ತೆಕ್ಕಡಿ - ನೈಸರ್ಗಿಕ ಸಿರಿ

ಕೇರಳದ ಪ್ರವಾಸೀ ತಾಣಗಳ ಸಾಲಿನಲ್ಲಿ ಇಡುಕ್ಕಿ ಜಿಲ್ಲೆಯ ತೆಕ್ಕಡಿ ಅತ್ಯಂತ ಮಹತ್ವವುಳ್ಳದ್ದಾಗಿದೆ. ಇಲ್ಲಿನ ಪೆರಿಯಾರ್ ವನ್ಯಮೃಗಧಾಮ ಇಲ್ಲಿನ ಪ್ರಮುಖ ಕೇಂದ್ರ. ಚಾರಣ ಪ್ರಿಯರು,  ನಿಸರ್ಗ ಪ್ರೇಮಿಗಳು, ವನ್ಯಜೀವಿಗಳ ಬಗ್ಗೆ ಕೂತೂಹಲಿಗಳು, ಸಾಹಸ ಪ್ರೀಯರು, ಹಾಗೂ ಛಾಯಾಚಿತ್ರ ಪ್ರೇಮಿಗಳು ಇಲ್ಲಿಗೆ ಭೇಟಿ ನೀಡಬಹುದು. ಕೇರಳ ಮತ್ತು ತಮಿಳುನಾಡು ಗಡಿಯಲ್ಲಿ ತೆಕ್ಕಡಿ ಇದ್ದು, ಎರಡೂ ರಾಜ್ಯಗಳ ವಿಶಿಷ್ಟ ಸಂಸ್ಕೃತಿ ಮತ್ತು ಪರಂಪರೆಯನ್ನು ಇದು ಹೊಂದಿದೆ. ತೆಕ್ಕಡಿಗೆ ವನ್ಯಮೃಗಗಳನ್ನು ನೋಡುವ ಸಲುವಾಗಿಯೇ ದೇಶ-ವಿದೇಶಗಳಿಂದ ಪ್ರತೀ ವರ್ಷ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ.

ವಿರಾಮದ ಆರಾಮ ತಾಣ

ಇಲ್ಲಿನ ಗಿರಿಧಾಮಗಳು ಹಾಗೂ ಅಭಯಾರಣ್ಯಗಳು ಈ ಪ್ರದೇಶಕ್ಕೆ ಪ್ರವಾಸೀ ಮೆರಗನ್ನು ತಂದುಕೊಟ್ಟಿದ್ದು, ಇಲ್ಲಿನ ಅನನ್ಯ ಭೌಗೋಳಿಕ ಮಾದರಿ ಉತ್ತಮ ರಚನೆ ಹೊಂದಿದೆ. ಗಿರಿ ನೆತ್ತಿಯ ಮೇಲೆ ನಿಂತು ಸುತ್ತಲಿನ ಕಣಿವೆಗಳು, ಕಣ್ಣು ನೆಟ್ಟಷ್ಟೂ ದೂರ ಕಾಣುವ ಪರ್ವತ ಶ್ರೇಣಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಇಲ್ಲಿ ಮಸಾಲೆ ಪದಾರ್ಥಗಳನ್ನು ಬೆಳೆಯಲಾಗುತ್ತಿದ್ದು, ಅದರ  ಸುವಾಸನೆ ಪ್ರವಾಸಿಗರಲ್ಲಿ ಮತ್ತೆ ಮತ್ತೆ ಭೇಟಿ ನೀಡಬೇಕೆಂಬ ಭಾವನೆಯನ್ನು ಹುಟ್ಟಿಸುತ್ತದೆ. ತೆಕ್ಕಡಿಯ ಅಂಕುಡೊಂಕಾದ ಬೆಟ್ಟಗಳ ಸಾಲು ಛಾಯಾಗ್ರಹಣ ಪ್ರಿಯರಿಗೆ ಸ್ವರ್ಗಸದೃಶವಾದದ್ದು. ತಂಪಾದ ಹವಾಮಾನ, ಉತ್ತಮ ರೆಸಾರ್ಟುಗಳು ಮತ್ತು ಹೋಂಸ್ಟೇಗಳು ಪ್ರವಾಸಿಗರಿಗೆ ವಸತಿಯ ಅನುಕೂಲವನ್ನು ಸೃಷ್ಟಿಸಿವೆ. ಚಾರಣದ ದಾರಿಯಲ್ಲಿ ಕಾಣಸಿಗುವ ಸರ್ಪಗಳು, ಕಾಡು ಪ್ರಾಣಿಗಳು ಹೊಸ ಅನುಭವಗಳನ್ನು ನೀಡುತ್ತವೆ. ಬಂಡೆ ಹತ್ತುವುದು, ಬಿದಿರಿನ ತೆಪ್ಪ ಸವಾರಿಯಂತಹ ಅನೇಕ ಮನರಂಜನೆ ಚಟುವಟಿಕೆಗಳು ಇಲ್ಲಿನ ಮುಖ್ಯ ಆಕರ್ಷಣೆಯಾಗಿದ್ದು ಯಾಂತ್ರಿಕ ಜೀವನದ ಜಂಜಾಟಗಳಿಂದ ಮುಕ್ತಿ ಕೊಡುತ್ತದೆ.

