Search
  • Follow NativePlanet
Share
» »ತಿರುಮಲ ಬೆಟ್ಟಗಳ ಅದ್ಭುತ ದಂತಕಥೆ

ತಿರುಮಲ ಬೆಟ್ಟಗಳ ಅದ್ಭುತ ದಂತಕಥೆ

By Vijay

ತಿರುಮಲ ಬೆಟ್ಟಗಳು ದಕ್ಷಿಣ ಭಾರತದ ಪ್ರಮುಖ ಅಥವಾ ಮುಖ್ಯ ಧಾರ್ಮಿಕ ಪ್ರವಾಸಿ ಆಕರ್ಷಣೆಯಾಗಿದೆ. ಇದಕ್ಕೆ ಕಾರಣ ನಿಮಗೆಲ್ಲ ಗೊತ್ತಿರುವಂತೆ ಈ ಬೆಟ್ಟಗಳು ಹಿಂದೂಗಳು ಹೆಚ್ಚಾಗಿ ನಡೆದುಕೊಳ್ಳುವ ಶ್ರೀ ವೆಂಕಟರಮಣ ಸ್ವಾಮಿಯ ದಿವ್ಯ ನೆಲೆಯಾಗಿರುವುದರಿಂದ. ತಿರುಮಲ ಬೆಟ್ಟಗಳ ಪ್ರದೇಶವೆ ಒಂದು ರೀತಿಯಲ್ಲಿ ಅನನ್ಯ ಅನುಭವ ನೀಡುವ ವಿಶಿಷ್ಟ ತಾಣವಾಗಿದೆ.

ವಿಶೇಷ ಲೇಖನ : ಬೆಂಗಳೂರಿನಿಂದ ತಿರುಪತಿಗೆ ಕಾರಿನಲ್ಲಿ

ಈ ಪ್ರದೇಶವು ಒಂದು ಅದ್ಭುತವಾದ ಹಿನ್ನಿಲೆಯನ್ನೆ ಹೊಂದಿದೆ. ಈ ಪ್ರದೇಶದ ಸ್ಥಳ ಪುರಾಣದಂತೆ ಇಲ್ಲಿ ಕೆಲವು ವಿಶಿಷ್ಟ ರಚನೆಗಳನ್ನು ನೋಡಬಹುದಾಗಿದೆ ಹಾಗೂ ಸ್ಥಳದ ಕುರಿತು ಪ್ರಚಲಿತವಿರುವ ರೋಚಕ ಹಿನ್ನಿಲೆಯನ್ನು ತಿಳಿದುಕೊಂಡು ತಿರುಮಲ ಬೆಟ್ಟಕ್ಕೆ ಪ್ರವಾಸ ಮಾಡಿದರೆ ಅದೊಂದು ಸಾರ್ಥಕತೆಯ ಪ್ರವಾಸವೆನಿಸಬಹುದಲ್ಲವೆ?

ವಿಶೇಷ ಲೇಖನ : ತಿರುಪತಿಯಲ್ಲಿರುವ ಇತರೆ ದೇವಸ್ಥಾನಗಳು

ಹಾಗಾದರೆ, ಈ ಲೇಖನದ ಮೂಲಕ ತಿರುಮಲ ಕ್ಷೇತ್ರದ ಕುರಿತು ಹಲವು ವಿಶಿಷ್ಟ ಸಂಗತಿಗಳನ್ನು ತಿಳಿದುಕೊಳ್ಳಿ ಹಾಗೂ ಈ ಪವಿತ್ರ ಕ್ಷೇತ್ರಕ್ಕೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದರೊಡನೆ ಕಲೆತು ಒಂದೊಮ್ಮೆಯಾದರೂ ಪ್ರವಾಸ ಮಾಡಿ ಏಳು ಬೆಟ್ಟಗಳೊಡೆಯನ ಕೃಪಾ ಕಟಾಕ್ಷಕ್ಕೆ ಪಾತ್ರರಾಗಿ.

