ಕಾರೈಕುಡಿ - ಚೆಟ್ಟಿನಾಡಿನ ಹೆಮ್ಮೆ

ಕಾರೈಕುಡಿ ಎಂಬುದು ತಮಿಳುನಾಡಿನಲ್ಲಿರುವ ಶಿವಗಂಗೈ ಜಿಲ್ಲೆಯಲ್ಲಿರುವ ಒಂದು ನಗರವಾಗಿದೆ. ಈ ನಗರವು ಇಡೀ ಜಿಲ್ಲೆಯಲ್ಲಿಯೇ ಅತಿ ದೊಡ್ಡದಾದ ಪುರಸಭೆಯೆಂಬ ಅಭಿಧಾನಕ್ಕೆ ಪಾತ್ರವಾಗಿದೆ. ಇದು ಚೆಟ್ಟಿನಾಡ್ ಪ್ರಾಂತ್ಯದ ಒಂದು ಭಾಗವಾಗಿದ್ದು, ಒಟ್ಟಾರೆಯಾಗಿ 75 ಗ್ರಾಮಗಳನ್ನು ಹೊಂದಿದೆ. ಈ ನಗರವು ತಿರುಚಿಯಿಂದ ರಾಮೇಶ್ವರಕ್ಕೆ ಸಂಪರ್ಕಿಸುವ ಹೆದ್ದಾರಿಯಲ್ಲಿ ಬರುತ್ತದೆ. ಈ ನಗರವು ತನ್ನಲ್ಲಿರುವ ಅನುಪಮವಾದ ಮನೆಗಳ ಶೈಲಿಗಾಗಿಯೇ ಇಡೀ ದಕ್ಷಿಣ ಭಾರತದಲ್ಲಿಯೇ ಹೆಸರುವಾಸಿಯಾಗಿದೆ. ಇಲ್ಲಿನ ಮನೆಗಳನ್ನು ಸುಣ್ಣದ ಕಲ್ಲುಗಳನ್ನು ಬಳಸಿ ನಿರ್ಮಿಸಲಾಗಿದೆ. ಇದನ್ನು ಇಲ್ಲಿನ ಸ್ಥಳೀಯ ಭಾಷೆಯಲ್ಲಿ " ಕರೈ ವೀಡು" ಎಂದು ಕರೆಯಲಾಗುತ್ತದೆ. ಕೆಲವರ ಪ್ರಕಾರ, ಈ ಊರಿಗೆ ಈ ಪ್ರದೇಶದಲ್ಲಿ ಯಥೇಚ್ಛವಾಗಿ ದೊರೆಯುವ "ಕರೈ" ಎಂಬ ಸಸ್ಯದಿಂದಾಗಿ ಈ ಹೆಸರು ಬಂದಿತಂತೆ.

ಕರೈಕುಡಿಯು ಮೊದಲಿಗೆ ರಾಮನಾಥಪುರಂ ಜಿಲ್ಲೆಯಲ್ಲಿ ಗುರುತಿಸಿಕೊಂಡಿತ್ತು. ಇದು ಪುರಸಭೆ ಸ್ಥಾನಮಾನವನ್ನು 1928 ರಲ್ಲಿ ಪಡೆಯಿತು. ದುರದೃಷ್ಟವಶಾತ್ ಈ ನಗರದ ಇತಿಹಾಸದ ಬಗ್ಗೆ ಅಷ್ಟಾಗಿ ತಿಳಿದು ಬಂದಿಲ್ಲ. ಸ್ಥಳೀಯರ ಪ್ರಕಾರ, ಈ ನಗರವನ್ನು 18ನೇ ಶತಮಾನದಲ್ಲಿ ನಿರ್ಮಿಸಲಾಯಿತಂತೆ. ಅಲ್ಲದೆ ಈ ನಗರದಲ್ಲಿರುವ ಅತ್ಯಂತ ಹಳೆಯ ದೇವಾಲಯದ ನಿರ್ಮಾಣದ ಕಾಲವು 18ನೇ ಶತಮಾನದಷ್ಟು ಹಿಂದಕ್ಕೆ ಹೋಗುತ್ತದೆ.

