ಪುನಲೂರ್ ಸಸ್ಪೆನ್ಶನ್ ಸೇತುವೆಯನ್ನು ಆಲ್ಬರ್ಟ್ ಹೆನ್ರಿ ಎಂಬುವವರು 1877 ರಲ್ಲಿ ಕಲ್ಲಡ ನದಿಗೆ ಅಡ್ಡಲಾಗಿ ಕಟ್ಟಿಸಿದರು. ವಾಹನಗಳ ಓಡಾಟಕ್ಕೆ ಈ ಸೇತುವೆಯನ್ನು ಕಟ್ಟಿಸಲಾಗಿದ್ದು ಮೇಲೆ ಕೆಳಗೆ ಅಲುಗಾಡುವಂತೆ ಸೇತುವೆಯ ಎರಡೂ ತುದಿಗಳನ್ನು ಕಟ್ಟಲಾಗಿದೆ. ಈ ಸೇತುವೆಯನ್ನು ಪೂರ್ತಿಗೊಳಿಸಲು 6 ವರ್ಷಗಳಿಗೂ ಹೆಚ್ಚು ಸುದೀರ್ಘ ಸಮಯ ತಗುಲಿದೆ. ಮೊದ ಮೊದಲು ಈ ಸೇತುವೆಯ ಮೇಲೆ ನಡೆಯಲು ಜನ ಭಯ ಪಡುತ್ತಿದ್ದರಂತೆ. ಹೀಗಾಗಿ ಇದನ್ನು ಕಟ್ಟಿದ ಇಂಜಿನಿಯರ್ ಮತ್ತವರ ಕುಟುಂಬದವರು ಸೇತುವೆಯ ಮೇಲೆ 6 ಆನೆಗಳನ್ನು ನಡೆಸಿ, ಆ ಆನೆಗಳು ಸೇತುವೆಯ ಮೇಲೆ ನಡೆದಾಡುವಾಗ ಸೇತುವೆಯ ಕೆಳಗಿನಿಂದ ದೇಶೀಯ ದೋಣಿಯಲ್ಲಿ ಹೋಗಿ ಜನರ ನಂಬಿಕೆಯನ್ನು ಗಿಟ್ಟಿಸಿದ್ದರಂತೆ.
ಪುನಲೂರಿನ ಒಂದು ಭಾಗದಲ್ಲಿ ದಟ್ಟವಾದ ಅರಣ್ಯವಿದ್ದು, ಪುನಲೂರಿನ ಮನುಷ್ಯ ವಸಾಹತುಗಳ ಮೇಲೆ ಕಾಡು ಪ್ರಾಣಿಗಳ ಆಕ್ರಮಣವನ್ನು ತಪ್ಪಿಸುವ ಉದ್ದೇಶದಿಂದ ಈ ಸೇತುವೆಯನ್ನು ನಿರ್ಮಿಸಲಾಯಿತು. ಕಾಂಕ್ರೀಟ್ ಸೇತುವೆಯಿಂದ ಪ್ರಾಣಿಗಳು ಊರೊಳಗೆ ಬರು ಸಾಧ್ಯತೆಯಿದ್ದು ತೂಗಾಡುವ ಸೇತುವೆಯಿಂದ ಪ್ರಾಣಿಗಳು ಬರಲು ಸಾಧ್ಯವಿಲ್ಲ. ಕಾರಣವೇನೆಂದರೆ, ಯಾರಾದರೂ ಸೇತುವೆಯ ಮೇಲೆ ನಡೆಯತೊಡಗಿದರೆ ಸೇತುವೆ ಅಲುಗಾಡತೊಡಗುತ್ತದೆ ಮತ್ತಿದರಿಂದ ಪ್ರಾಣಿಗಳು ಭಯಗೊಂಡು ದುರವುಳಿಯುತ್ತವೆ. ಈ ಸೇತುವೆ ನಾಲ್ಕು ಆಳವಾದ ಬಾವಿಗಳಿಂದ ಬೆಂಬಲ ಹೊಂದಿದ್ದು ಸೇತುವೆಯ ಕಬ್ಬಿಣದ ಸರಳುಗಳನ್ನು ಬಾವಿಯ ಕ್ಲಿಪ್ಪಿಗೆ ಜೋಡಿಸಲಾಗಿದೆ. ಎಲ್ಲ ನಾಲ್ಕು ಬಾವಿಗಳೂ ಕೂಡ ಸರಿಸುಮಾರು 100 ಅಡಿಯಷ್ಟು ಆಳವಾಗಿವೆ.