ರಾಮೇಶ್ವರಂ -  ದೇವತೆಗಳ ಭೂಲೋಕ ಸ್ವರ್ಗ/ಭೂಕೈಲಾಸ

ರಾಮಾಯಣದ ಬಗ್ಗೆ, ಅದರ ಕಥೆಗಳ ಬಗ್ಗೆ ಕೇಳುವುದೆಂದರೆ ಮಕ್ಕಳಿಗೆ ಮಾತ್ರವಲ್ಲ ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರಲ್ಲೂ ಕುತೂಹಲ ಇದ್ದೇ ಇರುತ್ತದೆ. ರಾಮಾಯಣ ಮುಗಿಯುವ ಕಥೆಯಲ್ಲ. ಅದೊಂದು ದಂತಕಥೆ ಎನಿಸಿಕೊಂಡಿದ್ದರೂ ಅದರಲ್ಲಿರುವ ಪ್ರತಿಯೊಂದು ಪೌರಾಣಿಕ ಕಥೆಗಳೂ ಮನಸ್ಸಿಗೆ ಮುದ ನೀಡುತ್ತವೆ. ರಾಮಾಯಣದ ಬಗ್ಗೆ ಮಾತನಾಡುತ್ತಿರುವಾಗಲೇ ಇಷ್ಟು ಆಸಕ್ತಿ ಮೂಡಿದರೆ ಇನ್ನು ರಾಮ ಲೋಕಕ್ಕೊಮ್ಮೆ ಭೇಟಿ ನೀಡಿದರೆ ಹೇಗಿರಬಹುದು ಊಹಿಸಿದ್ದೀರಾ?

ಹೌದು ರಾಮಾಯಣದ ಸಮಸ್ತ ಚಿತ್ರಣವನ್ನು ಕಣ್ಣ ಮುಂದೆ ತಂಡಿಡುವ ಸ್ಥಳವೇ ತಮಿಳುನಾಡಿನ ರಾಮೇಶ್ವರಂ ಪಟ್ಟಣ. ಇಲ್ಲಿನ ಪ್ರತಿಯೊಂದು ಸ್ಥಳವೂ ರಾಮಾಯಣದ ಸಂಪೂರ್ಣ ಕಥೆಯನ್ನು ವಿವರಿಸುತ್ತವೆ. ರಾಮಾಯಣದ ಕಥೆಗಳನ್ನು ಕೇಳುವುದಕ್ಕಿಂತ ರಾಮನ ನೆಲೆಯಾದ ರಾಮೇಶ್ವರಕ್ಕೊಮ್ಮೆ ಭೇಟಿ ನೀಡುವುದೇ ಸೂಕ್ತವಲ್ಲವೇ?

ರಾಮೇಶ್ವರಂ, ಇದು ಎಂದಿಗೂ ನಶಿಸದ ಅಥವಾ ಹಾಳಾಗದ, ಪ್ರಶಾಂತವಾದ, ಸ್ತಬ್ಧ ಪಟ್ಟಣ. ಈ ಪಟ್ಟಣ, ತಮಿಳು ನಾಡು ರಾಜ್ಯದಲ್ಲಿದ್ದು, ಮೋಡಿಮಾಡುವ ಪಂಬನ್ ದ್ವೀಪದ ಒಂದು ಭಾಗವಾಗಿದೆ. ಪ್ರಸಿದ್ಧ ಪಂಬನ್ ಸೇತುವೆಯು ಈ ಪಟ್ಟಣವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುತ್ತದೆ. ಶ್ರೀಲಂಕಾದ ಮನ್ನಾರ್ ದ್ವೀಪ ರಾಮೇಶ್ವರದಿಂದ ಕೇವಲ 50 ಕಿ.ಮೀ ದೂರದಲ್ಲಿದೆ!

ರಾಮೇಶ್ವರಂ ಅನ್ನು ಹಿಂದೂಗಳ ಪವಿತ್ರ ಸ್ಥಳಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಮತ್ತು ಈ ಸ್ಥಳಕ್ಕೆ ’ಆರ್ ಧಾಮ್ ಯಾತ್ರಾ’ ಅಥವಾ ಪವಿತ್ರ ಯಾತ್ರೆಯ ಸಂದರ್ಭದಲ್ಲಿ ಭೇಟಿ ನೀಡಲೇ ಬೇಕು.

