ಕಾರೈಕಾಲ್, ಪಾಂಡಿಚೆರಿ – “ದೇಗುಲಗಳ ನಗರ”

ಸಾಮಾನ್ಯವಾಗಿ ದೇವರ ಮೇಲೆ ಅತೀಯಾದ ಭಕ್ತಿ ನಂಬಿಕೆಗಳು ಕಂಡುಬರುವುದು ಭಾರತದಲ್ಲಿ. ಇಲ್ಲಿನ ಹಲವಾರು ಧರ್ಮದ ಜನರು ತಮಗೆ ಸರಿ ಎನ್ನಿಸುವ ಹಾಗೆ ದೇವರುಗಳ ಪೂಜೆಯನ್ನು ಮಾಡುತ್ತಾರೆ. ಇಂತಹ ಜನರ ನಂಬಿಕೆಗಳಿಗೆ ಪುಷ್ಠಿಕೊಡುವಂತ ಅದೆಷ್ಟೋ ದೇವಾಲಯಗಳು, ಗುಡಿ ಗೋಪುರಗಳು ಭಾರತದ ಮೂಲೆ ಮೂಲೆಗಳಲ್ಲಿಯೂ ಇವೆ. ಇಂತಹ ಧಾರ್ಮಿಕ ಸ್ಥಳಗಳು ನಂಬಿಕೆಗಳನ್ನು ಮಾತ್ರವಲ್ಲ, ಮನಸ್ಸಿಗೆ ನೆಮ್ಮದಿಯನ್ನೂ ನೀಡುತ್ತವೆ ಎಂಬುದು ಒಪ್ಪಲೇ ಬೇಕಾದ ವಿಷಯ!

ಹಾಗೆ ಮನಃ ಶಾಂತಿಯನ್ನು ಬಯಸಿ ಹೊರಟ ಯಾತ್ರಿಗಳಿಗೆ ಕೊಂಚ ಸಮಾಧಾನವನ್ನು ನೀಡಬಲ್ಲದು ಪಾಂಡಿಚೆರಿ. ಇಲ್ಲಿರುವ ಎಲ್ಲಾ ಪಟ್ಟಣಗಳು, ಹಳ್ಳಿಗಳು ಅತ್ಯಂತ ಪುರಾತನ ದೇವಾಲಯಗಳನ್ನು ಹೊಂದಿದ್ದು ಸಮೃದ್ಧ ಸಂಸ್ಕೃತಿಯ ನೆಲೆವೀಡಾಗಿದೆ. ಇಂತಹ ಪಟ್ಟಣಗಳಲ್ಲಿ ಪಾಂಡಿಚೆರಿಯ ಪ್ರಮುಖ ಪಟ್ಟಣ ಕಾರೈಕಾಲ್.

ಕಾರೈಕಾಲ್, ಪುರಾತನ ದೇವಾಲಯಗಳ ಪಟ್ಟಣವಾಗಿದ್ದು, ಇಲ್ಲಿನ ಶನೀಶ್ವರ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಈ ಪಟ್ಟಣವು ಪ್ರವಾಸಿಗರು ಮತ್ತು ಯಾತ್ರಿಗಳಿಗೆ ಒಂದು ಸಂಪೂರ್ಣ ಪ್ರವಾಸಿ ತಾಣವಾಗಿದೆ. ಇಲ್ಲಿನ ಮರಳು ಬೀಚ್, ನಗರದ ಶ್ರೀಮಂತ ಫ್ರೆಂಚ್ ಸಾಂಸ್ಕೃತಿಕ ಪರಂಪರೆ, ಸುಂದರ ದೇವಾಲಯಗಳು ಮತ್ತು ಬಂದರುಗಳು ಇಲ್ಲಿಗೆ ಬರುವ ಎಲ್ಲರಲ್ಲೂ ಆಸಕ್ತಿ ಕೆರಳಿಸುತ್ತವೆ.

