ತೂತುಕುಡಿ - ಬಂದರುಗಳು ಮತ್ತು ಮುತ್ತುಗಳ ನಗರ

ತಮಿಳುನಾಡು ರಾಜ್ಯವು ಮೊದಲಿನಿಂದಲೂ ತನ್ನಲ್ಲಿನ ಉಷ್ಣ ಹವಾಮಾನಕ್ಕೆ ಹೆಸರುವಾಸಿಯಾದಂತೆ ಅಲ್ಲಿನ ವೈವಿಧ್ಯಮಯ ಸೌಂದರ್ಯಕ್ಕೂ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ. ಇಲ್ಲಿನ ಅನೇಕ ಪುರಾತನ ತಾಣಗಳು ಇಂದಿಗೂ ಪ್ರವಾಸಿಗರ ಮೈ-ಮನ ತಣಿಸುತ್ತವೆ.

ತೂತುಕುಡಿ ತಮಿಳಿನಾಡಿನ ಒಂದು ಪ್ರಮುಖ ನಗರ. ಇಲ್ಲಿನ ಸೌಂದರ್ಯಕ್ಕಂತೂ ಸರಿಸಾಟಿ ಬೇರೊಂದಿಲ್ಲ! ದೆವಾಲಯಗಳು, ಕಡಲ ತೀರಗಳು, ನವಿಲಿನ ಸೊಬಗು ಹಿಗೆ ಅನನ್ಯವಾದ ಎಲ್ಲಾ ಬಗೆಯ ಆಕರ್ಷಣೆಗಳೂ ಒಂದೇ ಸ್ಥಳದಲ್ಲಿ ಕಾಣಬಹುದು. ಈ ಸ್ಥಳದ ಸಂಕ್ಷಿಪ್ತ ನೋಟ ಇಲ್ಲಿದೆ.

ಟುಟಿಕಾರಿನ್ ಎಂದೂ ಜನಪ್ರಿಯವಾಗಿರುವ ತೂತುಕುಡಿ, ತಮಿಳುನಾಡು ರಾಜ್ಯದಲ್ಲಿ ಅದೇ ಹೆಸರಿನ ಜಿಲ್ಲೆಯ ಪುರಸಭೆಯಾಗಿದೆ. ತಮಿಳುನಾಡು ರಾಜ್ಯದ ಆಗ್ನೇಯ ಕರಾವಳಿಯಲ್ಲಿರುವ ಇದು ಒಂದು ಪ್ರಸಿದ್ಧ ಬಂದರು ಪಟ್ಟಣವಾಗಿದೆ. ಇಲ್ಲಿನ ಮುತ್ತುಗಳ ಸಂಗ್ರಹಣೆಯಿಂದಾಗಿ ಈ  ಪಟ್ಟಣವನ್ನು "ಮುತ್ತಿನ ಪಟ್ಟಣ" ಎಂದು ಕರೆಯಲಾಗುತ್ತದೆ.

ಈ ನಗರವು ಮೀನುಗಾರಿಕೆ ಮತ್ತು ಹಡಗು ನಿರ್ಮಾಣಕ್ಕೆ ಹೆಸರುವಾಸಿಯಾಗಿದೆ. ತೂತುಕುಡಿ, ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ ತಿರುನಲ್ವೇಲಿ ಜಿಲ್ಲೆ ಮತ್ತು ಇದರ ಪೂರ್ವದಲ್ಲಿ ರಾಮನಾಥಪುರಂ ಮತ್ತು ವಿರುಧ್ನಗರ್ ಪ್ರದೇಶಗಳಿವೆ. ತಮಿಳುನಾಡು ರಾಜ್ಯದ ರಾಜಧಾನಿ ಚೆನೈ, ತೂತುಕುಡಿ ನಗರದಿಂದ 600 ಕಿ. ಮೀ ದೂರದಲ್ಲಿ ಇದೆ. ಜೊತೆಗೆ ಈ ನಗರಕ್ಕೆ 190 ಕಿ.ಮೀ ದೂರದಲ್ಲಿ ತಿರುವನಂತಪುರಂನ್ನು ಕಾಣಬಹುದು.

ತೂತುಕುಡಿ ಮತು ಅಲ್ಲಿನ ಪ್ರಾವಾಸಿ ಸ್ಥಳಗಳು

ಸಮುದ್ರ ಪ್ರಿಯರಿಗೆ, ತೂತುಕುಡಿ ಮಾದರಿ ಪ್ರವಾಸಿ ತಾಣವಾಗಿದೆ. ನಗರದ ಬಂದರು ಅತ್ಯಂತ ಪ್ರಮುಖ ಮತ್ತು ಆಕರ್ಷಕ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಈ ನಗರವು ಇಲ್ಲಿನ ಉದ್ಯಾನಗಳಿಗೆ ಸಾಕಷ್ಟು ಜನಪ್ರಿಯವಾಗಿದೆ. ಅವುಗಳಲ್ಲಿ ಅತ್ಯಂತ ಜನಪ್ರಿಯ ಉದ್ಯಾನವನಗಳೆಂದರೆ, ಹಾರ್ಬರ್(ಬಂದರು)ಉದ್ಯಾನ, ರಾಜಾಜಿ ಉದ್ಯಾನ ಮತ್ತು ರೋಚೆ ಉದ್ಯಾನ.