ಚೆಟ್ಟಿಯಾರರು ಮತ್ತು ಕಾರೈಕುಡಿ

ಎಲ್ಲರಿಗು ತಿಳಿದಿರುವ ವಿಚಾರವೇನೆಂದರೆ ಕಾರೈಕುಡಿ ನಗರದ ಅಭಿವೃದ್ಧಿಯಲ್ಲಿ ಚೆಟ್ಟಿಯಾರರ ಪಾತ್ರ ಪ್ರಮುಖವಾಗಿದೆಯೆಂದು. ಇಂದಿಗು ಚೆಟ್ಟಿಯಾರ್ ಸಮುದಾಯವು ಈ ನಗರದಲ್ಲಿ ಅಧಿಕವಾಗಿ ನೆಲೆಸಿದೆ. ಈ ಸಮುದಾಯದವರು ಕಾರೈಕುಡಿ ನಗರ ಜನ್ಮತಾಳಿದ ದಿನದಿಂದಲು ಇಲ್ಲಿನ ವ್ಯಾಪಾರ ಮತ್ತು ವಹಿವಾಟಿನಲ್ಲಿ ಪ್ರಧಾನ ಪಾತ್ರವಹಿಸಿ ಪೋಷಿಸಿಕೊಂಡು ಬಂದಿದ್ದಾರೆ. ಇವರುಗಳು ಈ ನಗರವನ್ನು ವ್ಯವಸ್ಥಿತವಾಗಿ ಬೆಳೆಸಿದರು, ಶೈಕ್ಷಣಿಕ ಸಂಸ್ಥೆಗಳನ್ನು, ಬ್ಯಾಂಕ್‍ಗಳನ್ನು, ದೇವಾಲಯಗಳನ್ನು ನಿರ್ಮಿಸಿದರು. ಅಲ್ಲದೆ ಸಾಂಪ್ರದಾಯಿಕವಾಗಿ ಉತ್ಸವಗಳನ್ನು ನೆರವೇರಿಸಿದರು. ಇವೆಲ್ಲದರ ಜೊತೆಗೆ ಅವರು ಸಮಾಜದಲ್ಲಿ ಸುಧಾರಣೆಯನ್ನು ಸಹ ತರಲು ಶ್ರಮಿಸಿದರು.

ಕರೈಕುಡಿಯನ್ನು ಪ್ರತಿ ವಿಷಯದಲ್ಲಿಯು ಸ್ವಾವಲಂಬಿಯನ್ನಾಗಿ ಮಾಡುವ ಸಲುವಾಗಿ ಚೆಟ್ಟಿಯಾರ್ ಸಮುದಾಯಕ್ಕೆ ಸೇರಿದ ವಲ್ಲಲ್ ಅಳಗಪ್ಪರ್‍ ರವರು ಇಲ್ಲಿ ಅಳಗಪ್ಪ ವಿಶ್ವ ವಿದ್ಯಾನಿಲಯವನ್ನು ಸ್ಥಾಪಿಸಿದರು. ಪ್ರಸ್ತುತ ಈ ವಿಶ್ವವಿದ್ಯಾನಿಲಯವು ಉತ್ತಮ ಶಿಕ್ಷಣಕ್ಕಾಗಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಇಂಜಿನೀಯರಿಂಗ್ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಕಾರೈಕುಡಿ ಸುತ್ತ ಮುತ್ತಲ ಊರುಗಳಿಂದ ಮತ್ತು ಇನ್ನಿತರ ಭಾಗಗಳಿಂದ ಇಲ್ಲಿಗೆ ಬರುತ್ತಾರೆ. ಈ ವಿಶ್ವವಿದ್ಯಾನಿಲಯದ ಇಂಜಿನಿಯರಿಂಗ್ ಕಾಲೇಜುಗಳು ದೇಶದಲ್ಲಿಯ ಶ್ರೇಷ್ಠ ಕಾಲೇಜುಗಳಲ್ಲಿ ಒಂದಾಗಿ ಸ್ಥಾನ ಪಡೆದಿವೆ. ಇತ್ತೀಚೆಗೆ ಬಿ.ಟೆಕ್ ಕೋರ್ಸನ್ನು ಈ ವಿಶ್ವವಿದ್ಯಾನಿಲಯಲ್ಲಿ ಜಾರಿಗೆ ತರಲಾಗಿದೆ. ಈ ವಿಶ್ವವಿದ್ಯಾನಿಲಯದಲ್ಲಿ ಇಂಜಿನಿಯರಿಂಗ್ ಕೋರ್ಸುಗಳ ಜೊತೆಗೆ ಕಲೆ, ಲಲಿತ ಕಲೆ, ವಿಜ್ಞಾನ ಮತ್ತು ಮಾನವೀಕ ವಿಜ್ಞಾನಕ್ಕೆ ಸಂಬಂಧಪಟ್ಟ ಕೋರ್ಸುಗಳನ್ನು ಸಹ ನಡೆಸಲಾಗುತ್ತದೆ.