ಕಾರೈಕಾಲ್, ಒಂದು ಗಮನಾರ್ಹ ಬಂದರು ಪಟ್ಟಣ. ಇದು ಬಂಗಾಳ ಕೊಲ್ಲಿಯ ಕೋರಮಂಡಲ್ ಕರಾವಳಿ ತೀರದಲ್ಲಿದ್ದು, ಪಾಂಡಿಚೆರಿ ಕೇಂದ್ರಾಡಳಿತ ಪ್ರದೇಶದಲ್ಲಿದೆ. ಇದು ದಕ್ಷಿಣ ಪಾಂಡಿಚೆರಿ ಪಟ್ಟಣದಿಂದ 132 ಕಿಲೋಮೀಟರ್, ದಕ್ಷಿಣ ಚೆನೈನಿಂದ 300 ಕಿಲೋಮೀಟರ್ ಮತ್ತು ಪೂರ್ವ ತ್ರಿಚಿಯಿಂದ 150 ಕಿಲೋಮೀಟರ್ ಗಳಷ್ಟು ದೂರದಲ್ಲಿ ನೆಲೆಗೊಂಡಿದೆ.

ಪಾಂಡಿಚೆರಿ ಕೇಂದ್ರಾಡಳಿತ ಪ್ರದೇಶದಲ್ಲಿರುವ ನದಿಮುಖಜ ಭೂಮಿಗಳ ಪೈಕಿ ಎರಡನೇ ಸ್ಥಾನದಲ್ಲಿದೆ. ಹಲವಾರು ವಿವರಣೆಗಳನ್ನು ಕಾರೈಕಾಲ್ ಪದಕ್ಕೆ ನೀಡಬಹುದಾಗಿದ್ದು, 'ಕಾರೈ' ಮತ್ತು 'ಕಾಲ್' ಪದಗಳು ಸಂಯೋಜನೆಯಾಗಿ ಕಾರೈಕಾಲ್ ಹೆಸರು ವ್ಯುತ್ಪತ್ತಿಯಾಗಿದೆ. ಈ ಪದ "ನಿಂಬೆಯ ಮಿಶ್ರಣದಿಂದ ತಯಾರಿಸಿದ ಒಂದು ಕಾಲುವೆ" ಎಂಬ ಅರ್ಥವನ್ನು ಕೊಡುತ್ತದೆ.

ಆದರೆ ಇಂದು ಅಂತಹ ಯಾವುದೇ ಕಾಲುವೆಗಳೂ ಇಲ್ಲಿ ಕಂಡುಬರುವುದಿಲ್ಲ. ಜೂಲಿಯನ್ ವಿನ್ಸನ್ ಪ್ರಕಾರ, ಈ ಪಟ್ಟಣದ ಸಂಸ್ಕೃತ ಹೆಸರು ಕರಗಿರಿ ಎಂದಾಗಿತ್ತು. ಇಂಪೀರಿಯಲ್ ಗೆಜೆಟಿಯರ್ ಪ್ರಕಾರ,  ಕಾರೈಕಾಲ್ ಎಂದರೆ 'ಮೀನು ಪಾಸ್/ಕಣಿವೆ'.

ಕಾರೈಕಾಲ್ ಮತ್ತು ಸುತ್ತಲಿನ ಪ್ರವಾಸಿ ಸ್ಥಳಗಳು

ಕಾರೈಕಾಲ್ ಪಟ್ಟಣ ದೇವಾಲಯಗಳಿಗೆ ಪ್ರಖ್ಯಾತವಾಗಿದೆ. ಈ ಪ್ರದೇಶದಲ್ಲಿನ ಪ್ರಮುಖ ಆಕರ್ಷಣೆಗಳೆಂದರೆ ಶನೀಶ್ವರ ದೇವಾಲಯ, ಶ್ರೀ ಕೈಲಾಸನಾಥರ್ ದೇವಸ್ಥಾನ, ನವಗ್ರಹ ದೇವಸ್ಥಾನಗಳು ಮತ್ತು ಅಮ್ಮೈಯಾರ್ ದೇವಾಲಯಗಳು. ಈ ದೇವಾಲಯದ ಜೊತೆಗೆ, ಒಂದು ಬೀಚ್ ನಲ್ಲಿ ಕೂಡ ವಿಶ್ರಾಂತಿ ಪಡೆಯಬಹುದು ಮತ್ತು ಬಂಗಾಳ ಕೊಲ್ಲಿಯ ಹಿನ್ನೀರಿನಲ್ಲಿ ದೋಣಿ ವಿಹಾರವನ್ನೂ ಸಹ ಪ್ರವಾಸಿಗರು ಆನಂದಿಸಬಹುದು.