ತೂತುಕುಡಿ ನಗರದಲ್ಲಿ ಭಕ್ತಿಪ್ರಧಾನತೆಗೆ ಯಾವುದೇ ಕೊರತೆಯಿಲ್ಲ. ಇಲ್ಲಿನ ತಿರುಚೆಂಡೂರ್ ದೇವಸ್ಥಾನ ಅತ್ಯಂತ ಹೆಸರುವಾಸಿಯಾಗಿದ್ದು ಶ್ರೀ ಸುಬ್ರಮಣ್ಯನನ್ನು ಇಲ್ಲಿ ಪೂಜಿಸಲಾಗುತ್ತದೆ. ಜೊತೆಗೆ ಈ ನಗರವು ಸೆಂಟ್ರಲ್ ಮರೀನ್ ಫಿಶರೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (CMFRI) ಗೂ ಹೆಸರುವಾಸಿಯಾಗಿದೆ.  ಇಷ್ಟೇ ಅಲ್ಲ ತೂತುಕುಡಿ ನಗರದಲ್ಲಿರುವ ಆಕರ್ಷಣೆಗಳು ಹಲವು. ಮನಪದ್ ಕಲುಗುಮಲೈ, ಒಟ್ಟಾಪಿಡರಂ ಎತ್ತಯಾಪುರಂ, ಕೋರಕೈ ಅತೈಚನಲೂರ್ ವಾಂಚಿ ಮಣಿಯಾಚೈ ಮತ್ತು ಪಂಚಲಂಕುರಿಚೈ ನವ ತಿರುಪತೈ ಮೊದಲಾದವುಗಳನ್ನು ಇಲ್ಲಿ ಕಾಣಬಹುದು.

ಕಲ್ಲಿನಿಂದ ನಿರ್ಮಿಸಲಾದ ಜೈನ ದೇವಾಲಯ ಕಲುಗುಮಲೈ, ಕೊರ್ಕೈ ಟ್ಯಾಂಕ್ ಮತ್ತು ವಿಟ್ರಿವೇಲಮ್ಮನ್ ದೇವಾಲಯ ತೂತುಕುಡಿ ನಗರದ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದೆ. ಇವುಗಳ ಜೊತೆಗೆ ಇಲ್ಲಿ ಐತಿಹಾಸಿಕ ಸ್ಥಳವೂ ಕೂಡ ಇದೆ. ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಸ್ವಾತಂತ್ರ್ಯ ಹೋರಾಟಗಾರ ವೀರಪಾಂಡ್ಯನ್ ಕಟ್ಟಬೊಮ್ಮನ್ ಗೆ ಮೀಸಲಾಗಿರುವ ಕಟ್ಟಬೊಮ್ಮನ್ ಸ್ಮಾರಕ ಕೋಟೆ ಇಲ್ಲಿನ ಪ್ರಮುಖ ಆಕರ್ಷಣೆ.

ಇತಿಹಾಸ ಪುಟದಲ್ಲೊಂದು ಸುತ್ತ ..

ತೂತುಕುಡಿ ನಗರವನ್ನು ಹಿಂದೆ 'ತಿರು ಮಂದಿರ ನಗರ' ಎಂದು ಕರೆಯಲಾಗುತ್ತಿತ್ತು. ಪುರಾಣಗಳ ಪ್ರಕಾರ, ಸೀತೆಯನ್ನು ಹುಡುಕುತ್ತ ಹನುಮಂತ ಲಂಕೆಗೆ ಹೋಗುವಾಗ ದಾರಿ ಮಧ್ಯೆ ತೂತುಕುಡಿಯಲ್ಲಿ ನೆಲೆಸಿದ್ದನು ಎಂದು ಹೇಳುತ್ತಾರೆ. ನಗರದ ಹೆಸರನ್ನು ’ಸಂದೇಶಗಾರ’ ಎಂದು ಅರ್ಥ ಕೊಡುವ ತೂತಿನ್  ಪದದಿಂದ ಪಡೆಯಲಾಗಿದೆ ಎಂದೂ ಹೇಳಲಾಗುತ್ತದೆ.

