ಕರೂರ್ - ಖರೀದಿದಾರರ ಸ್ವರ್ಗ 

ತಮಿಳುನಾಡಿನ ಕರೂರ್ ಜಿಲ್ಲೆಯಲ್ಲಿರುವ ಕರೂರ್ ಪಟ್ಟಣವು ಅಮರಾವತಿ ನದಿಯ ದಂಡೆಯ ಮೇಲೆ ನೆಲೆಸಿದೆ. ಇದರ ಆಗ್ನೇಯ ದಿಕ್ಕಿಗೆ 60 ಕಿ.ಮೀ ದೂರದಲ್ಲಿ ಈರೋಡ್ ಜಿಲ್ಲೆಯಿದ್ದು, ಪಶ್ಚಿಮಕ್ಕೆ 70 ಕಿ.ಮೀ ದೂರದಲ್ಲಿ ತಿರುಚ್ಚಿಯಿದೆ. ಇನ್ನು ಉತ್ತರ, ದಕ್ಷಿಣ ಮತ್ತು ಪೂರ್ವ ದಿಕ್ಕುಗಳಲ್ಲಿ ಕ್ರಮವಾಗಿ 150 ಕಿ.ಮೀ,100 ಕಿ.ಮೀ,140 ಕಿ.ಮೀ ದೂರಗಳಲ್ಲಿ ಮದುರೈ, ಸೇಲಂ ಹಾಗು ಕೊಯಮತ್ತೂರು ನೆಲೆಸಿವೆ.

ತಿರುಚಿರಾಪಳ್ಳಿಯಿಂದ ವಿಭಜನೆಗೊಂಡು ಕರೂರ್ ಜಿಲ್ಲೆಯು 1995 ರಲ್ಲಿ ಪ್ರವರ್ಧಮಾನಕ್ಕೆ ಬಂದಿತು. ಕಾವೇರಿ, ಅಮರಾವತಿ, ನಲ್ಕಾಸಿ, ಕುಡಗನಾರ್ ಮತ್ತು ನೊಯ್ಯಲ್ ಮುಂತಾದ ನದಿಗಳು ಹರಿದಿವೆ ಈ ಜಿಲ್ಲೆಯಲ್ಲಿ. ಈ ಪಟ್ಟಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಣ್ಣ ಕೈಗಾರಿಕೆಗಳು ಇರುವುದರಿಂದ ಗ್ರಾಹಕರಿಗೆ ಒಂದು ಉತ್ತಮ ಅನುಭವವನ್ನು ಕೊಡುತ್ತದೆ.

ಕರೂರ್ ಸುತ್ತಮುತ್ತಲಿರುವ ಪ್ರವಾಸಿ ಆಕರ್ಷಣೆಗಳು

ಕರೂರ್ ತನ್ನಲ್ಲಿರುವ ಹಲವಾರು ಪುರಾತನ ದೇವಾಲಯಗಳಿಂದಾಗಿ ಹೆಸರುವಾಸಿಯಾಗಿದೆ. ಏಳು ಪವಿತ್ರ ಶಿವಾಲಯ ಸ್ಥಳಗಳ ಪೈಕಿ ಒಂದನ್ನು ಹೊಂದಿರುವ ಈ ಪಟ್ಟಣವು ಪಶುಪತೀಶ್ವರಲಿಂಗಂ ದೇವಾಲಯದಿಂದಾಗಿ ಪ್ರಸಿದ್ಧವಾಗಿದೆ. ಈ ದೇವಾಲಯದಲ್ಲಿ ಐದು ಅಡಿ ಎತ್ತರವುಳ್ಳ ಲಿಂಗವನ್ನು ಕಾಣಬಹುದು.

ಇಲ್ಲಿ ದರ್ಶಿಸಬಹುದಾದ ಇತರೆ ಪ್ರಸಿದ್ಧ ದೇವಾಲಯಗಳೆಂದರೆ, ಪುಗಳಿಮಲೈ ಶ್ರೀ ಅರುಪದೈ ಮುರುಗನ್ ದೇವಾಲಯ, ಕಲ್ಯಾಣ ಪಶುಪತೀಶ್ವರರ್ ದೇವಾಲಯ, ಶ್ರೀ ಕರವೂರ್ ಮಾರಿಅಮ್ಮನ್ ದೇವಾಲಯ, ಸೆರೂರ್ ಶ್ರೀ ಸದಾಶಿವಭ್ರಮೇಂದ್ರಾಲ್ ದೇವಾಲಯ, ಶಿರಡಿ ಸಾಯಿ ದೇವಾಲಯ, ಶ್ರೀ ಸೊಲಿಅಮ್ಮನ್ ದೇವಾಲಯ, ಶ್ರೀ ಮಹಾಕಾಲಿಯಮ್ಮನ್ ದೇವಾಲಯ, ಶ್ರೀ ವಂಗಾಲಮ್ಮನ್ ದೇವಾಲಯ, ಕಲ್ಯಾಣ ವೆಂಕಟರಮಣ ಸ್ವಾಮಿ ದೇವಾಲಯ, ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಅಮ್ಮನ್ ದೇವಾಲಯ, ಸದಾಶಿವ ದೇವಾಲಯ ಮತ್ತು ಅಗ್ನೀಶ್ವರರ್ ದೇವಾಲಯ.

