ಮಹಾಬಲಿಪುರಂ - ಸಮುದ್ರ ತೀರದ ಅತ್ಯದ್ಭುತ ತಾಣ.

ಪ್ರಸ್ತುತ ತಮಿಳುನಾಡು ರಾಜ್ಯದ ಕಾಂಚೀಪುರಂ ಜಿಲ್ಲೆಯಲ್ಲಿನ ಮಹಾಬಲಿಪುರಂ ಅಥವಾ ಅಧಿಕೃತವಾಗಿ ಮಾಮಲ್ಲಪುರಂ ಎಂದು ಕರೆಯಲ್ಪಡುವ ಪಟ್ಟಣವು 7ನೇ ಶತಮಾನದಲ್ಲಿ ಪಲ್ಲವ ಸಾಮ್ರಾಜ್ಯದ ಒಂದು ರೇವು ಪಟ್ಟಣವಾಗಿತ್ತು. ಈ ಊರು ಏಳನೆ ಮತ್ತು ಒಂಬತ್ತನೇ ಶತಮಾನದ ಹಲವಾರು ಮಹತ್ವದ ಸ್ಮಾರಕಗಳಿಗೆ ನೆಲೆವೀಡಾಗಿದೆ. ಈ ಎಲ್ಲಾ ಐತಿಹಾಸಿಕ ಸ್ಮಾರಕಗಳ ಸಲುವಾಗಿ ಈ ಊರಿಗೆ ಯುನೇಸ್ಕೋ ವಿಶ್ವ ಪಾರಂಪರಿಕ ತಾಣವೆಂಬ ಸ್ಥಾನಮಾನ ದೊರೆತಿದೆ.

ಮಹಾಬಲಿಪುರಂ ಕೋರಮಂಡಲ್ ತೀರದಲ್ಲಿ ಬಂಗಾಳಕೊಲ್ಲಿಗೆ ಅಭಿಮುಖವಾಗಿ ನಿಂತಿದೆ. ಸುಮಾರು ಕ್ರಿ.ಶ. 650 ರಿಂದ 750 ರವರೆಗೆ  ಪಲ್ಲವರ ಕಾಲದಲ್ಲಿ ಸುವರ್ಣಯುಗವನ್ನು ಕಂಡ ಮಹಾಬಲಿಪುರಂ ಈ ಅವಧಿಯಲ್ಲಿ ಕಲೆ, ವಾಸ್ತುಶಿಲ್ಪ, ಸಾಹಿತ್ಯ, ನಾಟಕ ಮತ್ತು ಹಲವಾರು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಣನೀಯ ಅಭಿವೃದ್ಧಿಯನ್ನು ಕಂಡಿತು.

2001ರ ಭಾರತ ಜನಗಣತಿಯ ಪ್ರಕಾರ, ಮಹಾಬಲಿಪುರಂನಲ್ಲಿ 12,345 ಜನಸಂಖ್ಯೆಯಿತ್ತು. ಆದರೆ ಇಲ್ಲಿ ಪ್ರವಾಸಿಗರ ಸಂಚಾರ ವರ್ಷಪೂರ್ತಿ ಇರುವುದರಿಂದ, ಯಾವುದೆ ನಿರ್ದಿಷ್ಟ ಸಮಯದಲ್ಲಿ ಇಲ್ಲಿ ವಾಸಿಸುತ್ತಿರುವವರ ಸಂಖ್ಯೆ ಇಷ್ಟೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ.

