ತಂಜಾವೂರು - ಚೋಳರು ಆಳಿದ್ದ ಅತ್ಯದ್ಭುತ ನಗರ

ತಂಜಾವೂರು ಜಿಲ್ಲೆಯು ಆರು ಉಪಜಿಲ್ಲೆಗಳನ್ನೊಳಗೊಂಡಿದ್ದು, ತಂಜಾವೂರು ನಗರಸಭೆಯು ಇದರ ಒಂದು ಭಾಗವಾಗಿದೆ. ತಂಜಾವೂರು ಚೋಳರ ಆಳ್ವಿಕೆಯ ಕಾಲದಲ್ಲಿ ಪ್ರಖ್ಯಾತಿ ಪಡೆದಿದ್ದು, ಇದು ಅವರ ರಾಜಧಾನಿಯಾಗಿತ್ತು.

ಹದಿನೆಂಟನೇ ಶತಮಾನದ ಕೊನೆಯಲ್ಲಿ ದೇಶದ ಸಾಂಸ್ಕೃತಿಕ ಕೇಂದ್ರವೆಂದು ಕರೆಯಲ್ಪಟ್ಟು, ವರ್ಷಗಳಿಂದ ಸಾವಿರಾರು ಪ್ರವಾಸಿಗರು ಹಾಗೂ ತೀರ್ಥಯಾತ್ರಿಗಳ ಮುಖ್ಯ ಆಯ್ಕೆಯಾಗಿ ಉಳಿದುಕೊಂಡ ಖ್ಯಾತಿ ತಂಜಾವೂರಿನದ್ದು. ಆಧ್ಯಾತ್ಮಿಕ ಕೇಂದ್ರಬಿಂದುವಾದ ಇಲ್ಲಿಗೆ, 2009 ನೇ ಇಸವಿಯಲ್ಲಿ 2,00,225 ಭಾರತೀಯ ಹಾಗೂ 81,435 ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ.

ಅತ್ಯಮೂಲ್ಯ ವಾಸ್ತುಕಲೆಗಳು - ತಂಜಾವೂರಿನ ಸುತ್ತಲಿನ ಆಕರ್ಷಣೆಗಳು

ಮಧ್ಯಯುಗದ ಅಸಾಧಾರಣ ಚೋಳ ರಾಜರಾದ ರಾಜ ರಾಜ ಚೋಳ -I ಅವರು ಕ್ರಿ.ಶ 11 ನೇ  ಶತಮಾನದಲ್ಲಿ ನಿರ್ಮಿಸಿದಂತಹ ಶ್ರೀ ಬೃಹದೀಶ್ವರ ದೇವಸ್ಥಾನವು ತಂಜಾವೂರಿನಲ್ಲಿ ಅತೀ ಹೆಚ್ಚು ಜನರು ಭೇಟಿ ನೀಡುವ ಸ್ಥಳವಾಗಿದೆ. ಯುನೆಸ್ಕೋ ದಿಂದ 1987 ರಲ್ಲಿ 'ವರ್ಲ್ಡ್ ಹೆರಿಟೇಜ್ ಸೆಂಟರ್' ಎಂದು ಘೋಷಿಸಲ್ಪಟ್ಟ ಈ ದೇವಸ್ಥಾನದಲ್ಲಿ ಶಿವ ದೇವರನ್ನು ಪೂಜಿಸಲಾಗುತ್ತದೆ.

ತಂಜಾವೂರ್ ಮರಾಠ ಅರಮನೆ ಇಲ್ಲಿನ ಇನ್ನೊಂದು ಜನಪ್ರಿಯ ತಾಣ. ತಂಜವೂರ್ ನಾಯಕ ರಾಜ್ಯಭಾರದ ಸಂದರ್ಭದಲ್ಲಿ ನಿರ್ಮಿಸಿದ ಈ ಅರಮನೆಯು, 1674 ರಿಂದ 1855 ರ ವರೆಗೆ ತಂಜಾವೂರನ್ನು ಆಳುತ್ತಿದ್ದ ಭೋಂಸ್ಲೆ ಕುಟುಂಬದ ಅಧೀಕೃತ ನಿವಾಸವಾಗಿತ್ತು. 1799 ರಲ್ಲಿ ತಂಜಾವೂರ್ ಮರಾಠ ರಾಜ್ಯದ ಬಹುಭಾಗವು ಬ್ರಿಟಿಷ್ ರಾಜ್ ಗೆ ಸೇರಿತ್ತಾದರೂ ಈ ಅರಮನೆ ಹಾಗೂ ಅದರ ಸುತ್ತಲಿನ ಕೋಟೆಯು ಮರಾಠರ ಕೈಕೆಳಗೆ ಇತ್ತು.

