Search
  • Follow NativePlanet
Share
» »ಕೊಂಕಣ ರೈಲುಮಾರ್ಗ : ಮೂರು ರಾಜ್ಯಗಳ ವೈಭೋಗ

ಕೊಂಕಣ ರೈಲುಮಾರ್ಗ : ಮೂರು ರಾಜ್ಯಗಳ ವೈಭೋಗ

By Vijay

ಮಂಗಳೂರು ನಗರವನ್ನು ಮುಂಬೈಗೆ ಸಂಪರ್ಕಿಸುವ, ಪಶ್ಚಿಮ ಘಟ್ಟ ಹಾಗು ಕೊಂಕಣ ಕರಾವಳಿಗುಂಟ ಚಲಿಸುತ್ತ ನಯನಮನೋಹರ ಪ್ರಕೃತಿ ಸೌಂದರ್ಯವನ್ನು ಒದಗಿಸುತ್ತ ಸಾಗುವ ಕೊಂಕಣ ರೈಲು ಭಾರತದ ನಿಜವಾಗಿಯೂ ಒಂದು ಹೆಮ್ಮೆಯ ರೈಲು ನಿಗಮ. ವಾಣಿಜ್ಯ ಮಹತ್ವವುಳ್ಳ ಬಂದರು ನಗರಗಳಾದ ಮುಂಬೈ ಹಾಗು ಮಂಗಳೂರುಗಳಿಗೆ ಒಂದೊಮ್ಮೆ ನೇರವಾದ ಸಂಪರ್ಕವೆ ಇರಲಿಲ್ಲ. ಮಂಗಳೂರಿನಿಂದ ಮುಂಬೈಗೆ ಹೋಗಬೇಕೆಂದಿದ್ದರೆ ಕಡೂರು ಅಥವಾ ಬೀರೂರಿಗೆ ಬಸ್ಸಿನಲ್ಲಿ ಬಂದು ಅಲ್ಲಿಂದ ರೈಲು ಮಾರ್ಗವಾಗಿ ಮುಂಬೈಗೆ ತೆರಳಬೇಕಾಗಿತ್ತು. ಇಂತಹ ಪರಿಸ್ಥಿತಿ ಒಂದೆಡೆಯಿದ್ದರೆ, ವ್ಯಾಪಾರಿಕ ದೃಷ್ಟಿಯಿಂದಲೂ ಸಹ ಬಹು ಬೇಡಿಕೆಯಿದ್ದುದರಿಂದ ಕೊನೆಯಲ್ಲಿ 1970 ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ನ್ನು ಈ ಎರಡು ಮಹಾನಗರಗಳನ್ನು ಸಂಪರ್ಕಿಸಲು ನಿರ್ಮಿಸಲಾಯಿತು.

ಇಷ್ಟಾದರೂ ಬೇಡಿಕೆಯು ಬಹು ತೀವ್ರವಾಗಿದ್ದುದರಿಂದ ಅಲ್ಲದೆ ಮೊನಚಾದ ರಸ್ತೆಗಳು ಸಾಮಗ್ರಿಗಳನ್ನು ಹೊತ್ತೊಯ್ಯುವ ಲಾರಿ ಹಾಗು ಟ್ರಕ್ಕು ಚಾಲಕರಿಗೆ ಬಹು ಕಷ್ಟವಾದುದ್ದರಿಂದ ರೈಲು ಮಾರ್ಗವೆ ಸರಿಯಾದ ಪರಿಹಾರವಾಗಬಲ್ಲುದೆಂದು ಮನಗಂಡು ಎಲ್ಲಿಲ್ಲದ ಪ್ರಯತ್ನಗಳು 1984 ರಿಂದಲೆ ಪ್ರಾರಂಭವಾಗಿ ಕೊನೆಯದಾಗಿ ಈ ಮಾರ್ಗವಾಗಿ ರೈಲು ಸಂಪರ್ಕವನ್ನು ನಿರ್ಮಿಸಲು ಜುಲೈ 19, 1990 ರಲ್ಲಿ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಎಂಬ ಹೊಸ ರೈಲು ನಿಗಮವನ್ನು ಸ್ಥಾಪಿಸಲಾಯಿತು. ಅಧಿಕೃತವಾಗಿ ಮೊದಲ ರೈಲಿಗೆ ಹಸಿರು ನಿಶಾನೆ ತೋರಿಸಲಾಗಿದ್ದು 26 ಜನವರಿ 1998 ರಂದು. ತಾಂತ್ರಿಕತೆಯ ದೃಷ್ಟಿಯಿಂದ ಈ ಒಂದು ರೈಲು ಮಾರ್ಗದ ನಿರ್ಮಾಣವು ದೊಡ್ಡ ಸವಾಲೇ ಆಗಿತ್ತು. ಆದ್ದರಿಂದ ಕೊಂಕಣ ಭಾಗದ ಜನರಿಗೆ ಇದೊಂದು ಹೆಮ್ಮೆಯ ಸಂಕೇತ.