ಮಹಾಬಲಿಪುರಂನಲ್ಲಿರುವ ಮತ್ತು ಅದರ ಸುತ್ತ ಮುತ್ತ ಇರುವ ಪ್ರವಾಸಿ ಸ್ಥಳಗಳು

ಈ ಮೊದಲೇ ತಿಳಿಸಿದಂತೆ ಮಹಾಬಲಿಪುರಂ ಪಲ್ಲವರ ಕಾಲದಲ್ಲಿ ಅತ್ಯಂತ ಉಚ್ಛ್ರಾಯ ಸ್ಥಿತಿಯನ್ನು ಕಂಡಿತ್ತು. ಪಲ್ಲವರು ಮಹಾಬಲಿಪುರಂನ ಭೌಗೋಳಿಕ ಅಂಶಗಳನ್ನು ಪರಿಗಣಿಸಿದ್ದರು. ಆ ಕಾರಣದಿಂದಾಗಿ ಅವರು ಇಲ್ಲಿನ ಪ್ರಾಕೃತಿಕ ಸಂಪನ್ಮೂಲಗಳನ್ನು ಸಮರ್ಥವಾಗಿ ಸದುಪಯೋಗಪಡಿಸಿಕೊಂಡಿದ್ದರು. ಪಲ್ಲವ ಸಾಮ್ರಾಜ್ಯದಲ್ಲಿನ ಜನರ ಪರಿಶ್ರಮದ ಫಲವಾಗಿ ನವೀನ ಮಾದರಿಯ ಕಲಾನೈಪುಣ್ಯತೆಯು ಇಲ್ಲಿನ ಕಣ ಕಣದಲ್ಲಿ ಹೊರಹೊಮ್ಮಿದೆ.

18ನೇ ಶತಮಾನದವರೆಗು ಮಹಾಬಲಿಪುರಂ ಪರಕೀಯರ ಅಕ್ರಮ ಪ್ರವೇಶದ ಭೀತಿಯಿಂದಾಗಿ ಅಙ್ಞಾತವಾಗಿಯೇ ಉಳಿದು ಬಿಟ್ಟಿತ್ತು. ಪಲ್ಲವ ರಾಜರಾದ ಒಂದನೇ ನರಸಿಂಹ ಮತ್ತು ರಾಜಸಿಂಹರವರು ಮಹಾಬಲಿಪುರಂನ ವಾಸ್ತುಶಿಲ್ಪದ ಗುಣಮಟ್ಟವು ಇಂದಿಗು ಅಚ್ಚಳಿಯದೇ ಉಳಿದುಕೊಂಡು ಬರುವಲ್ಲಿ ಪ್ರಧಾನ ಪಾತ್ರಹಿಸಿದ್ದರು.

ಬಂಡೆಯನ್ನು ಕೊರೆದು ನಿರ್ಮಿಸಿದ ಗುಹೆಗಳು, ಬೆಳ್ಳಿಯ ಬಣ್ಣದ ಬೀಚ್, ಕ್ಯಾಸುವರಿನಸ್ ಮರಗಳು ಮತ್ತು ಏಕಶಿಲಾ ಬಂಡೆಗಳನ್ನು ಕೆತ್ತಿ ನಿರ್ಮಿಸಲಾದ ದೇವಾಲಯಗಳು ಈ ಐತಿಹಾಸಿಕ ಪಟ್ಟಣದ ಆಕರ್ಷಣೆಗಳಾಗಿವೆ.

ಐತಿಹಾಸಿಕ ಗುಡಿಗಳು, ದೇವಾಲಯಗಳು ಮತ್ತು ಸ್ಮಾರಕಗಳು

ಮಹಾಬಲಿಪುರಂನಲ್ಲಿ ನಿಮ್ಮ ಕಣ್ಮನ ತಣಿಸುವ ಹಲವಾರು ಆಕರ್ಷಣೆಗಳು ಇವೆ. ಅವುಗಳಲ್ಲಿ ಕೃಷ್ಣ ಮಂಟಪಂ, ಪಂಚ ರಥಗಳು, ವರಾಹ ಮಂಟಪಂ ಮತ್ತು ಸಮುದ್ರ ತೀರದ ದೇವಾಲಯಗಳು ಪ್ರಮುಖವಾಗಿವೆ. ಚೋಳಮಂಡಲ್ ಕಲಾವಿದರ ಗ್ರಾಮವು ಇಲ್ಲಿಂದ 30 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇಲ್ಲಿ ಹಲವಾರು ವರ್ಣ ಚಿತ್ರಗಳು, ಕುಶಲ ವಸ್ತುಗಳು ಮತ್ತು ಶಿಲ್ಪಗಳನ್ನು ನಾವು ನೋಡಬಹುದು.

