ಕಾಂಚೀಪುರಂ: ದೇವಾಲಯಗಳ ನಗರ

ಕಾಂಚೀಪುರಂ ತನ್ನ ಹಳೆಯ ಕಾಲದ ಮೋಡಿಯನ್ನು ಇಂದಿಗೂ ಕಾಪಾಡಿಕೊಂಡು ಬಂದಿರುವ, ತಮಿಳುನಾಡಿನ ಬಹುಶಃ ಅತ್ಯಂತ ಹಳೆಯ ನಗರವಾಗಿದೆ. ಈ ನಗರವು ತನ್ನ ದೇವಾಲಯಗಳಿಗಷ್ಟೇ ಅಲ್ಲದೆ ಪಲ್ಲವ ರಾಜರ ರಾಜಧಾನಿಯಾಗಿದ್ದ ಕಾರಣಕ್ಕೂ ಸುಪ್ರಸಿದ್ಧವಾಗಿದೆ. ಇಂದಿಗೂ ಈ ನಗರವನ್ನು ಕೆಲವೊಮ್ಮೆ ಅದರ ಹಳೆಯ ಹೆಸರುಗಳಾದ ಕಂಚಿಯಾಂಪಥಿ ಮತ್ತು ಕಾಂಜೀವರಂ ಎಂದು ಕರೆಯಲಾಗುತ್ತದೆ. ವಿದೇಶಿ ಪ್ರವಾಸಿಗರಿಗೆ "ಸಾವಿರ ದೇವಾಲಯಗಳು ನಗರ" ಎಂದು ಕಾಂಚೀಪುರಂ ಪರಿಚಿತವಾಗಿದೆ. ತಮಿಳುನಾಡು ರಾಜಧಾನಿಯಾದ ಚೆನ್ನೈಯಿಂದ ಇದು ಕೇವಲ 72 ಕಿಲೋಮೀಟರುಗಳಷ್ಟು ದೂರದಲ್ಲಿದ್ದು ಈ ನಗರವನ್ನು ಸುಲಭವಾಗಿ ತಲುಪಬಹುದಾಗಿದೆ.

ಪ್ರತಿ ಹಿಂದೂವ್ಯಕ್ತಿಯು ತಮ್ಮ ಜೀವಿತಾವಧಿಯಲ್ಲಿ ಸಂದರ್ಶಿಸಬೇಕಾದ ಏಳು ಅತಿ ಪವಿತ್ರ ಸ್ಥಳಗಳಲ್ಲಿ ಕಾಂಚೀಪುರಂ ಒಂದಾಗಿರುವುದರಿಂದ ಹಿಂದೂಗಳಿಗೆ ಇದು ಒಂದು ಪೂಜ್ಯ ನಗರವಾಗಿದೆ. ಹಿಂದೂ ಪುರಾಣಗಳ ಪ್ರಕಾರ, ಎಲ್ಲ ಏಳೂ ಪವಿತ್ರ ಸ್ಥಳಗಳನ್ನು ಸಂದರ್ಶಿಸುವ ಮೂಲಕ ಮೋಕ್ಷವನ್ನು ಪಡೆಯಬಹುದಾಗಿದೆ. ಈ ನಗರವು ಶಿವಭಕ್ತರಿಗೂ ಹೇಗೋ ಹಾಗೆಯೇ ವಿಷ್ಣುವಿನ ಭಕ್ತರಿಗೂ ಪವಿತ್ರ ಸ್ಥಳವಾಗಿದೆ. ಕಾಂಚಿಪುರಂ ನಗರದಲ್ಲಿ ಶಿವ ಮತ್ತು ವಿಷ್ಣು ದೇವರುಗಳಿಗೆ ಮುಡಿಪಾದ ಹಲವಾರು ದೇವಾಲಯಗಳಿವೆ. ಈ ದೇವಾಲಯಗಳಲ್ಲಿ ಹೆಚ್ಚು ಜನಪ್ರಿಯವಾದವೆಂದರೆ ಭಗವಾನ್ ವಿಷ್ಣುವಿಗಾಗಿ ಇರುವ ವರದರಾಜ ಪೆರುಮಾಳ್ ದೇವಾಲಯ, ಪಂಚಭೂತಗಳನ್ನು ಪ್ರತಿನಿಧಿಸುವ ಶಿವನ ಐದು ದೇವಾಲಯಗಳಾದ ಪಂಚಭೂತಸ್ಥಳಗಳಲ್ಲಿ ಒಂದಾದ ಏಕಾಂಬರನಾಥ ದೇವಾಲಯಗಳು.

