ವೆಲ್ಲೂರ್ - ಈಟಿಗಳ ನಾಡು

ವೆಲ್ಲೂರ್ ಪ್ರವಾಸಿಗರ ತಾಣ ಎಂದು ಕರೆಯಲ್ಪಡುತ್ತದೆ. ಇದನ್ನು ತಮಿಳುನಾಡಿನ ಕೋಟೆಗಳ ನಗರ ಎಂದೂ ಕರೆಯಲಾಗುತ್ತದೆ. ವೆಲ್ಲೂರ್ ತನ್ನೊಳಗೆ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯನ್ನು ಅಡಗಿಸಿಟ್ಟುಕೊಂಡಿದೆ. ಪರಂಪರೆ ಮತ್ತು ದ್ರಾವೀಡ ನಾಗರೀಕತೆಯ ಮೊದಲ ಹಂತ ಇಲ್ಲಿಯೇ ಆರಂಭವಾಗಿತ್ತು ಎಂಬುದು ಮತ್ತೊಂದು ವಿಶೇಷ.

ಕೋಟೆಗಳ ನಗರಕ್ಕೆ ರಹದಾರಿ - ವೆಲ್ಲೂರ್ ಸುತ್ತಮುತ್ತಲಿನ ಪ್ರವಾಸಿ ತಾಣಗಳು

ವೆಲ್ಲೂರಿನಲ್ಲಿ ಪ್ರವಾಸಿಗಳ ಆಕರ್ಷಣೆಗೆ ಹಲವು ತಾಣಗಳಿವೆ. ವೆಲ್ಲೂರ್ ಕೋಟೆ ಇಲ್ಲಿಗೆ ಬರುವ ಎಲ್ಲಾ ಪ್ರವಾಸಿಗಳ ಆಕರ್ಷಣೆಯ ಪ್ರಮುಖ ತಾಣ ಹಾಗೂ ಇದನ್ನು ಸಂಪೂರ್ಣವಾಗಿ ಬೆಣಚು ಕಲ್ಲಿನಿಂದ ಮಾಡಲಾಗಿದೆ. ಇಲ್ಲಿನ ಇತರೆ ಪ್ರಮುಖ ತಾಣಗಳೆಂದರೆ ಗಡಿಯಾರ ಸ್ತಂಭ, ರಾಜ್ಯ ಸರ್ಕಾರದ ವಸ್ತುಸಂಗ್ರಹಾಲಯ, ಫ್ರೆಂಚ್ ಬಂಗ್ಲೋ ಮತ್ತು ಮುತ್ತುಗಳ ಅರಮನೆ ಅಥವಾ ಮುತ್ತು ಮಂಡಪಂ ಇದು ಪಾಲಾರ್ ನದಿಯ ದಡದಲ್ಲಿ ಇದೆ.

ಇಲ್ಲಿನ ರಾಜ್ಯ ಸರ್ಕಾರದ ವಸ್ತುಸಂಗ್ರಹಾಲಯ ವಿಶೇಷವಾಗಿ ಇತಿಹಾಸ ಪೂರ್ವ, ಮಾನವ ಶಾಸ್ತ್ರ, ಸಸ್ಯ ಶಾಸ್ತ್ರ, ಪುರಾತತ್ವ, ಕಲೆ ಮತ್ತು ಭೂವಿಜ್ಞಾನಕ್ಕೆ ಸಂಬಂಧಿಸಿದಂತೆ ಸಂಗ್ರಹಣೆಯನ್ನು ಹೊಂದಿದೆ. ಇಲ್ಲಿ ಸಮೀಪದಲ್ಲೇ ಹಲವು ಪ್ರಸಿದ್ಧ ದೇವಾಲಯಗಳು ಮತ್ತು ಧಾರ್ಮಿಕ ಕ್ಷೇತ್ರಗಳಿವೆ. ಜಲಕಂದೇಶ್ವರ ದೇವಾಲಯ ವೆಲ್ಲೂರ್ ಕೋಟೆಯ ಆವರಣದಲ್ಲೇ ಇದೆ.

ರತ್ನಗಿರಿ ದೇವಾಲಯ, ಆನೈಕುಲತ್ಥಮನ್ ಕೋಲಿ, ರೋಮನ್ ಕಾಥೋಲಿಕ್ ಡಿಯೋಸಿ, ಮದರಾಳಾಯೆ ಮಹೊಮ್ಮದಿಯಾ ಮಸೀದಿ, ಇಲ್ಲಿ ಕಾಣಬಹುದಾದ ಇತರೆ ಕೆಲವು ಪ್ರಮುಖ ಸ್ಥಳಗಳಾಗಿವೆ. ತಿರುಮಲೈಕೊಡಿ ಸಮೀಪದಲ್ಲಿರುವ ಶ್ರಿಪುರಂ, ವೆಲ್ಲೂರಿನ ಚಿನ್ನದ ದೇವಾಲಯ 1500 ಕೆ.ಜಿ ಚಿನ್ನದಿಂದ ಮಾಡಲಾಗಿದೆ.

