ಚೆನ್ನೈ - ವಸಾಹತುಶಾಹಿ ರಾಜಧಾನಿ

ಮೊದಲಿಗೆ ಮದ್ರಾಸ್ ಎಂಬ ನಾಮಾಂಕಿತದಿಂದ ಸಂಭೋದಿಸಲ್ಪಡುತ್ತಿದ್ದ ಇಂದಿನ ಚೆನ್ನೈ ಭಾರತದ ದಕ್ಷಿಣ ಭಾಗದ ರಾಜ್ಯವಾದ ತಮಿಳುನಾಡಿನ ರಾಜಧಾನಿ. ಕೋರಮಂಡಲ್ ಕರಾವಳಿ ತೀರದಲ್ಲಿ ನೆಲೆಸಿರುವ ಚೆನ್ನೈ ಕಾಸ್ಮೋಪಾಲಿಟನ್ ಮಾತ್ರವಲ್ಲದೆ ಮೆಟ್ರೊಪಾಲಿಟನ್ ನಗರ ಕೂಡ ಹೌದು. ವಾಣೀಜ್ಯ, ಆರ್ಥಿಕ ಸಂಸ್ಕೃತಿ ಹಾಗು ಶೈಕ್ಷಣಿಕ ದೃಷ್ಟಿಯಿಂದ ಚೆನ್ನೈ ದಕ್ಷಿಣ ಭಾರತ ಮಾತ್ರವಲ್ಲದೆ ಭಾರತದ ಪ್ರಮುಖ ಶಹರುಗಳಲ್ಲೊಂದಾಗಿದೆ. ಅಷ್ಟೆ ಅಲ್ಲ, ಚೆನ್ನೈ ದಕ್ಷಿಣ ಭಾರತದ ಸಾಂಸ್ಕೃತಿಕ ರಾಜಧಾನಿ ಎಂದೂ ಜನಪ್ರಿಯವಾಗಿದೆ.

ಈ ನಗರಕ್ಕೆ ಚೆನ್ನೈ ಎಂಬ ಹೆಸರು ಮೂಲತಃ ತಮಿಳು ಭಾಷೆಯ ಚೆನ್ನಪಟ್ಟಣಂ ಎಂಬ ಪದದಿಂದ ಬಂದಿದೆ. ಇಂಗ್ಲೀಷರು ಸುಮಾರು 1639 ರಲ್ಲಿ ಇದೆ ಹೆಸರಿನ ಪಟ್ಟಣವೊಂದನ್ನು ಸೇಂಟ್ ಜಾರ್ಜ್ ಕೋಟೆಯ ಬಳಿ ನಿರ್ಮಿಸಿದರು. ಚೆನ್ನೈ ಎಂಬ ಹೆಸರಿನ ಆ ಪಟ್ಟಣವನ್ನು ನಂತರ ಈಸ್ಟ್ ಇಂಡಿಯಾ ಕಂಪನಿಯ ಫ್ರಾನ್ಸಿಸ್ ಡೆ ಎಂಬಾತನಿಗೆ ಮಾರಲಾಯಿತು.

ದಕ್ಷಿಣ ಭಾರತವನ್ನು ಆಳಿದ ಅನೇಕ ಆಡಳಿತಗಾರರ ಸಮಯದಲ್ಲಿ ಚೆನ್ನೈ ಒಂದು ಪ್ರಮುಖ ಭಾಗವಾಗಿದ್ದರಿಂದ ಅದರ ವಿವರಗಳು ಇತಿಹಾಸದ ಪುಟಗಳಲ್ಲಿ ಉತ್ತಮವಾಗಿ ನಮೂದಿಸಲ್ಪಟ್ಟಿವೆ. ಚೆನ್ನೈ ನಗರವು ಬ್ರಿಟೀಷ್ ರಾಜ್ ಸಂದರ್ಭದ ರಾಜಕೀಯ ಇತಿಹಾಸದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದು, ಇದರ ನಿಜವಾದ ಇತಿಹಾಸವು ವಸಾಹತುಶಾಹಿ ಕಾಲದಿಂದಲೆ ಪ್ರಾರಂಭವಾಗುತ್ತದೆ.

