ಯಳಗಿರಿ: ಪ್ರಕೃತಿಯ ಮಡಿಲಲ್ಲಿ ವಾರಾಂತ್ಯದ ಆನಂದ

ಎಳಗಿರಿ ಎಂದೂ ಕರೆಯಲ್ಪಡುವ ಯಳಗಿರಿ ತಮಿಳುನಾಡಿನ ವೆಲ್ಲೂರ್ ಜಿಲ್ಲೆಯಲ್ಲಿರುವ ಗಿರಿಧಾಮವಾಗಿದೆ. ಇದು ಛಾಯಾಚಿತ್ರ ತೆಗೆಯುವ ಹವ್ಯಾಸ ಇರುವವರ ನೆಚ್ಚಿನ ತಾಣವೂ ಆಗಿದೆ. ಇಲ್ಲಿನ ಇತಿಹಾಸ ವಸಾಹತು ಕಾಲದ ತನಕ ಇದೆ. ಆ ಕಾಲದಲ್ಲಿ ಯಳಗಿರಿಯ ಎಲ್ಲಾ ಜಾಗ ಯಳಗಿರಿ ಜಮೀನುದಾರರ ಕೈಯಲ್ಲಿತ್ತು. ಈ ಜಮೀನುದಾರರ ಮನೆಗಳನ್ನು ಈಗಲೂ ರೆಡ್ಡಿಯೂರಿನಲ್ಲಿ ನಾವು ಕಾಣಬಹುದಾಗಿದೆ. 1950 ರ ಹೊತ್ತಿಗೆ ಯಳಗಿರಿಯನ್ನು ಭಾರತ ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡಿತು.

ಸಮುದ್ರ ಮಟ್ಟದಿಂದ ಸುಮಾರು 1048 ಮೀ. ಎತ್ತರದಲ್ಲಿರುವ ಯಳಗಿರಿ 14 ಸಣ್ಣ ಕೊಪ್ಪಲುಗಳ ಗುಂಪಾಗಿದೆ ಹಾಗೂ ಇಲ್ಲಿ ಬುಡಕಟ್ಟು ಜನ ವಾಸವಾಗಿದ್ದಾರೆ. ತಮಿಳುನಾಡಿನ ಇತರೆ ಗಿರಿಧಾಮಗಳಾದ ಊಟಿ ಹಾಗೂ ಕೊಡೈಕೆನಲ್ ಗೆ ಹೋಲಿಸಿದರೆ ಯಳಗಿರಿ ಗಿರಿಧಾಮ ಅಷ್ಟೊಂದು ಅಭಿವೃದ್ಧಿ ಆಗಿಲ್ಲ. ಆದರೂ ಇತ್ತೀಚೆಗೆ, ಇಲ್ಲಿನ ಜಿಲ್ಲಾಡಳಿತ ಪಾರಾಗ್ಲೈಡಿಂಗ್ ಹಾಗೂ ರಾಕ್ ಕ್ಲೈಂಬಿಂಗ್ ನಂತಹ ಕೆಲವು ಸಾಹಸ ಕ್ರೀಡೆಗಳನ್ನು ಅಭಿವೃದ್ಧಿಪಡಿಸಿ ಜನರನ್ನು ಆಕರ್ಷಿಸುವ ಪ್ರಯತ್ನ ಮಾಡುತ್ತಿದೆ. ಇಲ್ಲಿ ಬಂದ ಎಲ್ಲರೂ ಮೊದಲನೆಯದಾಗಿ ಗಮನಿಸುವ ಅಂಶ ಎಂದರೆ ಇಲ್ಲಿನ ಪ್ರಶಾಂತ ವಾತಾವರಣ ಹಾಗೂ ಇಲ್ಲಿನ ನಿಸರ್ಗ ಸಹಜ ಸೌಂದರ್ಯ. ಇಲ್ಲಿ ಸುತ್ತಲೂ ಇರುವ ಹೂವು ಹಾಗೂ ಹಣ್ಣಿನ ತೋಪಿನಿಂದಾಗಿ ಇಲ್ಲಿ ಬರುವ ಆಹ್ಲಾದಕರ ಪರಿಮಳ ಇಲ್ಲಿನ ಮತ್ತೊಂದು ಮುಖ್ಯ ಆಕರ್ಷಣೆ. ಇಲ್ಲಿನ ನಿಸರ್ಗದ ನಡುವೆ ಡ್ರೈವ್ ಮಾಡುತ್ತಾ ಸಾಗುವುದು ಮತ್ತೊಂದು ಆಕರ್ಷಣೆ. ಇದು ಚಟುವಟಿಕೆಯಿಂದ ಕೂಡಿದ ತಾಣ ಎನ್ನಬಹುದು.