ಇನ್ನು ಈ ರೈಲು ಮಾರ್ಗವು ಮಂಗಳೂರು ಬಳಿಯ ತೋಕೂರುವಿನಿಂದ ಪ್ರಾರಂಭವಾಗಿ ಮಹಾರಾಷ್ಟ್ರದ ರೋಹಾವರೆಗೆ ತಲುಪುತ್ತದೆ. ಈ ರೈಲು ಮಾರ್ಗದ ಒಟ್ಟಾರೆ ಉದ್ದ 760 ಕಿ.ಮೀ. ಒಟ್ಟು ನಿಲ್ದಾಣಗಳು 59. ಮಾರ್ಗದಲ್ಲಿ ಬರುವ ದೊಡ್ಡ ಸೇತುವೆಗಳು 179. ಕರ್ನಾಟಕ, ಗೋವಾ ಹಾಗು ಮಹಾರಾಷ್ಟ್ರ ಈ ಮೂರು ರಾಜ್ಯಗಳ ಕಡಲ ಪಟಣಗಳಗುಂಟ ಈ ರೈಲಿನಲ್ಲಿ ಸಾಗುತ್ತಾ ಹೋಗುವುದೆ ಒಂದು ಅದ್ಭುತವಾದ ಅನುಭವ. ಈ ಮಾರ್ಗದಲ್ಲಿ ಸಾಗುತ್ತಿರುವಾಗ ನೀವು ಭೇಟಿ ಮಾಡಬಹುದಾದ ಗಮ್ಯ ಪ್ರವಾಸಿ ತಾಣಗಳು ಯಾವುವೆಂದು ತಿಳಿಯಿರಿ ಹಾಗು ನೀವು ಕೂಡ ಒಂದೊಮ್ಮೆ ಈ ಮಾರ್ಗದಲ್ಲಿ ಪ್ರವಾಸ ಮಾಡಿ ಆನಂದಿಸಿರಿ.

ಸುರತ್ಕಲ್:

ಸುರತ್ಕಲ್:

ಮಂಗಳೂರಿನ ಒಂದು ಉಪನಗರವಾಗಿರುವ ಸುರತ್ಕಲ್ ಕರ್ನಾತಕದಲ್ಲಿ ಪ್ರಸಿದ್ಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜೀಸ್ ಕರ್ನಾಟಕ (ಮೊದಲಿಗೆ ಕೆ.ಆರ್.ಇ.ಸಿ) ಕಾಲೇಜಿನ ತವರಾಗಿದೆ. ಸುರತ್ಕಲ್ ಬೀಚ್, ಲೈಟ್ ಹೌಸ್ ನಂತಹ ಆಕರ್ಷಣೆಗಳನ್ನು ಹೊತ್ತ ಈ ತಾಣವು ಮಂಗಳೂರಿನಿಂದ ಸುಲಭವಾಗಿ ಬಸ್ಸುಗಳ ಮೂಲಕ ತಲುಪಬಹುದು.

ಮುಲ್ಕಿ:

ಮುಲ್ಕಿ:

ಸುರತ್ಕಲ್ ನ ಉತ್ತರ ದಿಕ್ಕಿಗೆ 10 ಕಿ.ಮೀ ದೂರದಲ್ಲಿದೆ ಈ ಮುಲ್ಕಿ. ಇದೊಂದು ಪುಟ್ಟ ಪ್ರದೇಶವಾದರೂ ಧಾರ್ಮಿಕ ದೃಷ್ಟಿಯಿಂದ ಮಹತ್ವವುಳ್ಳದ್ದಾಗಿದೆ.