ಈ ಹೆಸರು, ಎರಡು ಪದಗಳಾದ ’ತೂರ್ತು’ ಇದರ ಅರ್ಥ  'ಸಮುದ್ರದಿಂದ ಪುನಃ ಭೂಮಿ' ಮತ್ತು ’ಕುಡಿ’ ಇದರ ಅರ್ಥ 'ವಸಾಹತು'  ಈ ಪದಗಳಿಂದ ನಗರದ ಹೆಸರು ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ನಗರವು ಇತಿಹಾಸದಿಂದ ಬಂದರು ಪಟ್ಟಣ ಎಂದೇ ಪ್ರಸಿದ್ಧವಾಗಿದೆ. ಪಾಂಡ್ಯರ ಆಳ್ವಿಕೆಯ ಸಂದರ್ಭದಲ್ಲಿಯೂ ಇದೊಂದು ಪ್ರಸಿದ್ಧ ಬಂದರಾಗಿತ್ತು.

1548 ರಲ್ಲಿ ಈ ಪಟ್ಟಣವನ್ನು ಪಾಂಡ್ಯನ್ ರಿಂದ ಪೋರ್ಚುಗೀಸ್ ರು ಪಡೆದುಕೊಂಡರು. ನಂತರ 1658 ರಲ್ಲಿ ಈ ಪಟ್ಟಣ ಡಚ್ಚರು ಆಕ್ರಮಿಸಿಕೊಂಡರು. ಆನಂತರ1825 ರಲ್ಲಿ ಬ್ರಿಟೀಷರು ಇದನ್ನು ವಶಕ್ಕೆ ತೆಗೆದುಕೊಂಡರು. 1866 ರಲ್ಲಿ ಇದು ಒಂದು ಪುರಸಭೆಯಾಗಿ ಸ್ಥಾಪಿಸಲ್ಪಟ್ಟಿತು ಮತ್ತು ರೋಚೆ ವಿಕ್ಟೋರಿಯಾ ಇದರ ಅಧ್ಯಕ್ಷರಾಗಿ ನೇಮಕಗೊಂಡರು. ನಂತರ 2008 ರಲ್ಲಿ ಇದು ಒಂದು ಕಾರ್ಪೊರೇಷನ್ ಆಗಿ ಸ್ಥಾಪಿಸಲಾಯಿತು.

ತೂತುಕುಡಿ ನಗರವನ್ನು ತಲುಪುವುದು ತುಂಬಾ ಸುಲಭ!

ತೂತುಕುಡಿ ನಗರವು ರಾಜ್ಯ ಮತ್ತು ದೇಶದ ಎಲ್ಲಾ ನಗರಗಳಿಗೆ ಸುಗಮವಾದ ಸಾರಿಗೆ ಸಂಪರ್ಕವನ್ನು ಹೊಂದಿದೆ. ಈ ನಗರವು ಚೆನೈ ವಿಮಾನ ನಿಲ್ದಾಣದೊಂದಿಗೆ ಸಂಪರ್ಕ ಹೊಂದಿದೆ. ನಗರದ ರೈಲು ನಿಲ್ದಾಣವು, ದಕ್ಷಿಣ ಭಾರತದ ಹಲವಾರು ನಗರಗಳೊಂದಿಗೆ ಸಂಪರ್ಕ ಹೊಂದಿದೆ. ತಮಿಳುನಾಡಿನ ಇತರೆ ನಗರಗಳು ಹಾಗೂ ಪಟ್ಟಣಗಳಿಂದ ತೂತುಕುಡಿ ನಗರಕ್ಕೆ ನಿಯಮಿತವಾದ ಬಸ್ಸುಗಳೂ ಲಭ್ಯವಿವೆ.

ತೂತುಕುಡಿಯಲ್ಲಿ ಹೀಗಿದೆ ಹವಾಮಾನ

ತೂತುಕುಡಿ ಉಷ್ಣವಲಯದಲ್ಲಿದ್ದು, ಬೇಸಿಗೆಯು ಅತ್ಯಂತ ಬಿಸಿಲಿನಿಂದ ಕೂಡಿರುತ್ತದೆ. ಬೇಸಿಗೆ ಸಮಯದಲ್ಲಂತೂ ಈ ನಗರಕ್ಕೆ ಪ್ರಯಾಣ ಮಾಡುವುದು ಅತ್ಯಂತ ಕಷ್ಟ. ಮಳೆಗಾಲದಲ್ಲೂ ಅತಿಯಾದ ಮಳೆಯಿಂದಾಗಿ ಪ್ರವಾಸಿ ಚಟುವಟಿಕೆಗಳು ಅಸಾಧ್ಯ. ಹವಾಮಾನ ಸೌಮ್ಯ ಮತ್ತು ಆಹ್ಲಾದಕರವಾಗಿರುವ ಅಕ್ಟೋಬರ್ ನಿಂದ ಮಾರ್ಚ್ ತಿಂಗಳ ಚಳಿಗಾಲದಲ್ಲಿ ತೂತುಕುಡಿ ನಗರವನ್ನು ಪ್ರವೇಶಿಸುವುದು ಉತ್ತಮ.

Please Wait while comments are loading...