Search
  • Follow NativePlanet
Share
» »ಮಕ್ಕಳೊಂದಿಗೆ ಎಂಜಾಯ್ ಮಾಡಲು ಈ ಬೀಚ್ಗಳೇ ಬೆಸ್ಟ್!!

ಮಕ್ಕಳೊಂದಿಗೆ ಎಂಜಾಯ್ ಮಾಡಲು ಈ ಬೀಚ್ಗಳೇ ಬೆಸ್ಟ್!!

ಆಪ್ತರೊಂದಿಗೆ ಪ್ರವಾಸ ಹೋಗೋಣವೆಂದು ಹಾಕುವ ಯೋಜನೆಯಲ್ಲಿ ಪ್ರಥಮವಾಗಿ ಎದುರಾಗುವ ತೊಡಕು ಎಂದರೆ ಸೂಕ್ತ ತಾಣದ ಆಯ್ಕೆ. ಇದು ನಾವಂದುಕೊಂಡಷ್ಟು ಸುಲಭವಲ್ಲ. ಏಕೆಂದರೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಆಯ್ಕೆಗಳಿದ್ದು ಇದಕ್ಕೆ ಅವರ ಮನಸ್ಸಿನಲ್ಲಿ ಸುಪ್ತವಾಗಿರುವ ಯಾವುದೋ ಆಕಾಂಕ್ಷೆ ಅಡಗಿರಬಹುದು. ಕೆಲವರಿಗೆ ತಣ್ಣನೆಯ ಪರ್ವತ ತಾಣಕ್ಕೆ ಹೋಗುವ ಅಪೇಕ್ಷೆಯಾದರೆ ಕೆಲವರಿಗೆ ಸಮುದ್ರತೀರಕ್ಕೆ, ಕೆಲವರಿಗೆ ತಾಜಮಹಲ್ ಮೊದಲಾದ ಖ್ಯಾತ ಸ್ಥಳಗಳ ಮುಂದೆ ನಿಂತು ಫೋಟೋ ತೆಗೆದು ಫೇಸ್ಬುಕ್ ನಲ್ಲಿ ಹಾಕುವ ತವಕ. ಹೌದು, ಇಂದು ಬಹುತೇಕ ಪ್ರವಾಸಿಗರು ತೋರುವ ಪ್ರಕ್ರಿಯೆಯೇ ಇದಾಗಿದೆ. ಯಾವುದೇ ಮುಖ್ಯ ಸ್ಥಳದಲ್ಲಿ ಇದನ್ನು ಸರ್ವೇಸಾಮಾನ್ಯವಾಗಿ ಕಾಣಬಹುದು. ಹೆಚ್ಚಿನ ಜನರು ತಾವು ಸಂದರ್ಶಿಸಲಿರುವ ಸ್ಥಳದ ಪ್ರಾಮುಖ್ಯತೆಯನ್ನು ಅರಿಯುವ ಗೋಜಿಗೇ ಹೋಗದೇ ಕೇವಲ ತಮ್ಮ ಸೆಲ್ಫಿಗಳನ್ನೂ ಫೋಟೋಗಳನ್ನೂ ತೆಗೆದು ಸಾಮಾಜಿಕ ತಾಲತಾಣದಲ್ಲಿ ಹರಿಬಿಡುವುದರಲ್ಲಿಯೇ ಹೆಚ್ಚಿನ ಉತ್ಸಾಹ ತೋರುತ್ತಾರೆ. ಹಾಗಾಗಿ ಎಲ್ಲರ ಆಯ್ಕೆಯನ್ನು ಪರಿಗಣಿಸಿ ಅಂತಿಮ ತಾಣವನ್ನು ಆಯ್ಕೆಮಾಡುವುದು ಕೊಂಚ ಕಠಿಣವೇ ಸರಿ. ಸಾಮಾನ್ಯವಾಗಿ ಹೆಚ್ಚಿನ ತಂದೆ ತಾಯಿಯರು ತಮ್ಮ ಮಕ್ಕಳ ಆದ್ಯತೆಯನ್ನೇ ಅನುಮೋದಿಸಿ ಆ ಸ್ಥಳಕ್ಕೇ ತೆರಳುತ್ತಾರೆ.

