ಕೊಯಮತ್ತೂರು - ದಕ್ಷಿಣ ಭಾರತದ ಮ್ಯಾಂಚೆಸ್ಟರ್

ಕೊಯಮತ್ತೂರು ತಮಿಳುನಾಡು ರಾಜ್ಯದ ದಕ್ಷಿಣ ಭಾಗದಲ್ಲಿ ನೆಲೆಗೊಂಡಿದೆ. ಈ ನಗರವು ವಿಸ್ತೀರ್ಣತೆಯ ದೃಷ್ಟಿಯಿಂದ ತಮಿಳುನಾಡಿನ ಎರಡನೆ ದೊಡ್ಡ ನಗರವಾಗಿದೆ. ನಗರೀಕರಣದ ದೃಷ್ಟಿಯಿಂದ ಇದು ದೇಶದ 15 ನೇ ದೊಡ್ಡ ನಗರವಾಗಿದೆ. ಅಲ್ಲದೆ ಇದಕ್ಕೆ ಮಹಾನಗರದ ಸ್ಥಾನಮಾನ ಸಹ ದೊರೆತಿದೆ. ಈ ನಗರವು ದೇಶದ ಅತ್ಯಂತ ಪ್ರಮುಖ ಕೈಗಾರಿಕಾ ತಾಣವಾಗಿದೆ. ಅಲ್ಲದೆ ಇದನ್ನು "ದಕ್ಷಿಣ ಭಾರತದ ಮ್ಯಾಂಚೆಸ್ಟರ್ " ಎಂದು ಸಹ ಕರೆಯುತ್ತಾರೆ.

ಕೊಯಮತ್ತೂರು ಕಳೆದ ಎರಡು ದಶಕಗಳಲ್ಲಿ ಕೈಗಾರಿಕೆ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಭಾರೀ ಬೆಳವಣಿಗೆಯನ್ನು ಕಂಡಿದೆ. ಇದರ ಜೊತೆಗೆ ಇಲ್ಲಿಗೆ ಭೇಟಿಕೊಡುವವರು ಇದರ ವರ್ಣರಂಜಿತ ಇತಿಹಾಸಕ್ಕೆ ಸಾಕ್ಷಿಯಾಗಬಹುದು. ಕೊಯಮತ್ತೂರು ಚೇರರು, ಚೋಳರು, ಪಾಂಡ್ಯರು,ವಿಜಯ ನಗರದ ಅರಸರು ಮತ್ತು ಮಧುರೈನ ನಾಯಕರವರೆಗೆ ಹಲವರಿಂದ ಆಳಲ್ಪಟ್ಟಿದೆ. ಹಲವರ ನಂಬಿಕೆಯ ಪ್ರಕಾರ "ಕೊಯಮತ್ತೂರು" ಎಂಬ ಹೆಸರು ನಾಯಕರ ಪ್ರಧಾನ ಮಂತ್ರಿಯಾಗಿದ್ದ, ಕೋಯನ್ ಎಂಬುವವನಿಂದ ಬಂದಿತು ಎಂದು ನಂಬಲಾಗುತ್ತದೆ.

17ನೇ ಶತಮಾನದಲ್ಲಿ ಈ ನಗರವು ಮೈಸೂರು ರಾಜ್ಯದ ಅಧೀನದಲ್ಲಿತ್ತು. ಆದರೆ 1799ರಲ್ಲಿ ಬ್ರಿಟೀಷರು ಮೈಸೂರನ್ನು ವಶಪಡಿಸಿಕೊಂಡ ನಂತರ ಕೊಯಮತ್ತೂರು ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪೆನಿಯ ಅಧೀನಕ್ಕೆ ಒಳಪಟ್ಟಿತು.

ಕೊಯಮತ್ತೂರಿನ ಆಧುನಿಕ ಇತಿಹಾಸವು 20ನೇ ಶತಮಾನದ 1930 ರಿಂದ ಆರಂಭವಾಗುತ್ತದೆ. ಆಗ ಇಲ್ಲಿ ಆರಂಭವಾದ ಜವಳಿ ಉದ್ಯಾಮವು ಕೊಯಮತ್ತೂರಿನಲ್ಲಿ ಹೊಸ ಶಕೆಯನ್ನೆ ಆರಂಭಿಸಿತು. ಇದರ ಜೊತೆಗೆ ಹವಾಮಾನ, ಫಲವತ್ತಾದ ಮಣ್ಣು ಮತ್ತು ಶ್ರಮಜೀವಿಗಳಾದ ಜನರಿಂದ ಕೂಡಿರುವ ಕೊಯಮತ್ತೂರನ್ನು ಅಭಿವೃದ್ಧಿಯ ಹಳಿಗೆ ಬಂದು ನಿಂತಿದೆ.

