ತಿರುನಲ್ಲಾರ್ : ಶನಿ ಗ್ರಹಕ್ಕೆ ಸಮರ್ಪಿಸಲಾದ ಹಳ್ಳಿ

ತಿರುನಲ್ಲಾರ್ ಎಂಬುದು ಪಾಂಡಿಚೆರಿಯ ಕಾರೈಕಾಲ್ ಪಟ್ಟಣದಲ್ಲಿರುವ ಒಂದು ಸಣ್ಣ ಗ್ರಾಮವಾಗಿದೆ. ಈ ಸ್ಥಳವನ್ನು ಶನಿಗ್ರಹಕ್ಕೆ ಸಮರ್ಪಿಸಲಾಗಿದೆ. ಕಾರೈಕಾಲ್‍ನಿಂದ ಬಸ್ಸಿನ ಮೂಲಕ ಇಲ್ಲಿಗೆ ಸುಲಭವಾಗಿ ತಲುಪಬಹುದು ಅಥವಾ ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದು ಸಹ ಇಲ್ಲಿಗೆ ತಲುಪಬಹುದು. ಕಾರೈಕಾಲ್ ತಿರುನಲ್ಲಾರಿಗೆ ಸಮೀಪದಲ್ಲಿದೆ. ತಿರುಚ್ಚಿಯಿಂದ ತಿರುವರರ್ ಹಾಗು ಕಾರೈಕಾಲ್ ಮಾರ್ಗವಾಗಿ ಈ ಊರಿಗೆ ತಲುಪಬಹುದು. ಶನೀಶ್ವರ ದೇವಾಲಯವು ಈ ಊರಿನ ಅತ್ಯಂತ ಪ್ರಸಿದ್ಧ ದೇವಾಲಯವಾಗಿದೆ. ಈ ಗುಡಿಯು ಸ್ವಾಮಿ ದರ್ಬಾರಣ್ಯೇಶ್ವರನ್ ದೇವಾಲಯದ ಆವರಣದ ಒಳಗಡೆಯಿದೆ.

ಇಲ್ಲಿರುವ ದೈವವು ಪರಮಶಿವನ ರೂಪದಲ್ಲಿದೆ. ಶನಿಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರತಿ ಮೂರು ವರ್ಷಕ್ಕೆ ಒಮ್ಮೆ ಸ್ಥಾನ ಪಲ್ಲಟ ಮಾಡುತ್ತದೆ. ಆ ಸ್ಥಾನ ಪಲ್ಲಟ ಮಾಡುವ ದಿನದಂದು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು ಈ ದೇವಾಲಯಕ್ಕೆ ಆಗಮಿಸುತ್ತಾರೆ. ಈ ಪಟ್ಟಣವು ತಮಿಳು ಸಾಹಿತ್ಯ ಚರಿತ್ರೆಯಲ್ಲಿ ಒಂದು ಗುರುತರವಾದ ಸ್ಥಾನವನ್ನು ಪಡೆದಿದೆ. ಪಚ್ಚೈ ಪದಿಗಂ ಎಂಬ ದೇವರ ಸ್ತೋತ್ರವನ್ನು ಈ ದೇವಾಲಯದಲ್ಲಿಯೇ ರಚಿಸಲಾಯಿತು ಎಂದು ಹೇಳಲಾಗುತ್ತದೆ. ಈ ಪಟ್ಟಣದಲ್ಲಿ ವಾತಾವರಣವು ವರ್ಷಪೂರ್ತಿ ತಣ್ಣಗೆ ಇರುತ್ತದೆ. ಇದೆಲ್ಲದಕ್ಕಿಂತ ಮಿಗಿಲಾಗಿ ಈ ಪಟ್ಟಣದಲ್ಲಿ ನೆಲೆಸಿರುವ ಶಾಂತಿ ಮತ್ತು ಸ್ವಚ್ಛತೆಯು ಪ್ರವಾಸಿಗರನ್ನು ತನ್ನತ್ತ ಮತ್ತಷ್ಟು ಆಕರ್ಷಿತರಾಗುವಂತೆ ಮಾಡುತ್ತಿದೆ. ಶನೇಶ್ವರನ ದೇವಾಲಯದ ಪಕ್ಕದಲ್ಲಿ ಒಂದು ಬೃಹತ್ ಕಲ್ಯಾಣಿಯೂ ಇದೆ.