ಪಡುಬಿದ್ರಿ:

ಪಡುಬಿದ್ರಿ:

ಉಡುಪಿಯಿಂದ ಮಂಗಳೂರಿಗೆ ತೆರಳುವಾಗ ಸಿಗುವ ಈ ಪಟ್ಟಣವು ದಕ್ಕೆಬಾಲಿ ಎಂಬ ಧಾರ್ಮಿಕ ಆಚರಣೆಯಿಂದ ಹೆಸರುವಾಸಿಯಾಗಿದೆ. ಕೊಂಕಣ ರೈಲು ಮಾರ್ಗದಲ್ಲಿ ನಿಲುಗಡೆಯನ್ನು ಹೊಂದಿರುವ ಈ ಪಟ್ಟಣವನ್ನು ಮಂಗಳೂರು ಹಾಗು ಉಡುಪಿಗಳಿಂದ ಬಸ್ಸಿನ ಮೂಲಕವು ಸುಲಭವಾಗಿ ತಲುಪಬಹುದು.

ಉಡುಪಿ:

ಉಡುಪಿ:

ಪ್ರಖ್ಯಾತ ಧಾರ್ಮಿಕ ಕ್ಷೇತ್ರವಾದ ಉಡುಪಿಯು ಕರ್ನಾಟಕದ ನೈರುತ್ಯ ಭಾಗದಲ್ಲಿದ್ದು ತನ್ನಲ್ಲಿರುವ ಕೃಷ್ಣ ಮಠದಿಂದಾಗಿ ಜನಪ್ರಿಯವಾಗಿದೆ.

ಕುಂದಾಪುರ:

ಕುಂದಾಪುರ:

ಉಡುಪಿ ಜಿಲ್ಲೆಯಲ್ಲಿರುವ ಕುಂದಾಪುರವು ಉಡುಪಿಯಿಂದ 36 ಕಿ.ಮೀ ದೂರದಲ್ಲಿರುವ ಒಂದು ಸುಂದರ ಪಟ್ಟಣವಾಗಿದೆ. ಪಂಚಗಂಗವಳ್ಳಿ ನದಿ ಬಳಿಯಿರುವ ಕುಂದೇಶ್ವರ ದೇಗುಲದ ನಿರ್ಮಾತೃ ಕುಂದವರ್ಮನಿಂದ ಈ ಊರಿಗೆ ಹೆಸರು ಕುಂದಾಪುರ ಎಂದು ಬಂದಿದೆಯೆಂದು ಹೇಳಲಾಗುತ್ತದೆ.

ಮುರುಡೇಶ್ವರ:

ಮುರುಡೇಶ್ವರ:

ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿದೆ ಈ ಮುರುಡೇಶ್ವರ ಪಟ್ಟಣ. ಜಗತ್ತಿನಲ್ಲೆ ಎರಡನೇಯ ದೊಡ್ಡ ಶಿವ ಪ್ರತಿಮೆಯಿಂದಾಗಿ ಈ ಪಟ್ಟಣವು ಪ್ರಖ್ಯಾತವಾಗಿದೆ.

ಹೊನ್ನಾವರ:

ಹೊನ್ನಾವರ:

ಹೊನ್ನಾವರವು ಉತ್ತರ ಕನ್ನಡ ಜಿಲ್ಲೆಯ ಒಂದು ಬಂದರು ಪಟ್ಟಣವಾಗಿದೆ. 10 ನೇಯ ಶತಮಾನದ ಜೈನ ರಾಮಾಯಣದಲ್ಲಿ ಹನುರುಹ ದ್ವೀಪ ಎಂಬ ಹೆಸರಿನಿಂದ ಉಲ್ಲೇಖಿಸಲ್ಪಟ್ಟ ಈ ಪಟ್ಟಣದ ಪ್ರಮುಖ ಆಕರ್ಷಣೆ ಶರಾವತಿ ನದಿ. ಹೊನ್ನಾವರದಲ್ಲಿ ಈ ನದಿಯು ಅರಬ್ಬೀ ಸಮುದ್ರಕ್ಕೆ ಸೇರುವ ಸ್ಥಳದಲ್ಲಿ ಹಲವು ಆಕರ್ಷಕ ದ್ವೀಪಗಳನ್ನು ಸೃಷ್ಟಿಸಿದೆ.