ಪುರಾಣಗಳ ಪ್ರಕಾರ, ಶ್ರೀ ಮಹಾವಿಷ್ಣುವಿನ ಏಳನೇ ಅವತಾರ ಎಂದು ಕರೆಯಲ್ಪಡುವ ಶ್ರೀ ರಾಮನು, ಲಂಕಾಧೀಶ ರಾವಣನಿಂದ ಅಪಹರಿಸಲ್ಪಟ್ಟ ತನ್ನ ಪತ್ನಿ ಸೀತಾ ಮಾತೆಯ ರಕ್ಷಣೆಗಾಗಿ ಶ್ರೀ ಲಂಕಾಕ್ಕೆ ಸೇತುವೆಯನ್ನು ನಿರ್ಮಿಸಿದ್ದನು. ಈ ಸ್ಥಳವನ್ನೇ ರಾಮೇಶ್ವರ ಎನ್ನಲಾಗುತ್ತದೆ. ವಾಸ್ತವವಾಗಿ ರಾಮೇಶ್ವರ ಎಂಬ ಪದದ ಅರ್ಥ “ಭಗವಾನ್ ರಾಮ” ಎಂಬುದಾಗಿ ಹಾಗೂ ಇದರಿಂದಾಗಿಯೇ ಈ ಸ್ಥಳ ರಾಮೇಶ್ವರ ಎಂಬ ಹೆಸರನ್ನು ಪಡೆದುಕೊಂಡಿದೆ. ಶ್ರೀ ರಾಮನನ್ನು ಪೂಜಿಸಲ್ಪಡುವ ರಾಮನಾಥಸ್ವಾಮಿ ದೇವಾಲಯ ನಗರದ ಕೇಂದ್ರ ಭಾಗದಲ್ಲಿದೆ. ಪ್ರತಿವರ್ಷ, ಶ್ರೀ ರಾಮನಿಗೆ ಸೇವೆ ಸಲ್ಲಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಲು ಲಕ್ಷಾಂತರ ಜನ ಇಲ್ಲಿಗೆ ಆಗಮಿಸುತ್ತಾರೆ.

ಅಲ್ಲದೇ ರಾಮೇಶ್ವರಂ ಸ್ಥಳ ಭಗವಾನ್ ರಾಮನು ತನ್ನ ಪಾಪಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳಲು ನಿರ್ಧರಿಸಿದ ಸ್ಥಳ ಎಂದೂ ಹೇಳಲಾಗುತ್ತದೆ. ಶ್ರೀ ರಾಮನು ಬ್ರಾಹ್ಮಣನಾದ ರಾವಣನನ್ನು ಸಂಹಾರಮಾಡಿದ್ದಕ್ಕಾಗಿ ಪಶ್ಚಾತಾಪ ಪಟ್ಟು ಪ್ರಾಯಶ್ಚಿತಕ್ಕಾಗಿ ಮಾರ್ಗ ಹುಡುಕುತ್ತಿದ್ದನು. ನಂತರ ರಾಮನು ಅತ್ಯಂತ ದೊಡ್ಡ ಶಿವಲಿಂಗವನ್ನು ಸ್ಥಾಪಿಸಲು ನಿರ್ಧರಿಸಿದನು. ಮತ್ತು ಹನುಮಂತನಲ್ಲಿ ಹಿಮಾಲಯದಿಂದ ಲಿಂಗವನ್ನು ತರಲು ಹೇಳಿದನು. ನಂತರ ಸೀತೆಯ ಜೊತೆಗೂಡಿ ಇಲ್ಲಿ ಲಿಂಗವನ್ನು ಸ್ಥಾಪಿಸಲಾಯಿತು. ಈ ಲಿಂಗವೇ ಇಂದಿಗೂ ರಾಮನಾಥಸ್ವಾಮಿ ದೇವಾಲಯದ ಬಳಿ ಇದೆ ಎಂದು ಹೇಳಲಾಗಿದೆ.