ತಿರುನಲ್ಲಾರಿನ ಇತಿಹಾಸ

ಈ ಪಟ್ಟಣದ ಇತಿಹಾಸವು ತುಂಬಾ ಕುತೂಹಲಕಾರಿಯಾಗಿದೆ. ಪ್ರಾಚೀನ ತಮಿಳು ದೇವರ ಸ್ತೋತ್ರವಾದ ಪಚ್ಚೈ ಪದಿಗಂ ಈ ಪಟ್ಟಣದ ಕೀರ್ತಿಯನ್ನು ಸಾರಿ ಹೇಳುತ್ತದೆ. ಈ ಸ್ತೋತ್ರದಲ್ಲಿ ಸ್ವಾಮಿಯ ಲೀಲಾವಳಿಗಳನ್ನು ತಿಳಿಸಲಾಗಿದೆ. ಈ ಪಟ್ಟಣದ ಇತಿಹಾಸವು ಜೈನರ ಕಾಲದಷ್ಟು ಹಿಂದಕ್ಕೆ ಹೋಗುತ್ತದೆ. ಇಲ್ಲಿ ನೆಲೆಸಿದ್ದ ಜೈನರಿಗೆ ಮುಂದೆ ಇಲ್ಲಿಗೆ ಬಂದ ಸೈವಿಟೆ ಸಂತರ ಆಗಮನವು ಅಷ್ಟಾಗಿ ಹಿಡಿಸಲಿಲ್ಲ. ಇದರ ಜೊತೆಗೆ ಇಲ್ಲಿನ ರಾಜನಿಗೂ ಸಹ ಸಂತರ ಆಗಮನವು ರುಚಿಸಲಿಲ್ಲ.

ಆದರೆ ಸೈವಿಟೆ ಸಂತ ಸಂಬಂಧರ್, ರಾಜನು ಅನುಭವಿಸುತ್ತಿದ್ದ ಕೆಲವು ಸಮಸ್ಯೆಗಳಿಂದ ಅವನನ್ನು ಮುಕ್ತನನ್ನಾಗಿ ಮಾಡಿದನು. ಅದರ ಜೊತೆಗೆ ಈ ಸಂತನು ಕೆಲವು ಅದ್ಭುತ ಪವಾಡಗಳನ್ನು ತೋರಿಸಿದನು. ಪ್ರಾಣ ಸಂಕಟದಿಂದ ಬಳಲುತ್ತಿದ್ದ ರಾಜನು ಇದರಿಂದ ಗುಣಮುಖನಾದನು. ಆನಂತರ ರಾಜನೇ ಈ ಸಂತನ ಕೀರ್ತಿಯನ್ನು ಹಾಡಿ ಹೊಗಳಲು ಶುರು ಮಾಡಿದನು. ನಂತರ ಜನ ಸಾಮಾನ್ಯರು ತಮ್ಮ ಸಮಸ್ಯೆಗಳಿಗೆ ಈ ಸಂತನನ್ನು ಆಶ್ರಯಿಸಿದರು ಮತ್ತು ಆತನಿಂದ ತಮ್ಮ ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಪಡೆದರು. ಇದರಿಂದ ಮನನೊಂದ ಜೈನರು ಸೈವಿಟರಿಗೆ ಸವಾಲು ಹಾಕಿ ಶೈವ ಪಂಥವನ್ನು ಮರು ಸ್ಥಾಪಿಸಿದರು. ಆನಂತರ ತಿರುನಲ್ಲಾರಿನ ಕೀರ್ತಿಪತಾಕೆಯನ್ನು ಎಲ್ಲೆಡೆ ಹಾರಿಸುವಂತೆ ತಿರುನಲ್ಲಾರಿನ ದೇವಾಲಯವನ್ನು ನಿರ್ಮಿಸಲಾಯಿತು.