ಚೆನ್ನೈ ಕರಾವಳಿ ತೀರಕ್ಕೆ ಪ್ರವೇಶಿಸಿದ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ 1644 ರಲ್ಲಿ ಸೇಂಟ್ ಜಾರ್ಜ್ ಕೋಟೆ ಸ್ಥಾಪಿಸುವ ಮೂಲಕ ತಮ್ಮ ಆಡಳಿತದ ನಾಂದಿ ಹಾಡಿದರು. ನಗರದಲ್ಲಿ ಸ್ಥಾಪಿಸಿದ ಈ ಕೋಟೆಯ ಸಹಾಯದಿಂದಾಗಿ ಇಂಗ್ಲೀಷರು ಆಗಿನ ಫ್ರೆಂಚ್ ಮತ್ತು ಮೈಸೂರು ರಾಜರನ್ನು ತೊಲಗಿಸುವಲ್ಲಿ ಯಶಸ್ವಿಯಾದರು. ನಂತರ ಚೆನ್ನೈ ನಗರವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡ ಬ್ರಿಟೀಷರು ಇದನ್ನು ತಮ್ಮ ಮುಖ್ಯ ಬಂದರನ್ನಾಗಿ ಮಾಡಿಕೊಂಡರು.

ಇಂಗ್ಲೀಷರು ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಇದನ್ನು ಮದ್ರಾಸ್ ಎಂದೆ ಕರೆಯಲಾಗುತ್ತಿತ್ತು. ಇದು ಸೇಂಟ್ ಜಾರ್ಜ್ ಕೋಟೆಯ ಉತ್ತರ ದಿಕ್ಕಿನಲ್ಲಿದ್ದ ಒಂದು ಚಿಕ್ಕ ಬೆಸ್ತ ಹಳ್ಳಿ 'ಮದ್ರಾಸಪಟ್ಟಣಂ' ಎಂಬ ಪದದ ಸಂಕ್ಷೀಪ್ತ ರೂಪವಾಗಿತ್ತು. ಆದರೆ ಹಲವು ಜನರು, ಇದರ ಹೆಸರು ಮಂದಿರ್-ರಾಜ್ ಎಂಬ ಶಬ್ದದಿಂದ ಬಂದಿದ್ದಾಗಿ ಹೇಳುತ್ತಾರೆ. ಇನ್ನೂ ಕೆಲವರು ಮದ್ರಾಸ್ ಪದವನ್ನು ಮೊದಲು ಪೋರ್ಚುಗೀಸರು 'ಮದ್ರೆ ದೆ ದ್ಯುಸ್'(ಮದರ್ ಆಫ್ ಗಾಡ್ ಅಥವಾ ದೇವರ ತಾಯಿ) ಎಂಬರ್ಥವಾಗಿ ಬಳಸಿದ್ದರು ಎಂದು ಹೇಳುತ್ತಾರೆ. ಅದೇನೆ ಇರಲಿ..ಈ ಒಂದು ಹೆಸರು ಬಹು ವರ್ಷಗಳ ಕಾಲ ಈ ನಗರಕ್ಕೆ ಚೆನ್ನೈ ಎಂಬ ನಾಮಕರಣ ಮಾಡುವವರೆಗೂ ತಳುಕು ಹಾಕಿಕೊಂಡಿತ್ತು ಎನ್ನುವುದು ಸತ್ಯ.

ದಕ್ಷಿಣದ ಸಾಂಸ್ಕೃತಿಕ ರಾಜಧಾನಿ

ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಮನರಂಜನೆ ಏನೇ ಇರಲಿ, ಎಲ್ಲವನ್ನೂ ಈ ನಗರದಲ್ಲಿ ಆಸ್ವಾದಿಸಬಹುದಾಗಿದೆ. ಏಕೆಂದರೆ ಬಹು ಪುರಾತನದಿಂದಲೂ ಈ ನಗರ ಕಲೆಯ ವೈವಿಧ್ಯಮಯ ರೂಪಗಳನ್ನು ಸದಾ ಪೋಷಿಸುತ್ತಾ ಬಂದಿದೆ. ಕರ್ನಾಟಿಕ್ ಸಂಗೀತವು ಇಲ್ಲಿನ ಜನರ ಅವಿಭಾಜ್ಯ ಅಂಗವಾಗಿದ್ದು, ಪ್ರಮುಖ ಸಂಗೀತಗಾರರಿಂದ ಅಂತಹ ಸಂಗೀತವನ್ನು ಕೇಳುವ ಅವಕಾಶಗಳು ಬಂದೊದಗಿದಾಗ ಅದನ್ನು ಕಳೆದುಕೊಳ್ಳುವುದೇ ಇಲ್ಲ. ಅಷ್ಟೆ ಅಲ್ಲ..ಚೆನ್ನೈ ನಗರ 'ಮದ್ರಾಸ್ ಮ್ಯುಸಿಕ್ ಸೀಸನ್' ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರತಿವರ್ಷ ತನ್ನ ನೆಲೆಯಲ್ಲೆ ಆಯೋಜಿಸುತ್ತದೆ. ಈ ಒಂದು ಕಾರ್ಯಕ್ರಮದಲ್ಲಿ ದೇಶಾದ್ಯಂತ ನೂರಾರು ಕಲಾಕಾರರು ಪಾಲ್ಗೊಳ್ಳುತ್ತಾರೆ. ಕ್ಲಾಸಿಕಲ್ ಅಥವಾ ಶಾಸ್ತ್ರೀಯ ಸಂಗೀತವೂ ಕೂಡ ಇಲ್ಲಿ ಅತ್ಯಂತ ಜನಪ್ರಿಯವಾಗಿದ್ದು, ಮದ್ರಾಸ್ ವಿಶ್ವವಿದ್ಯಾಲಯವು ಈ ಸಂಗೀತ ಪ್ರಕಾರವನ್ನು 1930 ರಲ್ಲೆ ತನ್ನ ಪದವಿ ಶಿಕ್ಷಣದಲ್ಲಿ ಪರಿಚಯಿಸಿದೆ.

