ಈರೋಡ್ - ಕೃಷಿ ಮತ್ತು ಉದ್ಯಮದ ನಾಡು

ಭಾರತದ ತಮಿಳುನಾಡು ರಾಜ್ಯದ ಈರೋಡ್ ಜಿಲ್ಲೆಯ ಜಿಲ್ಲಾ ಕೇಂದ್ರ ಈರೋಡ್ ನಗರ. ಇದು ದಕ್ಷಿಣ ಭಾರತದ ಹೃದಯಭಾಗದಲ್ಲಿ ನೆಲೆಸಿದೆ. ಚೆನ್ನೈನಿಂದ ಸುಮಾರು 400 ಕಿ.ಮೀ ಮತ್ತು ವಾಣಿಜ್ಯ ನಗರಿ ಕೊಯಮತ್ತೂರಿನಿಂದ 80 ಕಿ.ಮೀ ದೂರದಲ್ಲಿದೆ. ಭವಾನಿ ಹಾಗೂ ಕಾವೇರಿ ನದಿಯ ದಡದಲ್ಲಿರುವುದು ಈ ನಗರದ ಇನ್ನೊಂದು ವಿಶೇಷಣ. ಇದು ಮಗ್ಗದ ತಯರಿಕೆಯಲ್ಲೂ ಹೆಸರುವಾಸಿ. ಕೈಮಗ್ಗ ಮತ್ತು ಸಿದ್ಧ ಉಡುಪುಗಳಲ್ಲಿ ಈ ಊರಿನ ಹೆಸರು ಮೊದಲು ಕೇಳಿ ಬರುತ್ತದೆ. ಆದ್ದರಿಂದ ಇದನ್ನು ಭಾರತದ ಟೆಕ್ಸಾವ್ಯಾಲಿ ಅಥವಾ ಲ್ಯೂಮ್ ಸಿಟಿ ಆಫ್ ಇಂಡಿಯಾ ಎಂದು ಕರೆಯುತ್ತಾರೆ.

ಬೆಡ್ ಶೀಟ್ ಗಳು, ಲುಂಗಿಗಳು, ಟಾವೆಲ್ ಗಳು, ಹತ್ತಿಯ ಸೀರೆಗಳು, ಧೋತಿಗಳು, ಕಾರ್ಪೆಟ್ ಗಳು ಮತ್ತು ಪ್ರಿಂಟ್ ಮಾಡಿದ ಬಟ್ಟೆಗಳು ಇಲ್ಲಿ ಪ್ರಸಿದ್ಧ. ಇಲ್ಲಿ ಹೋಲ್ ಸೇಲ್ ದರದಲ್ಲಿ ಈ ಎಲ್ಲಾ ಬಟ್ಟೆಗಳನ್ನು ಮಾರಾಟ ಮಾಡಲಾಗುತ್ತದೆ ಹಾಗೂ ಉತ್ಸವದ ಸಂದರ್ಭಗಳಲ್ಲಿ ಇಲ್ಲಿನ ಮಾರುಕಟ್ಟೆಯ ವ್ಯಾಪಾರಿಗಳು ಬಹಳ ಚೆನ್ನಾಗಿ ವ್ಯಾಪಾರ-ವಹಿವಾಟು ನಡೆಸುತ್ತಾರೆ. ಈ ಉತ್ಪನ್ನಗಳನ್ನು ಇಲ್ಲಿ ಮಾರಾಟ ಮಾಡುವುದಷ್ಟೇ ಅಲ್ಲದೇ ವಿದೇಶಗಳಿಗೂ ಕೂಡ ರಫ್ತು ಮಾಡಲಾಗುತ್ತದೆ. ಇದರ ಜೊತೆಗೆ ಈ ನಗರ ಹಳದಿಯ ಉತ್ಪಾದನೆಗೂ ಬಹಳ ಪ್ರಸಿದ್ಧವಾಗಿದೆ.  