ಏಳು ಬೆಟ್ಟಗಳ ದಂತಕಥೆ:

ಏಳು ಬೆಟ್ಟಗಳ ದಂತಕಥೆ:

ದಂತಕಥೆಯಂತೆ, ವೆಂಕಟೇಶ್ವರ ಸ್ವಾಮಿಯು ಈ ತಾಣವನ್ನು ಸುಮಾರು 5000 ವರ್ಷಗಳ ಹಿಂದೆ ತನ್ನ ನೆಲೆಯನ್ನಾಗಿ ಮಾಡಿಕೊಂಡಿದ್ದನಂತೆ. ಅಚ್ಚರಿ ಎಂದರೆ ಇದಕ್ಕೂ ಮುನ್ನ ವರಾಹಸ್ವಾಮಿಯು ಈ ನೆಲೆದಲ್ಲಿಯೆ ವಾಸವಾಗಿದ್ದನಂತೆ. ನಂತರದಲ್ಲಿ ಈ ತಾಣಕ್ಕೆ ಬಂದ ಅನೇಕ ರಾಜರುಗಳು ಕಾಲಕ್ಕೆ ತಕ್ಕಂತೆ ಇಲ್ಲಿನ ದೇವಾಲಯವನ್ನು ನವೀಕರಣ ಮಾಡುತ್ತ ಬಂದರೆಂಬ ಇತಿಹಾಸವಿದೆ.

ಚಿತ್ರಕೃಪೆ: Jai Kishan Chadalawada

ಏಳು ಬೆಟ್ಟಗಳ ದಂತಕಥೆ:

ಏಳು ಬೆಟ್ಟಗಳ ದಂತಕಥೆ:

ಇದು ಪೌರಾಣಿಕವಾಗಿ ವರಾಹಕ್ಷೇತ್ರ ಎಂತಲೂ ಪ್ರಸಿದ್ಧಿ ಪಡೆದಿದೆ. ಕಾರಣ ಹಿಂದೆ ಹಿರಣ್ಯಾಕ್ಷ ಎಂಬ ರಾಕ್ಷಸನು ಭೂಮಿಯನ್ನು ಅಪಹರಿಸಿ ಪಾತಾಳಕ್ಕೆ ಕೊಂಡೊಯ್ದಾಗ ಅವನ ಹಿಡಿತದಿಂದ ಭೂಮಿಯನ್ನು ರಕ್ಷಿಸಲು ಮಹಾ ವಿಷ್ಣುವು ವರಾಹ (ಚೂಪಾದ ಕೋರೆ ಹಲ್ಲುಗಳುಳ್ಳ ಕಾಡು ಹಂದಿ) ರೂಪ ತಾಳಿ, ಪಾತಾಳಕ್ಕಿಳಿದು, ಹಿರಣ್ಯಾಕ್ಷನೊಂದಿಗೆ ಯುದ್ಧ ಮಾಡಿ, ಅವನನ್ನು ಸಂಹರಿಸಿ ಮತ್ತೆ ಭೂಮಿಯನ್ನು ತನ್ನ ಹಲ್ಲುಗಳ ಮೇಲಿಟ್ಟುಕೊಂಡು ಬಂದು ನಂತರ ಈ ಬೆಟ್ಟಗಳಲ್ಲಿ ನೆಲೆಸಲು ಬಯಸಿದನಂತೆ.

ಚಿತ್ರಕೃಪೆ: wikipedia

ಏಳು ಬೆಟ್ಟಗಳ ದಂತಕಥೆ:

ಏಳು ಬೆಟ್ಟಗಳ ದಂತಕಥೆ:

ಇಂದಿಗೂ ತಿರುಮಲದಲ್ಲಿರುವ ಪುಷ್ಕರಿಣಿಯ ವಾಯವ್ಯ ದಿಕ್ಕಿನಲ್ಲಿ ಪೂರ್ವಾಭಿಮುಖವಾಗಿ ನಿಂತಿರುವ ವರಾಹಸ್ವಾಮಿಯ ದೇಗುಲವಿದೆ. ಪ್ರತೀತಿಯಂತೆ ಭಕ್ತರು ಮೊದಲಿಗೆ ಈ ದೇವಸ್ಥಾನಕ್ಕೆ ಭೇಟಿ ನೀಡಿ ನಂತರದಲ್ಲಿ ಶ್ರೀನಿವಾಸನ ಭೇಟಿಗೆ ತೆರಳುತ್ತಾರೆ. ಈ ಆಚರಣೆಯ ಹಿಂದೆಯೂ ಸಹ ಒಂದು ಸ್ವಾರಸ್ಯಕರವಾದ ಕಥೆಯಿದೆ.