ಒಂದು ವೇಳೆ ನಿಮ್ಮ ಮಕ್ಕಳು ಸಮುದ್ರ ತೀರಕ್ಕೆ ಹೋಗೋಣ ಎಂದು ಇಚ್ಛೆಪಟ್ಟರೆ ಯಾವ ಸಮುದ್ರತೀರ ಎಂಬ ಪ್ರಶ್ನೆ ಧುತ್ತನೆ ಎದುರಾಗುತ್ತದೆ. ಮೊದಲಾಗಿ, ಸಮುದ್ರ ಅಪಾಯಕಾರಿ ಸ್ಥಳವಾಗಿದ್ದು ಮಕ್ಕಳ ಸುರಕ್ಷತೆಗೆ ಪ್ರಥಮ ಪ್ರಾಶಸ್ತ್ಯ ನೀಡಬೇಕಾಗುತ್ತದೆ. ಉಳಿದಂತೆ ಇತರ ಸೌಲಭ್ಯಗಳು ಹಾಗೂ ಅನುಕೂಲತೆಗಳನ್ನು ಆಧರಿಸಿ ಸಮುದ್ರ ತೀರವನ್ನು ಆಯ್ಕೆ ಮಾಡಬೇಕಾಗುತ್ತದೆ.

ಹಾಗಾಗಿ ಸುರಕ್ಷತೆ, ಸೌಲಭ್ಯ, ಜನಸಾಮಾನ್ಯರೂ ಭರಿಸಲು ಸಾಧ್ಯವಾಗುವಂತಹ ವೆಚ್ಚ ಮೊದಲಾದವುಗಳನ್ನು ಪರಿಗಣಿಸಿ ಇಂದಿನ ಲೇಖನದಲ್ಲಿ ನಿಮ್ಮ ಮಕ್ಕಳು ಹೆಚ್ಚು ಸಂಭ್ರಮಿಸಲು ಸಾಧ್ಯವಾಗುವ ಏಳು ಸಮುದ್ರತೀರದ ತಾಣಗಳ ಬಗ್ಗೆ ವಿವರಗಳನ್ನು ನೀಡಲಾಗಿದೆ. ನಿಮಗೆ ಅತಿ ಸೂಕ್ತವೆನಿಸುವ ತಾಣವನ್ನು ಆಯ್ದುಕೊಂಡು ನಿಮ್ಮ ಪ್ರವಾಸವನ್ನು ಸ್ಮರಣೀಯವಾಗಿಸಲು ಇಂದಿನ ಲೇಖನ ನೆರವಾಗಲಿದೆ.

1. ಮಹಾಬಲಿಪುರಂ ಬೀಚ್:

1. ಮಹಾಬಲಿಪುರಂ ಬೀಚ್:

ತಮಿಳುನಾಡು ಮೊದಲಾಗಿ ದೇವಾಲಯಗಳ ನಾಡು. ಇದರಲ್ಲಿ ಕೆಲವಾರು ದೇವಾಲಯಗಳು ಸಮುದ್ರತೀರದಲ್ಲಿವೆ. ಹಾಗಾಗಿ, ಮಹಾಬಲಿಪುರಂ ಅಥವಾ ಮಮಲ್ಲಾಪುರಂ ಪಟ್ಟಣಗಳಿಗೆ ಹೋಗುವ ದಾರಿಯಲ್ಲಿ ಹಲವಾರು ಪ್ರೇಕ್ಷಣೀಯ ಸ್ಥಳಗಳ ಜೊತೆಗೇ ಸ್ಥಳೀಯ ಸ್ವಾದಿಷ್ಟ ಆಹಾರಗಳು, ಭವ್ಯ ಭಾರತದ ಇತಿಹಾಸ ಹಾಗೂ ದೇವಾಲಯಗಳ ಬಗ್ಗೆ ಮಾಹಿತಿಯನ್ನು ಮಕ್ಕಳಿಗೆ ನೀಡಬಹುದು. ಮಹಾಬಲಿಪುರಂ ಸಮುದ್ರತೀರದ ಪಟ್ಟಣವಾಗಿದ್ದು ಅತ್ತ ತೀರಾ ದೊಡ್ಡದೂ ಅಲ್ಲ, ತೀರಾ ಚಿಕ್ಕದೂ ಅಲ್ಲ ಎನ್ನುವಂತಹ ಪಟ್ಟಣವಾಗಿದ್ದು ಸಕಲ ಸೌಲಭ್ಯಗಳನ್ನು ಪಡೆದಿದೆ. ಸುರಕ್ಷತೆಯನ್ನು ಪರಿಗಣಿಸುವುದಾದರೆ ಭಾರತದಲ್ಲಿಯೇ ಈ ಸಮುದ್ರ ತೀರ ನೈಸರ್ಗಿಕವಾಗಿ ಮಕ್ಕಳಿಗೆ ಅತಿ ಸುರಕ್ಷಿತವಾದ ತಾಣವಾಗಿದೆ. ತೀರದುದ್ದಕ್ಕೂ ಇರುವ ತೆಂಗಿನ ಮರಗಳು ನೈಸರ್ಗಿಕ ಸೌಂದರ್ಯವನ್ನು ಹೆಚ್ಚಿಸಿದರೆ ಪಟ್ಟಣದಲ್ಲಿರುವ ಸುಂದರ ಮನೆಗಳು ವಾಸ್ತುಶಿಲ್ಪದ ಭವ್ಯತೆಯನ್ನು ಪ್ರಕಟಿಸುತ್ತವೆ. ಸಮುದ್ರ ತೀರ ಮಾತ್ರವಲ್ಲ, ಮಹಾಬಲಿಪುರಂನಿಂದ ಚೆನ್ನೈಗೆ ಹೋಗುವ ದಾರಿಯಲ್ಲಿ ಕೆಲವರ್ಷಗಳ ಹಿಂದೆ ಎಂಜಿಎಂ ಡಿಜ್ಜೀ ವರ್ಲ್ಡ್ ಎಂಬ ಜಲವಿಹಾರ ತಾಣವನ್ನು ಪ್ರಾರಂಭಿಸಲಾಗಿದೆ. ಇದು ವಿಶೇಷವಾಗಿ ಮಕ್ಕಳಿಗೆ ಹೆಚ್ಚಿನ ಮೋಜು ಮತ್ತು ರೋಚಕ ಸವಾರಿಗಳನ್ನು ಒಳಗೊಂಡಿದ್ದು ಮಕ್ಕಳಿಗೆ ಸ್ಮರಣೀಯ ಅನುಭವವಾಗುವುದರಲ್ಲಿ ಸಂಶಯವಿಲ್ಲ.

2. ಪ್ರೋಮಿಯೇಡ್ ಬೀಚ್, ಪಾಂಡಿಚೆರಿ:

2. ಪ್ರೋಮಿಯೇಡ್ ಬೀಚ್, ಪಾಂಡಿಚೆರಿ:

ಪಾಂಡಿಚೆರಿ ತಮಿಳುನಾಡು ಪ್ರದೇಶದಲ್ಲಿರುವ ಕೇಂದ್ರಾಡಳಿತ ಪ್ರದೇಶವಾಗಿದೆ. ಇದೇ ಕಾರಣಕ್ಕೆ ಈ ಪಟ್ಟಣದಲ್ಲಿ ಇತರ ನಗರಗಳಿಗೆ ಸಿಗದ ಸೌಲಭ್ಯಗಳು ದೊರಕುತ್ತವೆ ಹಾಗೂ ಪ್ರವಾಸಿಗರಿಗೂ ಇದರಿಂದ ಪ್ರಯೋಜನಗಳಿವೆ. ಹಿಂದೆ ಪೋರ್ಚುಗೀಸರ ಆಡಳಿತದಲ್ಲಿದ್ದಾಗ ಲಭಿಸಿದ್ದ ವೈಭವವನ್ನು ಇಂದಿಗೂ ಗತಕಾಲದ ಕುರುಹಾಗಿ ಕಾಣಬಹುದು. ಆದರೆ ಈ ಪಟ್ಟಣದ ಸಮುದ್ರತೀರಗಳು ಇನ್ನಷ್ಟು ಸುಂದರ ಮತ್ತು ಸುರಕ್ಷಿತವಾಗಿವೆ. ವಿಶೇಷವಾಗಿ ಸಂಜೆಯ ಹೊತ್ತು ಈ ತೀರಪ್ರದೇಶದಲ್ಲಿ ಅಡ್ಡಾಡುವುದೇ ಒಂದು ರೋಚಕ ಅನುಭವ. ಇಲ್ಲಿ ಕೆಲವಾರು ಬೀಚ್ ಅಥವಾ ತೀರಗಳಿದ್ದರೂ ಇದರಲ್ಲಿ ಮಕ್ಕಳಿಗೆ ಅತಿ ಸುರಕ್ಷಿತವಾದ ತಾಣವೆಂದರೆ ಪ್ರೋಮಿಯೇಡ್ ಬೀಚ್. ಆದರೆ ಈ ಕಾರಣದಿಂದಲೇ ಈ ತಾಣ ವಾರಂತ್ಯಗಳಲ್ಲಿ ಭಾರೀ ಸಂಖ್ಯೆಯ ಜನರಿಂದ ತುಂಬಿರುತ್ತದೆ. ಹಾಗಾಗಿ ಮಕ್ಕಳಿಗೆ ಹೆಚ್ಚಿನ ಸ್ಥಳಾವಕಾಶ ನೀಡಲು ನೀವು ವಾರದ ದಿನಗಳಲ್ಲಿ ಇಲ್ಲಿ ಭೇಟಿ ನೀಡುವುದು ಉತ್ತಮ. ಈ ತೀರ ಸ್ವಚ್ಛವಾಗಿದ್ದು ಸೌಲಭ್ಯಗಳನ್ನೂ ಹೊಂದಿದೆ. ಹಾಗಾಗಿ ನಿಮ್ಮ ಮಕ್ಕಳೊಂದಿಗೆ ನೀವು ಕಳೆಯುವ ಸಮಯ ಹೆಚ್ಚು ಕಾಲ ನೆನಪಿನಲ್ಲಿ ಉಳಿಯುವ ಅನುಭವವಾಗಲಿದೆ.

3. ಕಾವೆಲೋಸಿಂ ಬೀಚ್, ಗೋವಾ:

3. ಕಾವೆಲೋಸಿಂ ಬೀಚ್, ಗೋವಾ:

ಗೋವಾ ಎಂದರೆ ಕೇವಲ ಬೀಚ್ ಎಂದೇ ಹೆಚ್ಚಿನವರು ತಿಳಿದಿದ್ದಾರೆ. ವಾಸ್ತವದಲ್ಲಿ ಗೋವಾ ಪ್ರವಾಸಿಗರಿಗೆ ಎರಡು ಭಾಗಗಳಲ್ಲಿ ಲಭ್ಯವಿದೆ. ಉತ್ತರ ಗೋವಾದಲ್ಲಿ ಹೆಚ್ಚಿನ ಸಂಖ್ಯೆಯ ಚರ್ಚುಗಳು, ವಸ್ತುಸಂಗ್ರಹಾಲಯಗಳು, ಪ್ರಾಚೀನ ಕಟ್ಟಡಗಳು ಮತ್ತು ಪ್ರಾದೇಶಿಕ ಆಕರ್ಷಣೆಗಳು ಲಭಿಸಿದರೆ ದಕ್ಷಿಣಾ ಗೋವಾದಲ್ಲಿ ಹಲವಾರು ಬೀಚು ಅಥವಾ ಸಮುದ್ರತೀರಗಳಿವೆ. ಪ್ರತಿ ಬೀಚ್ ಸಹಾ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದ್ದರೂ ಇವುಗಳಲ್ಲಿ ಕಾವೆಲೋಸಿಂ ಬೀಚ್ ಮಾತ್ರ ಮಕ್ಕಳಿಗೆ ಅತಿ ಹೆಚ್ಚಿನ ಸುರಕ್ಷತೆ ಮತ್ತು ಹೆಚ್ಚಿನ ಮೋಜಿನ ಚಟುವಟಿಕೆಗಳನ್ನು ಒದಗಿಸುತ್ತದೆ. ಅಷ್ಟೇ ಅಲ್ಲ, ಇದರ ತೀರ ಸುಮಾರು ದೂರದವರೆಗೂ ಆಳವಿಲ್ಲದೇ ಸ್ವಚ್ಛವಾಗಿರುವ ಕಾರಣ ಮಕ್ಕಳಿಗೆ ಸೂಕ್ತವಾಗಿದೆ. ಸಾಮಾನ್ಯವಾಗಿ ಈ ತೀರದಲ್ಲಿ ನೀರಿಗೆ ಇಳಿದ ಮಕ್ಕಳು ಹೊರಬರಲು ಇಚ್ಛಿಸುವುದೇ ಇಲ್ಲ. ಇಲ್ಲಿ ದೋಣಿವಿಹಾರ, ಲಾಂಚ್ ನಲ್ಲಿ ಆಳ ಸಮುದ್ರದತ್ತ ಪ್ರಯಾಣ ಮೊದಲಾದ ಚಟುವಟಿಕೆಗಳಿವೆ ಹಾಗೂ ವಿಶೇಷವಾಗಿ ಸೂರ್ಯಾಸ್ತದ ಸಮಯ ಅತಿ ಹೆಚ್ಚು ಮನಮೋಹಕವಾಗಿರುತ್ತದೆ. ದೋಣಿಯಲ್ಲಿ ಹೋಗುವಾಗ ಅದೃಷ್ಟವಂತರಿಗೆ ಸಮುದ್ರದ ಬುದ್ದಿಜೀವಿಗಳಾದ ಡಾಲ್ಫಿನ್ ಗಳು ನೀರಿನಿಂದ ಪುಳಕ್ಕನೇ ಮೇಲೆ ಹಾರಿ ಮತ್ತೆ ನೀರಿಗೆ ಧುಮುಕುವ ದರ್ಶನವನ್ನೂ ನೀಡಬಹುದು.