ಮಹಾಬಲಿಪುರಂ ಬೀಚ್ ಪಲ್ಲವ ಸಾಮ್ರಾಜ್ಯದ ನಿರ್ಮಾಣಗಳಿಗೆ ನಯನ ಮನೋಹರವಾದ ಪ್ರಶಸ್ತ ಸ್ಥಳವನ್ನು ಒದಗಿಸಿದೆ. ಸಂಜೆಯ ಹೊತ್ತಿನಲ್ಲಿ ಆರಾಮವಾಗಿ ಕಾಲ ಕಳೆಯತ್ತ ಇರುವ ಜನರನ್ನು ನಾವು ಇಲ್ಲಿ ನೋಡಬಹುದು. ಈ ಪಟ್ಟಣದಿಂದ 5 ಕಿ.ಮೀ ದೂರದಲ್ಲಿ ಒಂದು ದುರ್ಗಾ ದೇವಿಯ ಗುಡಿಯನ್ನು ನಾವು ನೋಡಬಹುದು. ಇಲ್ಲಿ ಹಲವಾರು ವಿಗ್ರಹಗಳನ್ನು ನಾವು ನೋಡಬಹುದು. ಇಲ್ಲಿಗೆ ಸಮೀಪದಲ್ಲಿ ಹುಲಿ ಗುಹೆ ಮತ್ತು ಮೊಸಳೆ ಬ್ಯಾಂಕ್‍ಗಳು ಇದ್ದು, ಅತ್ಯಂತ ಪ್ರಸಿದ್ಧ ವಿಹಾರ ತಾಣಗಳಾಗಿ ಗುರುತಿಸಿಕೊಂಡಿವೆ.

ಪ್ರಚಲಿತವಿರುವ ದಂತಕಥೆಗಳು

ನಂಬಿಕೆಗಳ ಪ್ರಕಾರ ಅತ್ಯಂತ ಕ್ರೂರಿಯಾದ ರಾಕ್ಷಸ ರಾಜ ಮಹಾಬಲಿಯು ಇಂದಿನ ಮಹಾಬಲಿಪುರಂ ಅನ್ನು ಆಳುತ್ತಿದ್ದನಂತೆ. ಈತ ಮುಂದೆ ಮಹಾವಿಷ್ಣುವಿನಿಂದ ಹತನಾದನು. ಈ ಸ್ಥಳವು ರಾಕ್ಷಸ ರಾಜನ ಹೆಸರನ್ನು ಉಳಿಸಿಕೊಂಡಿದೆ. ಆದರೆ ಆತನಿಗೆ ಗೌರವ ಸಲ್ಲಿಸುವ ಯಾವುದೇ ರೀತಿಯಾದ ಸ್ಮಾರಕವು ಇಲ್ಲಿಲ್ಲ. ಬದಲಿಗೆ ಈ ಪ್ರದೇಶವನ್ನು ಆಳಿದ ಸ್ಮಾರಕಗಳು ಇಲ್ಲಿ ರಾರಾಜಿಸುತ್ತಿವೆ.

ಮಹಾಬಲಿಪುರಂಗೆ ತಲುಪುವುದು ಹೇಗೆ

ಈ ಪಟ್ಟಣವು ಸುತ್ತ ಮುತ್ತಲಿನ ನಗರ ಮತ್ತು ಪಟ್ಟಣಗಳ ಜೊತೆಗೆ ಉತ್ತಮ ಬಸ್ ಸೌಕರ್ಯವನ್ನು ಹೊಂದಿದೆ. ಬಸ್ ದರವು ಇಲ್ಲಿ ಕೈಗೆಟುವಂತಿರುತ್ತದೆ. ಇಲ್ಲಿನ ಸ್ಥಳೀಯರ ಜೊತೆಯಲ್ಲಿ ಮಾತನಾಡುವುದು ಅಷ್ಟೇನು ಸಮಸ್ಯೆಯಾಗಲಾರದು. ಏಕೆಂದರೆ ಮಹಾಬಲಿಪುರಂನಲ್ಲಿ ತಮಿಳು ಮತ್ತು ಇಂಗ್ಲೀಷ್‍ ಅನ್ನು ಹೆಚ್ಚು ಜನರು ಮಾತನಾಡಲು ಬಳಸುತ್ತಾರೆ.

ಮಹಾಬಲಿಪುರಂ ಹವಾಮಾನ

ಸಮುದ್ರದ ಸಾಮೀಪ್ಯವು ಇಲ್ಲಿನ ಹವಾಮಾನವನ್ನು ಸ್ವಲ್ಪ ಬಿಸಿ ಮತ್ತು ಗಾಳಿಯ ಅಬ್ಬರದಿಂದ ಕೂಡಿರುವಂತೆ ಮಾಡಿದೆ.

Please Wait while comments are loading...