ಕ್ರಿಸ್ಮಸ್ ಸಂದರ್ಭದಲ್ಲಂತೂ ಕರೋಲ್ ಸಂಗೀತ ತುಂಬಾನೆ ಜನಪ್ರಿಯ. ಸಾಮಾನ್ಯವಾಗಿ ಡಿಸೆಂಬರ್ ತಿಂಗಳಿನಲ್ಲಿ ಸ್ಕೂಲ್ ಇರಲಿ, ಕಾಲೇಜ್ ಇರಲಿ ಅಥವಾ ಮಾಲ್ ಗಳೆ ಆಗಲಿ ಎಲ್ಲೆಡೆಯಿಂದಲೂ ಇಂಪಾದ ಸಂಗೀತವನ್ನು ನೀವು ಸವಿಯಬಹುದು. ಕ್ರಿಸ್ಮಸ್ನ ಮುನ್ನಾ ದಿನಗಳಿಂದಲೆ ಕೆಲವು ಯುವಪಿಳಿಗೆಗಳು ಗುಂಪನ್ನು ಕಟ್ಟಿಕೊಂಡು ಬೀದಿ ಬೀದಿಯಲ್ಲಿ ಸುತ್ತುತ್ತಾ ಹಾಡನ್ನು ಹಾಡುತ್ತ ಆನಂದಿಸುತ್ತಾರೆ.

ಮತ್ತೊಂದು ಉತ್ಸವವಾದ ಚೆನ್ನೈ ಸಂಗಮಂ ಅನ್ನು ಪ್ರತಿವರ್ಷ ನಗರದಲ್ಲಿ ಆಯೋಜಿಸಲಾಗುತ್ತದೆ. ಈ ಉತ್ಸವದಲ್ಲಿ ತಮಿಳುನಾಡಿನ ಮೂಲೆ ಮೂಲೆಯ ಕಲೆಯ ಪ್ರಕಾರಗಳನ್ನು ಪ್ರದರ್ಶಿಸಲಾಗುತ್ತದೆ. ಪ್ರತಿವರ್ಷ ಜನವರಿ ತಿಂಗಳಿನಲ್ಲಿ ಈ ಉತ್ಸವ ನಡೆಯುತ್ತದೆ.

ನಿರಂತರವಾಗಿ ಇಲ್ಲಿ ಶಾಸ್ತ್ರೀಯ ನೃತ್ಯಗಳ ಪ್ರದರ್ಶನಗಳನ್ನು ಕಾಣಬಹುದಾಗಿದೆ. ಏಕೆಂದರೆ ಚೆನ್ನೈ ಭರತನಾಟ್ಯಂ ಶಾಸ್ತ್ರೀಯ ನೃತ್ಯದ ಕೇಂದ್ರ ಸ್ಥಳವಾಗಿದೆ. ಈ ನೃತ್ಯ ಪ್ರಕಾರವು ತಮಿಳುನಾಡಿನಲ್ಲೆ ಉಗಮಿಸಿದ್ದು, ಭಾರತದ ಪುರಾತನ ನೃತ್ಯ ಪ್ರಕಾರಗಳ ಪೈಕಿ ಒಂದಾಗಿದೆ. ಈ ನೃತ್ಯವು ಇಂದು ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯವಾಗಿದ್ದು, 2012 ರಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಚೆನ್ನೈನ ಐದು ನೃತ್ಯಗಾರರು ಭಾರತವನ್ನು ಪ್ರಚಾರಿಸುವ ಸಂದರ್ಭದಲ್ಲಿ ಈ ನೃತ್ಯವನ್ನು ಪ್ರದರ್ಶಿಸಿದ್ದಾರೆ.