ಈ ಅರಮನೆಯ ಪರಿಸರದಲ್ಲಿರುವ ಸರಸ್ವತಿ ಮಹಲ್ ಪುಸ್ತಕಾಲಯದಲ್ಲಿ ಕಾಗದ ಮತ್ತು ತಾಳೆಗರಿಯಲ್ಲಿ ಬರೆದ ಮೂವತ್ತು ಸಾವಿರಕ್ಕೂ ಅಧಿಕ ಭಾರತೀಯ ಹಾಗೂ ಯುರೋಪ್ ನ ಹಸ್ತಪ್ರತಿಗಳಿವೆ. ಈ ಅರಮನೆಯ ಒಳಗೆ ರಾಜರಾಜ ಚೋಳ ಕಲಾ ಭವನವಿದೆ. ಇದರಲ್ಲಿ ಒಂಭತ್ತು ರಿಂದ ಹನ್ನೆರಡನೇ ಶತಮಾನಕ್ಕೆ ಸೇರಿದಂತಹ ಕಲ್ಲು ಹಾಗೂ ಕಂಚಿನ ವಿಗ್ರಹಗಳಿವೆ.

ಈ ಅರಮನೆಯ ಉದ್ಯಾನದಲ್ಲಿರುವ ಶ್ವಾರ್ಟ್ಜ್ ಚರ್ಚ್ ಅನ್ನು ಸೆರ್ಜೊಇ-II ಅವರು ಡಚ್ ಮಿಷನ್ ನ ಅಧಿಕಾರಿಯಾಗಿದ್ದ ಸರ್ ಸಿ.ವಿ ಶ್ವಾರ್ಟ್ಜ್ ಅವರ ಮೇಲಿನ ಗೌರವದ ಸಂಕೇತವಾಗಿ ನಿರ್ಮಿಸಿದ್ದರು.

ಅಲೌಕಿಕ ಹಾಗೂ ನಿಗೂಢ ಚರಿತ್ರೆ

ಒಂದು ಪಂಗಡ ತಜ್ಞರ ಪ್ರಕಾರ ತಂಜಾವೂರು ಎಂಬ ಹೆಸರು ಬಂದಿದ್ದು 'ತಂಜನ್' ಎಂಬ ಶಬ್ದದಿಂದ. ತಂಜನ್ ಎಂಬುದು ಹಿಂದೂ ಪುರಾಣದಲ್ಲಿ ಬರುವ ಒಬ್ಬ ರಾಕ್ಷಸನ ಹೆಸರು. ಈ ರಾಕ್ಷಸನನ್ನು ಶ್ರೀ ಮಹಾವಿಷ್ಣು ವಧಿಸಿದ್ದಾಗಿಯೂ, ಅವನ ಕೊನೆ ಇಚ್ಛೆಯಂತೆ ಈ ಊರಿಗೆ ಅವನ ಹೆಸರನ್ನು ಇರಿಸಿದ್ದಾಗಿಯೂ ನಂಬಿಕೆಯಿದೆ. ಇನ್ನೊಂದು ಪ್ರಕಾರವಾಗಿ, ಊರಿನ ಹೆಸರು 'ತಾನ್-ಸೀ-ಊರ್' ಎಂಬ ಶಬ್ದದಿಂದ ಉಗಮವಾಗಿದ್ದು, ಇದು 'ನದಿ ಹಾಗೂ ಭತ್ತದ ಹಸಿರು ಗದ್ದೆಗಳಿಂದ ಸುತ್ತುವರೆದ ಜಾಗ' ಎಂಬ ಅರ್ಥ ಕೊಡುತ್ತದೆ. ಇನ್ನೊಂದು ಮೂಲದಂತೆ ತಂಜಾವೂರು 'ತಂಜಮ್' ಎಂಬ ಶಬ್ದದಿಂದ ಉಗಮಿಸಿದೆ. ತಂಜಮ್ ಎಂದರೆ 'ಆಶ್ರಯ ಕೋರು' ಎಂದು ಅರ್ಥ. ಇದರ ಪ್ರಕಾರ, ಚೋಳ ರಾಜನಾದ ಕರಿಕರನ್ ಅವರು ತಮ್ಮ ರಾಜಧಾನಿಯಾಗಿದ್ದ ಪೂಂಪುಗಾರ್ ನೆರೆಯಿಂದ ಹಾನಿಗೊಳಗಾದಾಗ, ತಮ್ಮ ರಾಜಧಾನಿಯನ್ನು ತಂಜಾವೂರಿಗೆ ವರ್ಗಾವಣೆ ಮಾಡಿದ್ದರು.

