ಊಟಿ - ಪರ್ವತಗಳ ರಾಣಿ

ಮುಖಪುಟ » ಸ್ಥಳಗಳು » ಊಟಿ » ಮುನ್ನೋಟ

ಊಟಿ ಎಂಬುದು ನಯನ ಮನೋಹರವಾದ ನೀಲಗಿರಿ ಬೆಟ್ಟಗಳಲ್ಲಿ ನೆಲೆಗೊಂಡಿರುವ ಒಂದು ಸುಂದರವಾದ ಪಟ್ಟಣವಾಗಿದೆ. ಇದರ ಅಧಿಕೃತವಾದ ಹೆಸರು ಊಟಕಮುಂಡ್ ಎಂದು ಆದರೆ ಪ್ರವಾಸಿಗರ ಬಾಯಲ್ಲಿ ಇದು ಸಂಕ್ಷಿಪ್ತವಾಗಿ ಊಟಿ ಎಂದೆ ಹೆಸರಾಗಿದೆ. ದಕ್ಷಿಣ ಭಾರತದ ಅತಿ ಹೆಚ್ಚು ಪ್ರವಾಸಿಗರು ಈ ಪಟ್ಟಣಕ್ಕೆ ಭೇಟಿಕೊಡುತ್ತಿರುತ್ತಾರೆ. ಈ ಪಟ್ಟಣವು ತಮಿಳು ನಾಡು ರಾಜ್ಯದ ನೀಲಗಿರಿ ಜಿಲ್ಲೆಯಲ್ಲಿ ನೆಲೆಗೊಂಡಿದೆ.

ಊಟಿ ಪಟ್ಟಣದ ಸುತ್ತಲೂ ನೀಲಗಿರಿ ಬೆಟ್ಟಗಳು ಸುತ್ತುವರೆದಿದ್ದು, ಈ ಪಟ್ಟಣಕ್ಕೆ ಸೌಂದರ್ಯವನ್ನು ಒದಗಿಸಿವೆ. ಈ ಬೆಟ್ಟಗಳನ್ನು ನೀಲಿ ಬೆಟ್ಟಗಳೆಂದು ಕರೆಯಲಾಗುತ್ತದೆ (ಬ್ಲೂ ಮೌಂಟೆನ್ಸ್). ಇದಕ್ಕೆ ಈ ಹೆಸರು ಬರಲು ಕಾರಣ ಈ ಕಣಿವೆಯಲ್ಲಿ ಪ್ರತಿ 12 ವರ್ಷಕ್ಕೆ ಒಮ್ಮೆ ಹೂ ಬಿಡುವ ಕುರುಂಜಿ ಪುಷ್ಪಗಳೇ ಕಾರಣವೆಂದು ಭಾವಿಸಲಾಗಿದೆ. ಈ ಹೂಗಳು ನೀಲಿ ಬಣ್ಣದಿಂದ ಕೂಡಿರುತ್ತವೆ. ಇವು ಅರಳಿದಾಗ ಇಡೀ ಕಣಿವೆಯೇ ನೀಲಿ ಬಣ್ಣದಿಂದ ಕಂಗೊಳಿಸುತ್ತವೆ. ಸ್ಥಳೀಯರ ಪ್ರಕಾರ, ಈ ಪರ್ವತ ಶ್ರೇಣಿಯಲ್ಲಿ ಬೆಳೆಯುವ ನೀಲಗಿರಿ ಮರಗಳಿಂದ ಹೊರಬರುವ ನೀಲಿ ಹೊಗೆಯಿಂದ ಈ ಕಣಿವೆಯು ನೀಲಿಯಾಗಿ ಕಾಣುತ್ತದೆಯಂತೆ.