ಚಿನ್ನದ ದೇವಾಲಯದ ಒಳಗಿರುವ ಒಂದು ದೇವಾಲಯವು ಮಹಾಲಕ್ಷ್ಮಿಗೆ ಮುಡಿಪಾಗಿದೆ ಹಾಗೂ ನೊಡುಗರನ್ನು ತನ್ನತ್ತ ಸೆಳೆಯಲು ಸಫಲವಾಗಿದೆ. ಇಲ್ಲಿನ ಇತರೆ ತಾಣಗಳೆಂದರೆ ವಿಲ್ಲಪಕ್ಕಂ, ವಲ್ಲಿಮಲೈ, ಬಾಲಾಮತಿ, ವಿರ್ಚಿಪುರಂ, ಮೆಟ್ಟುಕುಲಂ, ಮೊರ್ಧಾನಾ ಜಲಾಶಯ ಮತ್ತು ಪೋಮಲೈ ವಾನಿಗಾ ವಲಗಂ. ಇವುಗಳು ಇಲ್ಲಿ ಬಂದಿರುವ ಎಲ್ಲಾ ಪ್ರವಾಸಿಗರಿಗೂ ಮರೆಯಲಾರದ ಅನುಭವ ನೀಡುವುದು ಸುಳ್ಳಲ್ಲ.

ಇಲ್ಲಿನ ಪ್ರಮುಖ ಚರ್ಚುಗಳೆಂದರೆ ಅಸಂಪ್ಷನ್ ಕಾಥೆಡ್ರಲ್ ಚರ್ಚ್ ಹಾಗೂ 150 ವರ್ಷ ಹಳೆಯದಾದ ಸೈಂಟ್ ಜಾನ್ಸ್ ಚರ್ಚ್. ವೆಲ್ಲೂರಿನಲ್ಲಿರುವ ಸ್ಟೆಮ್ ಸೆಲ್ ಸಂಶೋಧನಾ ಕೇಂದ್ರ ಭಾರತದ ಮೊದಲ ಇಂತಹ ಕೇಂದ್ರವಾಗಿದೆ. ಇಲ್ಲಿಯೇ ಭಾರತದ ಒಂದು ಅತ್ಯುನ್ನತ ಆಸ್ಪತ್ರೆಯಾದ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ಕೂಡ ಇದೆ.

ಅಮೃತಿ ಪ್ರಾಣಿಶಾಸ್ತ್ರೀಯ ಉದ್ಯಾನ ಅಮೃತಿ ನದಿಯ ಬಳಿಯಲ್ಲಿರುವ ಜವಡು ಬೆಟ್ಟಗಳ ಸಮೀಪದಲ್ಲಿದೆ. ಇದು ವೆಲ್ಲೂರಿನಿಂದ ಸುಮಾರು 25 ಕಿ.ಮೀ ದೂರದಲ್ಲಿದೆ. ಇಲ್ಲಿರುವ ಕಳವೂರ್ ನಿರೀಕ್ಷಣಾ ಧಾಮ ಏಷ್ಯಾದಲ್ಲೇ ದೊಡ್ಡ ದೂರದರ್ಶಕ ಕೇಂದ್ರವಾಗಿದೆ. ಇಲ್ಲಿ ಖಗೋಳ ಸಂಶೋಧನೆ ಮತ್ತು ಅಧ್ಯಯನಗಳು ನಡೆಯುತ್ತಿರುತ್ತವೆ.

ವೆಲ್ಲೂರಿನ ಕಥೆ

ವೆಲ್ಲೂರ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸದಾ ಮುಂಚೂಣಿಯಲ್ಲಿದ್ದ ನಗರವಾಗಿದೆ. ಸೀಪಾಯಿ ದಂಗೆ ಎಂದೂ ಕರೆಯಲಾಗುವ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಇಲ್ಲಿಯೇ ಆರಂಭಗೊಂಡಿತ್ತು. ಮಿಲಿಟರಿ ಕ್ಷೇತ್ರದಲ್ಲಿ ವೆಲ್ಲೂರು ಗುರುತಿಸಬಹುದಾದ ಸಾಧನೆ ಮಾಡಿದೆ. ಇದಕ್ಕೆ ಉದಾಹರಣೆಯಾಗಿ ಅಥವಾ ಸಾಕ್ಷಿಯಾಗಿ ಗಡಿಯಾರ ಸ್ತಂಭ ಕ್ಲಾಕ್ ಟವರ್ ಸಮೀಪದಲ್ಲಿರುವ ಕಲ್ಲಿನಲ್ಲಿ ಕೆತ್ತಲಾದ ಶಿಲಾ ಶಾಸನ. ಲಾಂಗ್ ಬಜಾರ್ ನಲ್ಲಿರುವ ಈ ಶಾಸನ ಕ್ರಿ.ಶ. 1920 ರಲ್ಲಿ ಕೆತ್ತಲಾಗಿದೆ. “ವೆಲ್ಲೂರಿನಿಂದ 277 ಮಂದಿ ಸೈನಿಕರು 1914-1918 ರ ನಡುವೆ ನಡೆದ ಮಹಾ ಸಮರದಲ್ಲಿ ಪಾಲ್ಗೊಂಡಿದ್ದು ಅವರಲ್ಲಿ 14 ಮಂದಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ” ಎಂದು ಬರೆಯಲಾಗಿದೆ.