ಚಿತ್ರಕೃಪೆ: { pranav }

ಏಳು ಬೆಟ್ಟಗಳ ದಂತಕಥೆ:

ಏಳು ಬೆಟ್ಟಗಳ ದಂತಕಥೆ:

ಶ್ರೀನಿವಾಸನು ಇಲ್ಲಿಗೆ ಬಂದಾಗ ನೂರು ಚ.ಅಡಿಗಳಷ್ಟು ಭೂಮಿಯನ್ನು ವರಾಹಸ್ವಾಮಿಯಿಂದ ಕೊಡುಗೆಯಾಗಿ ಪಡೆದುಕೊಳ್ಳುತ್ತಾನೆ ಹಾಗೂ ಅದಕ್ಕೆ ಪ್ರತಿಫಲವಾಗಿ ತನ್ನ ದರುಶನ ಕೋರಿ ಬರುವ ಭಕ್ತರು ಮೊದಲ ನಿನ್ನ ದರುಶನವನ್ನೆ ಮಾಡಬೇಕಾದ ನೋಡಿಕೊಳ್ಳುತ್ತೇನೆಂದು ಕರಾರು ಪತ್ರವನ್ನೂ ಸಹ ಮಾಡುತ್ತಾನೆ. ಅದರಂತೆ ಇಂದಿಗೂ ಮೊದಲು ವರಾಹಸ್ವಾಮಿಯ ದರುಶನ ಪೂಜೆಯ ನಂತರ ಶ್ರೀನಿವಾಸನಿಗೆ ವಿಧಿ ವಿಧಾನಗಳು ನಡೆಯುತ್ತದೆ.

ಚಿತ್ರಕೃಪೆ: Srinivasa Sasidhar bontu

ಏಳು ಬೆಟ್ಟಗಳ ದಂತಕಥೆ:

ಏಳು ಬೆಟ್ಟಗಳ ದಂತಕಥೆ:

ಈ ಪ್ರಸಂಗಕ್ಕೆ ಕುರುಹು ಎಂಬಂತೆ ಇಂದಿಗೂ ವರಾಹಸ್ವಾಮಿಯ ದೇವಸ್ಥಾನದಲ್ಲಿ ತಾಮ್ರದ ಹಾಳೆಯೊಂದರಲ್ಲಿ ಕರಾರು ಪತ್ರವನ್ನು ನೋಡಬಹುದಾಗಿದೆ. ಬ್ರಾಹ್ಮಿ ಲಿಪಿಗೆ ಹೋಲುವ ಅಕ್ಷರಗಳಲ್ಲಿ ಇದನ್ನು ಬರೆಯಲಾಗಿದೆ ಹಾಗೂ ವರಾಹಸ್ವಾಮಿಯ ವಿಗ್ರಹದ ಬಳಿಯಲ್ಲಿ ಇದನ್ನು ಇಡಲಾಗಿದೆ. ಈ ಪತ್ರವನ್ನು ಸ್ವತಃ ಶ್ರೀನಿವಾಸನೆ ವರಾಹಸ್ವಾಮಿಗೆ ಸಮರ್ಪಿಸಿದ್ದೆನ್ನಲಾಗಿದೆ.

ಚಿತ್ರಕೃಪೆ: wikipedia

ಏಳು ಬೆಟ್ಟಗಳ ದಂತಕಥೆ:

ಏಳು ಬೆಟ್ಟಗಳ ದಂತಕಥೆ:

ದ್ವಾಪರಯುಗದಲ್ಲೂ ಸಹ ಖ್ಯಾತಿ ಪಡೆದಿದ್ದ ಈ ಬೆಟ್ಟ ಪ್ರದೇಶವು ಶೇಷಾಚಲ ಎಂದೂ ಸಹ ಪ್ರಸಿದ್ಧಿ ಪಡೆದಿದೆ. ಕಥೆಯಾನುಸಾರ, ದ್ವಾಪರಯುಗದಲ್ಲೊಮ್ಮೆ ನಾರಾಯಣನು ತನ್ನ ಮಡದಿ ಲಕ್ಷ್ಮಿಯೊಂದಿಗೆ ಏಕಾಂತದಲ್ಲಿ ಸಮಯ ಕಳೆಯುತ್ತಿದ್ದಾಗ ಅಲ್ಲಿ ವಾಯುವಿನ ಆಗಮನವಾಗುತ್ತಿರುತ್ತದೆ. ವಿಷ್ಣುವಿನ ವಾಹನವಾನವಾದ ಆದಿಶೇಷ ನಾಗನು ಇದನ್ನು ಕಂಡು ವಾಯುವನ್ನು ಪ್ರವೇಶಿಸದಂತೆ ತಡೆ ಹಿಡಿಯುತ್ತಾನೆ.