ಸಾಹಸ ಕ್ರೀಡೆಗಳನ್ನು ಇಷ್ಟಪಡುವವರಿಗೆ ಯಳಗಿರಿ ಒಂದು ಪ್ರಮುಖ ತಾಣ. ಇದು ಮಹಾರಾಷ್ಟ್ರದ ಪಂಚಗನಿಯ ನಂತರದ ಅತ್ಯುತ್ತಮ ನೈಸರ್ಗಿಕ ಕ್ರೀಡೆಗಳ ತಾಣ ಎಂದು ಹೆಸರು ಪಡೆದಿದೆ. ಇಲ್ಲಿರುವ ಹಲವು ದೇವಾಲಯಗಳು ಇದನ್ನು ಯುವಕರ ಜೊತೆಗೆ ವಯಸ್ಸಾದವರಿಗೂ ಇಷ್ಟವಾಗುವ ತಾಣವನ್ನಾಗಿಸಿದೆ. ಪುಂಗನೂರು ಕೆರೆ ಇಲ್ಲಿನ ಪ್ರಮುಖ ಸ್ಥಳವಾಗಿದೆ. ಹಸಿರು ಬೆಟ್ಟಗಳ ನಡುವೆ ಬೋಟಿಂಗ್ ಮಡುವುದು ಇಲ್ಲಿನ ಅತ್ಯುತ್ತಮ ಅನುಭವಗಳಲ್ಲಿ ಒಂದು. ಇಲ್ಲಿನ ಘಾಟ್ ಗಳಲ್ಲಿ ಕಾಣಸಿಗುವ ಪರಿಸರದ ನೋಟ ಎಂದೂ ಮರೆಯುವ ಹಾಗಿಲ್ಲ. ನಿಳವೂರ್ ಕೆರೆ ಇಲ್ಲಿನ ಇನ್ನೊಂದು ಆಕರ್ಷಣೆ.

ಇಲ್ಲಿ ಸುತ್ತಮುತ್ತಲ ಪ್ರದೇಶಗಳಲ್ಲಿ ಇತರೆ ಪ್ರಮುಖ ಸ್ಥಳಗಳೆಂದರೆ ವೆಲವನ್ ದೇವಾಲಯ, ಸ್ವಾಮಿಮಲೈ ಗಿರಿಧಾಮಗಳಂತಹ ಗಿರಿಧಾಮಗಳು, ಚಾರಣ ಮಾರ್ಗಗಳು, ಪ್ರಕೃತಿ ಪ್ರಿಯರಿಗಾಗಿ ಉದ್ಯಾನವನಗಳು, ಸರ್ಕಾರಿ ಔಷಧೀಯ ಗಿಡಮೂಲಿಕೆಗಳ ವನಗಳು ಹಾಗೂ ಹಣ್ಣುಗಳ ವನಗಳು. ನಕ್ಷತ್ರ ವೀಕ್ಷಣೆ ನಿಮಗೆ ಇಷ್ಟವಾದರೆ ದೂರದರ್ಶಕ ಮನೆ ಹಾಗೂ ವೈನು ಬಪ್ಪು ಆಕಾಶ ವೀಕ್ಷಣಾಲಯವನ್ನು ನೋಡಲು ಮರೆಯದಿರಿ.