ಪವಿತ್ರ ಅಭಯಾರಣ್ಯ...

ತೆಕ್ಕಡಿ ಪ್ರದೇಶವು ಪೆರಿಯಾರ್ ವನ್ಯಜೀವಿ ಅಭಯಾರಣ್ಯ ಎಂದು ವಿಶ್ವಪ್ರಸಿದ್ಧವಾಗಿದೆ. ತೆಕ್ಕಡಿ ಅಭಯಾರಣ್ಯದ ದಟ್ಟವಾದ ನಿತ್ಯಹರಿದ್ವರ್ಣದ ಕಾಡುಗಳಲ್ಲಿ ಆನೆ, ಜಿಂಕೆ, ಹುಲಿ, ಕಾಡು ಹಂದಿ, ಸಿಂಹ, ಬಾಲದ ಕೋತಿ, ಮಲಬಾರ್ ಜೈಂಟ್ ಅಳಿಲು ಮತ್ತು ನೀಲಗಿರಿ ಮುಸುವಗಳು ಮುಂತಾದ ಅಪರೂಪದ ವನ್ಯಪ್ರಾಣಿಗಳು ಕಾಣಸಿಗುತ್ತವೆ. 1978 ರಲ್ಲಿ  ಪೆರಿಯಾರ್ ವನ್ಯಜೀವಿಗಳ ಅಭಯಾರಣ್ಯವು ಟೈಗರ್ ರಿಸರ್ವ್ ಮತ್ತು ನ್ಯಾಶನಲ್ ಪಾರ್ಕ್ ಎಂದು ಅಧಿಕೃತ ಸ್ಥಾನಮಾನವನ್ನು ಪಡೆಯಿತು. ಪೆರಿಯಾರ್ ನದಿಗೆ ಅಡ್ಡಲಾಗಿ ನಿರ್ಮಿಸಿದ ಒಂದು ಕೃತಕ ಸರೋವರವು ಒಂದು ಅತ್ಯುತ್ತಮ ಬೋಟಿಂಗ್ ಸೌಲಭ್ಯ ಒದಗಿಸುವುದಲ್ಲದೆ ಪ್ರವಾಸಿಗರು ಆನೆ ಹಿಂಡುಗಳ ಅಪರೂಪದ ದೃಷ್ಟಿ ಛಾಯಾಚಿತ್ರ ವೀಕ್ಷಿಸುತ್ತಾ ಸರೋವರದಲ್ಲಿ ಕಾಲ ಕಳೆಯಬಹುದು.

