ಕೇರಳ ಪ್ರವಾಸೊದ್ಯಮ - ಆನಂದಮಯ ಕ್ಷಣಗಳು

ಮುಖಪುಟ » ಸ್ಥಳಗಳು » » ಮುನ್ನೋಟ

ನಿಜ ಹೇಳಬೇಕೆಂದರೆ ಕೇರಳ ಮತ್ತು ಪ್ರವಾಸೊದ್ಯಮ ಈ ಎರಡು ಪದಗಳು ಒಂದಕ್ಕೊಂದು ಅವಿನಾಭಾವ ಸಂಬಂಧವನ್ನು ಹೊಂದಿವೆ. ಪ್ರಶಾಂತಮಯ ಹಸಿರಿನ ವಾತಾವರಣ, ಎಲ್ಲೆಲ್ಲೂ ತೆಂಗಿನ ಮರಗಳು ಮತ್ತು ಆಕರ್ಷಕ ಕಡಲ ತೀರಗಳು, ಪ್ರಸನ್ನತೆಯ ಭಾವ ಮೂಡಿಸುವ ಹಿನ್ನೀರು ಮತ್ತು ಅದರ ಮೇಲೆ ತೇಲುತ್ತಿರುವ ದೋಣಿ ಮನೆಗಳು, ಬಹುಸಂಖ್ಯೆಯಲ್ಲಿರುವ ದೇವಸ್ಥಾನಗಳು, ಆಯುರ್ವೇದದ ಲಭ್ಯತೆ, ಮಂದ ಸರೋವರಗಳು ಮತ್ತು ಕೃತಕ ಕೊಳಗಳು, ಕಾಲುವೆಗಳು, ದ್ವೀಪಗಳು.....ಹೀಗೆ ನಿಲ್ಲಲಾರದ ಪಟ್ಟಿಯನ್ನು ಈ ಪ್ರದೇಶಕ್ಕೆ ಬರೆಯಬಹುದಾಗಿದೆ.ನ್ಯಾಷ್ನಲ್ ಜಿಯೋಗ್ರಾಫಿಕ್ ಅವರ 'ಟ್ರಾವ್ಲರ್' ನಿಯತಕಾಲಿಕ ಮತ್ತು 'ಟ್ರವೆಲ್ + ಲೈಸರ್' ಪ್ರಕಾರ 'ಜಗತ್ತಿನಲ್ಲಿನ ಹತ್ತು ಸ್ವರ್ಗಗಳು' ಮತ್ತು 'ಜೀವಮಾನದಲ್ಲಿ ನೋಡಲೇ ಬೇಕಾದ 50 ಸ್ಥಳಗಳು' ಮತ್ತು '21ನೇ ಶತಮಾನದಲ್ಲಿ ಪ್ರವಾಸಮಾಡಲು 100 ಅದ್ವಿತೀಯ ಸ್ಥಳಗಳಲ್ಲಿ ಒಂದು' ಎಂಬೆಲ್ಲ ಹೆಗ್ಗಳಿಕೆಯನ್ನು ಗಳಿಸಿಕೊಂಡಿರುವ ಈ ಸ್ಥಳವು ಖಂಡಿತವಾಗಿಯು ಒಂದು ಅದ್ಭುತ ತಾಣವೆ ಸರಿ.