ಇಲ್ಲಿನ ಹವಾಮಾನ ವರ್ಷವಿಡಿ ಆಹ್ಲಾದಕರವಾಗಿದ್ದರೂ ನವೆಂಬರ್ ನಿಂದ ಫೆಬ್ರವರಿಯ ತನಕದ ಚಳಿಗಾಲದ ಅವಧಿಯಲ್ಲಿ ಇಲ್ಲಿಗೆ ಭೇಟಿ ನೀಡಲು ಅತ್ಯುತ್ತಮವಾದ ಅವಧಿಯಾಗಿದೆ. ಬೇಸಿಗೆಯಲ್ಲಿ ಇಲ್ಲಿನ ತಾಪಮಾನ 11 ರಿಂದ 34 ಡಿಗ್ರಿ ಸೆಲ್ಶಿಯಸ್ ತನಕ ಬದಲಾಗುತ್ತಾ ಇರುತ್ತದೆ. ಆದರೆ ಚಳಿಗಾಲದ ಅವಧಿಯಲ್ಲಿ ಇದು 11 ರಿಂದ 25 ಡಿಗ್ರಿ ಸೆಲ್ಶಿಯಸ್ ತನಕ ಬದಲಾಗುತ್ತದೆ. ಜುಲೈ ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಇಲ್ಲಿ ಸಾಮಾನ್ಯ ಮಳೆಯಾಗುತ್ತದೆ.

ಈ ಸ್ಥಳವು ಜನವರಿಯಲ್ಲಿ ಆಚರಿಸುವ ಪೊಂಗಲ್ ಹಾಗೂ ಅಕ್ಟೋಬರ್ ನಲ್ಲಿ ಆಚರಿಸಲಾಗುವ ದೀಪಾವಳಿಯ ಅವಧಿಯಲ್ಲಿ ಬಹಳ ಸುಂದರವಾಗಿ ಕಾಣುತ್ತದೆ. ಈ ಎರಡು ಹಬ್ಬಗಳನ್ನು ಯೆಳಗಿರಿಯಲ್ಲಿ ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಬೇಸಿಗೆಯಲ್ಲಿ ಆಚರಿಸುವ ಕೊಡೈವೀಳಾ ಹಬ್ಬವನ್ನು ಮೇ ತಿಂಗಳಿನಲ್ಲಿ ಮೂರು ದಿನಗಳವರೆಗೆ ಆಚರಿಸಲಾಗುತ್ತದೆ. ಇದು ಕೂಡ ಬಹಳ ಮಂದಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಯಳಗಿರಿಯನ್ನು ತಲುಪುವುದು ಸುಲಭ ಹಾಗೂ ಸಾಕಷ್ಟು ಸಂಪರ್ಕ ಮಾಧ್ಯಮಗಳು ಲಭ್ಯವಿದೆ. ಬೆಂಗಳೂರು ವಿಮಾನ ನಿಲ್ದಾಣ ಇಲ್ಲಿಗೆ ಸಮೀಪದಲ್ಲಿರುವ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ಕ್ಯಾಬ್ ಮೂಲಕ ಯಳಗಿರಿಗೆ ತಲುಪಬಹುದಾಗಿದೆ. ಚೆನ್ನೈ ವಿಮಾನ ನಿಲ್ದಾಣವೂ ಯಳಗಿರಿಗೆ ಸಮೀಪದಲ್ಲಿದೆ.

