ಹರೇ ದ್ವೀಪ ತೂತುಕುಡಿ ನಗರದ ಹಳೆಯ ಬಸ್ ನಿಲ್ದಾಣದಿಂದ ಸುಮಾರು 25 ಕಿ.ಮೀ ದೂರದಲ್ಲಿದ್ದು, ಬಂದರಿನ ಹತ್ತಿರದಲ್ಲಿ ನೆಲೆಸಿದೆ. ಈ ಮನೋಹರ ದ್ವೀಪದ ತೀರವು ಎರಡು ಲೈಟ್ ಹೌಸ್ (ಬೆಳಕಿನ ಮನೆ) ಗಳನ್ನು ಹೊಂದಿದ್ದು, ತನ್ನ ದಡದಲ್ಲಿ ಅನೇಕ ಸಮುದ್ರ ಚಿಪ್ಪುಗಳನ್ನು ಪ್ರವಾಸಿಗರನ್ನು ಸ್ವಾಗತಿಸಲೆಂಬಂತೆ ಹರಡಿಕೊಂಡಿದೆ. ಇಷ್ಟೆ ಅಲ್ಲ,ಈ ದ್ವೀಪ ಪ್ರದೇಶದಲ್ಲಿ ನವಿಲುಗಳನ್ನೂ ಸಹ ಕಾಣಬಹುದು! ಈ ದ್ವೀಪವು ಇಂದು ಇಲ್ಲಿನ ಸ್ಥಳೀಯರಿಗೆ ಮತ್ತು ಪ್ರವಾಸಿಗರಿಗೆ ಒಂದು ಜನಪ್ರಿಯ ಪ್ರವಾಸಿ ತಾಣವಾಗಿದೆ. ಪ್ರವಾಸಿಗರು ವಿಶೇಷವಾಗಿ ಪೊಂಗಲ್ ರಜಾದಿನಗಳಲ್ಲಿ ಈ ದ್ವೀಪಕ್ಕೆ ಭೇಟಿ ನೀಡುತ್ತಾರೆ. ನಗರದಿಂದ ಪ್ರವಾಸಿಗರ ಅವಶ್ಯಕತೆಗಳನ್ನು ಪೂರೈಸುವುದಕ್ಕಾಗಿ ದ್ವೀಪಕ್ಕೆ, ವರ್ಷದ ವಿಶೇಷ ಸಂದರ್ಭಗಳಲ್ಲಿ ಹೆಚ್ಚುವರಿ ಬಸ್ ಗಳನ್ನು ಬಿಡಲಾಗುತ್ತದೆ.