ವ್ಯಾಪಾರ ಮತ್ತು ಆರ್ಥಿಕ ಕ್ಷಮತೆ

ಚರ್ಮದ ವಸ್ತುಗಳ ರಫ್ತಿನಲ್ಲಿ ಭಾರತದ ಮುಂಚೂಣಿ ನಗರವಾಗಿರುವ ಪ್ರಸಿದ್ಧಿ ಇದಕ್ಕೆ ಲಭ್ಯವಾಗಿದೆ. ಭಾರತ ಸರ್ಕಾರದ ಅಧೀನದಲ್ಲಿರುವ ಒಂಭತ್ತು ಉದ್ಯಮಗಳಲ್ಲಿ ಭಾರತ್ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್ (ಬಿ.ಎಚ್.ಇ.ಎಲ್) ನ ಬಾಯ್ಲರ್ ಆಕ್ಸಿಲರೀಸ್ ಘಟಕ ಇಲ್ಲಿನ ರಾನಿಪತ್ ನಲ್ಲಿದೆ. ಏಷ್ಯಾದಲ್ಲಿಯೇ ಸ್ಪೋಟಕಗಳ ತಯಾರಿಕೆಯಲ್ಲಿ ಮೊದಲ ಸ್ಥಾನದಲ್ಲಿರುವ ತಮಿಳುನಾಡು ಎಕ್ಸ್ ಪ್ಲೋಸಿವ್ಸ್ ಲಿಮಿಟೆಡ್ (ಟಿ.ಇ.ಎಲ್) ವೆಲ್ಲೂರಿನ ಕಟಪಾಡಿಯಲ್ಲಿದೆ. ಇಲ್ಲಿನ ಹೆಚ್ಚಿನ ಜನಸಂಖ್ಯೆಗೆ ಆದಾಯದ ಮುಖ್ಯ ಮೂಲ ಬೀಡಿ, ನೂಲುವುದು ಮತ್ತು ಬೆಂಕಿ ಕಡ್ಡಿ ತಯಾರಿಕೆಯಿಂದ ಆಗುತ್ತದೆ.

ತಲುಪುವುದು ಹೇಗೆ

ತಮಿಳು ನಾಡು, ಆಂಧ್ರ ಪ್ರದೇಶ, ಕೇರಳ ಮತ್ತು ಕರ್ನಾಟಕದ ಎಲ್ಲಾ ಪ್ರಮುಖ ನಗರಗಳಿಂದ ರೈಲು ಮತ್ತು ಬಸ್ಸು ಸಂಪರ್ಕಗಳು ವೆಲ್ಲೂರಿಗಿವೆ. ಚೆನ್ನೈ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳು ವೆಲ್ಲೂರಿಗೆ ಸಮೀಪದಲ್ಲಿರುವ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿವೆ. ದೇಶಿಯ ವಿಮಾನ ನಿಲ್ದಾಣಗಳಲ್ಲಿ ತಿರುಪತಿಯ ವಿಮಾನ ನಿಲ್ದಾಣ ಸಮೀಪದ್ದಾಗಿದೆ.

ವೆಲ್ಲೂರ್ ವಾಯುಗುಣ

ವೆಲ್ಲೂರ್ ಉಷ್ಣವಲಯದ ವಾಯುಗುಣವನ್ನು ಹೊಂದಿದೆ. ಶುಷ್ಕ ಮತ್ತು ಒಣ ವಾಯುಗುಣವಿದ್ದು ಮಳೆಗಾಲದ ಅಕ್ಟೋಬರ್ ನವೆಂಬರ್ ಗಳಲ್ಲಿ ಭಾರೀ ಮಳೆಯಾಗುತ್ತದೆ. ಅಕ್ಟೋಬರ್ ನಿಂದ ಮಾರ್ಚ್ ಇಲ್ಲಿಗೆ ಭೇಟಿ ನೀಡಲು ಅತ್ಯಂತ ಸೂಕ್ತವಾದ ಅವಧಿಗಳಾಗಿವೆ.

Please Wait while comments are loading...