ಪೊನ್ಮುಡಿ: ಹಚ್ಚ ಹಸಿರಾದ ಗುಡ್ಡಗಳ ತಾಣ

ಪೊನ್ಮುಡಿ ಎಂಬುದು 'ಚಿನ್ನದ ಉತ್ತುಂಗ' (ಗೋಲ್ಡನ್‌ ಪೀಕ್‌) ಎಂಬ ಶಬ್ಧದ ಅಕ್ಷರಶಃ ಭಾಷಾಂತರ. ಈ ಜನಪ್ರಿಯ ಗುಡ್ಡಗಳಿಂದ ಆವೃತ್ತವಾಗಿರುವ ಪ್ರವಾಸಿ ತಾಣ ಇರುವುದು ಕೇರಳ ರಾಜ್ಯದ ತಿರುವನಂತಪುರಂ ಜಿಲ್ಲೆಯಲ್ಲಿ. ಸಮುದ್ರ ಮಟ್ಟದಿಂದ 1100 ಮೀಟರ್‌ ಎತ್ತರದಲ್ಲಿದೆ. ಪಶ್ಮಿಮ ಘಟ್ಟ ಅರಣ್ಯ ಪ್ರದೇಶದ ಸಾಲಿನಲ್ಲಿ ಈ ಭಾಗ ಬರುತ್ತದೆ. ಅತ್ಯಾಕರ್ಷಕ ಹವಾಮಾನ ಹಾಗೂ ಉತ್ತಮ ತಾಣಗಳು ಪೊನ್ಮುಡಿಯನ್ನು ಒಂದು ಪ್ರಸಿದ್ಧ ಪ್ರವಾಸಿ ತಾಣ, ಬೇಸಿಗೆ ಕಾಲದ ರಜಾಕಾಲೀನ ಅವಧಿಯನ್ನು ಕಳೆಯಲು ಸೂಕ್ತ ಪ್ರದೇಶವನ್ನಾಗಿ ರೂಪಿಸಿದೆ.

ತಿರುವನಂತಪುರಂ ಜತೆ ಸಂಪರ್ಕ ಹೊಂದಿರುವ ಈ ಪ್ರದೇಶ ಅತ್ಯಂತ ತಿರುವಿನಿಂದ ಕೂಡಿದ ರಸ್ತೆಯನ್ನು ಹೊಂದಿದೆ. ರಸ್ತೆ ಮಾರ್ಗವಾಗಿ ಸಾಗುವವರಿಗೆ ಅತ್ಯಾಕರ್ಷಕ ಛಾಯಾಚಿತ್ರ ಲಭಿಸುವ ಉತ್ತಮ ಪರಿಸರವನ್ನು ಪೊನ್ಮುಡಿ ಹೊಂದಿದೆ. ಗುಡ್ಡಗಳು ಅತ್ಯಾಕರ್ಷಕ ಹಸಿರನ್ನು ಸಮೃದ್ಧವಾಗಿ ಹೊಂದಿವೆ. ಪ್ರವಾಸಿಗರು ಹಾಗೂ ಪರಿಸರ ಪ್ರೇಮಿಗಳನ್ನು ಇದು ಬಹುವಾಗಿ ಮೆಚ್ಚಿಸುತ್ತದೆ. ಗುಡ್ಡವೇರಿ ಹೋಗುವಾಗ ಅಕ್ಕಪಕ್ಕದ ದೃಶ್ಯಗಳು ಮನ ಸೆಳೆಯುತ್ತವೆ. ಅಲ್ಲದೇ ಈ ಪ್ರದೇಶ ಪ್ರವಾಸಿಗರಿಗೆ ಹಲವಾರು ಅದ್ಭುತಗಳನ್ನು ತೋರಿಸುತ್ತದೆ. ಇದಲ್ಲದೇ ಸಾಹಸಪ್ರಿಯರಿಗೆ ಇದೊಂದು ಅತ್ಯುತ್ತಮ ಟ್ರೆಕ್ಕಿಂಗ್‌ ಹಾಗೂ ಹೈಕಿಂಗ್‌ ತಾಣವಾಗಿ ಕೂಡ ಲಭಿಸುತ್ತದೆ. ಉದ್ದನೇ ಹಾಗೂ ಸುರುಳಿಯಾಕಾರದಲ್ಲಿ ಸುತ್ತುವ ಹೇರ್‌ಪಿನ್‌ ತಿರುವುಗಳು ಪೊನ್ಮುಡಿ ಪ್ರವಾಸವನ್ನು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡುತ್ತವೆ.