ತಿರುನಲ್ಲಾರಿನಲ್ಲಿರುವ ಮತ್ತು ಅಕ್ಕ ಪಕ್ಕದ ಯಾತ್ರಾ ಸ್ಥಳಗಳು

ಶನೀಶ್ವರನ್ ದೇವಾಲಯ, ಶ್ರೀ ದರ್ಬಾರಣ್ಯೇಶ್ವರರ್ ದೇವಾಲಯ ಮತ್ತು ಭದ್ರಕಾಳಿಯಮ್ಮನ್ ದೇವಾಲಯಗಳು ತಿರುನಲ್ಲಾರಿನ ಪ್ರಮುಖ ದೇವಾಲಯಗಳಾಗಿವೆ. ಶನೀಶ್ವರನ್ ದೇವಾಲಯವು ದರ್ಬಾರಣ್ಯೇಶ್ವರರ್ ದೇವಾಲಯದ ಆವರಣದೊಳಗೆ ಇದೆ. ಈ ದೇವಾಲಯಕ್ಕೆ ಪ್ರತಿ ವರ್ಷವು ಸಹಸ್ರಾರು ಮಂದಿ ಭಕ್ತರು ಆಗಮಿಸುತ್ತಿರುತ್ತಾರೆ. ಈ ದೇವಾಲಯವನ್ನು ದಕ್ಷಿಣ ಭಾರತದಲ್ಲಿ ಇರುವ ಅತ್ಯಂತ ಶಕ್ತಿಶಾಲಿ ದೇವಾಲಯಗಳ ಪೈಕಿ ಒಂದು ಎಂದು ಪರಿಗಣಿಸಲಾಗಿದೆ. ಸ್ಥಳೀಯರ ಪ್ರಕಾರ, ಈ ದೇವಾಲಯಕ್ಕೆ ಭೇಟಿಕೊಟ್ಟರೆ ನಿಮ್ಮ ಇಚ್ಛೆ ಖಂಡಿತವಾಗಿ ನೆರವೇರುತ್ತದೆಯಂತೆ.

ಯಾತ್ರಾರ್ಥಿಗಳು ನಳ ತೀರ್ಥಂನಲ್ಲಿ ಪವಿತ್ರ ಸ್ನಾನ ಮಾಡಿ ನಂತರ ಸ್ವಾಮಿಯವರ ಸೇವೆಯನ್ನು ಮಾಡಬೇಕಾಗುತ್ತದೆ. ಈ ಸಂಪ್ರದಾಯವನ್ನು ಅನಾದಿಕಾಲದಿಂದಲು ಇಲ್ಲಿ ಪಾಲಿಸಿಕೊಂಡು ಬರಲಾಗುತ್ತಿದೆ. ಈ ಶನೀಶ್ವರನ ದೇವಾಲಯದಲ್ಲಿರುವ ದೇವರು ವರಗಳನ್ನು ಪ್ರಸಾದಿಸುವ ದೇವರು ಎಂದೆ ಖ್ಯಾತಿ ಪಡೆದಿದ್ದಾನೆ. ಯಾತ್ರಾರ್ಥಿಗಳು ಶನೀಶ್ವರನು ಕೊಡುವುದನ್ನು ನಿಧಾನಿಸಬಹುದೇ ಹೊರತು, ಕೊಡದೇ ಬಿಡುವುದಿಲ್ಲ ಎಂದು ನಂಬುತ್ತಾರೆ.