ಜೊಲಾರ್ಪೆಟ್ಟಲ್ ರೈಲ್ವೆ ನಿಲ್ದಾಣ ಇಲ್ಲಿಗೆ ಸಮೀಪದಲ್ಲಿರುವ ರೈಲ್ವೆ ನಿಲ್ದಾಣವಾಗಿದೆ. ಇಲ್ಲಿಂದ ಯಳಗಿರಿಗೆ ತಲುಪಲು ಬಸ್ಸುಗಳು ಹಾಗೂ ಕ್ಯಾಬ್ ಗಳು ಸುಲಭವಾಗಿ ದೊರೆಯುತ್ತವೆ. ತಮಿಳುನಾಡಿನ ಪೊನ್ನೇರಿಯಿಂದ ರಸ್ತೆ ಸೌಲಭ್ಯ ಕೂಡ ಉತ್ತಮವಾಗಿದೆ. ಚನ್ನೈ, ಸೇಲಂ, ಹೊಸೂರು ಮತ್ತು ಬೆಂಗಳೂರಿನಿಂದ ನಿರಂತರ ಬಸ್ ಸಂಪರ್ಕ ಯಳಗಿರಿಗಿದೆ. ಆದರೆ ಬಸ್ ಪ್ರಯಾಣ ಬಹಳ ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದಲ್ಲದೆ ನಿಮ್ಮನ್ನು ಹೆಚ್ಚು ಸುಸ್ತಾಗಿಸುತ್ತದೆ.

ಯಳಗಿರಿಗೆ ರೈಲಿನ ಮೂಲಕ ಪ್ರಯಣಿಸುವುದು ಸೂಕ್ತವಾಗಿದೆ. ಯಳಗಿರಿಗೆ ನೀವು ಡ್ರೈವ್ ಮಾಡುತ್ತಾ ಹೋಗುವುದಾದರೆ ಸಾಕಷ್ಟು ಮಾರ್ಗಸೂಚಿ ಫಲಕಗಳಿವೆ ಹಾಗೂ ಪೆಟ್ರೋಲ್ ಪಂಪ್ ಗಳೂ ಸಾಕಷ್ಟಿವೆ. ಆದರೆ ಯಳಗಿರಿ ಸಮೀಪ ಬಂದಂತೆ ಘಾಟ್ ಗಳು ಸಾಕಷ್ಟು ಬರುವುದರಿಂದ ಮೊದಲೆ ತುಸು ಹೆಚ್ಚಾಗಿ ಪೆಟ್ರೋಲ್ ತುಂಬಿಕೊಂಡು ಹೋಗಬೇಕಾಗುತ್ತದೆ. ಯಳಗಿರಿಯ ರಸ್ತೆ ಉತ್ತಮವಾಗಿರುವುದರಿಂದ ಪ್ರಯಾಣ ಸುಗಮವಾಗಲಿದೆ.

ತಮಿಳುನಾಡಿನಲ್ಲಿ ಸಿಗುವ ಅತ್ಯಂತ ಉತ್ತಮವಾದ ಜೇನುತುಪ್ಪ ಯಳಗಿರಿಯಲ್ಲಿ ಸಿಗುವ ಕಾರಣ ಟ್ರಿಪ್ ಮುಗಿಸಿ ಮರುಳುವಾಗ ದಾರಿಯಲ್ಲಿ ಸಿಗುವ ಜೇನುತುಪ್ಪ ಹಾಗೂ ಹಲಸಿನ ಹಣ್ಣನ್ನು ಕೊಳ್ಳಲು ಮರೆಯದಿರಿ. ಮನೆಯಲ್ಲೇ ತಯಾರಿಸಿದ ಈ ಜೇನು ತುಪ್ಪವನ್ನು, ಜೇನುನೊಣಗಳನ್ನು ಸಾಕಿ ಬೆಳೆಸಿ ತಯಾರಿಸಲಾಗುತ್ತದೆ ಹಾಗೂ ಮರ ಹಾಗೂ ಹೊರಗಡೆ ಇರುವ ಜೇನು ನೊಣಗಳಿಂದ ತಯಾರಿಸಲಾದ ಜೇನು ತುಪ್ಪವೂ ಇಲ್ಲಿ ಲಭ್ಯವಿದೆ. ಹೀಗೆ ಪ್ರಕೃತಿಯ ಮಡಿಲಲ್ಲಿ ಕಳೆದು ಹೋಗಿ ನಿಮ್ಮ ರಜಾ ದಿನಗಳನ್ನು ಅನುಭವಿಸಬೇಕಾದರೆ ಯಳಗಿರಿ ಒಂದು ಅತ್ಯುತ್ತಮ ತಾಣವಾಗಿದೆ.

Please Wait while comments are loading...