ರಾಮೇಶ್ವರದ ಐತಿಹಾಸಿಕ ಪ್ರಾಮುಖ್ಯತೆ

ರಾಮೇಶ್ವರಂ/ ರಾಮೇಶ್ವರ ಭಾರತದ ಇತಿಹಾಸದಲ್ಲಿ ಅದರಲ್ಲೂ ವಿಶೇಷವಾಗಿ ಬೇರೆ ದೇಶಗಳೊಂದಿಗಿನ ವ್ಯಾಪಾರ ಸಂಬಂಧದಲ್ಲಿ ಪ್ರಾಮುಖ್ಯತೆಯನ್ನು ಹೊಂದಿದೆ. ಈ ದ್ವೀಪವು ಅಂದಿನ ಸಿಲೋನ್ ಇಂದಿನ ಶ್ರೀಲಂಕಾಕ್ಕೆ ಪ್ರಯಾಣಿಸುವವರ ತಂಗುವ ಘಟ್ಟವಾಗಿತ್ತು. ಜಾಫ್ನಾ ರಾಜವಂಶ ಈ ನಗರದ ಮೇಲೆ ತನ್ನ ಪ್ರಭುತ್ವ ಸಾಧಿಸಿತ್ತು ಹಾಗೂ ಜಾಫ್ನಾ ರಾಜಮನೆತನ ತಮ್ಮನ್ನು ತಾವು ಸೇತುಕಲವನ್ ಅಥವಾ ರಾಮೇಶ್ವರಂ ನ ಉಸ್ತುವಾರಿ ನೋಡಿಕೊಳ್ಳುವವರು ಎಂದು ಕರೆದುಕೊಂಡರು.

ಅಲ್ಲದೇ ದೆಹಲಿಯ ಖಿಲ್ಜಿ ವಂಶವೂ ಕೂಡ ರಾಮೇಶ್ವರದ ಇತಿಹಾಸದೊಂದಿಗೆ ಬೆರೆತಿದೆ. ಅಲ್ಲಾದ್ದೀನ್ ಖಿಲ್ಜಿಯ ಸೇನೆಯ ಜನರಲ್ ಪಟ್ಟಣಕ್ಕೆ ಬಂದರೂ ಅಲ್ಲಿದ್ದ ಪಾಂಡ್ಯನ್ ಸೇನೆಗೆ ಅವನನ್ನು ತಡೆಯಲು ಸಾಧ್ಯವಾಗಲಿಲ್ಲ. ತನ್ನ ಆಗಮನವನ್ನು ಗುರುತಿಸಲು ಜನರಲ್  ರಾಮೇಶ್ವರದಲ್ಲಿ ಅಲಿಯಾ-ಅಲ್-ದಿನ್-ಖಲ್ದಜಿ/ಖಿಲ್ಜಿ ಮಸೀದಿಯನ್ನು ನಿರ್ಮಿಸಿದನು. 16 ನೇ ಶತಮಾನದಿಂದ 1795 ರ ವರೆಗೆ ಅಂದರೆ, ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ ರಾಮೇಶ್ವರವನ್ನು ವಶಕ್ಕೆ ತೆಗೆದುಕೊಳ್ಳುವವರೆಗೂ ರಾಮೇಶ್ವರ ವಿಜಯನಗರದ ರಾಜರ ಆಡಳಿತಕ್ಕೊಳಪಟ್ಟಿತ್ತು. ಅಂದಿನ ಅನೇಕ ಸಂಸ್ಕೃತಿಗಳ ಒಳಹರಿವು ಇನ್ನೂ ಸ್ಥಳೀಯ ಜನರ ದೈನಂದಿನ ಸಂಪ್ರದಾಯಗಳಲ್ಲಿ ಅಲ್ಲದೆ ಕಟ್ಟಡಗಳ ವಾಸ್ತುಶಿಲ್ಪಗಳಲ್ಲಿ ಕಾಣಬಹುದು.

