ಮಲಪ್ಪುರಂ: ನದಿಗಳು ಮತ್ತು ಸಂಸ್ಕೃತಿಗಳ ತಾಣ

ಕೇರಳದ ಉತ್ತರದ ಜಿಲ್ಲೆಯಾಗಿರುವ ಮಲಪ್ಪುರಂ ತನ್ನ ಶ್ರೀಮಂತ ಸಂಸ್ಕೃತಿ, ಐತಿಹಾಸಿಕ ಮಹತ್ವ ಮತ್ತು ಗಮನಾರ್ಹ ಪರಂಪರೆಯಿಂದಾಗಿ ಬಹಳ ಹೆಸರುವಾಸಿಯಾಗಿದೆ . ಮಲಪ್ಪುರಂ ಎಂದರೆ ಮಲೆಯಾಳಂ ಭಾಷೆಯಲ್ಲಿ "ಗುಡ್ಡದ ತುದಿ " ಎಂದರ್ಥ. ಈ ಹೆಸರನ್ನು ಸಮರ್ಥಿಸಿಕೊಳ್ಳುವಂತೆ  ಮಲಪ್ಪುರಂ ಪ್ರದೇಶವು ಸಣ್ಣ ಸಣ್ಣ ಗುಡ್ಡಗಳು ಹಾಗೂ ದಿಬ್ಬಗಳಿಂದ ಕೂಡಿರುವುದು ವಿಶೇಷ . ಪ್ರಾಚೀನ ಕಾಲದಿಂದ ಇತ್ತೀಚಿನವರೆಗಿನ  ಇತಿಹಾಸವನ್ನು ನೋಡಿದಾಗ ,ಈ  ಪ್ರದೇಶವು ಸಂಸ್ಕೃತಿ, ಧರ್ಮ, ಆರ್ಥಿಕತೆ ಹಾಗೂ ಕೇರಳದ ಪ್ರವಾಸೋದ್ಯಮಕ್ಕೆ  ವ್ಯಾಪಕ ಕೊಡುಗೆ ನೀಡಿರುವುದು ತಿಳಿದುಬರುತ್ತದೆ. ಜಿಲ್ಲೆಯು ತನ್ನ  ಗಲ್ಫ್ ವಲಸಿಗರಿಂದಾಗಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಆರ್ಥಿಕ ಚೇತರಿಕೆ ಕಾಣುತ್ತಿರುವ ಕಾರಣ  ದೇಶಾದ್ಯಂತ ಹಲವು ಅರ್ಥಶಾಸ್ತ್ರಜ್ಞರ ಗಮನ ಸೆಳೆಯುತ್ತಿದೆ.

ಚಾಲಿಯಾರ್ , ಭಾರತಪುಳಾ ಮತ್ತು  ಕಡಲುಂಡಿ ಎಂಬ ಮೂರು ನದಿಗಳು  ಮಲಪ್ಪುರಂನ ಭೂಮಿಯುದ್ದಕ್ಕೂ ತಮ್ಮ ಹರಿವಿನೊಂದಿಗೆ  ಮಣ್ಣು ಮತ್ತು ಸಂಸ್ಕೃತಿಗಳೆರಡನ್ನೂ  ಸಮೃದ್ಧಗೊಳಿಸುತ್ತ ಸಾಗಿವೆ. ಈ ಪ್ರದೇಶವು ಪ್ರಾಚೀನ ಕಾಲದಲ್ಲಿ ಕಲ್ಲೀಕೋಟೆ (ಕ್ಯಾಲಿಕಟ್) ಯ ರಾಜರ  ಪ್ರಬಲ ಸೇನೆಯಾದ ಜಾಮೋರಿನ್ಗಳ  ಪ್ರಧಾನ ಕಛೇರಿಯನ್ನು ಹೊಂದಿತ್ತು. ಖಿಲಾಫತ್ ಚಳವಳಿ ಮತ್ತು ಮಾಪ್ಪಿಲಾ ಬಂಡಾಯವಾಗಿದ್ದ ಸ್ಥಳವೆಂದು ಭಾರತೀಯ ರಾಷ್ಟ್ರೀಯತೆಯ ಇತಿಹಾಸದಲ್ಲಿ ಈ ಜಿಲ್ಲೆಯನ್ನು  ಗುರುತಿಸಲಾಗಿದ್ದು, ಇದು ಒಂದು ಮುಸ್ಲಿಂ ನೃತ್ಯ ಕಲೆಯಾದ ಒಪ್ಪಾನದ ಜನ್ಮಭೂಮಿಯೂ ಆಗಿದೆ.