ಚಿತ್ರಕೃಪೆ: Bryan Allison

ಏಳು ಬೆಟ್ಟಗಳ ದಂತಕಥೆ:

ಏಳು ಬೆಟ್ಟಗಳ ದಂತಕಥೆ:

ಇದರಿಂದ ಕೋಪೋದ್ರಿಕ್ತನಾದ ವಾಯು ದೇವ ಹಾಗೂ ಏಳು ಹೆಡೆಗಳುಳ್ಳ ಆದಿಶೇಷ ಸರ್ಪನ ನಡುವೆ ಯುದ್ಧ ಏರ್ಪಡುತ್ತದೆ. ಹೀಗೆ ಕೆಲ ಸಮಯ ಯುದ್ದ ಮುಂದುವರೆದು ಕೊನೆಗೆ ವಾಯು ದೇವನ್ನು ಸೋಲುವ ರೀತಿಯಲ್ಲಿ ಕಂಡು ಬಂದಾಗ, ಆದಿ ಶೇಷನು ತಾ ಗೆದ್ದೆ ಎಂದು ಭಾವಿಸಿ ತನ್ನ ಹೆಡೆಯನ್ನು ಸಡೀಲುಗೊಳಿಸಿದಾಗ ಒಮ್ಮೆಗೆ ವಾಯು ತನ್ನ ಅಪಾರ ಶಕ್ತಿಯಿಂದ ಬಲವಾಗಿ ಬೀಸಿ ಆದಿಶೇಷ ರಕ್ಷಿಸುತ್ತಿದ್ದ ಮೇರು ಪರ್ವತದ ಶಿಖರ ಶೃಂಗಗಳನ್ನು ಎತ್ತಿ ಒಗೆಯುತ್ತಾನೆ. ಆ ಶೃಂಗವು ಸ್ವರ್ಣಮುಖಿ ನದಿಯೊಂದರ ಬಳಿ ಬಿದ್ದು ಅದೆ ಇಂದು ಶೇಷಾಚಲಂ ಬೆಟ್ಟ ಅಥವಾ ವೆಂಕಟಾದ್ರಿಗಿರಿಯಾಗಿದೆ.

ಚಿತ್ರಕೃಪೆ: Pravinraaj

ಏಳು ಬೆಟ್ಟಗಳ ದಂತಕಥೆ:

ಏಳು ಬೆಟ್ಟಗಳ ದಂತಕಥೆ:

ಇನ್ನೂ ಬಹುವಾಗಿ ತಿರುಮಲ ಕ್ಷೇತ್ರದ ಕುರಿತು ಸ್ವೀಕರಿಸಲಾಗಿರುವ ಕಥೆಯು ಹೀಗೆ ಸಾಗುತ್ತದೆ. ಕಲಿ ಯುಗದ ಪ್ರಾರಂಭದ ಸಮಯದಲ್ಲಿ ಋಷಿ ಮುನಿಗಳು ಯಜ್ಞವೊಂದನ್ನು ಮಾಡುತ್ತಿದ್ದರು. ಆದರೆ ಯಜ್ಞದ ಹವಿಸ್ಸು ಅಥವಾ ಫಲವನ್ನು ತ್ರಿಮೂರ್ತಿಗಳಲ್ಲಿ ಯಾರಿಗೆ ಅರ್ಪಿಸಬೇಕೆಂಬುದರ ಕುರಿತು ಅವರ ಗೊಂದಲ ಉಂಟಾಯಿತು ಹಾಗೂ ಇದಕ್ಕೆ ಪರಿಹಾರ ಕೊಂಡುಕೊಳ್ಳುವ ಉದ್ದೇಶದಿಂದ ಅವರು ನಾರದ ಮಹರ್ಷಿಯ ಬಳಿ ಮೊರೆಹೋದರು.

ಚಿತ್ರಕೃಪೆ: Tallapragada

ಏಳು ಬೆಟ್ಟಗಳ ದಂತಕಥೆ:

ಏಳು ಬೆಟ್ಟಗಳ ದಂತಕಥೆ:

ನಾರದನು ಅವರನ್ನು ಕುರಿತು ಇದಕ್ಕೆ ಭೃಗು ಮಹರ್ಷಿಯ ಸಲಹೆ ತೆಗೆದುಕೊಳ್ಳುವುದು ಉತ್ತಮ ಎಂದು ಹೇಳಿದಾಗ ಭೃಗು ಮೊದಲಿಗೆ ಮೂವರು ತ್ರಿಮೂರ್ತಿಗಳನ್ನು ಮೊದಲು ಭೇಟಿ ಮಾಡಲು ಯೋಜಿಸಿ ಅದಕ್ಕನುಸಾರವಾಗಿ ಬ್ರಹ್ಮ ಹಾಗೂ ಶಿವನಿಗೆ ಭೇಟಿ ನೀಡಿ ಇಬ್ಬರಿಂದಲೂ ನಿರ್ಲಕ್ಷಿಸಲ್ಪಟ್ಟು ಕುಪಿತನಾಗುತ್ತಾನೆ ಹಾಗೂ ಶಿವನನ್ನು ಲಿಂಗ ರೂಪದಲ್ಲಿಯೂ ಬ್ರಹ್ಮನನ್ನು ಎಂದಿಗೂ ಪೂಜಿಸಲಾರದಂತೆ ಶಪಿಸುತ್ತಾನೆ.