ಕುಮಟಾ:

ಕುಮಟಾ:

ಉತ್ತರಕನ್ನಡ ಜಿಲ್ಲೆಯಲ್ಲಿರುವ ಕುಮಟಾ ಪಟ್ಟಣವು ಭಟ್ಕಳದಿಂದ ಉತ್ತರಕ್ಕೆ 58 ಕಿ.ಮೀ ಹಾಗು ಗೋವಾದ ಮಡಗಾವ್ ದ ದಕ್ಷಿಣಕ್ಕೆ 142 ಕಿ.ಮೀ ಗಳಷ್ಟು ದೂರದಲ್ಲಿದೆ. ಕೊಂಕಣ ರೈಲು ಮಾರ್ಗದಲ್ಲಿ ಇದೊಂದು ಪ್ರಮುಖ ಪಟ್ಟಣವಾಗಿದೆ.

ಗೋಕರ್ಣ:

ಗೋಕರ್ಣ:

ಕೊಂಕಣ ರೈಲು ಮಾರ್ಗದಲ್ಲಿ ಬರುವ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಪಟ್ಟಣವು ಒಂದು ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದೆ. ಆಕರ್ಷಕ ಕಡಲ ತೀರಗಳ ಈ ದೇವಸ್ಥಾನದ ಊರು ಆರಾಧ್ಯ ದೈವ, ಶಿವನ ರೂಪ ಮಹಾಬಲೇಶ್ವರನಿಂದಾಗಿ ಜನಪ್ರಿಯವಾಗಿದೆ.

ಅಂಕೋಲಾ:

ಅಂಕೋಲಾ:

ಉತ್ತರ ಕನ್ನಡ ಜಿಲ್ಲೆಯ ಪಂಚಾಯತ್ ಪಟ್ಟಣವಾಗಿರುವ ಅಂಕೋಲಾ ಹಲವು ದೇವಾಲಯಗಳನ್ನು ಹೊಂದಿರುವ ಒಂದು ಸುಂದರ ತಾಲೂಕು ಪ್ರದೇಶ. ಸುಂದರ ಕಡಲ ತೀರಗಳಿರುವ ಈ ಪ್ರದೇಶವು ಗೋಡಂಬಿ ಹಾಗು ಸ್ಥಳೀಯ ಮಾವಿನ ತಳಿಯಾದ 'ಇಶಾದ್' ಗೆ ಜನಪ್ರಿಯವಾಗಿದೆ.

ಕಾರವಾರ:

ಕಾರವಾರ:

ಕಾರವಾರ ಪಟ್ಟಣವು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. ಕರಾವಳಿ ತೀರದ ಈ ಪಟ್ಟಣವು ಕಾಳಿ ನದಿ ತಟದಲ್ಲಿ ನೆಲೆಸಿದೆ. ಬೆಂಗಳೂರಿನ ವಾಯವ್ಯ ದಿಕ್ಕಿಗೆ 520 ಕಿ.ಮೀ ಗಳಷ್ಟು ದೂರದಲ್ಲಿರುವ ಈ ಪ್ರದೇಶವು, ಕರ್ನಾಟಕಾ-ಗೋವಾ ಗಡಿ ಭಾಗದ ದಕ್ಷಿಣಕ್ಕೆ ಕೇವಲ 15 ಕಿ.ಮೀ ಗಳ ಅಂತರದಲ್ಲಿದೆ. ಪ್ರಶಾಂತಮಯ ಕಡಲ ತೀರಗಳನ್ನು ಇಲ್ಲಿ ಕಾಣಬಹುದು.