ಪ್ರವಾಸೊದ್ಯಮದ ಛಾಯೆಗಳು

ಇಲ್ಲಿರುವ ಪ್ರತಿಯೊಂದು ನಗರ, ಪಟ್ಟಣ ಮತ್ತು ದೂರದ ಹಳ್ಳಿಗಳು 'ಗಾಡ್ಸ್ ಒವ್ನ್ ಕಂಟ್ರಿ' ಅಥವಾ 'ದೇವರ ಸ್ವಂತ ದೇಶ' ಎಂಬ ಹೆಗ್ಗಳಿಕೆಯನ್ನು ಪಡೆದಿದ್ದು, ತಮ್ಮದೆ ಆದ ರೋಚಕ ಕಥೆಗಳು ಮತ್ತು ಸದ್ದಿಲ್ಲದ ಆಹ್ವಾನಗಳಿಂದ ಸದಭಿರುಚಿಯ ಪ್ರವಾಸಿಗರನ್ನು ಕೈಬಿಸಿ ಕರೆಯುತ್ತವೆ. ಕೇರಳದ ಹದಿನಾಲ್ಕು ಜಿಲ್ಲೆಗಳಾದ ಕಾಸರ್ಗೋಡ್, ಕಣ್ಣೂರ್, ವಾಯ್ನಾಡ್, ಕೋಳಿಕೋಡ್, ಮಲಪ್ಪುರಮ್, ಪಾಲಕ್ಕಾಡ್, ತ್ರಿಶ್ಶುರ್, ಎರ್ನಾಕುಲಮ್, ಇಡುಕ್ಕಿ, ಕೊಟ್ಟಾಯಮ್, ಆಲಪ್ಪುಳಾ (ಅಲ್ಲೆಪ್ಪಿ), ಪತ್ನಾಮತಿಟ್ಟಾ, ಕೊಲ್ಲಮ್, ತಿರುವನಂತಪುರಂ ಪ್ರಸಿದ್ಧ ಆಕರ್ಷಣೀಯ ಪ್ರವಾಸಿ ತಾಣಗಳಾಗಿದ್ದು, ಇವುಗಳಲ್ಲಿ, ಇತರೆ ಇನ್ನು ಹತ್ತು ಹಲವು ರೋಮಾಂಚಕ ಸ್ಥಳಗಳನ್ನು ವಿಕ್ಷೀಸಬಹುದಾಗಿದೆ.ಕೇರಳ ಪ್ರವಾಸೊದ್ಯಮವು ವೈವಿಧ್ಯಮಯ ಅಭಿರುಚಿಗಳುಳ್ಳ ಪ್ರವಾಸಿಗರಿಗಾಗಿ ವಿವಿಧ ಆಯ್ಕೆಗಳನ್ನು ಒದಗಿಸುತ್ತದೆ. ಸುಂದರವಾದ ಕಡಲ ತೀರಗಳು, ಮನಮೋಹಕ ಹಿನ್ನೀರು, ಪ್ರಕೃತಿಯ ಮಡಿಲಲ್ಲಿ ಕರಗಿ ಹೋಗುವಂತಹ ಅನುಭವ ನೀಡುವ ಗಿರಿಧಾಮಗಳು ಪ್ರತಿಯೊಬ್ಬ ಭೇಟಿ ನೀಡುವ ಪ್ರವಾಸಿಗನಿಗೆ ಮೈಮನ ಉತ್ಸಾಹಗೊಳ್ಳಲು ಸಹಾಯಕಾರಿಯಾಗಿವೆ. ಸಾಹಸ, ರೋಮಾಂಚನ ಮತ್ತು ಶಾಂತಿ, ಈ ಮೂರು ಭಾವನೆಗಳಿಗೆ ತಕ್ಕಂತೆ ಇಲ್ಲಿ ತಾಣಗಳು ಕಾಣಸಿಗುತ್ತವೆ.