ಊಟಿಯು ಒಂದು ಪ್ರಸಿದ್ಧ ಯಾತ್ರಾ ಸ್ಥಳ. ಆದರೆ ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ಐತಿಹಾಸಿಕ ಆಧಾರಗಳು ನಮ್ಮ ಬಳಿ ಇಲ್ಲ. ಊಟಿಯು ಯಾವುದಾದರು ರಾಜ ಮನೆತನದ ಆಳ್ವಿಕೆಗೆ ಒಳಪಟ್ಟಿತ್ತೆ? ಇಲ್ಲವೆ? ಎಂಬುದನ್ನು ಕುರಿತಾಗಿ ಯಾವುದೇ ದಾಖಲೆ ಅಥವಾ ಶಾಸನಗಳು ಸಹ ದೊರೆತಿಲ್ಲ. ಈ ಪಟ್ಟಣದ ಇತಿಹಾಸವು 19 ನೇ ಶತಮಾನದಲ್ಲಿ ಬ್ರಿಟೀಷರು ಈ ನಗರವನ್ನು ವಶಪಡಿಸಿಕೊಳ್ಳುವ ಮೊದಲು ಇಲ್ಲಿ ವಾಸವಿದ್ದ ತೋಡ ಬುಡಕಟ್ಟು ಜನಾಂಗದ ಕಾಲದವರೆಗೆ ಹೋಗಿ ನಿಲ್ಲುತ್ತದೆ.

ವಸಾಹತು ಶಾಹಿ ಪರಂಪರೆ ಪ್ರತಿರೂಪ

ಈ ಪಟ್ಟಣದಲ್ಲಿ ಬ್ರಿಟೀಷ್ ಸಂಸ್ಕೃತಿ ಮತ್ತು ವಾಸ್ತು ಶಿಲ್ಪದ ಪ್ರಭಾವವನ್ನು ನಾವು ನೋಡಬಹುದು. ಹಲವಾರು ಪ್ರವಾಸಿಗರು ಇಲ್ಲಿಗೆ ಭೇಟಿಕೊಟ್ಟಾಗ ಈ ಪಟ್ಟಣವು ಅವರಿಗೆ ಒಂದು ಇಂಗ್ಲೀಷ್ ಹಳ್ಳಿಯ ಪ್ರತಿರೂಪದಂತೆ ಗೋಚರವಾಗುವುದನ್ನು ಗಮನಿಸಬಹುದು. ಏಕೆಂದರೆ ಈ ಪಟ್ಟಣದ ಬಹುಪಾಲು ಆರ್ಥಿಕತೆಯು ಪ್ರವಾಸೋದ್ಯಮದ ಮೇಲೆ ಅವಲಂಬಿಸಿದೆ. ಈ ಗಿರಿಧಾಮವನ್ನು ನೋಡಿ ಆಕರ್ಷಿತರಾದ ಬ್ರಿಟೀಷರು ಇಲ್ಲಿನ ಹವಾಮಾನ ಮತ್ತು ಸೌಂದರ್ಯಕ್ಕೆ ಮಾರು ಹೋಗಿ ಇದಕ್ಕೆ "ಗಿರಿಧಾಮಗಳ ರಾಣಿ" ಎಂಬ ಅಭಿದಾನವನ್ನು ನೀಡಿದರು.

ಬ್ರಿಟೀಷರಿಗೆ ಈ ಗಿರಿಧಾಮವು ಒಂದು ಅನನ್ಯ ಸಂಪತ್ತಾಗಿ ಪರಿಣಮಿಸಿತು. ಕಾರಣ ಅವರು ದಕ್ಷಿಣ ಭಾರತದ ಆ ಬಿಸಿಲು ಮತ್ತು ಆರ್ದ್ರತೆಯನ್ನು ಸಹಿಸುವವರಲ್ಲ. ಅಲ್ಲದೆ ಅವರು ಈ ಗಿರಿಧಾಮವನ್ನು ತಮ್ಮ ಸುಪರ್ದಿನಲ್ಲಿ ಇಟ್ಟುಕೊಳ್ಳುವ ಉದ್ದೇಶದಿಂದ ಇಲ್ಲಿಗೆ ಸಮೀಪದಲ್ಲಿರುವ ವೆಲ್ಲಿಂಗ್‍ಟನ್‍ನಲ್ಲಿ ಒಂದು ಸೇನೆಯ ತುಕಡಿಯನ್ನು ಬೇರೆ ಸ್ಥಾಪಿಸಿದರು. ಮದ್ರಾಸ್ ರೆಜಿಮೆಂಟ್ ಎಂದು ಕರೆಯಲಾಗುವ ಈ ತುಕಡಿಯ ಕೇಂದ್ರನೆಲೆ ಇಂದಿಗು ವೆಲ್ಲಿಂಗ್‍ಟನ್‍ನಲ್ಲಿದೆ. ಯುದ್ಧದಲ್ಲಿ ಗಾಯಗೊಂಡ ಮತ್ತು ಕಾಯಿಲೆ ಪೀಡಿತ ಸೈನಿಕರನ್ನು ಊಟಿಗೆ ಕಳುಹಿಸಿಕೊಡಲಾಗುತ್ತಿತ್ತು.