ಹರವಾಡಾ:

ಹರವಾಡಾ:

ಉತ್ತರಕನ್ನಡ ಜಿಲ್ಲೆಯ, ಅಂಕೋಲಾ ತಾಲೂಕಿನಲ್ಲಿ ಬರುವ ಈ ಪುಟ ಗ್ರಾಮವು ಪ್ರಖ್ಯಾತವಾಗಿರುವುದು, ಇಲ್ಲಿಗೆ ಹತ್ತಿರದಲ್ಲಿರುವ ಅವೆರ್ಸಾದ ಶ್ರೀ ಕಾತ್ಯಾಯನಿ ಬಾಣೇಶ್ವರ ದೇವಾಲಯಕ್ಕೆ. ಕೊಂಕಣ ರೈಲು ಮಾರ್ಗದಲ್ಲಿ ನಿಲುಗಡೆ ಹೊಂದಿರುವ ಹರವಾಡಾ ರೈಲು ನಿಲ್ದಾಣದಿಂದ ಈ ದೇವಾಲಯವು ಕೇವಲ 2 ಕಿ.ಮೀ ದೂರದಲ್ಲಿದೆ.

ಕಾಣಕೊಣ:

ಕಾಣಕೊಣ:

ಇದು ಕೊಂಕಣ ರೈಲು ಮಾರ್ಗದಲ್ಲಿ ಗೋವಾ ಪ್ರವೇಶಿಸಿದಾಗ ಸಿಗುವ ಪಟ್ಟಣ. ದಕ್ಷಿಣ ಗೋವಾ ಜಿಲ್ಲೆಯಲ್ಲಿ ಬರುವ ಈ ತಾಲೂಕು ಪ್ರದೇಶವು ಹಲವು ಪ್ರವಾಸಿ ಆಕರ್ಷಣೆಗಳಿಗೆ ಹತ್ತಿರದಲ್ಲಿದೆ.

ಮಡಗಾಂವ್:

ಮಡಗಾಂವ್:

ದಕ್ಷಿಣ ಗೋವಾ ಜಿಲ್ಲೆಯ ಆಡಳಿತ ಪ್ರದೇಶವಾಗಿರುವ ಮಡಗಾಂವ್ ಗೋವಾದ ಎರಡನೇಯ ದೊಡ್ಡ ನಗರ ಹಾಗು ಸಾಂಸ್ಕೃತಿಕ ರಾಜಧಾನಿ. ಗೋವಾ ರಾಜಧಾನಿಯಾದ ಪಣಜಿಯಿಂದ 33 ಕಿ.ಮೀ ಗಳಷ್ಟು ದೂರದಲ್ಲಿದ್ದು ಮತ್ತೊಂದು ಪ್ರಖ್ಯಾತ ತಾಣ ವಾಸ್ಕೊದಿಂದ ಕೇವಲ 27 ಕಿ.ಮೀ ಗಳಷ್ಟು ಅಂತರದಲ್ಲಿದೆ.

ಪೆರ್ನೆಮ್:

ಪೆರ್ನೆಮ್:

ಕೊಂಕಣ ರೈಲು ಮಾರ್ಗದಲ್ಲಿ ಬರುವ ಪೆರ್ನೆಮ್ ಪ್ರದೇಶವು ಉತ್ತರ ಗೋವಾ ಜಿಲ್ಲೆಯ ಒಂದು ಪುರಸಭೆ ಪ್ರದೇಶವಾಗಿದೆ. ಸಮುದ್ರ ಮಟ್ಟದಿಂದ 47 ಮೀ ಎತ್ತರದಲ್ಲಿರುವ ಈ ಪ್ರದೇಶವು ಉತ್ತರ ದಿಕ್ಕಿಗೆ ಮಹಾರಾಷ್ಟ್ರದ ಸಾವಂತವಾಡಿ ಹಾಗು ವೆಂಗುರ್ಲಾಗಳಿಂದ ಸುತ್ತುವರೆದಿದೆ. ಇಲ್ಲಿನ ಆಕರ್ಷಣೆಗಳೆಂದರೆ ಸರ್ಮಾಲೆಯ ಮೌಳಿ ದೇವಾಲಯದ ಬಳಿಯಿರುವ ಜಲಪಾತ ಹಾಗು ಮಲ್ಪೆಯ ಮುಲ್ವೀರ್ ದೇವಾಲಯದ ಬಳಿಯಿರುವ ಜಲಪಾತ.