4. ಗಣಪತಿಫುಲೆ ಬೀಚ್, ಮಹಾರಾಷ್ಟ್ರ:

4. ಗಣಪತಿಫುಲೆ ಬೀಚ್, ಮಹಾರಾಷ್ಟ್ರ:

ಮುಂಬೈ ನಗರದಿಂದ ದಕ್ಷಿಣದತ್ತ ಸುಮಾರು ಐದು ಘಂಟೆಗಳ ಕಾಲ ಪಯಣಿಸಿದಾಗ ಸಿಗುವ ರತ್ನಗಿರಿ ಪಟ್ಟಣದ ನಿಕಟದಲ್ಲಿಯೇ ಇರುವ ಈ ಸಮುದ್ರತೀರ ಅತಿ ಸುಂದರವಾಗಿದೆ. ಇದು ಇಡಿಯ ಮಹಾರಾಷ್ಟ್ರ ರಾಜ್ಯದಲ್ಲಿಯೇ ಮಕ್ಕಳಿಗೆ ಅತಿ ಸುರಕ್ಷಿತ ತಾಣವೆಂಬ ಹೆಗ್ಗಳಿಕೆ ಪಡೆದಿದೆ. ಇದೊಂದು ನೈಸರ್ಗಿಕವಾದ, ಯಾವುದೇ ಮಾರ್ಪಾಡನ್ನು ನೀಡದ ಸ್ವಚ್ಛ ಮತ್ತು ತಿಳಿಯಾದ ತೀರವಾಗಿದ್ದು ವಿಶ್ವದ ಸಂರಕ್ಷಿತ ತಾಣವೆಂದೂ ಗುರುತಿಸಲ್ಪಡುತ್ತದೆ. ಈ ಕಾರಣಕ್ಕೇ ರಜಾದಿನಗಳಲ್ಲಿ ಈ ತೀರ ಶಾಲಾ ಮಕ್ಕಳಿಂದ ತುಂಬಿ ತುಳುಕುತ್ತಿರುತ್ತದೆ. ಸಾಮಾನ್ಯವಾಗಿ ಭಾರತದ ಪಶ್ಚಿಮ ತೀರದ ಸಮುದ್ರ ಅಲೆಗಳು ಕೊಂಚ ಎತ್ತರವಾಗಿಯೂ, ಸದ್ದಿನಿಂದಲೂ ಕೂಡಿರುತ್ತದೆ. ಆದರೆ ಇದಕ್ಕೆ ಅಪವಾದವೆಂಬಂತೆ ಈ ತೀರದಲ್ಲಿ ಸುಮಾರು ದೂರದವರೆಗೂ ಹೆಚ್ಚೇನೂ ಆಳವಿಲ್ಲದೇ ಮರಳು ತುಂಬಿದ್ದು ಇಲ್ಲಿ ಅಲೆಗಳು ಬರುವುದಿಲ್ಲ ಹಾಗೂ ಮೇಲ್ನೋಟಕ್ಕೆ ಸಮುದ್ರಕ್ಕೂ ಬದಲಾಗಿ ಒಂದು ವಿಶಾಲ ಕೆರೆಯಂತೆ ಕಾಣಿಸುತ್ತದೆ. ಇದು ಮಕ್ಕಳಿಗೆ ಈಜಾಡಲು ಅತಿ ಸೂಕ್ತವಾದ ಮತ್ತು ಸುರಕ್ಷಿತ ತಾಣವೂ ಆಗಿದೆ.