ದೇವಾಲಯಗಳು ಮತ್ತು ತೀರ್ಥಗಳು

ರಾಮೇಶ್ವರದ ಪ್ರಾಮುಖ್ಯತೆಗೆ ಶಿವ ಮತ್ತು ವಿಷ್ಣುವಿಗೆ ಮುಡಿಪಾದ ದೇವಾಲಯಗಳು ಮತ್ತು ರಾಮೇಶ್ವರದ ಸುತ್ತಲೂ ಕಂಡುಬರುವ ಹಲವಾರು ತೀರ್ಥಗಳೇ ಕಾರಣವಾಗಿವೆ. ಪ್ರತಿವರ್ಷ ಹಿಂದೂಗಳು ಪ್ರಪಂಚದ ಎಲ್ಲಾ ಭಾಗಗಳಿಂದ  ಮೋಕ್ಷ ಪಡೆಯುವ ಸಲುವಾಗಿ ಈ ಪವಿತ್ರ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಹಿಂದೂಗಳಿಗೆ ರಾಮೇಶ್ವರದ ದೇವಾಲಯಗಳಲ್ಲಿ ತಮ್ಮ  ಪ್ರಾರ್ಥನೆಗಳನ್ನು ಸಲ್ಲಿಸಲು  ಜೀವನದಲ್ಲಿ ಒಮ್ಮೆಯಾದರೂ ಇಲ್ಲಿಗೆ ಬರುವುದು ಅತ್ಯಗತ್ಯವಾಗಿರುತ್ತದೆ.

ರಾಮೇಶ್ವರದಲ್ಲಿ ಸುಮಾರು 64 ತೀರ್ಥಗಳು  ಅಥವಾ ಪವಿತ್ರ ನೀರು ಕಂಡುಬರುವ ಸ್ಥಳಗಳನ್ನು ಕಾಣಬಹುದು. ಇವುಗಳಲ್ಲಿ, 24 ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದ್ದು,  ಎಂದು ಈ ನೀರಿನಲ್ಲಿ  ಸ್ನಾನ  ಮಾಡಿದರೆ ಪಾಪಗಳನ್ನು ತೊಡೆದುಹಾಕುತ್ತವೆ ಎಂದು ನಂಬಲಾಗಿದೆ. ಪಾಪಗಳನ್ನು ತೊಳೆಯುವ ಈ ನೀರಿನ ಮೂಲಕ ಮೋಕ್ಷ ಪಡೆಯಬಹುದು ಎಂಬ ಕಾರಣಕ್ಕೆ ಯಾವುದೇ ಯಾತ್ರಿ ಈ ಪವಿತ್ರ ನೀರಿನಲ್ಲಿ ಸ್ನಾನ ಮಾಡದೇ ಆತನ ಯಾತ್ರೆ ಸಂಪೂರ್ಣವಾಗುವುದಿಲ್ಲ ಎಂದು ಪರಿಗಣಿಸಲಾಗುತ್ತದೆ. ವಾಸ್ತವವಾಗಿ, ಎಲ್ಲಾ 24 ತೀರ್ಥಗಳ ಸ್ನಾನ ಸ್ವತಃ ಪ್ರಾಯಶ್ಚಿತ ನೀಡುವ ಜಲ ಎಂದು ಪರಿಗಣಿಸಲಾಗುತ್ತದೆ.

ರಾಮೇಶ್ವರದಲ್ಲಿ, ಹಿಂದೂಗಳಿಗೆ ಧಾರ್ಮಿಕ ಮಹತ್ವ ಹೊಂದಿರುವ ಅನೇಕ ಸ್ಥಳಗಳಿವೆ.  ಅವುಗಳಲ್ಲಿ ಕೆಲವು ಶ್ರೀ ರಾಮನಾಥಸ್ವಾಮಿ ದೇವಸ್ಥಾನ,  24 ದೇವಾಲಯ ತೀರ್ಥಗಳು,  ಕೋದಂಡರಾಮ ದೇವಾಲಯ,  ಆಡಂ ಸೇತುವೆ ಅಥವಾ ರಾಮ ಸೇತು, ಮತ್ತು ನಂಬು ನಾಯಾಗಿ ಅಮ್ಮನ್ ದೇವಾಲಯ ಮೊದಲಾದವುಗಳು.

ರಾಮೇಶ್ವರ, ಚೆನ್ನಾಗಿ ಸಂಪರ್ಕಿತ ರೈಲ್ವೆ ಸ್ಟೇಶನ್ ಜೊತೆಗೆ ರಸ್ತೆಗಳ ಉತ್ತಮ ಜಾಲವನ್ನು ಹೊಂದಿದೆ. ನಗರ ಸಮೀಪವಿರುವ ವಿಮಾನ ನಿಲ್ದಾಣ ಮಧುರೈ. ರಾಮೇಶ್ವರದಲ್ಲಿ ಉಷ್ಣ ಬೇಸಿಗೆ ಮತ್ತು ಹಿತಕರವಾದ ಚಳಿಗಾಲವನ್ನು ಹೊಂದಿದೆ.

Please Wait while comments are loading...