ಸಾವಂತವಾಡಿ ರಸ್ತೆ:

ಸಾವಂತವಾಡಿ ರಸ್ತೆ:

ಕೊಂಕಣ ರೈಲು ಮಾರ್ಗದಲ್ಲಿ ಬರುವ 'ಸಾವಂತವಾಡಿ ರಸ್ತೆ' ರೈಲು ನಿಲ್ದಾಣವು ಸಾವಂತವಾಡಿ ಪಟ್ಟಣದ ನೈರುತ್ಯ ದಿಕ್ಕಿಗೆ ಸುಮಾರು 7.6 ಕಿ.ಮೀ ಗಳಷ್ಟು ದೂರದಲ್ಲಿದೆ. ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಸುಂದರವಾದ ಪರಿಸರವನ್ನು ಹೊಂದಿರುವ ಈ ನಗರವು ಕಟ್ಟಿಗೆಯ ಬೊಂಬೆಗಳಿಗೆ (ಕರ್ನಾಟಕದಲ್ಲಿ ಚೆನ್ನಪಟ್ಟಣ) ಪ್ರಖ್ಯಾತಿ ಪಡೆದಿದೆ.

ಕಣ್‍ಕಾವಲಿ:

ಕಣ್‍ಕಾವಲಿ:

ಮಹಾರಾಷ್ಟ್ರ ರಾಜ್ಯದ ನೈರುತ್ಯ ಭಾಗದಲ್ಲಿರುವ ಈ ಪಟ್ಟಣವು ಸಿಂಧುದುರ್ಗ ಜಿಲ್ಲೆಯಲ್ಲಿದೆ. ಜಿಲ್ಲೆಯ ಶೈಕ್ಷಣಿಕ ತಾಣವಾಗಿ ಹೆಸರುಗಳಿಸಿರುವ ಈ ಪಟ್ಟಣದಲ್ಲಿ ನೋಡಬಹುದಾದ ಎರಡು ಪ್ರಮುಖ ಆಕರ್ಷಣೆಗಳೆಂದರೆ ಸವದವ್ ಜಲಪಾತ ಹಾಗು ಬಾಲಚಂದ್ರ ಮಾಹಾರಾಜ್ ಮಂದಿರ. ಸವದವ್ ಜಲಪಾತವು ಕಣ್‍ಕಾವಲಿ ಪಟ್ಟಣದಿಂದ 10 ಕಿ.ಮೀ ದೂರದಲ್ಲಿದ್ದು, ಬಾಡಿಗೆ ಅಥವಾ ನಿಮ್ಮ ಸ್ವಂತ ವಾಹನದಲ್ಲಿ ಹೋದರೆ ಒಳಿತು. ಏಕೆಂದರೆ ಇಲ್ಲಿಗೆ ಬಸ್ಸುಗಳ ಸೇವೆ ಅತಿ ವಿರಳ.

ರತ್ನಾಗಿರಿ:

ರತ್ನಾಗಿರಿ:

ಮಹಾರಾಷ್ಟ್ರದ ನೈರುತ್ಯ ಭಾಗದಲ್ಲಿ ಬರುವ ಕೊಂಕಣ ರೈಲು ಮಾರ್ಗದ ಮತ್ತೊಂದು ನಿಲ್ದಾಣವಾದ ರತ್ನಾಗಿರಿಯು ಅರೇಬಿಯನ್ ಕಡಲ ತೀರದ ಸುಂದರ ಕರಾವಳಿ ಪಟ್ಟಣ. ಪೂರ್ವದಲ್ಲಿ ಸಹ್ಯಾದ್ರಿ ಬೆಟ್ಟಗಳಿಂದ ಸುತ್ತುವರೆದಿರುವ ಪಟ್ಟಣವು ತನ್ನಲ್ಲಿರುವ ಹಲವು ಕಡಲ ತೀರಗಳಿಂದ ಜನಪ್ರಿಯವಾಗಿದೆ. ಹೆಸರಿಸಬಹುದಾದ ಕೆಲವು ಬೀಚ್ ಗಳೆಂದರೆ ಮಂಡವಿ ಬೀಚ್, ಭಾಟೆ ಬೀಚ್, ಮಿರ್ಕರ್ವಾಡಾ ಬೀಚ್ ಮುಂತಾದವು.