ಚಿತ್ರಕೃಪೆ: { pranav }

ಏಳು ಬೆಟ್ಟಗಳ ದಂತಕಥೆ:

ಏಳು ಬೆಟ್ಟಗಳ ದಂತಕಥೆ:

ಕೊನೆಯದಾಗಿ ವಿಷ್ಣುವಿನ ಬಳಿ ಬಂದಾಗ, ವಿಷ್ಣುವೂ ಸಹ ಲಕ್ಷ್ಮಿಯೊಂದಿಗೆ ಮಾತುಕತೆಯಲ್ಲಿ ತಲ್ಲೀಣವಾಗಿರುವುದನ್ನು ಗಮನಿಸಿ ಕೆಂಡಾಮಂಡಲವಾಗುತ್ತಾನೆ. ಇಲ್ಲಿ ಒಂದು ವಿಚಾರವೆಂದರೆ ಭೃಗುವಿನ ಪಾದದ ಕೆಳ್ಗೆ ಕಣ್ಣೊಂದಿದ್ದು ಅದು ಅವನ ಅಹಂಕಾರ ಸಂಕೇತವಾಗಿರುತ್ತದೆ. ಹೀಗೆ ವಿಷ್ಣುವಿನ ಮೇಲೆ ಕೋಪಗೊಂಡ ಭೃಗು ಸಿಟ್ಟಿನಿಂದ ಅವನ ಎದೆಯ ಮೇಲೆ ತನ್ನ ಪಾದವನ್ನು ಇಡಲಾಗಿ, ವಿಷ್ಣುವು ಅದನ್ನು ಅತ್ಯಂತ ನಮೃತೆಯಿಂದ ಸ್ವೀಕರಿಸಿ ಕಾಲನ್ನು ಒತ್ತುತ್ತ ಅವನ ಪಾದದಡಿಯಲ್ಲಿದ್ದ ಕಣ್ಣನ್ನು ಕೀಳುತ್ತಾನೆ.

ಚಿತ್ರಕೃಪೆ: wikimedia

ಏಳು ಬೆಟ್ಟಗಳ ದಂತಕಥೆ:

ಏಳು ಬೆಟ್ಟಗಳ ದಂತಕಥೆ:

ಕಣ್ಣನ್ನು ಕಿತ್ತಿದ ತರುವಾಯ ಭೃಗುವಿನ ಅಹಂಕಾರ ನಾಶವಾಗಿ ನಡೆದ ಪ್ರಸಂಗಕ್ಕೆ ಪಶ್ಚಾತಾಪ ಪಟ್ಟು ವಿಷ್ಣುವಿನ ಕ್ಷಮೆ ಕೇಳುತ್ತಾನೆ. ಆದರೆ ಈ ಒಂದು ಸಂಪೂರ್ಣ ಪ್ರಸಂಗದಿಂದ ಬೇಸರಗೊಂಡ ವಿಷ್ಣುವಿನ ಪತ್ನಿಯು ವೈಕುಂಠವನ್ನು ತೊರೆಯುತ್ತಾಳೆ ಹಾಗೂ ನೇರವಾಗಿ ವರಾಹ ಕ್ಷೇತ್ರವನ್ನು ಪ್ರವೇಶಿಸಿ 12 ವರ್ಷಗಳ ಕಾಲ ಗಂಭೀರವಾದ ತಪಸ್ಸನ್ನಾಚರಿಸ ತೊಡಗುತ್ತಾಳೆ. ತಿರುಮಲ ಬೆಟ್ಟದಿಂದ ನೋಡಿದಾಗ.

ಚಿತ್ರಕೃಪೆ: Matteo

ಏಳು ಬೆಟ್ಟಗಳ ದಂತಕಥೆ:

ಏಳು ಬೆಟ್ಟಗಳ ದಂತಕಥೆ:

ಅವಳ ಗಾಂಭೀರ್ಯ ತಪಸ್ಸಿನಿಂದ ಭಯಭೀತರಾದ ದೇವತೆಗಳು ಅವಳನ್ನು ಸಮಾಧಾನಪಡಿಸಿ ವೈಕುಂಠ ಕರೆತರುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಅವಳ ತಪಸ್ಸಿನ ಪ್ರಭಾವದಿಂದ ಆ ಪ್ರದೇಶದಲ್ಲಿ ಮುಂದೆ ಆಕಾಸ ರಾಜನ ಆಡಳಿತದ ಸಂದರ್ಭದಲ್ಲಿ ಲಕ್ಷ್ಮಿ ದೇವಿಯ ಅವತಾರವಾಗಿ ಪದ್ಮಾವತಿಯು ಜನ್ಮ ತಳೆಯುತ್ತಾಳೆ (ಅಲಮೇಲು ಮಂಗೈ ದೇವಿ).

