಡಿ ಸುಮಾರು 28 ಕಿ.ಮೀ ದೂರದಲ್ಲಿದ್ದು, ಟ್ಯಾಕ್ಸಿ ಅಥವಾ ಕ್ಯಾಬ್ ಮೂಲಕ ನೀವು ಸುಲಭವಾಗಿ ಲಕ್ಕಿಡಿಯನ್ನು ತಲುಪಬಹುದು.


Click it and Unblock the Notifications

