ಕರೂರಿಗೆ ಹತ್ತಿರದಲ್ಲಿರುವ ಇತರೆ ಸ್ಥಳಗಳೆಂದರೆ ಮಯನೂರ್, ನೊಯ್ಯಲ್, ನೆರೂರ್, ಚೆಟ್ಟಿಪಾಳಯಂ, ತಿರುಮುಕ್ಕುಡಾಲ್ ಮತ್ತು ಕಡವೂರ್. ಕರೂರ್ ಸರ್ಕಾರಿ ಸಂಗ್ರಹಾಲಯ ಇಲ್ಲಿದ್ದಾಗ ಭೇಟಿ ನೀಡಬಹುದಾದ ಮತ್ತೊಂದು ಆಕರ್ಷಣೆ. ಪೊಂಗಲ್, ತಮಿಳು ಹೊಸ ವರ್ಷ, ಆದಿ ಪೆರುಕ್ಕು, ವೈಕುಂಠ ಏಕಾದಶಿ, ವೇರಾಪುರ್ ವಾರ್ಷಿಕೋತ್ಸವ, ಕರೂರ್ ಮಾರಿಅಮ್ಮನ್ ವಾರ್ಷಿಕ ಉತ್ಸವ ಮುಂತಾದ ಹಬ್ಬಗಳನ್ನು ಇಲ್ಲಿ ಅತಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಇತಿಹಾಸದೆಡೆ ಒಂದು ನೋಟ

ತಮಿಳುನಾಡಿನ ಪುರಾತನ ಪಟ್ಟಣಗಳಲ್ಲೊಂದಾದ ಕರೂರ್ ತನ್ನ ಸಂಸ್ಕೃತಿ ಹಾಗು ಸಂಪ್ರದಾಯಗಳಿಗೆ ಹೆಸರುವಾಸಿಯಾಗಿದೆ. ಇದರ ಇತಿಹಾಸವು ಸುಮಾರು 2000 ವರ್ಷಗಳ ಹಿಂದಿನ ಸಂಗಮರ ಕಾಲಕ್ಕೆ ಕರೆದೊಯ್ಯುತ್ತದೆ. ಕರೂರ್ ಅನ್ನು ಚೇರರು, ಗಂಗರು, ಚೋಳರು, ವಿಜಯನಗರ ಅರಸರು, ಮೈಸೂರು ಅರ್ಸರು ಮತ್ತು ಬ್ರಿಟೀಷರು ಹೀಗೆ ಹಲವಾರು ಸಾಮ್ರಾಜ್ಯಗಳು ಆಳಿ ಹೋಗಿವೆ.

ಕರೂರ್ ಹಲವಾರು ಶಾಸನಗಳಲ್ಲಿ ಮತ್ತು ಸಾಹಿತ್ಯೀಕ ಗ್ರಂಥಗಳಲ್ಲಿ ಹಲವು ನಾಮಗಳಿಂದ ಸಂಭೋದಿಸಲ್ಪಟ್ಟಿದೆ. ಅವುಗಳೆಂದರೆ ಕರುವೂರ್, ವಂಜಿ, ಆದಿಪುರಂ, ಪೌಪತೀಚುರಂ, ವಂಕಿ ಮೂತುರ ತಿರುವಾನಿಲೈ, ವಂಜುಲಾರಣ್ಯಂ, ಕರುವೈಪಟ್ಟಿನಾಂ, ತಿರು ವಿತಿವಕ್ಕೊಟಂ, ಮುಡಿವಳಂಗು ವೀರಚೋಳಪುರಂ, ಗರ್ಭಪುರಂ, ಕರಪುರಂ, ಭಾಸ್ಕರಪುರಂ, ಅದಗ ಮಾದಂ, ಶನ್ಮಂಗಳ ಕ್ಷೇತ್ರಂ, ಚೇರಮ ನಗರ ಮತ್ತು ಕರೌರಾ. ಸಂಗಮರ ಕಾಲದಲ್ಲಿ ಅಮರಾವತಿ ನದಿಯ ತಟದ ಮೇಲೆ ಕಟ್ಟಲಾದ ಈ ಪಟ್ಟಣವನ್ನು ಅನಪೊರುನೈ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು.