ಪುರಾತತ್ವ ಪ್ರಾಮುಖ್ಯತೆಯನ್ನು ಹೊಂದಿರುವ ಕೀಜಾಹ್ ಕಾಸಾಕುಡಿ ಮತ್ತು ಮೇಳ ಕಾಸಾಕುಡಿ ಎಂಬ ಹಳ್ಳಿಗಳನ್ನು ಇಲ್ಲಿ ಕಾಣಬಹುದು. ಅಲ್ಲದೆ, ನಗೌರ ಮತ್ತು ವೆಲ್ಲನ್ಕನ್ನಿ (ವೆಲನ್ ಕನ್ನಿ) ಗಳೆಂಬ ಖ್ಯಾತ ಯಾತ್ರಾ ತಾಣಗಳೂ ಕಾರೈಕಾಲ್ ಪಟ್ಟಣದ ಸಾಮಿಪ್ಯದಲ್ಲೇ ಇವೆ.

ಇತಿಹಾಸ ಮತ್ತು ಪರಂಪರೆ

ಕಾರೈಕಾಲ್, ಭಾರತದ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಕಾರೈಕಾಲ್ ಬಹಳ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯನ್ನು ಹೊಂದಿದೆ. ಇದರ ಇತಿಹಾಸ ಬಹಳ ಹಳೆಯದಾಗಿದ್ದು, ಎಂಟನೇ ಶತಮಾನದಲ್ಲಿ ಇದು ಪಲ್ಲವ ಸಾಮ್ರಾಜ್ಯದ ಭಾಗವಾಗಿತ್ತು. ಆ ನಂತರ, ಈ ಸ್ಥಳದ ಇತಿಹಾಸ ದೀರ್ಘಕಾಲ ಅಸ್ಪಷ್ಟ ಉಳಿದಿತ್ತು. ಇದು1738 ರಲ್ಲಿ ತಂಜಾವೂರು ರಾಜರ ಸಮಯದಲ್ಲಿ ಅಂದರೆ 18 ನೇ ಶತಮಾನದಲ್ಲಿ ಮತ್ತೆ ತನ್ನ ಇತಿಹಾಸವನ್ನು ಮರುಪಡೆಯಿತು. ಫ್ರೆಂಚ್ ಪ್ರತಿಷ್ಠಿತ ಅಧಿಕಾರಿ ಡುಮ್ಸ್ ತಂಜಾವೂರಿನ ಸಹೂಜಿಯೊಂದಿಗೆ ಸಂಧಾನ ಮಾಡಿಕೊಂಡು ಕಾರೈಕಾಲ್ ಅನ್ನು1739 ರಲ್ಲಿ ಫ್ರೆಂಚರು ವಶಪಡಿಸಿಕೊಂಡರು.

1761 ರಲ್ಲಿ ಫ್ರೆಂಚ್, ಬ್ರಿಟೀಷರಿಂದ ಪರಾಭವಗೊಂಡರು ಮತ್ತು ನಂತರ ಈ ಪ್ರದೇಶವು ಬ್ರಿಟೀಷ್ ಆಳ್ವಿಕೆಗೆ ಒಳಪಟ್ಟಿತು. ಆದಾಗ್ಯೂ, ಪ್ಯಾರಿಸ್ ನ 1814 ಒಪ್ಪಂದಕ್ಕೆ ಅನುಗುಣವಾಗಿ, ಬ್ರಿಟೀಷರು ಫ್ರೆಂಚ್ ಗೆ ಈ ಸ್ಥಳವನ್ನು ಮರಳಿ ಹಸ್ತಾಂತರಿಸಿದರು. ಆನಂತರ ಇದು 1954 ರವರೆಗೂ ಫ್ರೆಂಚ್ ಆಳ್ವಿಕೆಯ ಅಡಿಯಲ್ಲಿಯೇ ಉಳಿಯಿತು. ಆದ್ದರಿಂದ ಕಾರೈಕಾಲ್ ಪಟ್ಟಣ ಇನ್ನೂ ಶ್ರೀಮಂತ ಫ್ರೆಂಚ್ ಸಂಸ್ಕೃತಿ ಮತ್ತು ಪರಂಪರೆಯನ್ನು ತನ್ನಲ್ಲಿ ಉಳಿಸಿಕೊಂಡಿದೆ.