ಹತ್ತಿಯ ನಗರ

ಕೊಯಮತ್ತೂರ್ ಜವಳಿ ಉದ್ಯಮ ಮತ್ತು ತಂತ್ರಙ್ಞಾನದ ವಿಚಾರದಲ್ಲಿ ತಮಿಳುನಾಡಿನ ಅತ್ಯಂತ ಪ್ರಮುಖ ನಗರವಾಗಿದೆ. ಈ ಊರಿನಲ್ಲಿ ಪ್ರಾಚೀನ ಕರಕುಶಲ ಕಲೆಗಳು ಮತ್ತು ಆಧುನಿಕ ಸಂಶೋಧನೆಗಳು ಒಟ್ಟಿಗೆ ಮುನ್ನಡೆಯುತ್ತಿರುವುದು ವಿಶೇಷ. ಈ ನಗರವು ತೆರಿಗೆಯನ್ನು ತಂದುಕೊಡುವ ವಿಚಾರದಲ್ಲಿ ತಮಿಳುನಾಡಿನಲ್ಲಿ ಚೆನ್ನೈ ನಂತರ ಎರಡನೆ ಸ್ಥಾನದಲ್ಲಿ ನಿಂತಿದೆ. ಅಲ್ಲದೆ ಇಡೀ ದಕ್ಷಿಣ ಭಾರತದಲ್ಲಿ ಒಟ್ಟಾರೆ ನಾಲ್ಕನೇ ಸ್ಥಾನದಲ್ಲಿ ನಿಂತಿದೆ.

ಈ ನಗರವನ್ನು ಕಾಟನ್ ಸಿಟಿ ಅಥವಾ ಹತ್ತಿಯ ನಗರ ಎಂದು ಕರೆಯುತ್ತಾರೆ. ಕಾರಣ ಈ ನಗರದ ಆರ್ಥಿಕ ಅಭಿವೃದ್ಧಿಯು ಇಲ್ಲಿನ ಜವಳಿ ಉದ್ಯಮದ ಮೇಲೆ ಅವಲಂಬಿಸಿದೆ. ಈ ಉದ್ಯಮವು ಇಲ್ಲಿನ ಲಕ್ಷಾಂತರ ಸ್ಥಳೀಯರ ಆರ್ಥಿಕ ಮೂಲವಾಗಿದೆ. ಈ ನಗರದ ಸುತ್ತ - ಮುತ್ತ ಹತ್ತಿಯನ್ನು ಬೆಳೆಯುವ ಹೊಲಗಳನ್ನು ನಾವು ಕಾಣಬಹುದು. ಇದರ ಜೊತೆಗೆ ಕೊಯಮತ್ತೂರು ದೇಶದಲ್ಲಿಯೇ ಅತಿ ಹೆಚ್ಚು ಸಿದ್ಧ ಉಡುಪುಗಳನ್ನು ಉತ್ಪಾದಿಸುವ ಕೇಂದ್ರವಾಗಿದೆ. ಅಲ್ಲದೆ ಈ ನಗರವು ಕುಕ್ಕುಟೋದ್ಯಮದಲ್ಲಿ ಸಹ ದೇಶದಲ್ಲಿಯೇ ಪ್ರಥಮ ಸ್ಥಾನವನ್ನು ಅಲಂಕರಿಸಿದೆ.

ಈ ನಗರದಲ್ಲಿ ದೊಡ್ಡ ಮತ್ತು ಸಣ್ಣ ಜವಳಿ ಮಿಲ್‍ಗಳು ಒಂದಾಗಿ ಕಾರ್ಯ ನಿರ್ವಹಿಸುತ್ತಿವೆ. ಈ ಮಿಲ್‍ಗಳು ಇಲ್ಲಿನ ಸ್ಥಳೀಯರಿಗೆ ಮತ್ತು ಹೊರಗಿನಿಂದ ಬಂದವರಿಗೆ ಕೆಲಸಗಳನ್ನು ಒದಗಿಸಿವೆ. ಅಲ್ಲದೆ ಸೆಂಟ್ರಲ್ ಇನ್ಸಿಟ್ಯೂಟ್ ಫಾರ್ ಕಾಟನ್ ರಿಸರ್ಚ್ ( CICR)  ಮತ್ತು ಸೌತ್ ಇಂಡಿಯನ್ ಟೆಕ್ಸ್ ಟೈಲ್ಸ್ ರಿಸರ್ಚ್ ಅಸೋಸಿಯೇಷನ್ (SITRA) ಮತ್ತು ಸರ್ದಾರ್ ವಲ್ಲಭಬಾಯ್ ಪಟೇಲ್ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಟೆಕ್ಸ್ ಟೈಲ್ಸ್ ಮತ್ತು ಮ್ಯಾನೆಜ್‍ಮೆಂಟ್‍ಗಳಲ್ಲಿ ಸಂಶೋಧನೆ ಮಾಡುವ ಸಲುವಾಗಿ ಹಲವಾರು ಸಂಶೋಧನಾರ್ಥಿಗಳು ಕೊಯಮತ್ತೂರಿಗೆ ಬರುತ್ತಿರುತ್ತಾರೆ. ಕೊಯಮತ್ತೂರು ನಗರದ ಒಳಗೆ ಜವಳಿ ಉದ್ಯಮಕ್ಕೆ ಬೇಕಾದ ತಾಂತ್ರಿಕ ನೈಪುಣ್ಯತೆಯನ್ನು ಒದಗಿಸುವ ಎರಡು ಕೇಂದ್ರಗಳು ಇವೆ. ಒಂದು SITRA ಅದನ್ನು ಮೆಡಿಟೆಕ್ ಎಂದು ಸಹ ಕರೆಯುತ್ತಾರೆ. ಮತ್ತೊಂದು ಇಂದು ಟೆಕ್ ಇದು ಪಿ ಎಸ್ ಜಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನೋಲಾಜಿ ಆವರಣದಲ್ಲಿದೆ.  