ಕಲೆ ಮತ್ತು ಉತ್ಸವಗಳು

ತ್ಯಾಗರಾಜ ಆರಾಧನ, ಪ್ರತೀ ವರ್ಷದ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ನಡೆಯುವ ಶಾಸ್ತ್ರೀಯ ಸಂಗೀತೋತ್ಸವ, ಯು ತಂಜಾವೂರಿನಲ್ಲಿ ಪ್ರಾರಂಭವಾಯಿತು. ಜನವರಿ 14 ರಿಂದ 16 ರ ವರೆಗೆ ಇಲ್ಲಿ ಪೊಂಗಲ್ ಹಬ್ಬವು ನಡೆಯುತ್ತದೆ. ಪ್ರತಿವರ್ಷ ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಅಣ್ಣೈ ವೆಲಂಕಣ್ಣಿ ಉತ್ಸವ ಹಾಗೂ ಅಕ್ಟೋಬರ್ ನಲ್ಲಿ ರಾಜರಾಜ ಚೋಳ ಅವರ ಹುಟ್ಟುಹಬ್ಬ 'ಸಥಯ ತಿರುವಿಳ್ಹ' ವನ್ನು ಆಚರಿಸಲಾಗುತ್ತದೆ.

ಕಲಾಸಕ್ತರು ಇಲ್ಲಿನ ತಂಜಾವೂರ್ ಚಿತ್ರಕಲೆ ಎಂದೇ ಕರೆಯಲ್ಪಡುವ, ದಕ್ಷಿಣ ಭಾರತದಲ್ಲೇ ಶಾಸ್ತ್ರೀಯ ಚಿತ್ರಕಲೆಗೆ ಪ್ರಖ್ಯಾತವಾದ ಚಿತ್ರಕಲೆಗಳನ್ನು ಇಲ್ಲಿ ಸವಿಯಬಹುದು. ಅದಲ್ಲದೆ, ಈ ನಗರವು ರೇಷ್ಮೆ ನೇಯ್ಗೆ ಹಾಗೂ ಸಂಗೀತ ಉಪಕರಣಗಳ ತಯಾರಿಕೆಗೂ ಪ್ರಸಿದ್ಧವಾಗಿದೆ. ಇಲ್ಲಿ ತಯಾರಾದ ರೇಷ್ಮೆ ಸೀರೆಗಳು ಅದರ ಗುಣಮಟ್ಟ ಮತ್ತು ಪರಿಪೂರ್ಣತೆಗೆ ಹೆಸರುವಾಸಿಯಾಗಿದೆ.

ಏನನ್ನು ನಿರೀಕ್ಷಿಸಬಹುದು?

ತಂಜಾವೂರಿನ ಜನರ ಕುಲವೃತ್ತಿ ಕೃಷಿಯಾದರೂ, ಈಗ ಅಲ್ಲಿನ ಹೆಚ್ಚಿನ ಜನರು ಪ್ರವಾಸೋದ್ಯಮ ನಡೆಸುತ್ತಿದ್ದಾರೆ. 'ತಮಿಳುನಾಡಿನ ರೈಸ್ ಬೌಲ್' ಎಂದೇ ಪ್ರಖ್ಯಾತವಾದ ತಂಜಾವೂರಿನಲ್ಲಿ ಅಕ್ಕಿ,ತೆಂಗು, ಎಳ್ಳು, ಬಾಳೆ, ಹೆಸರುಕಾಳು, ಜೋಳ ಹಾಗೂ ಕಬ್ಬು ಬೆಳೆಯುತ್ತಾರೆ.

