ಪಾಲಕ್ಕಾಡ್ - ಭತ್ತದ ಕಣಜದಲ್ಲಿ ವಿಹರಿಸಿ.

ಪಾಲಕ್ಕಾಡ್ ಎಂಬುದು ಕೇರಳ ರಾಜ್ಯದಲ್ಲಿರುವ ಒಂದು ಜಿಲ್ಲೆಯಾಗಿದೆ. ಆಂಗ್ಲ ಭಾಷೆಯಲ್ಲಿ ಪಾಲ್ಗಾಟ್ ಎಂದು ಕರೆಯಲ್ಪಡುವ ಈ ಜಿಲ್ಲೆಯು ಅಂಕು ಡೊಂಕಾಗಿ ಹರಡಿಕೊಂಡಿರುವ ಪಶ್ಚಿಮ ಘಟ್ಟ ಶ್ರೇಣಿಯ ಗುಂಟ ನೆಲೆಸಿದೆ. ಪಾಲಕ್ಕಾಡನ್ನು ಕೇರಳದ ಇನ್ನಿತರ ಪ್ರಾಂತ್ಯಗಳೊಂದಿಗೆ ಪ್ರತ್ಯೇಕಿಸುವ ಅಂಶವೆಂದರೆ, ಅದು ಇಲ್ಲಿನ ಗ್ರಾಮೀಣ ಪರಿಸರ ಮತ್ತು ವಿಸ್ತಾರವಾಗಿ ಹರಡಿಕೊಂಡಿರುವ ಗದ್ದೆಗಳು. ಅನಂತವಾಗಿ ಬೆಳೆದಿರುವ ತೆಂಗಿನ ತೋಟಗಳು, ಹಸಿರು ಹೊದ್ದ ಭೂಭಾಗಗಳು, ದಟ್ಟವಾದ ಉಷ್ಣವಲಯದ ಕಾಡುಗಳು ಮತ್ತು ಕಲುಷಿತವಲ್ಲದ ಬೆಟ್ಟಗಾಡು ಪ್ರದೇಶಗಳೆಲ್ಲವು ಕೂಡಿ ಪಾಲಕ್ಕಾಡನ್ನು ನೋಡುಗರಿಗೆ ದೃಶ್ಯವೈಭವವನ್ನೆ ಕಣ್ಮುಂದೆ ತರುತ್ತವೆ. ಕೇರಳದ ಭತ್ತದ ಉತ್ಪಾದನೆಗೆ ಗಣನೀಯವಾಗಿ ಕೊಡುಗೆ ಸಲ್ಲಿಸುತ್ತಿರುವ ಪಾಲಕ್ಕಾಡ್ ನಿಸ್ಸಂದೇಹವಾಗಿ ಎರಡು ಬಿರುದುಗಳನ್ನು ತನ್ನದಾಗಿಸಿಕೊಂಡಿದೆ. ಅದರಲ್ಲಿ ಒಂದು "ಕೇರಳದ ಭತ್ತದ ಕಣಜ" ಮತ್ತು ಇನ್ನೊಂದು "ಕೇರಳದ ಧಾನ್ಯದ ಉಗ್ರಾಣ"

ಸಂಪ್ರದಾಯಗಳ ಸಮ್ಮಿಲನ

ಪಾಲ್ಘಾಟ್ ಗ್ಯಾಪ್ ಎಂದು ಕರೆಯಲ್ಪಡುವ ಪಾಲಕ್ಕಾಡ್ ಪ್ರಾಂತ್ಯವು ಪಶ್ಚಿಮ ಘಟ್ಟದಲ್ಲಿ ಕಂಡು ಬರುವ ಒಂದು ಸ್ವಾಭಾವಿಕ ರಹದಾರಿಯಾಗಿದ್ದು, ಕೇರಳವನ್ನು ನೆರೆಯ ತಮಿಳುನಾಡಿನೊಂದಿಗೆ ಸಂಪರ್ಕಿಸುವ ಪ್ರವೇಶ ದ್ವಾರವಾಗಿದೆ. ಕೇರಳದ ಇನ್ನಿತರ ಪ್ರದೇಶಗಳಂತಲ್ಲದೆ ಪಾಲಕ್ಕಾಡ್ ತಮಿಳು ಭಾಷಿಕರ ಜನಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ಹೊಂದಿದೆ. ಹೀಗಾಗಿ ಇಲ್ಲಿ ಒಂದು ಮಿಶ್ರ ಸಂಸ್ಕೃತಿಯ ಏಳಿಗೆಯು ಸಹಜವಾಗಿ ಆಗಿದೆ. ತಮಿಳು ನಾಡಿನ ಸಾಮೀಪ್ಯವು ಇಲ್ಲಿ ಕೇವಲ ಸಂಸ್ಕೃತಿಯ ಮೇಲಷ್ಟೇ ಅಲ್ಲದೆ ಇಲ್ಲಿನ ಆಹಾರ ಶೈಲಿಯ ಮೇಲು ಪ್ರಭಾವವನ್ನು ಬೀರಿದೆ. ಹಾಗಾಗಿ ಇಲ್ಲಿ ವಿಭಿನ್ನವಾದ ಕೇರಳ ಮತ್ತು ತಮಿಳು ನಾಡಿನ ರುಚಿಗಳ ಸಂಯೋಜನೆ ಹೊಂದಿರುವ ಆಹಾರಶೈಲಿಯನ್ನು ನಾವು ಕಂಡು ಸವಿಯಬಹುದು.