ಪವಿತ್ರ ನಗರ

ಐತಿಹ್ಯಗಳ ಪ್ರಕಾರ, ಇಲ್ಲಿ ಭಗವಾನ್ ವಿಷ್ಣುವಿನ ಅನೇಕ ದೇವಾಲಯಗಳನ್ನು ನಿರ್ಮಿಸಿರುವ ಕಾರಣದಿಂದ ಈ ನಗರವು ತನ್ನ ಹೆಸರನ್ನು ಪಡೆದುಕೊಂಡಿದೆ. "ಕಾ" ಎಂದರೆ ಬ್ರಹ್ಮನು. "ಅಂಚಿ" ಎಂದರೆ "ವಿಷ್ಣುವನ್ನು ಈ ಸ್ಥಳದಲ್ಲಿ ಪೂಜಿಸಿದನು" ಎಂದು ನಂಬಲಾಗಿರುವುದರಿಂದ ಈ ನಗರಕ್ಕೆ ಕಾಂಚೀಪುರಂ ಎಂದು ಹೆಸರು ಬಂದಿದೆ. ಇಲ್ಲಿ ಅನೇಕ ಶಿವದೇವಾಲಯಗಳೂ ಇವೆ. ಕಾಂಚೀಪುರಂದ ಪಶ್ಚಿಮ ಭಾಗದಲ್ಲಿ ಅತಿ ಹೆಚ್ಚುಸಂಖ್ಯೆಯ ಶಿವದೇವಾಲಯಗಳು ಇರುವುದರಿಂದ ಅದನ್ನು ಶಿವಕಾಂಚಿ ಎಂದೂ ಪೂರ್ವಭಾಗವನ್ನು ವಿಷ್ಣುಕಾಂಚಿ ಎಂದೂ ಕರೆಯಲಾಗುತ್ತದೆ.

ಕಾಂಚೀಪುರಂನ ಇನ್ನುಳಿದ ಪ್ರಸಿದ್ಧ ದೇವಾಲಯಗಳೆಂದರೆ ಕೈಲಾಸನಾಥರ ದೇವಾಲಯ, ಕಾಮಾಕ್ಷಿ ಅಮ್ಮನ ದೇವಾಲಯ, ಕಚಪೇಶ್ವರರ ದೇವಾಲಯ ಮತ್ತು ಕುಮಾರಕೊಟ್ಟಂ ದೇವಾಲಯಗಳು.