ತಮಿಳುನಾಡಿನಲ್ಲಿ ಕರೈಕುಡಿಯ ಪ್ರಾಮುಖ್ಯತೆ

ಅತ್ಯುತ್ತಮವಾದ ಶೈಕ್ಷಣಿಕ ಸಂಸ್ಥೆಗಳ ಜೊತೆಗೆ ಕರೈಕುಡಿಯು ದಕ್ಷಿಣ ಭಾರತದ ಖ್ಯಾತ ಸಿನಿಮಾ ನಿರ್ಮಾಪಕರ ಅಚ್ಚುಮೆಚ್ಚಿನ ತಾಣವು ಹೌದು. ಎ.ವಿ.ಮೇಯಪ್ಪ ಚೆಟ್ಟಿಯಾರ್ ರವರು ಇಲ್ಲಿ ಎ ವಿ ಎಂ ಸ್ಟುಡಿಯೋವನ್ನು ಸ್ಥಾಪಿಸಿದ ಮೇಲೆ ಹಲವಾರು ದಕ್ಷಿಣ ಭಾರತದ ಚಲನಚಿತ್ರಗಳನ್ನು ಇಲ್ಲಿ ಚಿತ್ರೀಕರಿಸಲಾಗಿದೆ. ದಕ್ಷಿಣ ಭಾರತದ ಹಲವಾರು ಅತ್ಯುತ್ತಮ ಚಿತ್ರಗಳನ್ನು ಕರೈಕುಡಿಯ ಎ ವಿ ಎಂ ಸ್ಟುಡಿಯೋದಲ್ಲಿ ಚಿತ್ರೀಕರಿಸಲಾಗಿದೆ.

ಸಿನಿಮಾ ಆಕರ್ಷಣೆಯ ಜೊತೆಗೆ ಪ್ರವಾಸಿಗರು ಬಾಯಿಯಲ್ಲಿ ನೀರೂರಿಸುವ ಇಲ್ಲಿನ ಆಹಾರ ರುಚಿಗೆ ಕಟ್ಟುಬಿದ್ದು ಇಲ್ಲಿಗೆ ಭೇಟಿಕೊಡುತ್ತಿರುತ್ತಾರೆ. "ಚೆಟ್ಟಿನಾಡ್" ಎಂದೆ ಕರೆಯಲ್ಪಡುವ ಇಲ್ಲಿನ ಆಹಾರ ಪದ್ದತಿಯು ಭಾರೀ ಪ್ರಸಿದ್ಧಿಯನ್ನು ಪಡೆದಿದೆ. ಇದಕ್ಕೆ ಈ ಹೆಸರು ಈ ನಗರವನ್ನು ಅಭಿವೃದ್ಧಿಪಡಿಸಿದ ಚೆಟ್ಟಿಯಾರ್ ರಾಜರ ನೆನಪಿನಾರ್ಥವಾಗಿ ಇಡಲಾಗಿದೆ. ಚೆಟ್ಟಿಯಾರ್ ಆಹಾರ ಶೈಲಿಯ ಇನ್ನೊಂದು ಹೆಸರು ಕಾರೈಕುಡಿ ಆಹಾರ ಶೈಲಿ ಎಂದಿದೆ. ಸ್ಥಳೀಯರು ಚೆಟ್ಟಿನಾಡ್ ಆಹಾರ ಶೈಲಿಯನ್ನು "ಅಚ್ಚಿ ಸಮಯಲ್" ಎಂದು ಕರೆಯುತ್ತಾರೆ. ಇದನ್ನು ಹಲವಾರು ಬಗೆಯ ಮಸಾಲೆ, ಗಿಡಮೂಲಿಕೆಗಳನ್ನು ಹಾಕಿ ತಯಾರಿಸಲಾಗುತ್ತದೆ. ಅಲ್ಲದೆ ಇದನ್ನು ತಯಾರಿಸುವ ಪದ್ಧತಿಯು ಸಹ ಅನುಪಮವಾಗಿದೆ.