ಪೌರಾಣಿಕ ಕಥೆಗಳ ಪ್ರಕಾರ, ಬ್ರಹ್ಮನ ಸೃಷ್ಟಿ ರಚನೆಯ ಕಾರ್ಯಾರಂಭವು ಈ ಒಂದು ಸ್ಥಳದಿಂದಲೆ ಆಯಿತು ಎನ್ನಲಾಗುತ್ತದೆ ಹಾಗು ಇದನ್ನು 'ಪವಿತ್ರ ಹಸುವಿನ ಸ್ಥಳ' ಎಂದು ಕರೆಯಲಾಗಿತ್ತು. ಕರೂರಿಗೆ ಹತ್ತಿರದಲ್ಲಿರುವ ಆರು ನಟ್ಟರ್ ಮಲೈನಲ್ಲಿ ಕಂಡುಬರುವ ಶಾಸನಗಳಲ್ಲಿ ಚೇರ ರಾಜರ ಹೆಸರುಗಳನ್ನು ಕಾಣಬಹುದಾಗಿದೆ.

ಹಿಂದೆ ಈ ನಗರವು ಆಭರಣ ತಯಾರಿಕೆ ಮತ್ತು ವ್ಯಾಪಾರದ ಕೇಂದ್ರವಾಗಿತ್ತು. ಕರೂರ್ ಅಥವಾ ಕೊರೆವೊರಾದ ಹೆಸರು ಗ್ರೀಕ್ ಬರಹಗಾರ ಟಾಲೆಮಿ(Ptolemy)ಯ ಬರಹಗಳಲ್ಲೂ ಕಾಣಬಹುದಾಗಿದೆ. ಚೋಳರ ಕಾಲದಲ್ಲಿ ಜೀವಿಸಿದ್ದ ತಿರುವಿಚೈಪ್ಪಾ ಗಾಯಕ, ಕರುವೂರ್ ತೆವರ್ ನ ಹುಟ್ಟು ಸ್ಥಳವು ಕೂಡ ಕರೂರ್. 1874 ರಲ್ಲಿ ಬ್ರಿಟೀಷರು ಈ ನಗರವನ್ನು ಪುರಸಭೆಯನ್ನಾಗಿ ಪರಿವರ್ತಿಸಿದರು.  

ತಲುಪುವ ಬಗೆ

ಕರೂರ್ ಗೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣಗಳೆಂದರೆ ತಿರುಚ್ಚಿ ಮತ್ತು ಕೊಯಮತ್ತೂರಿನ ವಾಯು ನೆಲೆಗಳು. ಚೆನ್ನೈ ಇದಕ್ಕೆ ಹತ್ತಿರದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಕರೂರಿನ ರೈಲು ನಿಲ್ದಾಣವು ನಗರದ ಮಧ್ಯಭಾಗದಲ್ಲೆ ನೆಲೆಸಿದ್ದು, ತಮಿಳುನಾಡಿನಾದ್ಯಂತ ಉತ್ತಮ ಸಂಪರ್ಕವನ್ನು ಹೊಂದಿದೆ. ತಮಿಳುನಾಡಿನ ಹಲವು ನಗರಗಳಿಂದಲೂ ಕರೂರಿಗೆ ಉತ್ತಮ ಎನ್ನಬಹುದಾದ ರಸ್ತೆ ಸಂಪರ್ಕವಿದೆ. ಹೀಗಾಗಿ ಕರೂರ್ ಅನ್ನು ತಮಿಳುನಾಡಿನ ಯಾವುದೆ ಭಾಗಗಳಿಂದ ಸುಲಭವಾಗಿ ತಲುಪಬಹುದಾಗಿದೆ.

ಹವಾಮಾನ

ಕರೂರ್ ಸಾಮಾನ್ಯವಾಗಿ ಅರೆ ಉಷ್ಣವಲಯದ ಹವಾಗುಣವನ್ನು ಹೊಂದಿರುವುದರಿಂದ ಬೇಸಿಗೆಯು ಶಾಖಮಯವಾಗಿದ್ದು, ಚಳಿಗಾಲವು ತಂಪಾಗಿರುತ್ತದೆ. ಮಳೆಗಾಲದ ಸಮಯದಲ್ಲಿ ಕರೂರ್ ಮಧ್ಯಮ ಪ್ರಮಾಣದ ಮಳೆಯನ್ನು ಪಡೆಯುತ್ತದೆ ಹಾಗು ಬೇಸಿಗೆಯ ಬೇಗೆಯಿಂದ ವಿರಾಮವನ್ನು ಒದಗಿಸುತ್ತದೆ. ಅಕ್ಟೋಬರ್ ನಿಂದ ಮಾರ್ಚ್ ಮಧ್ಯದ ಅವಧಿಯು ಇಲ್ಲಿಗೆ ಭೇಟಿ ನೀಡಲು ಪ್ರಶಸ್ತವಾಗಿದೆ.

Please Wait while comments are loading...