ಕಾಲಿವುಡ್ ಎಂದೆ ಖ್ಯಾತಿಪಡೆದ ತಮಿಳು ಚಿತ್ರರಂಗದ ನೆಲೆಯೂ ಕೂಡ ಚೆನ್ನೈ. ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ನಿರ್ಮಿತವಾದ ಕೆಲವು ವಿಶೇಷ ಚಿತ್ರಗಳನ್ನು ಪ್ರದರ್ಶಿಸುವ ಹಲವು ಚಿತ್ರೋತ್ಸವಗಳನ್ನು ಕೂಡ ಇಲ್ಲಿ ಆಯೋಜಿಸಲಾಗುತ್ತಿರುತ್ತದೆ. ಚಿತ್ರರಂಗ ವಲಯದಲ್ಲಿ ಕೆಲವು ಪ್ರಮುಖ ಸ್ಟುಡಿಯೊಗಳಾದ ಜೇಮಿನಿ ಸ್ಟುಡಿಯೋಸ್, ಎ.ವಿ.ಎಮ್ ಸ್ಟುಡಿಯೋಸ್, ವಿಜಯಾ ವಾಹಿನಿ ಸ್ಟುಡಿಯೋಸ್ ಚೆನ್ನೈ ನಗರದಲ್ಲೆ ನೆಲೆಸಿವೆ. ಅದರಲ್ಲೂ ಎ.ವಿ.ಎಮ್ ಸ್ಟುಡಿಯೊ ಇನ್ನೂ ಕಾರ್ಯನಿರ್ವಹಿಸುತ್ತಿರುವ ಭಾರತದ ಅತಿ ಪುರಾತನ ಸ್ಟುಡಿಯೊ ಆಗಿದೆ. ಚೆನ್ನೈ ನಗರದಲ್ಲಿ ತಮಿಳು, ಹಿಂದಿ, ಇಂಗ್ಲೀಷ್ ಚಲನಚಿತ್ರಗಳನ್ನು ಪ್ರದರ್ಶಿಸುವ ಸುಮಾರು 120 ಚಿತ್ರಮಂದಿರಗಳಿವೆ.  

ರಂಗಭೂಮಿಯ ಉಪಸ್ಥಿತಿಯು ಕೂಡ ಚೆನ್ನೈನಲ್ಲಿ ಪ್ರಮುಖವಾಗಿದ್ದು, ಹಲವು ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನಾಟಕ ತಂಡಗಳನ್ನು ಕಾಣಬಹುದಾಗಿದೆ. ರಾಜಕೀಯ, ಹಾಸ್ಯ, ಇತಿಹಾಸ ಮತ್ತು ಪೌರಾಣಿಕ ಹಿನ್ನಿಲೆಯ ನಾಟಕಗಳು ಪ್ರಮುಖವಾಗಿ ಪ್ರದರ್ಶಿತಗೊಳ್ಳುವ ನಾಟಕಗಳು. ಹಲವು ಕಾಲೇಜುಗಳಲ್ಲೂ ನಾಟಕ ತಂಡಗಳನ್ನು ಕಾಣಬಹುದಾಗಿದ್ದು, ಅವುಗಳು ವಿಶೇಷವಾಗಿ ಬೀದಿ ಬೀದಿಗಳಲ್ಲಿ ಪ್ರದರ್ಶನ ನೀಡುತ್ತಾ, ಸಮಾಜಯೋಗ್ಯ ಸಂದೇಶಗಳನ್ನು ರವಾನಿಸುತ್ತ, ಜಾಗೃತಿಯನ್ನು ಮೂಡಿಸುವಲ್ಲಿ ಕಾರ್ಯಪ್ರವೃತ್ತವಾಗಿವೆ. ಸ್ಥಳೀಯ ಭಾಷೆಯನ್ನೆ ಪ್ರಮುಖವಾಗಿ ಇಂತಹ ಪ್ರದರ್ಶನಗಳಲ್ಲಿ ಬಳಸಲಾಗುತ್ತದೆ. ಆದರೂ ಕೆಲವು ಆಂಗ್ಲ ಭಾಷೆಯ ನಾಟಕಗಳು ಜನಪ್ರಿಯವಾಗಿವೆ.

Please Wait while comments are loading...