ಜಲಮಯ ಕೇರಳ - ಎಲ್ಲೆಲ್ಲೂ ನೀರು

ವರ್ಕಲಾ, ಬೆಕಲ್, ಕೊವಲಂ, ಮೀನ್ಕುನ್ನು, ಚೆರೈ ಬೀಚ್, ಪಯ್ಯಾಂಬಲಂ ಬೀಚ್, ಶಂಗುಮುಖಂ, ಮುಳುಪ್ಪಿಲಂಗಾಡ್ ಬೀಚ್ ಮುಂತಾದವುಗಳು ಇಲ್ಲಿರುವ ಕೆಲವು ಆಕರ್ಷಕ ಕಡಲ ತೀರಗಳಾಗಿದ್ದು, ಕೇರಳ ಪ್ರವಾಸೊದ್ಯಮವನ್ನು ಮತ್ತಷ್ಟು ಸಫಲವಾಗಿಸುವುದರಲ್ಲಿ ಯಶಸ್ವಿಯಾಗಿವೆ.ಇಲ್ಲಿರುವ ಮನಮೋಹಕ ಹಿನ್ನೀರಿನ ತಾಣಗಳೆಂದರೆ ಆಲಪ್ಪುಳಾ ಅಥವಾ ಅಲ್ಲೆಪ್ಪಿ, ಕುಮರಕಂ, ತಿರುವಲ್ಲಂ, ಕೊಲ್ಲಂ, ಕಾಸರ್ಗೋಡ್ ಮುಂತಾದವುಗಳು. ಈ ರೀತಿಯ ಹಿನ್ನೀರಿನಲ್ಲಿನ ದೋಣಿ ಪ್ರಯಾಣವು ಒಂದಿ ವಿಶೀಷ್ಟ ಬಗೆಯ ಉತ್ಸಾಹದ ಅನುಭವವನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ಇಲ್ಲಿ ಕೆಟ್ಟುವಳ್ಳಂ ಮತ್ತು ಹೌಸ್ ಬೋಟ್ ಗಳನ್ನು ನೋಡಬಹುದಾಗಿದ್ದು, ಇವುಗಳಲ್ಲಿ ಹೌಸ್ ಬೋಟ್ ಗಳು ಆಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಪ್ರವಾಸಿಗರ ನಡುವೆ ತಂಗುದಾಣವಾಗಿಯೂ ಕಾರ್ಯ ನಿರ್ವಹಿಸುತ್ತವೆ. ಕೇರಳದಲ್ಲಿ ವರ್ಷಕ್ಕೊಮ್ಮೆ ಆಚರಿಸಲಾಗುವ 'ಸ್ನೇಕ್ ಬೋಟ್ ರೇಸ್' ಅತ್ಯಂತ ಜನಪ್ರಿಯವಾಗಿದ್ದು, ಬಹುಸಂಖ್ಯೆಯಲ್ಲಿ ಪ್ರವಾಸಿಗರನ್ನು ರಾಜ್ಯಕ್ಕೆ ಭೇಟಿ ನೀಡಲು ಆಕರ್ಷಿಸುತ್ತದೆ. ಈ ಸ್ಪರ್ಧೆಯು ಕೇರಳ ಪ್ರವಾಸೊದ್ಯಮದ ಒಂದು ಪ್ರಮುಖ ಅಂಗವಾಗಿದೆ.ವೆಂಬನಾಡ್ ಕೆರೆ, ಅಷ್ಟಮುದಿ ಕೆರೆ, ಪೂಕೊಡೆ ಕೆರೆ, ಸಸ್ಥಮ್ಕೊಟ್ಟ ಕೆರೆ, ವೀರಾನ್ಪುಳಾವೆಲ್ಲಾಯ್ನಿ ಕೆರೆ, ಪರವುರ್ ಕಯಲ್, ಮನಚಿರಾ ಮುಂತಾದವುಗಳು ಇಲ್ಲಿರುವ ಜನಪ್ರಿಯ ಕೆರೆಗಳು. ವೆಂಬನಾಡ್ ಕೆರೆಯು ಭಾರತದಲ್ಲೆ ದೊಡ್ಡದಾದ ಕೆರೆಯಾಗಿದೆ.

ಕೇರಳದ ಗಿರಿಧಾಮಗಳು - ತರಂಗಾಂತರದ ಅದ್ಭುತಗಳು

ಆಧುನಿಕತೆಯ ಕರಿ ನೆರಳಿನಿಂದ ಸ್ವಲ್ಪವೂ ಕಲುಷಿತವಾಗದೆ ಹಾಗೆ ಉಳಿದಿರುವ ಕೇರಳದ ಮುನ್ನಾರ್ ಗಿರಿಧಾಮವು, ದಕ್ಷಿಣ ಭಾರತದ ಇತರೆ ಗಿರಿಧಾಮಗಳಿಗೆ ಹೋಲಿಸಿದಾಗ ವ್ಯಾಪಾರೀಕರಣದಿಂದ ಮುಕ್ತವಾಗಿರುವುದು ಕಂಡುಬರುತ್ತದೆ. ತನ್ನ ರೋಮಾಂಚನಕಾರಿಯಾದ ಪ್ರಾಕೃತಿಕ ಸೊಬಗಿನಿಂದ ಇದು ಮಧುಚಂದ್ರಕ್ಕೆಂದು ಸಮಯ ಕಳೆಯ ಬಯಸುವ ತಾಣಗಳಲ್ಲಿ ಪ್ರಸಿದ್ಧವಾಗಿದ್ದು, ರಾಜ್ಯದ ಮತ್ತೊಂದು ಸುಪ್ರಸಿದ್ಧ ತಾಣವಾದ ವಾಯ್ನಾಡ್ ಗೆ ಪ್ರಸಿದ್ಧತೆಯಲ್ಲಿ ಹತ್ತಿರದಲ್ಲಿದೆ. ಇತರೆ ಅನ್ವೇಷಿಸಲು ಯೋಗ್ಯವಾಗಿರುವ ಗಿರಿಧಾಮಗಳೆಂದರೆ ವಾಗಾಮನ್, ಪೊನ್ಮುಡಿ, ತೆಕ್ಕಡಿ, ಪೀರ್ಮೆಡೆ ಮುಂತಾದವುಗಳು. ಇವುಗಳಲ್ಲಿ ತೆಕ್ಕಡಿಯು ವನ್ಯಜೀವಿ ಸಂಪತ್ತಿನಿಂದ ಸಮೃದ್ಧವಾಗಿದ್ದು, ಸಾಹಸಮಯ ಪ್ರವಾಸಕ್ಕೂ ಸೈ ಎನಿಸಿಕೊಂಡಿದೆ. ಈ ರೀತಿಯಾಗಿ ಕೇರಳವು ಮೂಕವಿಸ್ಮಿತರನ್ನಾಗಿ ಮಡುವ ಹಲವು ಅದ್ಭುತ ತಾಣಗಳನ್ನು ತನ್ನ ಮಡಿಲಲ್ಲಿ ಹುದುಗಿಸಿಟ್ಟುಕೊಂಡಿದೆ.