ಇಲ್ಲಿಗೆ ಆಗಮಿಸಿದ ಸೈನಿಕರು ಮಾನಸಿಕವಾಗಿ ಮತ್ತು ದೈಹಿಕವಾಗಿ ಯಥಾಸ್ಥಿತಿಗೆ ಬರಲು ಇಲ್ಲಿನ ವಾತಾವರಣ ಅನುಕೂಲ ಮಾಡಿಕೊಡುತ್ತಿತ್ತು. ಹೀಗೆ ಬ್ರಿಟೀಷರ ಕಾಲದಲ್ಲಿ ಸೈನಿಕರ ಪುನರ್ವಸತಿ ಕೇಂದ್ರವಾಗಿ ಪ್ರಸಿದ್ಧಗೊಂಡ ಊಟಿಯು ಮುಂದೆ ಬ್ರಿಟೀಷರ ಬೇಸಿಗೆ ಮತ್ತು ವಾರಾಂತ್ಯ ಕಳೆಯುವ ವಿಹಾರ ತಾಣವಾಗಿ ಹೆಸರುವಾಸಿಯಾಯಿತು. ನಂತರ ಇದನ್ನು ಮದ್ರಾಸ್ ಪ್ರೆಸಿಡೆನ್ಸಿಯ ಬೇಸಿಗೆ ರಾಜಧಾನಿಯನ್ನಾಗಿ ಸಹ ಮಾಡಲಾಯಿತು.

ನಂತರ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪೆನಿಯು ಊಟಿಯ ಅಭಿವೃದ್ಧಿಗೆ ಚಾಲನೆ ನೀಡಿತು. ಅದರ ಫಲವಾಗಿ ಟೀ, ತೇಗ ಮತ್ತು ಚಿಂಚೊನ ತೋಟಗಳು ನೀಲಗಿರಿಯಲ್ಲಿ ತಲೆ ಎತ್ತಿದವು. ಇದು ಮುಂದೆ ಈ ಪಟ್ಟಣದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿತು. ಅಂದಿಗು - ಇಂದಿಗು ಈ ಬೆಳೆಗಳೇ ಊಟಿಯ ಆರ್ಥಿಕತೆಯನ್ನು ನಿರ್ಧರಿಸುತ್ತಿವೆ. ಅನುಕೂಲಕರವಾದ ವಾತಾವರಣ ಮತ್ತು ಫಲವತ್ತಾದ ಭೂಮಿಯು ಇಲ್ಲಿ ಕೃಷಿ ಅಭಿವೃದ್ಧಿಯಾಗಲು ನೆರವು ನೀಡಿವೆ. ಊಟಿಗೆ ಸಮೀಪಿಸುವಾಗಲೆ ನೀವು ಹಲವಾರು ಟೀ ಮತ್ತು ಕಾಫಿ ತೋಟಗಳನ್ನು ನೀವು ಕಾಣಬಹುದು. ಈ ತೋಟಗಳು ಊಟಿ ಜನರ ಪ್ರಮುಖ ಆದಾಯದ ಮೂಲಗಳಾಗಿವೆ. ನೀವು ಊಟಿಗೆ ಭೇಟಿಕೊಟ್ಟಾಗ ಈ ಪಟ್ಟಣದಲ್ಲಿ ಮತ್ತು ಅದರ ಸುತ್ತಮುತ್ತ ಹಲವಾರು ಕಾಫಿ ಎಸ್ಟೇಟ್‍ಗಳನ್ನು ಕಾಣಬಹುದು.

