ಮಲಯತ್ತೂರು : ಸಂಸ್ಕೃತಿ ಮತ್ತು ನಿಸರ್ಗದ ಸಮ್ಮಿಳನ

ಮಲಯತ್ತೂರು, ಎರ್ನಾಕುಲಂ ನಲ್ಲಿರುವ ಸಣ್ಣದೊಂದು ಪಟ್ಟಣ. ಈ ಹೆಸರಿಗೆ ಮಲಯಾಳಮ್ ಮೂಲದ ಹಿನ್ನೆಲೆ ಇದೆ. ಮಲ ಎಂದರೆ ಪರ್ವತ ಎಂದರ್ಥ. ಆರ್ ಎಂದರೆ ನದಿ, ಊರ್ ಎಂದರೆ ಸ್ಥಳ ಎಂದರ್ಥ. ಪಶ್ಚಿಮ ಘಟ್ಟಗಳು ಮತ್ತು ಪೆರಿಯಾರ್ ನದಿಯ ಮಧ್ಯೆ ಈ ನಯನಮನೋಹರ ಪಟ್ಟಣವಿದೆ. ಜಲ, ಭೂಮಿ ಮತ್ತು ಪರ್ವತಗಳೆಲ್ಲವೂ ಒಟ್ಟಿಗೆ ಸೇರುವ ಅಪೂರ್ವ ಸ್ಥಳವಿದು.

ಮಲಯತ್ತೂರಿನಲ್ಲಿ ಐತಿಹಾಸಿಕ ಚರ್ಚ್ ಇದೆ. ಇದು ಅತ್ಯಂತ ಜನಪ್ರಿಯ. ಈ ಚರ್ಚ್ ಸಂತ ಥಾಮಸ್‌ರಿಗೆ ಅರ್ಪಿತವಾದದ್ದು. ಮಲಯತ್ತೂರು ಕೇವಲ ಕ್ರಿಶ್ಚಿಯನ್‌ ಪ್ರವಾಸಿಗರ ಕೇಂದ್ರವಲ್ಲ. ಬದಲಿಗೆ ಪ್ರಮುಖ ನೈಸರ್ಗಿಕ ಸೌಂದರ್ಯದ ತಾಣವೂ ಹೌದು. ಸಂತ ಥಾಮಸ್‌ರ ಚರ್ಚ್‌ ಇಲ್ಲಿನ ಪ್ರಮುಖ ಆಕರ್ಷಣೆಯ ತಾಣ. ಅಲ್ಲದೇ ಇನ್ನೂ ಇತರ ಚರ್ಚುಗಳೂ ಇವೆ. ಇವುಗಳಲ್ಲಿ ಪ್ರಮುಖವಾದವುಗಳೆಂದರೆ ಮೇರಿ ಇಮ್ಮಾಕ್ಯುಲೇಟ್‌ ಮತ್ತು ಸಂತ ಸೆಬಾಸ್ಟಿಯನ್ ಚರ್ಚ್. ದುರ್ಗಾ ದೇವಿ ದೇವಸ್ಥಾನವೂ ಕೂಡಾ ಇಲ್ಲಿನ ಪ್ರಮುಖ ಧಾರ್ಮಿಕ ಪ್ರವಾಸಿ ತಾಣಗಳಲ್ಲೊಂದು. ಮಲಯತ್ತೂರಿಗೆ ನೀವು ಪ್ರವಾಸ ಕೈಗೊಂಡಾಗ ಮಹಾಗಣಿ ತೊಟ್ಟಂ ಮತ್ತು ಮೂಲಂಕುಳಿಗೆ ಕೂಡಾ ಪ್ರಯಾಣ ಮಾಡಬಹುದು.

ದೈವೀ ತಾಣದ ಸೌಂದರ್ಯ

ಚರ್ಚ್‌ನಲ್ಲಿ ನಿರಂತರವಾಗಿ ಚಟುವಟಿಕಗಳು ನಡೆಯುತ್ತಲೇ ಇರುತ್ತವೆ. ಹೀಗಾಗಿ ಭಕ್ತರು ಮತ್ತು ಪ್ರವಾಸಿಗರು ವರ್ಷಂಪ್ರತಿ ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಮಳೆಗಾಲದಲ್ಲಿ ಮಾತ್ರ ಇಲ್ಲಿಗೆ ಭೇಟಿ ನೀಡುವುದು ಸೂಕ್ತವಲ್ಲ. ಮಳೆಗಾಲದ ಅವಧಿಯೂ ಹೆಚ್ಚು ಮತ್ತು ಈ ಸಮಯದಲ್ಲಿ ಅತಿಯಾಗಿ ಮಳೆ ಬೀಳುತ್ತದೆ. ಮಲಯತ್ತೂರಿಗೆ ಭೇಟಿ ನೀಡುವದಕ್ಕೆ ಸೂಕ್ತ ಕಾಲವೆಂದರೆ ಚಳಿಗಾಲ. ಈ ಸಂದರ್ಭದಲ್ಲಿ ವಾತಾವರಣ ತುಂಬಾ ಪ್ರಶಾಂತವಾಗಿರುತ್ತದೆ. ಕೊಚ್ಚಿಯಿಂದ ಮಲಯತ್ತೂರಿಗೆ ಸುಮಾರು 47 ಕಿ.ಮೀ ದೂರ. ಸಮೀಪದ ಜಿಲ್ಲೆಗಳಿಂದ ಉತ್ತಮ ಸಂಪರ್ಕವೂ ಈ ಪಟ್ಟಣಕ್ಕಿದೆ.

ಇಲ್ಲಿನ ತಿಂಡಿ ತಿನಿಸುಗಳು ಪಕ್ಕಾ ಮಲಯಾಳಿ ಶೈಲಿಯಲ್ಲಿರುತ್ತದೆ. ಇಲ್ಲಿ ಹಲವು ಸಣ್ಣ ಸಣ್ಣ ಅಂಗಡಿಗಳು, ಕಾಫಿ ಕುಡಿಯಲು ಸ್ಥಳಾವಕಾಶಗಳಿವೆ. ಹಬ್ಬದ ಸಂದರ್ಭದಲ್ಲಂತೂ ಭಕ್ತರು, ಪ್ರವಾಸಿಗರಿಗೆಂದೇ ಹಲವು ಸಣ್ಣ ಸಣ್ಣ ಗೂಡಂಗಡಿಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿರುತ್ತವೆ.

Please Wait while comments are loading...