ಸಂಗಮೇಶ್ವರ:

ಸಂಗಮೇಶ್ವರ:

ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯಲ್ಲಿರುವ ಈ ತಾಲೂಕು ಒಂದು ಐತಿಹಾಸಿಕ ಮಹತ್ವವುಳ್ಳ ಪಟ್ಟಣವಾಗಿದೆ. ಛತ್ರಪತಿ ಮಹಾರಾಜ ಶಿವಾಜಿಯ ಮಗನಾದ ಸಂಭಾಜಿರಾಜೆಯನ್ನು ಔರಂಗಜೇಬನು ಇಲ್ಲಿಯೆ ಬಂಧಿಸಿದ್ದನು. ಸೋನವಿ ಮತ್ತು ಶಾಸ್ತ್ರಿ ನದಿಗಳು ಒಟ್ಟೊಟ್ಟಿಗೆ ಕೂಡಿಕೊಂಡು (ಸಂಗಮಹೊಂದಿ) ಹರಿಯುವುದರಿಂದ ಈ ಪ್ರದೇಶಕ್ಕೆ ಸಂಗಮೇಶ್ವರ ಎಂಬ ಹೆಸರು ಬಂದಿದೆ. ಶಿವನ ಗುಹಾ ದೇವಾಲಯವಾದ ಮಾರ್ಲೇಶ್ವರವು ಈ ಪ್ರದೇಶಕ್ಕೆ ಹತ್ತಿರದಲ್ಲಿರುವ ಧಾರ್ಮಿಕ ಕ್ಷೇತ್ರವಾಗಿದೆ.

ಚಿಪ್ಲೂನ್:

ಚಿಪ್ಲೂನ್:

ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯಲ್ಲಿರುವ ಚಿಪ್ಲೂನ್ ನಗರವು ಮುಂಬೈ - ಗೋವಾ ಹೆದ್ದಾರಿಯ ಮೇಲೆ ನೆಲೆಸಿದೆ. ಪರಶುರಾಮರ ನೆಲೆ ಎಂಬ ಅರ್ಥ ಕೊಡುವ ಚಿಪ್ಲೂನ್ ನಗರದ ಸುತ್ತಮುತ್ತ ಹಲವಾರು ಗಮ್ಯ ಪ್ರವಾಸಿ ಆಕರ್ಷಣೆಗಳು ನೆಲೆಸಿವೆ. ಕೆಲವು ಪ್ರಮುಖವಾದವುಗಳೆಂದರೆ ಕೊಯ್ನಾ ಆಣೆಕಟ್ಟು, ಗಾವಲ್ಕೋಟಿನ ಕಾರಂಜೇಶ್ವರ ದೇವಾಲಯ, ಪಾಂಡವ ಗುಹೆಗಳು, ಪರಶುರಾಮ ದೇವಾಲಯ, ರಾಮವರ್ದಾಯಿನಿ ದೇವಾಲಯ ಮುಂತಾದವುಗಳು.

ಖೇಡ್:

ಖೇಡ್:

ಮುಂಬೈ - ಗೋವಾ ರಾಷ್ಟ್ರೀಯ ಹೆದ್ದಾರಿ 17 ರಲ್ಲಿ ನೆಲೆಸಿರುವ ಖೇಡ್ ಪಟ್ಟಣವು ಕೊಂಕಣಿ ಹಾಗು ಮರಾಠಿ ಸಂಸ್ಕೃತಿಯ ಸಂಗಮದ ನೆಲೆಯಾಗಿದೆ. ಹೋಳಿ ಹಾಗು ಗೌರಿ ಗಣಪತಿಯ ಹಬ್ಬವನ್ನು ಅತಿ ವಿಜೃಂಭಣೆಯಿಂದ ಇಲ್ಲಿ ಆಚರಿಸಲಾಗುತ್ತದೆ.

Read more about: rail konkan railway
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more