ಊಟಿಯ ಗತ ಇತಿಹಾಸ

ಊಟಿಯ ಗತ ಕಾಲದ ವೈಭವವನ್ನು ನಾವು ಇಂದಿಗು ಇಲ್ಲಿ ಕಾಣಬಹುದು. ಇದನ್ನು ಹೋಲುವ ಮತ್ತೊಂದು ತಾಣವನ್ನು ನೀವು ಕಾಣಲು ಸಾಧ್ಯವಿಲ್ಲ. ಊಟಿಯಲ್ಲಿ ನೀವು ನಡೆದಾಡಿದರೆ ಸಾಕು, ಇಲ್ಲಿರುವ ಹಳೆಯ ಕಾಲದ ವಾಸ್ತುಶಿಲ್ಪವನ್ನು ಹೊಂದಿರುವ ಕಟ್ಟಡಗಳು ನಿಮ್ಮನ್ನು ಗತಕಾಲಕ್ಕೆ ಕೊಂಡೊಯ್ಯುತ್ತವೆ. ಊಟಿಗೆ ಪ್ರತ್ಯೇಕವಾದ ಇತಿಹಾಸವೇನು ಇಲ್ಲ. ಇದರ ಇತಿಹಾಸವು ಬ್ರಿಟೀಷರು ಇಲ್ಲಿಗೆ ಆಗಮಿಸಿದ ನಂತರ ಪ್ರಾರಂಭವಾಗುತ್ತದೆ.  ಆದರು ಈ ಎರಡು ಶತಮಾನಗಳಲ್ಲಿ ಊಟಿಯು ತನ್ನದೇ ಆದ ಇತಿಹಾಸವನ್ನು ನಿರ್ಮಿಸಿಕೊಂಡಿದೆ. ಈ ಕಿರು ಅವಧಿಯಲ್ಲಿ ಊಟಿಯು ಜನಪ್ರಿಯ ತಾಣವಾಗಿ ರೂಪುಗೊಂಡು ನಮ್ಮ ಮುಂದೆ ಇಂದು ಇತಿಹಾಸವಾಗಿ ನಿಂತಿರುವುದು ಅಚ್ಚರಿಯೇ ಸರಿ.

ಆಧುನಿಕ ಜಗತ್ತಿನಲ್ಲಿ ಊಟಿಯ ಇತಿಹಾಸವು ಬ್ರಿಟೀಷರ ಆಗಮನದೊಂದಿಗೆ ಆರಂಭವಾಗುತ್ತದೆ. ಅದರಲ್ಲಿಯು ವಿಶೇಷವಾಗಿ ವಿದೇಶಿ ಸೈನಿಕರು ಈ ಅದ್ಭುತವಾದ ತಾಣದಲ್ಲಿ ಉಳಿದುಕೊಳ್ಳಲು ಪ್ರಾರಂಭಿಸಿದ ಮೇಲೆ ಇದು ಪ್ರಚುರಕ್ಕೆ ಬಂದಿತು. ಈ ಪಟ್ಟಣಕ್ಕೆ ಭೇಟಿಕೊಟ್ಟರೆ ಯಾರು ಬೇಕಾದರು ಬ್ರಿಟೀಷರ ಪ್ರಭಾವವು ಇನ್ನು ಉಳಿದುಕೊಂಡು ಬಂದಿರುವುದನ್ನು ನೋಡಬಹುದು. ಇಲ್ಲಿನ ಕಟ್ಟಡಗಳ ಮತ್ತು ಮನೆಗಳ ನಿರ್ಮಾಣದಲ್ಲಿ ಬ್ರಿಟೀಷರ ಕಲೆ ಮತ್ತು ವಾಸ್ತುಶಿಲ್ಪಗಳ ಪ್ರಭಾವವು ಹಾಸು ಹೊಕ್ಕಾಗಿರುವುದನ್ನು ಗಮನಿಸಬಹುದು. ಇಲ್ಲಿನ ಸ್ಥಳೀಯರಲ್ಲಿ ಸಹ ಅವರ ಮೂಲ ಧಾರ್ಮಿಕ ನಂಬಿಕೆಗಳಿಗೆ ಹೊರತಾಗಿಯು ಬ್ರಿಟೀಷರ ಸಾಂಸ್ಕೃತಿಕ ಆಚರಣೆಗಳು ಮಿಳಿತವಾಗಿರುವುದು ಸಹ ಇಲ್ಲಿನ ವಿಶೇಷತೆಗಳಲ್ಲಿ ಒಂದಾಗಿದೆ.