ಶ್ರೀ ದರ್ಬಾರಣ್ಯೇಶ್ವರರ್ ದೇವಾಲಯವು ಶಿವನ ದೇವಾಲಯವಾಗಿದೆ. ಇಲ್ಲಿ ಒಂದು ಸ್ವಯಂಭು ಲಿಂಗವಿದ್ದು, ಅದನ್ನು ದರ್ಬಾರಣ್ಯೇಶ್ವರರ್ ಎಂಬ ರೂಪದಲ್ಲಿ ಪೂಜಿಸಲಾಗುತ್ತದೆ. ತಿರುನಲ್ಲಾರ್ ಒಂದು ಪವಿತ್ರ ಕ್ಷೇತ್ರವಾಗಿದೆ. ಏಕೆಂದರೆ ಇಲ್ಲಿ ಸಾಕ್ಷತ್ ಪರಶಿವನು ಬ್ರಹ್ಮ ದೇವನಿಗೆ ವರ ನೀಡಿದನೆಂದು ಪ್ರತೀತಿ ಇದೆ. ದರ್ಬೆಯು ಈ ದೇವಾಲಯದ ಪವಿತ್ರ ಸಸ್ಯವಾಗಿದೆ.

ತಿರುನಲ್ಲಾರಿನ ಮತ್ತೊಂದು ಪ್ರಸಿದ್ಧ ದೇವಾಲಯವೆಂದರೆ ಅದು ಭದ್ರಕಾಳಿಯಮ್ಮನ್ ದೇವಾಲಯ. ಇದರ ಜೊತೆಗೆ ಇಲ್ಲಿ ಎರಡು ದೊಡ್ಡ ರಥಗಳು ಇವೆ. ಈ ರಥಗಳಲ್ಲಿ ಮೆರವಣಿಗೆ ಹೊರಡುವ ದೇವ ಮತ್ತು ದೇವಿಯರ ದರ್ಶನವನ್ನು ಉತ್ಸವಗಳಂದು ಭಕ್ತಾಧಿಗಳು ಪಡೆಯಬಹುದು. ಅಲ್ಲದೆ ದೇವಾಲಯದಲ್ಲಿ ಹಲವಾರು ಪವಿತ್ರ ಕಲ್ಯಾಣಿಗಳು ಸಹ ಇವೆ.

ಹತ್ತಿರದಲ್ಲಿರುವ ಇನ್ನಿತರ ನವಗ್ರಹ ದೇವಾಲಯಗಳು

ನವಗ್ರಹ ದೇವಾಲಯಗಳಲ್ಲಿ ಇನ್ನುಳಿದ ಎಂಟು ದೇವಾಲಯಗಳು ಸಹ ತಿರುನಲ್ಲಾರಿಗೆ ಸಮೀಪದಲ್ಲಿವೆ. ಪ್ರವಾಸಿಗರು ಸೂರಿಯನಾರ್ ಕೋಯಿಲ್ (ಸೂರ್ಯನ ದೇವಾಲಯ), ಕಂಜನೂರ್ (ಶುಕ್ರ ಗ್ರಹ), ಅಲಂಗುಡಿ (ಗುರು ಗ್ರಹ- ಬೃಹಸ್ಪತಿ), ತಿರುವೆಂಕಡು (ಬುಧ ಗ್ರಹ) ವೈದೀಶ್ವರನ್ ಕೋಯಿಲ್(ಮಂಗಳ ಗ್ರಹ - ಅಂಗಾರಕ), ತಿರುನಾಗೇಶ್ವರಂ ಮತ್ತು ಕೀಳ್‍ಪೆರುಂಪಲ್ಲಂ (ರಾಹು-ಕೇತು) ಮತ್ತು ತಿಂಗಲೂರ್ (ಚಂದ್ರ) ದೇವಾಲಯಗಳಿಗೆ ಭೇಟಿಕೊಡಬಹುದು.

Please Wait while comments are loading...