ಮಾಹಿತಿ ತಂತ್ರಙ್ಞಾನಾಧರಿತ ಕೈಗಾರಿಕೆಗಳ ಬೆಳವಣಿಗೆ

ಕೊಯಮತ್ತೂರಿನಲ್ಲಿ ಮಾಹಿತಿ ತಂತ್ರಙ್ಞಾನಾಧರಿತ ಕೈಗಾರಿಕೆಗಳು ಕಳೆದ 15 ವರ್ಷಗಳಲ್ಲಿ ಅತ್ಯಂತ ಶೀಘ್ರ ಗತಿಯಲ್ಲಿ ಬೆಳವಣಿಗೆಯನ್ನು ಕಂಡಿವೆ. ತಮಿಳುನಾಡು ರಾಜ್ಯದಲ್ಲಿ ಅತ್ಯಧಿಕ ಸಂಖ್ಯೆಯ ಸಾಫ್ಟ್ ವೇರ್ ಪದವಿಧರರನ್ನು ಒದಗಿಸುವಲ್ಲಿ ಚೆನ್ನೈ ನಂತರ ಕೊಯಮತ್ತೂರು ಎರಡನೆ ಸ್ಥಾನವನ್ನು ಅಲಂಕರಿಸಿದೆ. ಈ ನಗರದ ಟೈಡೆಲ್ ಪಾರ್ಕಿನಲ್ಲಿ ಐಟಿ ಮತ್ತು ಬಿಪಿಒ ಕೈಗಾರಿಕೆಗಳನ್ನು ಸ್ಥಾಪಿಸಿದ ನಂತರ ತಂತ್ರಙ್ಞಾನದಲ್ಲಿ ಸಹ ಈ ನಗರ ಅಭಿವೃದ್ಧಿ ಕಂಡಿದೆ. ಈ ಪ್ರದೇಶದಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಡೆಲ್ , ರಾಬರ್ಟ್ ಬಾಶ್ಚ್ ಮತ್ತು ಐಬಿಎಂ ಗಳಂತಹ ಸಂಸ್ಥೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಅತಿ ಶೀಘ್ರದಲ್ಲಿಯೇ ನಗರದ ಹೊರವಲಯದಲ್ಲಿ ಒಂದು ಹೊಸ ಐಟಿ ಪಾರ್ಕನ್ನು ಪ್ರಾರಂಭಿಸಲಾಗುವುದೆಂದು ತಿಳಿದುಬಂದಿದೆ.

ಮರುಧಮಲೈ ದೇವಾಲಯ, ಧ್ಯಾನಲಿಂಗ ದೇವಾಲಯ, ಇಂದಿರಾಗಾಂಧಿ ವನ್ಯಜೀವಿಧಾಮ ಮತ್ತು ರಾಷ್ಟ್ರೀಯ ಉದ್ಯಾನವನ ಮತ್ತು ಬ್ಲಾಕ್ ಥಂಡರ್ ಥೀಮ್ ಪಾರ್ಕುಗಳು ಇಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿಕೊಡುವ ತಾಣಗಳಾಗಿವೆ.

ಈ ಸ್ಥಳವು ಸುಡುವ ಬೇಸಿಗೆ, ಮಿತವಾದ ಮಳೆಗಾಲ ಮತ್ತು ತಂಪಾದ ಚಳಿಗಾಲದ ಅನುಭವವನ್ನು ನೀಡುತ್ತದೆ. ಕೊಯಮತ್ತೂರ್ ತನ್ನದೇ ಆದ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣಗಳನ್ನು ಹೊಂದಿದೆ. ಅಲ್ಲದೆ ಹತ್ತಿರದ ನಗರಗಳ ಜೊತೆಗೆ ಉತ್ತಮ ರಸ್ತೆ ಸಂಪರ್ಕವನ್ನು ಸಹ ಹೊಂದಿದೆ.

Please Wait while comments are loading...