ಇತಿಹಾಸ ಮತ್ತು ಪುರಾಣಗಳ ಸಮ್ಮಿಲನ

ಇತಿಹಾಸಾಸಕ್ತರು ಕಾಂಚೀಪುರವನ್ನು ಅದರ ವೈಭವಯುತ ಇತಿಹಾಸಕ್ಕಾಗಿ ಪ್ರೀತಿಸುತ್ತಾರೆ. ಮೂರು ಮತ್ತು ಒಂಭತ್ತನೇ ಶತಮಾನಗಳ ನಡುವಿನ ಕಾಲಾವಧಿಯಲ್ಲಿ ಪಲ್ಲವ ರಾಜರು ಕಾಂಚಿಯನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು. ಈ ನಗರವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಲು ಅವರು ಅಪಾರ ಶ್ರಮ ಮತ್ತು ಹಣವನ್ನು ವ್ಯಯಿಸಿದರು. ಅವರು ಒಳ್ಳೆಯ ರಸ್ತೆಗಳನ್ನು , ಕಟ್ಟಡಗಳನ್ನು , ವಿಶಾಲ ಕೋಟೆಗೋಡೆಗಳನ್ನೂ , ಅಗಲವಾದ ಕಂದಕಗಳನ್ನೂ ನಗರದ ಒಳಗೆ ಮತ್ತು ಸುತ್ತಮುತ್ತ ನಿರ್ಮಿಸಿದರು. ಪಲ್ಲವರು ಚೀನಾದ ವ್ಯಾಪಾರಿಗಳೊಂದಿಗೆ ವ್ಯಾಪಾರ ಮಾಡುತ್ತಿದ್ದರು. ಏಳನೇ ಶತಮಾನದಲ್ಲಿ ಈ ನಗರಕ್ಕೆ ಬಂದ ಚೀನೀ ಯಾತ್ರಿಕ ಹ್ಯೂಯೆನ್ ತ್ಸಾಂಗನ ಪ್ರವಾಸಕಥನಗಳಲ್ಲಿ ಈ ಕಾಂಚೀಪುರಂ ನಗರವನ್ನು ಉಲ್ಲೇಖಿಸಲಾಗಿದೆ.

ಹನ್ನೊಂದನೇ ಶತಮಾನದಲ್ಲಿ ಚೋಳ ರಾಜರು ಕಾಂಚೀಪುರಂದ ಆಡಳಿತವನ್ನು ವಹಿಸಿಕೊಂಡು ಹದಿನಾಲ್ಕನೇ ಶತಮಾನದವರೆಗೆ ನಗರವನ್ನು ಆಳಿದರು. ಚೋಳರು ಕಾಂಚಿಯನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಳ್ಳಲಿಲ್ಲವಾದರೂ ಅದು ಆಗಲೂ ಪ್ರಮುಖವಾದ ನಗರವಾಗಿತ್ತು. ನಿಜವಾದ ಸಂಗತಿಯೇನೆಂದರೆ ಚೋಳ ರಾಜರು ಬಹಳಷ್ಟು ನಿರ್ಮಾಣಕಾರ್ಯಗಳನ್ನು ಕೈಗೊಂಡರು, ಅದನ್ನು ಪೂರ್ವದಿಕ್ಕಿನಲ್ಲಿ ಬೆಳೆಸಲು ಆರಂಭಿಸಿದರು. ಹದಿನಾಲ್ಕನೇ ಶತಮಾನದಿಂದ ಹದಿನೇಳನೇ ಶತಮಾನದವರೆಗೆ ವಿಜಯನಗರದ ರಾಜರು ಕಾಂಚೀಪುರಂ ಮೇಲೆ ರಾಜಕೀಯ ನಿಯಂತ್ರಣ ಹೊಂದಿದ್ದರು. ಹದಿನೇಳನೇ ಶತಮಾನದ ಕೊನೆಯಲ್ಲಿ ಮರಾಠರು ನಗರವನ್ನು ವಹಿಸಿಕೊಂಡರಾದರೂ ಕೆಲಸಮಯದಲ್ಲಿಯೇ ಅದನ್ನು ಮುಘಲ್ ಚಕ್ರವರ್ತಿಯಾದ ಔರಂಗಜೇಬನು ಗೆದ್ದುಕೊಂಡನು. ಭಾರತಕ್ಕೆ  ಫ್ರೆಂಚ್ ಮತ್ತು ಬ್ರಿಟಿಷ್ ವ್ಯಾಪಾರಿಗಳ ಆಗಮನದೊಂದಿಗೆ ನಗರವು ಬ್ರಿಟಿಷ್ ಸಾಮ್ರಾಜ್ಯದ ನಿಯಂತ್ರಣಕ್ಕೆ ಒಳಗಾಗಿ ಬ್ರಿಟಿಷ್ ಸೈನ್ಯಾಧಿಕಾರಿ ರಾಬರ್ಟ್ ಕ್ಲೈವ್ ನಿಂದ ಆಳಲ್ಪಟ್ಟಿತು.