ನಿಸರ್ಗದ ಸವಿಗೆ ಹೇಳಿ ಮಾಡಿಸಿದ ತಾಣ

ಈ ಗುಡ್ಡದಿಂದ ಕೂಡಿರುವ ಪ್ರವಾಸಿ ತಾಣದಲ್ಲಿ ಸಾಕಷ್ಟು ಸ್ಥಳಗಳು ವೀಕ್ಷಣೆಗೆ ಹೇಳಿ ಮಾಡಿಸಿದಂತೆ ಇವೆ. ಗುಡ್ಡಗಳ ಸಮೂಹವು  ಕೆರೆ, ಪ್ಲಾಂಟೇಶನ್‌ ಹಾಗೂ ಕಣಿವೆಗಳಿಂದ ಕೂಡಿದ್ದಾಗಿದೆ. ಪೊನ್ಮುಡಿಯ ಪ್ರಮುಖ ಆಕರ್ಷಣೆಗಳೆಂದರೆ ಗೋಲ್ಡನ್‌ ವ್ಯಾಲಿ, ಪೆಪ್ಪರಾ ವನ್ಯಜೀವಿ ತಾಣ, ಮಿನಿ ಜ್ಯೂ ಆಗಿದೆ. ಪಶ್ಚಿಮ ಘಟ್ಟ ಅರಣ್ಯ ಪ್ರದೇಶದ ಅತಿ ಎತ್ತರದ ಪರ್ವತದಲ್ಲಿ ಅಗಸ್ತ್ಯರಕೊಂಡಂ ಒಂದು. ಅತಿ ಹೆಚ್ಚು ಸಂಖ್ಯೆಯ ಪ್ರವಾಸಿಗರು, ಪರಿಸರ ಪ್ರೇಮಿಗಳನ್ನು ತನ್ನತ್ತ ಸೆಳೆಯುತ್ತದೆ. ಇದಲ್ಲದೇ ಮೀನುಮುಟ್ಟಿ ಜಲಪಾತ ಕೂಡ ಪ್ರದೇಶದ ಆಕರ್ಷಣೀಯ ತಾಣ. ಮಳೆಗಾಲದ ಸಂದರ್ಭದಲ್ಲಿ ಸುತ್ತಲಿನ ಸುಂದರ ಹಸಿರು ವಾತಾವರಣದ ನಡುವೆ ದಪ್ಪ ಹಾಲಿನ ಬಣ್ಣದ ನೊರೆಯುಕ್ಕಿಸುತ್ತಾ ಧರೆಗಿಳಿಯುವ ಜಲಪಾತದ ರಮಣೀಯತೆಯನ್ನು ಸವಿಯುವುದೇ ಅಂದ.

ಇದೆಲ್ಲದರ ಜತೆ ಪ್ರಕೃತಿಯ ವಿಹಂಗಮ ನೋಟವೂ ಇಲ್ಲಿ ಪ್ರಮುಖ. ಮುಖ್ಯವಾಗಿ ಪೊನ್ಮುಡಿ ಆಯುರ್ವೇದ ಔಷಧಿ ಪದ್ಧತಿ ಹಾಗೂ ಚಿಕಿತ್ಸೆಗೆ ಅತ್ಯಂತ ಜನಪ್ರಿಯ. ತಿರುವನಂತಪುರಂನಿಂದ ಉತ್ತಮ ರಸ್ತೆ ಸಂಪರ್ಕ ಇಲ್ಲಿಗಿದೆ. ವಾತಾವರಣವೂ ಸದಾ ಆಹ್ವಾನಿಸುವ ರೀತಿಯಲ್ಲೇ ಇರುತ್ತದೆ. ಚಳಿಗಾಲದಲ್ಲಿ ಇಲ್ಲಿಗೆ ತೆರಳುವುದು ಸೂಕ್ತ, ಸಾಹಸ ಕಾರ್ಯಕ್ಕಂತೂ ಇದು ಪ್ರಶಸ್ತ ಸಮಯ.

ಕಣ್ಮನ ಸೆಳೆಯುವ ಜಲಪಾತ, ಮನಸೂರೆಗೊಳ್ಳುವ ಹಸಿರು ಪರಿಸರ, ಉಸಿರಾಟದ ವೇಗ ಹೆಚ್ಚಿಸುವ ಆಕರ್ಷಕ ತಾಣಗಳು, ಅತ್ಯುತ್ತಮ ಟ್ರೆಕ್ಕಿಂಗ್‌ ಅವಕಾಶ ಇರುವುದರಿಂದ ಎಲ್ಲಾ ವಿಧದ ಆಸಕ್ತರ ಪ್ರವಾಸಕ್ಕೆ, ರಜಾದಿನ ಕಳೆಯಲು ಯೋಗ್ಯ ತಾಣ ಎನಿಸಿದೆ.

Please Wait while comments are loading...