ಈರೋಡ್ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳು

ಇಲ್ಲಿ ವರ್ಷಪೂರ್ತಿ ಭಕ್ತಾದಿಗಳಿಂದ ತುಂಬಿರುವ ಪ್ರಸಿದ್ಧ ದೇವಾಲಯಗಳೆಂದರೆ ತಿಂಡಾಲ್ ಮುರುಗನ್ ದೇವಾಲಯ, ಪೆರಿಮಾರಮ್ಮನ್ ದೇವಾಲಯ, ಆರುದಾ ಕಬಿಲೇಶ್ವರ ದೇವಾಲಯ, ಕಸ್ತೂರಿ ಅರಂಗನಾಥೇಶ್ವರ ದೇವಾಲಯ, ಮಹಿಮಲೀಶ್ವರ ದೇವಾಲಯ, ನಟದೀಶ್ವರ ದೇವಾಲಯ ಮತ್ತು ಪರಿಯುರ್ ಕೊಂಡಾತು ಕಾಲಿಯಮ್ಮನ್ ದೇವಾಲಯ. ಇಷ್ಟೆ ಅಲ್ಲ, ದೇವಾಲಯಗಳ ಜೊತೆಗೆ ಹಲವು ಪ್ರೇಕ್ಷಣೀಯ ಚರ್ಚ್ ಗಳನ್ನೂ ಕೂಡ ಕಾಣಬಹುದು ಇಲ್ಲಿ. ಅವುಗಳೆಂದರೆ ಸೈಂಟ್ ಮೇರಿಸ್ ಚರ್ಚ್ ಮತ್ತು ಬ್ರಾಗ್ ಚರ್ಚ್. ಭವಾನಿಸಾಗರ್ ಜಲಾಶಯ ಮತ್ತು ಕೊಡಿವೇರಿ ಜಲಾಶಯ ಇಲ್ಲಿನ ಎರಡು ಪ್ರಮುಖ ಜಲಾಶಯಗಳು. ಇತರೆ ಪ್ರೇಕ್ಷಣೀಯ ಸ್ಥಳಗಳೆಂದರೆ ಪೆರಿಯಾರ್ ಸ್ಮಾರಕ ಭವನ, ವೆಲ್ಲೋಡ್ ಪಕ್ಷಿಧಾಮ, ಸರ್ಕಾರಿ ವಸ್ತುಸಂಗ್ರಹಾಲಯ, ಕರಡಿಯೂರ್ ವೀಕ್ಷಣಾ ಸ್ಥಳ, ಭವಾನಿ ಮತ್ತು ಬನ್ನಾರಿ.

ಈರೋಡ್ ನಗರದ ಇತಿಹಾಸ

ಕ್ರಿ.ಶ. 850 ರಲ್ಲಿ ಈ ನಗರವು ಚೇರರ ಅಧೀನದಲ್ಲಿತ್ತು. ಕ್ರಿ.ಶ. 1000 ಮತ್ತು ಕ್ರಿ.ಶ.1275 ರ ನಡುವೆ ಈ ನಗರವು ಚೋಳರ ಆಡಳಿತದಡಿಯಲ್ಲಿ ಇತ್ತು. ಕ್ರಿ.ಶ. 1276 ರಲ್ಲಿ ಇದು ಪಾಂಡ್ಯರ ಸುಪರ್ದಿಗೆ ಒಳಪಟ್ಟಿತು. ಈ ಅವಧಿಯಲ್ಲೆ ಆಡಳಿತಗಾರ ವೀರ ಪಾಂಡಿಯನ್ ನಿಂದ ಕಾಳಿಂಗರಾಯನ ಕಾಲುವೆಯು ನಿರ್ಮಾಣಗೊಂಡಿತು. ಆ ನಂತರ ಮುಸ್ಲಿಂ ಆಡಳಿತ ಆರಂಭವಾಯಿತು ಹಾಗೂ ನಂತರ ಮದುರೈನ ರಾಜರು ಆಡಳಿತ ಆರಂಭಿಸಿದರು. ಇದಾದ ನಂತರ ಟಿಪ್ಪು ಸುಲ್ತಾನ್ ಮತ್ತು ಹೈದರ್ ಆಲಿ ಈ ನಗರವನ್ನು ಆಳಿದರು. ಕೊನೆಯದಾಗಿ 1799 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಈ ನಗರದ ಆಡಳಿತವನ್ನು ತೆಗೆದುಕೊಂಡಿತು.

ಈರೋಡ್ ಎಂಬ ಪದವು 'ಈರಾ' 'ಓಡು' ಎಂಬ ಪದಗಳಿಂದ ವ್ಯುತ್ಪತ್ತಿಯಾಗಿದೆ. ಇದರ ಅರ್ಥ ಒದ್ದೆ ತಲೆಬುರುಡೆ ಎಂಬುದಾಗಿದೆ. ಇದರ ಹಿಂದೆ ಒಂದು ಕಥೆಯಿದೆ. ದಾಕ್ಷಾಯಿಣಿ ದಕ್ಷಾಪ್ರಜಾಪತಿಯ ಮಗಳು ಹಾಗೂ ಇವಳು ಶಿವ ದೇವರನ್ನು ಮದುವೆಯಾಗಿದ್ದಳು. ಒಂದೊಮ್ಮೆ ದಕ್ಷಾಪ್ರಜಾಪತಿ ಒಂದು ಯಾಗವನ್ನು ಮಾಡಿದ್ದ. ಈ ಯಾಗದಲ್ಲಿ ಆತ ಎಲ್ಲರನ್ನೂ ಕರೆದಿದ್ದ ಆದರೆ ಶಿವ ದೇವರನ್ನು ಮಾತ್ರ ಕರೆದಿರಲಿಲ್ಲ.