ಚಿತ್ರಕೃಪೆ: Matteo

ಏಳು ಬೆಟ್ಟಗಳ ದಂತಕಥೆ:

ಏಳು ಬೆಟ್ಟಗಳ ದಂತಕಥೆ:

ಇತ್ತ ಯಾವಾಗ ಲಕ್ಷ್ಮಿ ದೇವಿಯು ವೈಕುಂಠ ತೊರೆದಳೊ ಅಂದೆ ವಿಷ್ಣುವು ಸಹ ವೈಕುಂಠ ತೊರೆದು ವೆಂಕಟಗಿರಿ ಬೆಟ್ಟದ ಹುತ್ತೊಂದರಲ್ಲಿ ತಪಗೈಯ್ಯಲಾರಂಭಿಸುತ್ತಾನೆ. ವಿಷ್ಣುವಿನ ಈ ಸ್ಥಿತಿಗೆ ಕನಿಕರ ಪಟ್ಟು ಶಿವ, ಬ್ರಹ್ಮರು ಹಸು ಹಾಗೂ ಕರುವಿನ ವೇಷ ಪಡೆಯುತ್ತಾರೆ. ಸೂರ್ಯನು ಲಕ್ಷ್ಮಿ ದೇವಿಗೆ ಸಕಲ ವಿಚಾರ ತಿಳಿಸಿ ಹಾಸು ಹಾಗೂ ಕರುವನ್ನು ವೆಂಕಟಗಿರಿ ಪ್ರಾಂತ್ಯದ ರಾಜನಿಗೆ ಮಾರಲು ಸೂಚಿಸುತ್ತಾರೆ.

ಚಿತ್ರಕೃಪೆ: Balu 606902

ಏಳು ಬೆಟ್ಟಗಳ ದಂತಕಥೆ:

ಏಳು ಬೆಟ್ಟಗಳ ದಂತಕಥೆ:

ಅದರಂತೆ ರಾಜಾಶ್ರಯ ಪಡೆದ ಹಸು ವಿಷ್ಣು ತಪಗೈಯುತ್ತಿದ್ದ ಹುತ್ತದ ಬಳಿ ಬಂದು ಸ್ವಾಮಿಯ ಹಸಿವು ನೀಗಿಸಲು ಹಾಲು ನೀಡುತ್ತಿರುತ್ತಾಳೆ. ಇದು ಹೀಗೆ ಮುಂದುವರೆದು ಒಂದೊಮ್ಮೆ ದನಗಾಹಿಗೆ ಈ ವಿಚಾರ ತಿಳಿದು ತನ್ನ ಕೊಡಲಿಯಿಂದ ಹಸುವಿಗೆ ಹೊಡೆಯುವಷ್ಟರಲ್ಲಿ ವಿಷ್ಣುವು ಹೊರಬಂದು ತನ್ನ ತಲೆಯ ಮೇಲೆ ಪೆಟ್ಟು ತಿನ್ನುತ್ತಾನೆ. ಆ ದನಗಾಹಿ ಅಲ್ಲಿಯೆ ಬಿದ್ದು ಸತ್ತುಹೋಗುತ್ತಾನೆ.

ಚಿತ್ರಕೃಪೆ: Raji.srinivas

ಏಳು ಬೆಟ್ಟಗಳ ದಂತಕಥೆ:

ಏಳು ಬೆಟ್ಟಗಳ ದಂತಕಥೆ:

ಪ್ರಾಂತ್ಯದ ರಾಜನಿಗೆ ವಿಷಯ ಗೊತ್ತಾಗಿ ಸ್ಥಳಕ್ಕೆ ಬಂದಾಗ, ವಿಷ್ಣುವು ಸಿಟ್ಟಿನಿಂದ ರಾಜನಿಗೂ ಸಹ ರಾಕ್ಷಸ ಜನ್ಮದ ಶಾಪ ನೀಡುತ್ತಾನೆ. ನಂತರ ರಾಜ ಬೇಡಿಕೊಂಡಾಗ ಕರುಣೆಯಿಂದ ತಾನು ಆಕಾಶರಾಜನಿಂದ ಕಿರೀಟವನ್ನು ಕೊಡುಗೆಯಾಗಿ ಪಡೆದು ಯಾವಾಗ ಧರಿಸುತ್ತೇನೊ ಅಂದಿಗೆ ನಿನ್ನ ಶಾಪ ಮುಕ್ತವಾದಂತೆ ಎಂದು ವರ ನೀಡುತ್ತಾನೆ.