ಮಂಗಳಾ ದೇವಿ ದೇವಾಲಯ, ವಿಶ್ವ ಪ್ರಸಿದ್ಧ ಸಮರ ಕಲೆ ಕಲರಿ ಕೇಂದ್ರ, ಅಬ್ರಹಾಂ ನ ಸ್ಪೈಸ್ ಗಾರ್ಡನ್ ತೆಕ್ಕಡಿಯ ಪ್ರಮುಖ ಆಕರ್ಷಣೆಗಳಾಗಿವೆ. ವಂದನ್ಮೆಡು ಪಾಳೆಯಲ್ಲಿನ  ಪ್ಲಾಂಟೇಶನ್ ರೆಸಾರ್ಟ್ ವಿಶ್ವದ ಅತಿದೊಡ್ಡ ಏಲಕ್ಕಿ ನಿರ್ಮಾಪಕ ಎಂದು ಪ್ರಸಿದ್ಧವಾಗಿದ್ದು ಪ್ರತಿ ವರ್ಷ ಇಲ್ಲಿ ಲಕ್ಷಾಂತರ ಜನ ಭೇಟಿ ನೀಡುತ್ತಾರೆ. ತೆಕ್ಕಡಿಯು ಮೆಣಸುಗಳು ಹಾಗೂ ದಾಲ್ಚಿನ್ನಿ, ಮೆಂತ್ಯ, ಬಿಳಿ ಮತ್ತು ಹಸಿರು ಮೆಣಸು, ಏಲಕ್ಕಿ, ಜಾಯಿಕಾಯಿ, ಲವಂಗ, ಮರಾಟಿ ಮೊಗ್ಗು ಮತ್ತು ಕೊತ್ತುಂಬರಿ ಹೀಗೆ ಅನೇಕ ಬಗೆಯ ಪ್ರೀಮಿಯಂ ಗುಣಮಟ್ಟದ ಮಸಾಲೆಗಳ ತವರೂರಾಗಿದೆ. ಸಾಂಪ್ರದಾಯಿಕ ಪಾಕಪದ್ಧತಿಗಳು ಮತ್ತು ಕೇರಳದ ಆಹಾರದ ರುಚಿಗಳಿಗೆ ದೇಶ-ವಿದೇಶದ ಜನರೂ ಕೂಡ ಮಾರುಹೋಗುತ್ತಾರೆ.

ತೆಕ್ಕಡಿ ಪ್ರದೇಶದ ತಂಪಾದ ಹವಾಮಾನವು ಅದನ್ನು  ಉತ್ತಮ ರಜಾ ಸ್ಪಾಟ್ ಆಗಿಸಿದೆ. ತೆಕ್ಕಡಿಗೆ ಕೇರಳ, ತಮಿಳುನಾಡು, ಮಧುರೈ, ಕುಂಭಕೋಣಮ್, ಕೊಚ್ಚಿ (165 ಕಿಮೀ), ಕೊಟ್ಟಾಯಂ (120 ಕಿಮೀ), ಎರ್ನಾಕುಲಂ ಮತ್ತು ತಿರುವನಂತಪುರಂ (250 ಕಿಮೀ) ಸೇರಿದಂತೆ ಅನೇಕ ಸ್ಥಳಗಳಿಂದ ಬಸ್ ಸೌಲಭ್ಯ ಲಭ್ಯವಿದೆ. ತೆಕ್ಕಡಿ  ಪ್ರವಾಸಿ ಹಾಟ್ಸ್ಪಾಟ್ ಎಂದು ಪ್ರಖ್ಯಾತಿ ಪಡೆದಿದೆ. ಇಲ್ಲಿ ವಸತಿ ಸೌಕರ್ಯಕ್ಕೆ ಬಜೆಟ್ ಹೋಟೆಲ್ಲುಗಳು  ಅವರವರ ಬಜೆಟ್ಟಿಗೆ ತಕ್ಕಂತೆ ಲಭ್ಯವಿದೆ.

 

Please Wait while comments are loading...