ವಿಭಿನ್ನ ಸಂಪ್ರದಾಯಗಳು ಮತ್ತು ವಿಶಿಷ್ಟ ಆಕರ್ಷಣೆಗಳು

ಮಲಪ್ಪುರಂದ ಸಣ್ಣ ಪಟ್ಟಣಗಳು ಕೇರಳದ ರಾಜಕೀಯ, ಸಾಂಸ್ಕೃತಿಕ, ಸಾಹಿತ್ಯಿಕ ಸಂಪ್ರದಾಯಗಳಲ್ಲಿ ಸಾಟಿಯಿಲ್ಲದಷ್ಟು ಕೊಡುಗೆಗಳನ್ನು ನೀಡಿವೆ. ಮಧ್ಯಕಾಲೀನ ಯುಗದಲ್ಲಿ ತಿರುನವಯವು ವೈದಿಕ ಶಿಕ್ಷಣಕ್ಕೆ ಹಾಗು ಕೊಟ್ಟಕ್ಕಲ್ ಸಂಪ್ರದಾಯಿಕ ವೈದ್ಯಕೀಯ ಆಯುರ್ವೇದ ಶಿಕ್ಷಣದ ಕೇಂದ್ರವಾಗಿದ್ದವು. ಪೊನ್ನಾನಿ (ಇಸ್ಲಾಂ ಕಲಿಕೆಯ ಪ್ರಾಚೀನ ಕೇಂದ್ರ) ಮತ್ತು ನಿಲಂಬೂರ್(ದೇಶದ ತೇಗದ ನಗರ ಎಂದು ಹೆಸರುವಾಸಿಯಾದ)ಗಳು ವಿಶ್ವಾದ್ಯಂತ ಪ್ರಶಂಸೆ ಗಳಿಸಿ ಕೊಟ್ಟಿವೆ.

ಕಡಲುಂಡಿ ಪಕ್ಷಿಧಾಮ ,ಕೇರಳದೇಶಪುರಂ ದೇವಾಲಯ ಮತ್ತು ತಿರುನವಯ ದೇವಾಲಯಗಳು ಮಲಪ್ಪುರಂನಲ್ಲಿನ ನೋಡತಕ್ಕ ತಾಣಗಳಾಗಿವೆ.  ಜುಮಾ ಮಸೀದಿ, ಮನ್ನೂರ್ ಶಿವ ದೇವಸ್ಥಾನ, ಥಿರುಪ್ಪುರಂಹಕ ದೇವಾಲಯ ಮತ್ತು  ವೆಟ್ಟಕೊರುಮಕಂ ದೇವಾಲಯ ಇವೇ ಹಲವಾರು ದೇವಾಲಯಗಳು ಹಾಗೂ ಮಸೀದಿಗಳು  ಮಲಪ್ಪುರಂನಲ್ಲಿವೆ. ಕೊಟ್ಟಕ್ಕುನ್ನುನಲ್ಲಿನ ಬೆಟ್ಟದ ಉದ್ಯಾನ, ಬಿಯ್ಯಂ ಸರೋವರ ಮತ್ತು ನದಿತಟದ ಉದ್ಯಾನವಾದ ಶಾಂತಿತೀರಂ ಗಳು ಪ್ರವಾಸೋದ್ಯಮ ದೃಷ್ಟಿಯಿಂದ ಸಾವಿರಾರು ಜನರನ್ನು ತಮ್ಮತ್ತ ಸೆಳೆಯುತ್ತವೆ.

ವರ್ಷವಿಡೀ ಪ್ರಯಾಣಕ್ಕೆ ಅನುಕೂಲವಾಗುವಂತೆ ಮಲಪ್ಪುರಂ  ರಸ್ತೆ, ರೈಲು ಮತ್ತು ವಾಯುಮಾರ್ಗಗಳ ಮೂಲಕ ವಿವಿಧ ಸ್ಥಳಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಈ ಪ್ರದೇಶದ ಹವಾಗುಣವೂ  ಮಧ್ಯಮಸ್ಥಿತಿಯಲ್ಲಿರುವದರಿಂದ ಸುತ್ತಮುತ್ತಲ ಪ್ರದೇಶಗಳಿಗೆ ಭೇಟಿನೀಡಲು ಸೂಕ್ತವಾಗಿದೆ. ಮುಸ್ಲಿಂ ಜನಸಂಖ್ಯೆಯ ಪ್ರಾಬಲ್ಯ , ಅರೇಬಿಕ್ ಮತ್ತು ಸಾಂಪ್ರದಾಯಿಕ ಕೇರಳಿಗರ ರುಚಿಗಳನ್ನು ಒಗ್ಗೂಡಿಸಿ ಜಿಲ್ಲೆಯಲ್ಲಿ ಒಂದು ಅದ್ಭುತ ಆಹಾರ ಸಂಸ್ಕೃತಿ ಬೆಳೆದುಬಂದಿದೆ. ನೈಸರ್ಗಿಕ ಸೌಂದರ್ಯ, ಘಟನೆಗಳುಳ್ಳ ಇತಿಹಾಸ, ಮಲಪ್ಪುರಂದ ವಿಲಕ್ಷಣ ಪಾಕಪದ್ಧತಿಗಳು ಪ್ರಕೃತಿ ಪ್ರಿಯರ , ಇತಿಹಾಸ ಪ್ರೇಮಿಗಳ ಮತ್ತು ಭೋಜನ ಪ್ರಿಯರ ಎಲ್ಲ ನಿರೀಕ್ಷೆಗಳನ್ನೂ ಪೂರೈಸುತ್ತದೆ.

Please Wait while comments are loading...