ಕಾರೈಕಾಲ್ ತಲುಪಲು

ಚೆನ್ನೈ ವಿಮಾನ ನಿಲ್ಡಾಣ, ಕಾರೈಕಾಲ್ ಗೆ ಅತ್ಯಂತ ಹತ್ತಿರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ರಸ್ತೆ ಮೂಲಕ 7 - 9 ಗಂಟೆಗಳ ಪ್ರಯಾಣದ ಅವಧಿಯನ್ನು ಹೊಂದಿದ್ದು ಸುಮಾರು 300 ಕಿಲೋಮೀಟರ್ ಅಂತರದಲ್ಲಿದೆ. ಹತ್ತಿರದ ದೇಶೀಯ ವಿಮಾನ ನಿಲ್ದಾಣವೆಂದರೆ ತ್ರಿಚಿ ವಿಮಾನ ನಿಲ್ದಾಣ.  ಕಾರೈಕಾಲ್ ವಿಮಾನ ನಿಲ್ದಾಣದ ನಿರ್ಮಾಣ ಪ್ರಕ್ರಿಯೆ ಚಾಲನೆಯಲ್ಲಿದ್ದು 2014 ರಲ್ಲಿ ಸ್ವಾಧೀನಕ್ಕೆ ಬರಲಿದೆ. ಹತ್ತಿರದ ರೈಲ್ವೇ ನಿಲ್ದಾಣವೆಂದರೆ ಕಾರೈಕಾಲ್ ದಿಂದ 10 ಕಿ.ಮೀ ದೂರದಲ್ಲಿರುವ ನಗೌರ ರೈಲ್ವೆ ನಿಲ್ದಾಣ. ಖಾಸಗಿ ವಾಹನಗಳು ಪಾಂಡಿಚೆರಿ ಮತ್ತು ತಮಿಳುನಾಡಿನ ಎಲ್ಲಾ ಪ್ರಮುಖ ಸ್ಥಳಗಳಿಂದ ಕಾರೈಕಾಲ್ ಗೆ ಆಗಾಗ ಸೇವೆಗಳನ್ನು ಒದಗಿಸುತ್ತವೆ. ಸ್ಥಳೀಯ ಸಾರಿಗೆಗಳಾದ ಆಟೋ ರಿಕ್ಷಾಗಳು ಮತ್ತು ಬಸ್ಗಳೂ ಕೂಡ ಸುಲಭವಾಗಿ ಲಭ್ಯವಿದೆ.

ಕಾರೈಕಾಲ್ ಹವಾಮಾನ

ಭಾರತದ ದಕ್ಷಿಣ ಕರಾವಳಿಯ ಇತರ ಸ್ಥಳಗಳಂತೆ, ಕಾರೈಕಾಲ್ ಕೂಡ ಅತ್ಯಂತ ತೀವ್ರ ಬೇಸಿಗೆಯನ್ನು ಹೊಂದಿದೆ. ಆದ್ದರಿಂದ ಕಾರೈಕಾಲ್ ಪಟ್ಟಣಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ತಾಜಾ ಮತ್ತು ಆಹ್ಲಾದಕರ ಹವಾಮಾನವಿರುವ ನವೆಂಬರ್ ಮತ್ತು ಫೆಬ್ರವರಿ ತಿಂಗಳ ನಡುವಿನ ಚಳಿಗಾಲದ ಅವಧಿ.  ಕಾರೈಕಾಲ್ ಬೀಚ್, ಪ್ರಶಾಂತತೆ ಮತ್ತು ಏಕಾಂತವನ್ನು ಹುಡುಕುವ ಜನರಿಗೆ ಸೂಕ್ತವಾದ ಸ್ಥಳ!

Please Wait while comments are loading...