5. ಕಾಶೀದ್ ಬೀಚ್, ಮಹಾರಾಷ್ಟ್ರ

5. ಕಾಶೀದ್ ಬೀಚ್, ಮಹಾರಾಷ್ಟ್ರ

ಸಾಮಾನ್ಯವಾಗಿ ಮುಂಬೈಯ ಜನರು ಪೆದ್ದುತನ ತೋರುವ ವ್ಯಕ್ತಿಗಳಿಗೆ 'ಅಲಿಬಾಗ್ ಸೇ ಆಯಾ ಕ್ಯಾ' ಎಂದು ಲೇವಡಿ ಮಾಡುತ್ತಾರೆ. ಅಂದರೆ ಮುಂಬೈ ಅತಿ ಮುಂದುವರೆದ ಹಾಗೂ ಅಲಿಬಾಗ್ ಅತಿ ಹಿಂದುಳಿದಿರುವ ಪ್ರದೇಶ ಎಂದೇ ಇದರ ಒಳಾರ್ಥವಾಗಿದೆ. ಈ ಮಾತು ಅಲಿಬಾಗ್ ಗೆ ಹತ್ತಿರವಿರುವ ಕಾಶಿದ್ ಎಂಬ ಸಮುದ್ರ ತೀರಕ್ಕೆ ಸರಿಯಾಗಿ ಅನ್ವಯಿಸುತ್ತದೆ. ಇದೊಂದು ಯಾವುದೇ ಬದಲಾವಣೆ ಪಡೆಯದ, ಸ್ವಚ್ಛ ಮತ್ತು ಸುಂದರ ತೀರವಾಗಿದ್ದು ಮಕ್ಕಳೂ ಸಂಭ್ರಮಿಸುವ ಸುರಕ್ಶತಾ ತಾಣವಾಗಿದೆ. ಈ ಬೀಚ್ ನಲ್ಲಿ ಅಲೆಗಳು ಅತಿ ಎಚ್ಚರವಾಗಿಲ್ಲದಿದ್ದರೂ ಮಕ್ಕಳು ನೀರಿನಲ್ಲಿ ಹೆಚ್ಚು ದೂರ ಹೋಗಲು ಸಾಧ್ಯವಿಲ್ಲ. ಆದರೆ ಇಲ್ಲಿ ಲಭ್ಯವಿರುವ ಇತರ ಚಟುವಟಿಕೆಗಳು ಮಕ್ಕಳ ಮನತಣಿಸುತ್ತವೆ. ಪ್ಯಾರಾಶೂಟ್ ಮೂಲಕ ಆಗಸದೆತ್ತರಕ್ಕೆ ನೆಗೆಯುವ ಪ್ಯಾರಾಸೇಲಿಂಗ್, ಕುದುರೆ ಸವಾರಿ ಹಾಗೂ ನೀರ ಮೇಲೆ ನಡೆಸುವ ಸವಾರಿಗಳಾದ ಜೆಟ್ ಸ್ಕೀ, ಬನಾನಾ ಬೋಟ್ ರೈಡ್ ಮೊದಲಾದವುಗಳನ್ನು ಮಕ್ಕಳು ಬಹಳವೇ ಇಷ್ಟಪಡುತ್ತಾರೆ.