ಇವುಗಳೆಲ್ಲದರ ಜೊತೆಗೆ ಇಲ್ಲಿನ ಸ್ಥಳೀಯ ಆಹಾರ ಶೈಲಿಯಲ್ಲು ಸಹ ಬಹುತೇಕವಾಗಿ ಬ್ರಿಟೀಷರ ಆಹಾರ ತಿನಿಸುಗಳೆ ಮುಂಚೂಣಿಯಲ್ಲಿವೆ.  ನೀವು ಊಟಿಯಲ್ಲಿದ್ದಾಗ ಬ್ರಿಟೀಷ್ ಗಿಡಮೂಲಿಕೆ ಮತ್ತು ಭಾರತೀಯ ಮಸಾಲೆಯ ಸಮ್ಮಿಶ್ರತೆಯನ್ನು ಒಳಗೊಂಡಿರುವ ವಿಶೇಷ ಬಗೆಯ ತಿನಿಸುಗಳ ರುಚಿಯನ್ನು ಸವಿಯಬಹುದು. ಬ್ರಿಟೀಷರ ಮತ್ತು ಸ್ಥಳೀಯ ಶ್ರಮಜೀವಿಗಳ ಫಲವಾಗಿ ಊಟಿಯು ಇಂದು ಯಶಸ್ಸಿನ ತುತ್ತ ತುದಿಯಲ್ಲಿ ನಿಂತಿದೆ. ಈ ವಿಭಿನ್ನ ಶ್ರೀಮಂತ ಸಾಂಸ್ಕೃತಿಕತೆಯು ಕೇವಲ ಊಟಿಯಲ್ಲಿ ಮಾತ್ರ ನೆಲೆನಿಂತಿದೆ. ಹಾಗಾಗಿ ಇಂದು ಊಟಿಗೆ ಯಾವುದೇ ಐತಿಹಾಸಿಕ ಹಿನ್ನೆಲೆಯಿಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ಏಕೆಂದರೆ ಭಾರತದ ಇತಿಹಾಸದಲ್ಲಿ ಊಟಿಗೆ ತನ್ನದೇ ಆದ ಪ್ರತ್ಯೇಕ ಇತಿಹಾಸವನ್ನು ಊಟಿ ಸ್ವತಃ ನಿರ್ಮಿಸಿಕೊಂಡಿದೆ.

ಬೊಟಾನಿಕಲ್ ಗಾರ್ಡನ್, ದೊಡ್ಡ ಬೆಟ್ಟ ಶಿಖರ, ಊಟಿ ಕೆರೆ, ಕಲ್ಹಟ್ಟಿ ಜಲಪಾತ ಮತ್ತು ಪುಷ್ಪ ಪ್ರದರ್ಶನಗಳು ಊಟಿಗೆ ಹೋದಾಗ ನೋಡಲೆ ಬೇಕಾಗಿರುವ ಅಂಶಗಳಾಗಿವೆ.

ಈ ಕಾರಣಗಳಿಂದಾಗಿ ಊಟಿಯು ವಿಶ್ವದ ಎಲ್ಲೆಡೆಯಿಂದ ಆಗಮಿಸುವ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

Please Wait while comments are loading...