ಸಂಸ್ಕೃತಿ, ಸಂಪ್ರದಾಯ ಮತ್ತು ಖಾದ್ಯಗಳು - ವಿಭಜಿಸಲಾಗದ ಹೆಗ್ಗುರುತುಗಳು

ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ಕೇರಳದ ಸಂಸ್ಕೃತಿಯು, ತನ್ನದೆ ಆದ ಕಲೆ, ಉಡುಪು ಮತ್ತು ಖಾದ್ಯಗಳಿಂದ ವಿಭಿನ್ನ ಹಾಗು ವಿಶೀಷ್ಟವಾಗಿದೆ.  ಹಲವು ಕಲೆಗಳು, ರಂಗಭೂಮಿ, ಜಾನಪದ ಮುಂತಾದ ಹಲವು ಕಲೆಗಳಿಗೆ ಕೇರಳವು ತವರೂರಾಗಿದೆ. ಕಥಕ್ಕಲಿ ಮತ್ತು ಮೋಹಿನಿಅಟ್ಟಮ್ ಇವು ಜಗತ್ತಿನಾದ್ಯಂತ ಪ್ರಶಂಸೆಗಳಿಸಿರುವ ಎರಡು ಪ್ರಮುಖ ನೃತ್ಯ ಕಲೆಗಳಾಗಿವೆ. ಇಲ್ಲಿನ ಜನಪ್ರಿಯವಾದ ನೃತ್ಯ ಹಾಗು ರಂಗಕಲೆಯು ವಿವಿಧ ಧಾರ್ಮಿಕ ಭಾವನೆಗಳಿಗೆ ಸಂಬಂಧವನ್ನು ಹೊಂದಿದೆ. ಉದಾಹರಣೆಗೆ ಪರಿಸಮುಟ್ಟು ಮತ್ತು ಚಾವಿಟ್ಟು ನಡಕಮ್ ಕ್ರಿಶ್ಚನ್ನರಿಗೆ, ಒಪ್ಪನಾ ಮುಸ್ಲಿಮರಿಗೆ ಮತ್ತು ಕೂಡಿಯಾಟ್ಟಮ್ ಕಲಾ ವಿವಿಧತೆಯ ದೇವಾಲಯಗಳಲ್ಲಿ ಒಂದಾಗಿದ್ದು ಹಿಂದುಗಳಿಗೆ ಸಂಬಂಧಿಸಿದೆ.