6. ಮರಾರಿಕುಳಂ ಬೀಚ್, ಕೇರಳ:

6. ಮರಾರಿಕುಳಂ ಬೀಚ್, ಕೇರಳ:

ಕೇರಳ ಎಂದಾಕ್ಷಣ ನೆನಪಿಗೆ ಬರುವುದು ತೆಂಗಿನ ಮರಗಳು, ದೋಣಿಯ ರೇಸ್, ಆನೆ, ಇತ್ಯಾದಿ. ಇದರ ಒಂದು ಜಿಲ್ಲೆಯಾದ ಆಲೆಪ್ಪಿ (ಮೂಲ ಪದ ಆಲಪುಯಃ) ವಾಸ್ತವದಲ್ಲಿ ಸಮುದ್ರದ ನೀರು ನೆಲದೊಳಕ್ಕೆ ಬಂದ ಹಿನ್ನೀರಿನ ಪ್ರದೇಶವಾಗಿದೆ. ಈ ಹಿನ್ನಿರು ಈ ತೀರದುದ್ದಕ್ಕೂ ಹಲವಾರು ನದಿಗಳಂತಹ ಕಾಲುವೆಗಳನ್ನು ಸೃಷ್ಜಿಸಿದೆ. ಇವುಗಳಲ್ಲಿ ಅಡ್ಡಾಡಲು ಸಾಂಪ್ರಾದಾಯಿಕ ವಿನ್ಯಾಸದ ದೋಣಿಗಳಿವೆ. ಇಂತಹ ಪ್ರದೇಶದಲಿರುವ ಪುಟ್ಟ ಹಳ್ಳಿಯಾದ ಮರಾರಿಕುಳಂ ಅತಿಸುಂದರ ಪ್ರದೇಶವಾಗಿದೆ. ಇದರ ಸುರಕ್ಷತೆಯನ್ನು ಪರಿಗಣಿಸಿ ಇದು ಭಾರತದಲ್ಲಿಯೇ ಅತಿ ಸುರಕ್ಷಿತ ತಾಣವೆಂದು ಪರಿಗಣಿಸಲಾಗುತ್ತದೆ ಆದರೆ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ವಿಶೇಷವಾಗಿ ಮಕ್ಕಳಿಗಿಲ್ಲಿ ಹಲವಾರು ಆಕರ್ಷಣೆಗಳಿವೆ. ತೀರದುದ್ದಕ್ಕೂ ನಡೆದಾಡಲು ಕಿರುದಾರಿಗಳಿವೆ. ನೀರಿನಲ್ಲಿಯೂ ಆಡುವಂತಹ ಕೆಲವಾರು ಸೌಲಭ್ಯಗಳಿವೆ. ಅತಿ ಹೆಚ್ಚು ಜನರಿಲ್ಲದೇ ಇರುವ ಈ ಸ್ಥಳದಲ್ಲಿ ಕುಟುಂಬ ತನ್ನ ಖಾಸಗಿ ಸಮಯವನ್ನು ಕಳೆಯಲು ಅತಿ ಸೂಕ್ತವಾಗಿದೆ. ಸಂಜೆಯಾಗುತ್ತಿದ್ದಂತೆಯೇ ಈ ತೀರದಲ್ಲಿ ಕೆಲವಾರು ತಂಡಗಳು ಆಡಲು ಬರುತ್ತವೆ ಹಾಗೂ ಕೊಂಚ ಸಮಯದಲ್ಲಿಯೇ ಇದೊಂದು ವಿಶಾಲವಾದ ಕ್ರೀಡಾಂಗಣದಂತೆ ಕಾಣುತ್ತದೆ. ಸ್ಥಳೀಯರೊಂದಿಗೆ ಮಕ್ಕಳೂ ಆಟಕ್ಕೆ ಸೇರಿಕೊಳ್ಳಬಹುದು ಹಾಗೂ ಈ ಆಟವನ್ನು ಮಕ್ಕಳು ಹೆಚ್ಚು ಇಷ್ಟಪಡುತ್ತಾರೆ. ವಿಶೇಷವಾಗಿ ಚಳಿಗಾಲದಲ್ಲಿ ಈ ತೀರ ಅತಿ ಸುಂದರ ಮತ್ತು ಅಪ್ಯಾಯಮಾನವಾದ ವಾತಾವರಣವನ್ನು ಹೊಂದಿರುತ್ತದೆ.