ಈ ಊರಿಗೆ ಭೇಟಿಕೊಟ್ಟವರು ಇಲ್ಲಿ ತಯಾರಿಸಲಾಗುವ ಚೀಯಮ್, ಕಂದರಪ್ಪಂ, ಲಂಧೋಸೈ, ಮಸಾಲ ಪನಿಯರಂ, ವೆಲ್ಲಿಯಂ ಪನಿಯವರಂ ಮತ್ತು ತಲಿಚ ಇಡಿಯಪ್ಪಂಗಳ ರುಚಿಯನ್ನು ಸವಿಯದೆ ಹೋಗಬಾರದು. ಇದರ ಜೊತೆಗೆ ಮುರುಕು ವಡೈ, ಸೀಪು ಚೀಡೈ, ತಟ್ಟೈ, ಪೊರೊಲ್ವಿಲಂಗ ಉರುಂಡೈ, ಕರುಪ್ಪಟ್ಟಿ ಪನಿಯರಂ, ಕುಳಲ್, ಸೀಡೈಕಾಯ್, ಅದಿರಸಂ ಮತ್ತು ಮಾ ಉನ್ರುಂಡೈಗಳಂತಹ ಕುರುಕಲು ತಿಂಡಿಗಳನ್ನು ಸಹ ಒಂದು ಕೈ ನೋಡಬಹುದು. ಹಲವಾರು ಅಂಗಡಿಗಳು ಸ್ಥಳೀಯವಾಗಿ ತಯಾರಿಸಲಾಗುವ ಕುರುಕಲು ತಿಂಡಿಗಳನ್ನು ಮಾರುತ್ತಾರೆ. ಇವುಗಳು ಕೇವಲ ರುಚಿಕರವಷ್ಟೇ ಅಲ್ಲ ಆರೋಗ್ಯಕರವು ಹೌದು. ನೀವು ಇಲ್ಲಿಗೆ ಭೇಟಿಕೊಟ್ಟಾಗ ಇವುಗಳನ್ನು ಕೊಂಡು ಮನೆಗೆ ತರಬಹುದು.

ಕರೈಕುಡಿಯಲ್ಲಿ ಕನ್ನುಡಯಹಯಗಿ ದೇವಾಲಯ, ಕೊಪ್ಪುಡೈ ಅಮ್ಮನ್ ದೇವಾಲಯ, ಮೀನಾಕ್ಷಿ ಸುಂದರೇಶ್ವರ್ ದೇವಾಲಯ ಮತ್ತು ಚೆಟ್ಟಿನಾಡ್ ಅರಮನೆಗಳು ನೋಡಲೆ ಬೇಕಾದ ಸ್ಥಳಗಳಾಗಿವೆ.

ಕರೈಕುಡಿಯಲ್ಲಿ ಬೇಸಿಗೆಯು ಅತ್ಯಧಿಕ ಬಿಸಿಲಿನಿಂದ ಕೂಡಿರುತ್ತದೆ. ಮಿತವಾದ ಮಳೆ ಮತ್ತು ತಣ್ಣಗಿನ ಚಳಿಗಾಲವು ಇಲ್ಲಿನ ಹವಾಮಾನದ ವೈಶಿಷ್ಠ್ಯ. ತಿರುಚಿಯಲ್ಲಿ ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಿದೆ. ಈ ನಗರದಲ್ಲಿ ರೈಲು ನಿಲ್ದಾಣವಿದ್ದು, ಅದು ದಕ್ಷಿಣ ಭಾರತದ ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇವುಗಳ ಜೊತೆಗೆ ಕರೈಕುಡಿಗೆ ರಸ್ತೆ ಮಾರ್ಗವು ಸಹ ಉತ್ತಮವಾಗಿದೆ.

Please Wait while comments are loading...