ಚಿತ್ರಕೃಪೆ: Adiseshkashyap

ಏಳು ಬೆಟ್ಟಗಳ ದಂತಕಥೆ:

ಏಳು ಬೆಟ್ಟಗಳ ದಂತಕಥೆ:

ಕಾಲಾಂತರದಲ್ಲಿ ಆಕಾಶ ರಾಜನೆಂಬ ರಾಜನು ಈ ಪ್ರಾಂತ್ಯವನ್ನು ಆಳತೊಡಗುತ್ತಾನೆ. ಅವನಿಗೆ ಯಾವುದೆ ಸಂತಾನವಿಲ್ಲದಾಗಿ ಒಮ್ಮೆ ಕೆರೆಯ ಕಮಲದ ದಳಗಳ ಮೇಲೆ ಸಂತಾನದ ರೂಪದಲ್ಲಿ ಪುತ್ರಿಯೊಬ್ಬಳು ದೊರಕುತ್ತಾಳೆ. ಅವಳೆ ಪದ್ಮಾವತಿ ದೇವಿ. ಇತ್ತ ವಿಷ್ಣು ಹುತ್ತಿನಲ್ಲಿ ತಪಗೈದು ಸಂತ ವಕುಲಾ ದೇವಿಯ ಪುತ್ರ ಶ್ರೀನಿವಾಸನಾಗಿ ಹೊರಬರುತ್ತಾನೆ. (ವಕುಲಾ ದೇವಿಯು ತನ್ನ ಹಿಂದಿನ ಜನ್ಮದಲ್ಲಿ ಯಶೋಧೆಯಾಗಿದ್ದಳು ಹಾಗೂ ಕೃಷ್ಣನ ವಿವಾಹ ನೋಡಲಾಗದ ಕಾರಣ ದುಖಿತಳಾಗಿದ್ದಳು, ಅದಕ್ಕೆ ಶ್ರೀಕೃಷ್ಣನು ಆಕೆಯ ಇಚ್ಛೆಯನ್ನು ಪುರೈಸುವುದಾಗಿ ಭರವಸೆ ನೀಡಿದ್ದನು).

ಚಿತ್ರಕೃಪೆ: wikimedia

ಏಳು ಬೆಟ್ಟಗಳ ದಂತಕಥೆ:

ಏಳು ಬೆಟ್ಟಗಳ ದಂತಕಥೆ:

ಕಾಲ ಕಳೆದಂತೆ ಇಬ್ಬರೂ ದೇವರ ಅವತಾರವಾಗಿರುವರೆಂದೂ, ಇಬ್ಬರ ಕಲ್ಯಾಣ ಮಾಡಬೇಕಾಗಿರುವುದು ಅವಶ್ಯವೆಂದು ಮನಗಂಡು ಇತ್ತ ಆಕಾಶ ರಾಜನು ಅತ್ತ ವಕುಲಾ ದೇವಿಯು ಸಂತೋಷಭರಿತರಾಗಿ ಸಕಲ ಸಡಗರದೊಂದಿಗೆ ಶ್ರೀನಿವಾಸ ಕಲ್ಯಾಣವನ್ನು ನೆರವೇರಿಸುತ್ತಾರೆ.

ಚಿತ್ರಕೃಪೆ: Nikhilb239

ಏಳು ಬೆಟ್ಟಗಳ ದಂತಕಥೆ:

ಏಳು ಬೆಟ್ಟಗಳ ದಂತಕಥೆ:

ಈ ವಿಷಯ ತಿಳಿದ ಲಕ್ಷ್ಮಿಯು ತನ್ನ ಪತಿಯನ್ನರಸುತ್ತ ವೆಂಕಟಾದ್ರಿಗೆ ಬಂದಾಗ ಶ್ರೀನಿವಾಸನು ಅರ್ಥಾತ ವಿಷ್ಣುವು ಪದ್ಮಾವತಿಯೊಂದಿಗೆ ಇರುವುದನ್ನು ಕಾಣುತ್ತಾಳೆ. ಯಾವಾಗ ಪದ್ಮಾವತಿ ಹಾಗೂ ಲಕ್ಷ್ಮಿಯ ನೋಟವು ಸ್ವಾಮಿಯ ಮೇಲೆ ಬಿದ್ದಿತೊ ಆ ಕ್ಷಣದಲ್ಲಿ ವಿಷ್ಣು ಕಲ್ಲಿನ ರೂಪದಲ್ಲಿ ವೆಂಕಟೇಶ್ವರನಾಗಿ ಪರಿವರ್ತಿಗೊಳ್ಳುತ್ತಾನೆ. ಇದರಿಂದ ದುಖ ಹಾಗೂ ಅಚ್ಚರಿಗೊಂಡ ಪತ್ನಿಯರ ಮುಂದೆ ಶಿವ ಬ್ರಹ್ಮರು ಪ್ರತ್ಯಕ್ಷರಾಗಿ, ವಿಷ್ಣುವು ಕಲಿಯುಗದಲ್ಲಿ ಲೋಕದ ಕಲ್ಯಾಣಕ್ಕಾಗಿ ನೆಲೆಸಬೇಕಾಗಿರುವುದರಿಂದ ಈ ರೀತಿಯ ಘಟನೆ ನಡೆದುದೆಂದು ವಿವರಿಸುತ್ತಾರೆ. ಅದಕ್ಕೆ ಲಕ್ಷ್ಮಿ ಹಾಗೂ ಪದ್ಮಾವತಿಯರಿಬ್ಬರೂ ಸಮ್ಮತಿ ಸೂಚಿಸಿ ಶ್ರೀನಿವಾಸನ ಎದೆಯ ಎಡಬದಿಯಲ್ಲಿ ಲಕ್ಷ್ಮಿಯೂ, ಬಲ ಬದಿಯಲ್ಲಿ ಪದ್ಮಾವತಿಯೂ ನೆಲೆಸುತ್ತಾರೆ.

ಚಿತ್ರಕೃಪೆ: wikimedia

ಏಳು ಬೆಟ್ಟಗಳ ದಂತಕಥೆ:

ಏಳು ಬೆಟ್ಟಗಳ ದಂತಕಥೆ:

ಪೌರಾಣಿಕವಾಗಿ ಶೇಷಾಚಲಂ ಏಳು ಶಿಖರಗಳನ್ನೊಳಗೊಂಡ ಬೆಟ್ಟದ ಶ್ರೇಣಿಯಾಗಿದೆ. ಆ ಏಳು ಶಿಖರಗಳೆಂದರೆ ಶೇಷಾದ್ರಿ, ನೀಲಾದ್ರಿ, ಗರುಡಾದ್ರಿ, ಅಂಜನಾದ್ರಿ, ವೃಶಬಾದ್ರಿ, ನಾರಾಯಣಾದ್ರಿ ಹಾಗೂ ವೆಂಕಟಾದ್ರಿ. ಪ್ರಸ್ತುತ ವೆಂಕಟೇಶ್ವರನ ದೇವಾಲಯವಿರುವುದು ವೆಂಕಟಾದ್ರಿಯ ಶಿಖರದಲ್ಲಿ.

ಚಿತ್ರಕೃಪೆ: Ashok Prabhakaran

ಏಳು ಬೆಟ್ಟಗಳ ದಂತಕಥೆ:

ಏಳು ಬೆಟ್ಟಗಳ ದಂತಕಥೆ:

ತಿರುಪತಿಯಿಂದ ತಿರುಮಲವು ಸುಮಾರು 22 ಕಿ.ಮೀ ಗಳಷ್ಟು ದೂರದಲ್ಲಿದ್ದು ತೆರಳಲು ತಿರುಪತಿಯಿಂದ ಸಾಕಷ್ಟು ಬಸ್ಸುಗಳು ದೊರೆಯುತ್ತವೆ. ಇನ್ನೂ ನಡೆಯುತ್ತಲೂ ಸಹ ತಿರುಪತಿಯಿಂದ ತಿರುಮಲಕ್ಕೆ ತೆರಳಬಹುದಾಗಿದೆ. ತಿರುಮಲಕ್ಕೆ ಹತ್ತಿರದಲ್ಲಿರುವ ರೈಲು ನಿಲ್ದಾಣ ತಿರುಪತಿಯಲ್ಲಿದ್ದು, ತಿರುಪತಿಯನ್ನು ದೇಶದ ಪ್ರಮುಖ ನಗರಗಳಿಂದ ರೈಲಿನಲ್ಲಿ ಸುಲಭವಾಗಿ ತಲುಪಬಹುದು.

ಚಿತ್ರಕೃಪೆ: Chandrashekhar Basumatary

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X