ಕರ್ನಾಟಿಕ್ ಸಂಗೀತ ಕ್ಷೇತ್ರದಲ್ಲಿಯು ಕೇರಳಿಗರು ಪ್ರವೀಣತೆಯನ್ನು ಪಡೆದಿದ್ದಾರೆ. ಸಾಂಪ್ರದಾಯಿಕ ಉಡುಪಾದ ಮುಂಡುವನ್ನು ಸಾಮಾನ್ಯವಾಗಿ ಕೇರಳಿಗರು ತೊಡುತ್ತಾರೆ. ಪುಟ್ಟು, ಇಡಿಯಪ್ಪಮ್, ಉನ್ನಿಅಪ್ಪಮ್, ಪಳದೈ ಪ್ರಥಮನ್ (ಒಂದು ಬಗೆಯ ಪಾಯಸ), ಬನಾನಾ ಚಿಪ್ಸ್, ಮೀನಿನಿಂದ ಮಾಡಲಾದ ಖಾದ್ಯಗಳು ಮತ್ತು ಕೇರಳದ ಪ್ರತ್ಯೆಕವಾದ ಕೆಂಪು ಅನ್ನ, ಸಾಮಾನ್ಯವಾಗಿ ಈ ರಾಜ್ಯದಲ್ಲಿ ಮಾಡಲಾಗುವ ಕೆಲವು ಖಾದ್ಯಗಳಾಗಿವೆ. 'ಸಧ್ಯಾ' ಇದೊಂದು ವಿಶೀಷ್ಟ ಬಗೆಯ ರುಚಿಕರ ಖಾದ್ಯವಾಗಿದ್ದು ಬಾಳೆ ಎಲೆಯ ಮೇಲೆ ಬಡಿಸಲಾಗುತ್ತದೆ.

ಕೇರಳದ ಮಹತ್ತರ ಉತ್ಸವವಾದ ಓಣಂ ನಲ್ಲಿ ತಯಾರಿಸಲಾಗುವ ಓಣಂ ಸಧ್ಯಾ ಇದರ ವಿಸ್ತೃತ ರೂಪವಾಗಿದೆ.ಕೇರಳದಲ್ಲಿ ಕಾಣಬಹುದಾದ ಮೂರು ಪ್ರಮುಖ ಧರ್ಮಗಳೆಂದರೆ ಹಿಂದು, ಕ್ರಿಶ್ಚಿಯನ್ ಮತ್ತು ಇಸ್ಲಾಮ್. ಅನೇಕ ದೇವಾಲಯಗಳಿಗೆ ತವರೂರಾಗಿರುವ ಕೇರಳದಲ್ಲಿ, ದೇವತೆಯಾದ 'ಭಗವತಿ' ಯನ್ನು ಅತ್ಯಂತ ಉತ್ಸಾಹದಿಂದ ಪೂಜಿಸಲಾಗುತ್ತದೆ. ಭಗವತಿ ದೇವಿಗೆ ಸಂಬಂಧಪಟ್ಟಂತೆ ಇಲ್ಲಿ ಚೊಟ್ಟಾನಿಕ್ಕಾರಾ ಭಗವತಿ ದೇವಸ್ಥಾನ, ಕೊಡುಂಗಲ್ಲುರ್ ಭಗವತಿ ದೇವಸ್ಥಾನ, ಮೀಂಕುಲಥಿ ಭಗವತಿ ದೇವಸ್ಥಾನ, ಮಂಗೊಟ್ಟು ಕಾವು ಭಗವತಿ ದೇವಸ್ಥಾನ ಮುಂತಾದವುಗಳು ಪ್ರಸಿದ್ಧವಾಗಿದ್ದು ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಕೇರಳ ಹಾಗು ಸುತ್ತಮುತ್ತಲಿನ ರಾಜ್ಯಗಳಿಂದ ಇಲ್ಲಿಗೆ ಆಗಮಿಸುತ್ತಾರೆ.

ದೇಶದಾದ್ಯಂತ ಜನರಿಂದ ಭೇಟಿ ನೀಡಲ್ಪಡುವ ಕೇರಳದ ಪ್ರಸಿದ್ಧ ದೇವಸ್ಥಾನವೆಂದರೆ ಗುರುವಾಯೂರ್ ಕೃಷ್ಣ ದೇವಸ್ಥಾನ. ಇದಲ್ಲದೆ ಇಡಿ ಭಾರತದಲ್ಲೆ ಪ್ರಖ್ಯಾತಿ ಪಡೆದ ಮತ್ತೊಂದು ದೇವಸ್ಥಾನವೆಂದರೆ ಶಬರಿಮಲ ಅಯ್ಯಪ್ಪ ದೇಗುಲ. ತ್ರಿಶ್ಶುರಿನ ಐರಾನಿಕುಲಂ ಮಹಾದೇವ ದೇವಸ್ಥಾನ, ತಿರುವನಂತಪುರಂ ನ ಪದ್ಮನಾಭಸ್ವಾಮಿ ದೇವಸ್ಥಾನ, ತಿರುವಲ್ಲಾ ಶ್ರೀವಲ್ಲಭ ದೇವಸ್ಥಾನ ಕೇರಳದಲ್ಲಿ ನೋಡಬಹುದಾದ ಇತರೆ ಜನಪ್ರಿಯ ದೇವಸ್ಥಾನಗಳಾಗಿವೆ. ಸಾಮಾನ್ಯವಾಗಿ ಇಲ್ಲಿ ನಡೆಯುವ ಉತ್ಸವಗಳಲ್ಲಿ ಆನೆಗಳನ್ನು ಶೃಂಗರಿಸಿ ಅದರ ಬೆನ್ನ ಮೇಲೆ ದೇವರ ವಿಗ್ರಹಗಳನ್ನು ಇರಿಸಿ ಮೇರವಣಿಗೆಯನ್ನು ಮಾಡಲಾಗುತ್ತದೆ.