ಪಾಲಕ್ಕಾಡ್‍ನಲ್ಲಿನ ಅನುಪಮವಾದ ಸಾಂಸ್ಕೃತಿಕ ಇತಿಹಾಸದ ಎರಡು ಪ್ರಮುಖ ಅಂಶಗಳೆಂದರೆ, ಒಂದು ಇಲ್ಲಿನ ದೇವಾಲಯಗಳಲ್ಲಿ ನಡೆಯುವ ಉತ್ಸವಗಳು ಮತ್ತು ಎರಡನೆಯದು ಶುದ್ಧವಾದ ಕರ್ನಾಟಕ ಶಾಸ್ತ್ರೀಯ ಸಂಗೀತದ  ಪರಂಪರೆಯನ್ನು ಇಲ್ಲಿ ಉಳಿಸಿಕೊಂಡು ಬರಲಾಗಿದೆ. ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವಾಂಸರಾದ ಚೆಂಬೈ ವೈಧ್ಯನಾಥ ಭಾಗವತರ್ ಮತ್ತು ಪಾಲಕ್ಕಾಡ್ ಮಣಿ ಐಯ್ಯರ್ ರವರ ಜನ್ಮಸ್ಥಳವಾಗಿರುವ ಪಾಲಕ್ಕಾಡ್ ದೇಶಾದ್ಯಂತ ಸಂಗೀತಪ್ರಿಯರ ವಲಯದಲ್ಲಿ ಮನ್ನಣೆಗೆ ಪಾತ್ರವಾಗಿದೆ.

ಪ್ರವಾಸಿಗರ ಸ್ವರ್ಗ

ಪಾಲಕ್ಕಾಡ್ ಹಲವಾರು ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿದೆ. ಕೋಟೆಗಳು, ದೇವಾಲಯಗಳು, ಜಲಾಶಯಗಳು, ವನ್ಯಜೀವಿಧಾಮಗಳು, ಜಲಪಾತಗಳು, ಉದ್ಯಾನವನಗಳು ಮತ್ತು ನಯನ ಮನೋಹರ ಭೂಭಾಗಗಳನ್ನು ಹೊಂದಿರುವ ಪಾಲಕ್ಕಾಡ್ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ. ಪಾಲಕ್ಕಾಡ್ ಕೋಟೆ ಮತ್ತು ಜೈನ ದೇವಾಲಯಗಳು ಇತಿಹಾಸ ಆಸಕ್ತರನ್ನು ಮತ್ತು ಪ್ರವಾಸಿಗರನ್ನು ತನ್ನತ್ತ ವರ್ಷಪೂರ್ತಿ ಸೆಳೆಯುತ್ತಿರುತ್ತವೆ. ಮಲಂಪುಳಂ ಜಲಾಶಯ ಮತ್ತು ಉದ್ಯಾನವನಗಳು, ಮನೋರಂಜನಾ ಉದ್ಯಾನವನಗಳು ಈ ಪ್ರಾಂತ್ಯದಲ್ಲಿ ನೆಲೆಗೊಂಡಿದ್ದು, ಪಾಲಕ್ಕಾಡನ್ನು ವಿಹಾರಕ್ಕೆ ಹೇಳಿ ಮಾಡಿಸಿದ ತಾಣವನ್ನಾಗಿ ಪರಿವರ್ತಿಸಿವೆ.

ನೆಲ್ಲಿಯಂಪತಿ ಗಿರಿಧಾಮ, ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ ಮತ್ತು ಪರಂಬಿಕ್ಕುಲಂ ವನ್ಯಧಾಮಗಳು ಪರಿಸರ ಪ್ರಿಯರಿಗೆ ಮತ್ತು ವನ್ಯಜೀವಿ ಆಸಕ್ತರಿಗೆ ರಜಾ ದಿನಗಳನ್ನು ಕಳೆಯಲು ಹೇಳಿ ಮಾಡಿಸಿದ ತಾಣಗಳಾಗಿವೆ. ಕಂಜಿರಪುಳ, ಧೋನಿ ಜಲಪಾತ, ಒಟ್ಟಪಲಂ, ಕೊಲ್ಲೆಂಗೋಡ್ ಅರಮನೆ ಮತ್ತು ತೆಂಕುರುಸ್ಸಿಗಳೆಲ್ಲವು ಇಲ್ಲಿನ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಾಗಿದ್ದು, ಪ್ರವಾಸಿಗರನ್ನು ತಮ್ಮತ್ತ ಕೈಬೀಸಿ ಕರೆಯುತ್ತಿವೆ.

ಪಾಲಕ್ಕಾಡ್ ಸುಖಕರವಾದಂತಹ ರೈಲು ಮತ್ತು ರಸ್ತೆ ಮಾರ್ಗವನ್ನು ಹೊಂದಿದೆ. ಈ ಪ್ರಾಂತ್ಯದ ಹವಾಗುಣವು ಬೇಸಿಗೆಯನ್ನು ಹೊರತುಪಡಿಸಿ ವರ್ಷದ ಎಲ್ಲಾ ಕಾಲವು ಅತ್ಯಂತ ಹಿತಕರವಾಗಿರುತ್ತದೆ. ಅಪರೂಪದ ಸಂಪ್ರದಾಯಗಳ ಸಮ್ಮಿಲನ, ನಯನ ಮನೋಹರ ಭೂ ಪ್ರದೇಶಗಳು, ಪ್ರತ್ಯೇಕತೆಯಿಂದ ಕೂಡಿರುವ ಪ್ರವಾಸಿ ತಾಣಗಳು ಮತ್ತು ವರ್ಣಮಯ ಉತ್ಸವಗಳೆಲ್ಲವು ಕೂಡಿ ಪಾಲಕ್ಕಾಡನ್ನು ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣವನ್ನಾಗಿ ಮಾಡಿವೆ.

Please Wait while comments are loading...