ಸಂಗೀತ ಮಹಲ್, ಮನೋರ ಕೋಟೆ, ಬೃಹದೀಶ್ವರ ದೇವಸ್ಥಾನ, ಕಲಾ ಭವನ, ಶಿವಗಂಗ ದೇವಸ್ಥಾನ, ಶ್ವಾರ್ಟ್ಜ್ ಚರ್ಚ್, ಸರಸ್ವತಿ ಮಹಲ್ ಪುಸ್ತಕಾಲಯ, ವಿಜಯನಗರ  ಕೋಟೆ ಹಾಗೂ ಮುರುಗನ್ ದೇವಸ್ಥಾನ, ಇಲ್ಲಿ ಸುತ್ತಲಿನ ಪ್ರೇಕ್ಷಣೀಯ ಸ್ಥಳಗಳು.

ತಂಜಾವೂರು ತಲುಪುವ ಬಗೆ

ಕಾವೇರಿ ನದೀಮುಖಜಭೂಮಿಯಾದ ತಂಜಾವೂರಿನ ಒಟ್ಟು ವಿಸ್ತೀರ್ಣ 36 ಚದರ ಕಿಲೋಮೀಟರು. ಈರೋಡ್, ವೆಲ್ಲೂರ್, ಕೊಚ್ಚಿ, ಊಟಿ ಮತ್ತು ಇತರ ಪ್ರಮುಖ ನಗರಗಳಿಂದ ತಂಜಾವೂರಿಗೆ ಒಳ್ಳೆಯ ರಸ್ತೆ ವ್ಯವಸ್ಥೆಯಿದೆ. ನಗರದಾದ್ಯಂತ ಸಾರಿಗೆ ವ್ಯವಸ್ತೆ ಚೆನ್ನಾಗಿದ್ದು, ಸರಕಾರೀ ಹಾಗೂ ಖಾಸಗಿ ಬಸ್ ಗಳು ಹತ್ತಿರದ ಪೇಟೆ ಹಾಗೂ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತವೆ.

ಹವಾಮಾನ

ತಂಜಾವೂರಿನ ಹವಾಮಾನ ಹತ್ತಿರದ ಇತರ ಜಾಗಗಳಂತೆಯೇ ಇದ್ದು ಬೇಸಿಗೆಕಾಲದಲ್ಲಿ ತುಂಬಾ ಸೆಖೆ ಹಾಗೂ ಶೈತ್ಯದಿಂದ ಕೂಡಿರುತ್ತದೆ. ಮಳೆಗಾಲದಲ್ಲಿ ನೈಋತ್ಯ ಮುಂಗಾರು ಕಡಿಮೆಯಾಗಿದ್ದು ಈಶಾನ್ಯ ಮುಂಗಾರಿನಿಂದ ಒಳ್ಳೆಯ ಮಳೆ ದೊರೆಯುತ್ತದೆ. ಈಶಾನ್ಯ ಮಳೆಯ ಸಂದರ್ಭದಲ್ಲಿ, ಪಶ್ಚಿಮ ಘಟ್ಟದಿಂದ ಕಾವೇರಿ ನದಿಯು ತುಂಬಿ ಹರಿಯಲು ಸಹಾಯವಾಗುತ್ತದೆ.

ನಗರದಾದ್ಯಂತ ಸರಕಾರೀ ಹಾಗೂ ಖಾಸಗಿ ವಸತಿ ವ್ಯವಸ್ತೆಯಿದ್ದು, ಪ್ರವಾಸಿಗ ಹಾಗೂ ತೀರ್ಥಯಾತ್ರಿಗಳಿಗೆ ಅವರ ಆಸಕ್ತ ಸ್ಥಳಗಳ ಬಳಿಯಲ್ಲಿಯೇ ಉಳಿದುಕೊಳ್ಳಲು ಅನುಕೂಲಕರವಾಗಿದೆ.

Please Wait while comments are loading...