7. ಓಂ, ಬೀಚ್, ಗೋಕರ್ಣ:

7. ಓಂ, ಬೀಚ್, ಗೋಕರ್ಣ:

ಗೋಕರ್ಣ ನಮ್ಮ ಕರ್ನಾಟಕದ ಉತ್ತರ ಕರ್ನಾಟಕ ಜಿಲ್ಲೆಯ ಪ್ರಮುಖ ಧಾರ್ಮಿಕ ತಾಣವಾಗಿದೆ. ಧಾರ್ಮಿಕ ಸ್ಥಳಗಳ ಮಹತ್ವದ ಹೊರತಾಗಿ ಇಲ್ಲಿನ ನೈಸರ್ಗಿಕ ತೀರಗಳು, ಹಿನ್ನೀರು, ಮ್ಯಾಂಗ್ರೋವ್ ಕಾಡುಗಳು ಮೊದಲಾದವು ಈ ಪ್ರದೇಶದ ಪ್ರವಾಸಿ ಮಹತ್ವವನ್ನು ಹೆಚ್ಚಿಸಿವೆ. ಈ ಸುಂದರ ತಾಣವನ್ನು ನೋಡಲು ವಿಶ್ವದ ಎಲ್ಲೆಡೆಯಿಂದ ಕುಟುಂಬಸಹಿತರಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇದರಲ್ಲಿ ಓಂ ಬೀಚ್ ಪ್ರಮುಖವಾಗಿದ್ದು ಆಗಸದಿಂದ ನೋಡಿದರೆ ಈ ತೀರ ಸಂಸ್ಕೃತದ ಓಂ ಅಕ್ಷರದಂತೆಯೇ ಕಾಣುವ ಕಾರಣದಿಂದ ಇದೇ ಹೆಸರನ್ನು ಪಡೆದಿದೆ. ಇಲ್ಲಿ ಕೆಲವಾರು ನೀರಿನ ಆಟಗಳ ವ್ಯವಸ್ಥೆ ಲಭ್ಯವಿದೆ ಹಾಗೂ ತೀರದುದ್ದಕ್ಕೂ ಗಾಳಿಮರಗಳಿವೆ (casuarina) ಸಮುದ್ರದ ಗಾಳಿ ಬೀಸಿದಾಗ ಇವು ಹೊರಡಿಸುವ ಸದ್ದು ಮನಕ್ಕೆ ಮುದ ನೀಡುವಂತಹದ್ದಾಗಿದ್ದು ಸಂಜೆಯ ವೇಳೆ ಸುಮ್ಮನೇ ತೀರದಲ್ಲಿ ಅಡ್ಡಾಡಿದರೂ ಈ ಸದ್ದಿನಿಂದ ಮನ ಪ್ರಫುಲ್ಲವಾಗುತ್ತದೆ. ತೀರದಲ್ಲಿ ಕ್ರಿಕೆಟ್, ಫುಟ್ಬಾಲ್, ಗಾಳಿಪಟ ಹಾರಿಸುವುದು ಮೊದಲಾದ ಚಟುವಟಿಕೆಗಳಿದ್ದು ಮಕ್ಕಳು ತಮಗೆ ಇಷ್ಟವಾದ ಚಟುವಟಿಕೆಯಲ್ಲಿ ತೊಡಗಿಕೊಳ್ಳಬಹುದು. ಅಷ್ಟೇ ಅಲ್ಲ, ತೀರದಲ್ಲಿಯೇ ಸುಲಭ ದರದಲ್ಲಿ ಸ್ಥಳೀಯ ಸ್ವಾದಿಷ್ಟ ವ್ಯಂಜನಗಳೂ ಲಭ್ಯವಿದ್ದು ಜಿಹ್ವಾಚಾಪಲ್ಯವನ್ನು ತಣಿಸುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X