ಈ ಶ್ರೀಮಂತ ಗತ ಇತಿಹಾಸವು ಆಧುನಿಕ ಪ್ರವಾಸಿಗಳಿಗೆ ಈಗಲೂ ಕಾಣಸಿಗುತ್ತದೆ. ಬೇರೆಬೇರೆ ಸಂಸ್ಕೃತಿಗಳ ಪ್ರಭಾವವನ್ನು ಈ ನಗರದಲ್ಲಿನ ಕಲೆ ಮತ್ತು ಕಟ್ಟಡಗಳಲ್ಲಿ ನೋಡಬಹುದು. ಇಂದು ಈ ನಗರವು ವಿಭಿನ್ನ ಭಾರತೀಯ ಮತ್ತು ಪಾಶ್ಚಾತ್ಯ ಪ್ರಭಾವಗಳ ಪರಿಪೂರ್ಣ ಸಮ್ಮಿಲನಕ್ಕೂ,  ತನ್ನ ದೇವಾಲಯಗಳಿಗೂ ಸುಪ್ರಸಿದ್ಧವಾಗಿದೆ.

ರೇಷ್ಮೆನಗರ ಕಾಂಚೀಪುರಂ

ಕಾಂಚೀಪುರಂ ರೇಷ್ಮೆ ಸೀರೆಗಳು ಜಗತ್ತಿನಾದ್ಯಂತ ಹೆಸರಾಗಿವೆ. ಬಂಗಾರದ ಜರಿಯೊಂದಿಗೆ ನೇಯ್ದ ರೇಷಿಮೆ ನೂಲಿನ ಸೀರೆಗಳು ವೈಭವಯುತ ಗತಕಾಲದಲ್ಲಷ್ಟೇ ಅಲ್ಲ ಆಧುನಿಕ ಕಾಲದ ಮಹಿಳೆಯರಿಗೂ ಪ್ರಿಯವೇ. ಅದು ಭಾರತೀಯ ಅದರಲ್ಲೂ ದಕ್ಷಿಣ ಭಾರತದ ಪ್ರಿಯ ಉಡುಗೆಯ  ಲಕ್ಷಣವಷ್ಟೇ ಅಲ್ಲ , ತಮಿಳರ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಲಕ್ಷಣವೂ ಆಗಿದೆ.

ಈ ಪವಿತ್ರನಗರವನ್ನು ಇಡೀವರ್ಷದುದ್ದಕ್ಕೂ ಅದರ ಪ್ರಸಿದ್ಧ ದೇವಾಲಯಗಳಿಗೆ - ಕೆಲವನ್ನು ಹೆಸರಿಸಬೇಕೆಂದರೆ ಕಾಮಾಕ್ಷಿ ಅಮ್ಮನ್ ದೇವಾಲಯ , ಏಕಾಂಬರೇಶ್ವರ ದೇವಾಲಯ , ದೇವರಾಜಸ್ವಾಮಿ ದೇವಾಲಯ ಮತ್ತು ಕೈಲಾಶನಾಥರ್ ದೇವಾಲಯ ಇವುಗಳಿಗೆ - ಜನರು ಭೇಟಿನೀಡುತ್ತಾರೆ.

ಕಾಂಚೀಪುರಂ  ದೇಶದ ಇತರ ಭಾಗಗಳಿಗೆ ರಸ್ತೆ ಮತ್ತು ರೈಲುಗಳ ಮೂಲಕ ಸಂಪರ್ಕ ಹೊಂದಿದೆ. ಹತ್ತಿರದ ವಿಮಾನನಿಲ್ದಾಣ ಚೆನ್ನೈನಲ್ಲಿದೆ. ಕಾಂಚೀಪುರಂನಲ್ಲಿನ ಹವಾಮಾನವು ಬಿರುಬೇಸಿಗೆ ಮತ್ತು ಹಿತಕರ ಚಳಿಗಾಲಗಳ ನಡುವೆ ಇರುತ್ತದೆ.

Please Wait while comments are loading...