ಹೀಗಿದ್ದರೂ ದಾಕ್ಷಾಯಿಣಿ ಈ ಯಾಗದಲ್ಲಿ ಪಾಲ್ಗೊಳ್ಳಲು ಬಯಸಿದ್ದಳು ಆದರೆ ಆಕೆಯ ಪತಿ ಶಿವ ದೇವರು ಆಕೆಗೆ ಹಾಗೆ ಮಾಡಲು ಬಿಡಲಿಲ್ಲ. ಆತನ ವಿರೊಧದ ಹೊರತಾಗಿಯೂ ಆಕೆ ಯಾಗದಲ್ಲಿ ಪಾಲ್ಗೊಂಡಳು. ಆದರೆ ಅಲ್ಲಿ ಆಕೆಯನ್ನು ಆಕೆಯ ತಂದೆ ಅಥವಾ ತಾಯೀ ಯಾರೂ ಸ್ವಾಗತಿಸಲಿಲ್ಲ. ಈ ಅವಮಾನವನ್ನು ತಾಳಲಾರದೆ ಆಕೆ ತನ್ನನ್ನು ತಾನು ಯಾಗದ ಬೆಂಕಿಯಲ್ಲಿ ಸುಟ್ಟುಕೊಂಡಳು ಹಾಗೂ ಸುಟ್ಟು ಭಸ್ಮವಾದಳು. ಇದನ್ನು ಕೇಳಿದ ಶಿವ ದೇವರು ಕೋಪಗೊಂಡು ಯಾಗ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ ಅಲ್ಲಿದ್ದ ಬ್ರಹ್ಮನನ್ನೂ ಸೇರಿ ಯಾರನ್ನೂ ಬಿಡದೆ ಎಲ್ಲರನ್ನೂ ದುರ ಎಸೆದನು.

ಈ ಘಟನೆಯ ನಂತರ ಸತ್ತ ಎಲ್ಲರ ಮೂಳೆ ಮತ್ತು ತಲೆಬುರುಡೆಗಳನ್ನು ಸಮೀಪದ ಕಾವೇರಿ ನದಿಯಲ್ಲಿ ಎಸೆಯಲಾಯಿತು. ಹಾಗೂ ಅವು ಅಲ್ಲಿ ಶಾಶ್ವತವಾಗಿ ಉಳಿದುಕೊಂಡವು. ಹೀಗೆ ಈರಾ ಒಡು ಎಂದರೆ ಒದ್ದೆ ತಲೆಬುರುಡೆಗಳು ಎಂಬುದಾಗಿದೆ.

ಈರೋಡ್ ವಾಯುಗುಣ

ಸಾಮಾನ್ಯವಾಗಿ ಈರೋಡ್ ಜಿಲ್ಲೆ ಶುಷ್ಕ ವಾಯುಗುಣವನ್ನು ಹೊಂದಿದೆ. ಇಲ್ಲಿ ಸಾಕಷ್ಟು ಮಳೆಯಾಗುವುದಿಲ್ಲ. ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಈ ಸ್ಥಳದ ಹವಾಮಾನ ಬಹಳ ಶುಷ್ಕವಾಗಿರುತ್ತದೆ. ಅದರಲ್ಲೂ ಕಾವೇರಿ ನದಿಯ ದಡದಲ್ಲಂತೂ ಇದು ಮತ್ತೂ ಹೆಚ್ಚು. ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಶೀತ ಮಾರುತ ಬೀಸುತ್ತದೆ. ಇದು ಪಾಲ್ಘಾಟ್ ಕಡೆಯಿಂದ ಬೀಸುತ್ತದೆ. ಆದರೆ ಈರೊಡ್ ಕಡೆಗೆ ಬರುತ್ತಿದ್ದಂತೆ ಚಳಿ ಕಡಿಮೆಯಾಗಿ ವಾತಾವರಣವು ಬಿಸಿಯಾಗಿ, ಧೂಳಿನಿಂದ ಕೂಡಿರುತ್ತದೆ.

ತಲುಪುವುದು ಹೇಗೆ

ಈರೋಡ್ ತಲುಪಲು ಹತ್ತಿರವಿರುವ ವಾಯುನಿಲ್ದಾಣ ಕೊಯಮತ್ತೂರು ವಿಮಾನ್ ನಿಲ್ದಾಣ. ಈರೋಡ್ ಎಲ್ಲಾ ಪ್ರಮುಖ ನಗರಗಳೊಂದಿಗೆ ರಸ್ತೆಯ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಈರೋಡ್ ಜಂಕ್ಷನ್ ಇಲ್ಲಿಗೆ ಸಮೀಪವಿರುವ ರೈಲ್ವೆ ನಿಲ್ದಾಣವಾಗಿದೆ. ಈರೋಡ್ ಬಸ್ ನಿಲ್ದಾಣದಿಂದ ಎಲ್ಲಾ ಪ್ರಮುಖ ನಗರಗಳಿಗೆ ಬಸ್ ಸಂಚಾರವಿದೆ. ಈರೋಡ್ ನಗರದೊಳಗೆ ಸುತ್ತಾಡಲು ಆಟೊ ರಿಕ್ಷಾ, ಟಾಕ್ಸಿಗಳು ಹಾಗೂ ಸೈಕಲ್ ಟಾಕ್ಸಿಗಳನ್ನು ಬಳಸಬಹುದಾಗಿದೆ.

Please Wait while comments are loading...