ಇದು ಅಕ್ಷರಶಃ ಭಾರತೀಯತೆಯನ್ನು ಎತ್ತಿ ತೋರಿಸುವುದರಲ್ಲಿ ಅನುಮಾನವೆ ಇಲ್ಲ. ಇಲ್ಲಿನ ಹಲವಾರು ಪ್ರಸಿದ್ಧ ದೇವಾಲಯಗಳು ಕೇರಳ ಪ್ರವಾಸೊದ್ಯಮದ ಅಂಗಗಳಾಗಿವೆ.ಇಷ್ಟೆ ಅಲ್ಲ, ಕೇರಳವು ಕಾಲಡಿಯಲ್ಲಿ ಜನಿಸಿದ ಅದ್ವೈತ ಸಿದ್ಧಾಂತ ಮತದ ಸ್ಥಾಪಕರಾದ ಜಗದ್ಗುರು ಆದಿ ಶಂಕರ ಭಗವತ್ಪಾದರ ಹುಟ್ಟು ಸ್ಥಳವು ಆಗಿರುವುದರಿಂದ ಮತ್ತಷ್ಟು ಪಾವಿತ್ರ್ಯತೆಯನ್ನು ಪಡೆಯುತ್ತದೆ.

ಮಲಯತೂರ್ ಚರ್ಚ್, ಕೊಚ್ಚಿಯ ಸಂತ ಫ್ರಾನ್ಸಿಸ್ ಚರ್ಚ್, ಸಂಟಾ ಕ್ರೂಜ್ ಬಾಸಿಲಿಕಾ ಮತ್ತು ಕೊಟ್ಟಾಯಂ ಹತ್ತಿರದ ಸಂತ ಮೇರಿ ಫೊರಾನ್ಸ್ ಚರ್ಚ್ ಕೇರಳದಲ್ಲಿರುವ ಕೆಲವು ಪ್ರಮುಖ ಚರ್ಚ್ ಗಳು. ಪಳಯಂಗಾಡಿ ಮಸೀದಿ, ಮದಾಯಿ ಮಸೀದಿ, ಚೆರಾಮನ್ ಜುಮ್ಮಾ ಮಸೀದಿ, ಕಂಜಿರಮಟ್ಟೊಮ್ ಮಸೀದಿ, ಮಲಿಕ್ ದೀನಾರ್ ಮಸೀದಿ ಇವು ಕೇರಳದಲ್ಲಿರುವ ಮುಸ್ಲಿಮ್ ಸಮುದಾಯದವರ ಕೆಲವು ಪ್ರಮುಖ ಮಸೀದಿಗಳು.  ಪ್ರಾಕೃತಿಕ, ಧಾರ್ಮಿಕ, ವ್ಯಾವಹಾರಿಕ, ರೋಮಾಂಚಕ ಈ ರೀತಿಯಾಗಿ ಎಲ್ಲ ಭಾವನೆಗಳಿಗನುಗುಣವಾಗಿ ತಕ್ಕುದಾದ ತಾಣಗಳನ್ನು ಹೊಂದಿರುವ ಪ್ರದೇಶ ಕೇರಳ. ಇನ್ನು ತಡವೇಕೆ? ಒಮ್ಮೆ ಪ್ರಯಾಣ ಮಾಡಿ, ಅದ್ಭುತ ಆನಂದದ ಅನುಭವವನ್ನು ನಿಮ್ಮದಾಗಿಸಿಕೊಳ್ಳಿ.

Please Wait while comments are loading...