ಸಾಂಗ್ಲಿ - ಭಾರತದ ಅರಿಷಿಣ ನಗರ

ಅರಿಷಿಣ ನಗರವೆಂದೆ ಖ್ಯಾತಿ ಪಡೆದ ಸಾಂಗ್ಲಿಯು ಮಹಾರಾಷ್ಟ್ರದ ಒಂದು ಪ್ರಮುಖ ನಗರವಾಗಿದೆ. ಸಾಂಗ್ಲಿ ಎಂಬ ಪದವು ’ಸಹ ಗಲ್ಲಿ’ ಎಂಬ ಪದದಿಂದ ಹುಟ್ಟಿದೆ. ಮರಾಠಿಯಲ್ಲಿ ಇದನ್ನು ’ಆರು ಪಥಗಳು’ ಎಂಬ ಅರ್ಥದಲ್ಲಿ ಬಳಸಲಾಗುತ್ತದೆ. ಹಿಂದಿನ ಕಾಲದಲ್ಲಿ ಸಾಂಗ್ಲಿಯನ್ನು ನಾಟ್ಯ ಪಂಡರಿ ಎಂದು ಕರೆಯುತ್ತಿದ್ದರು. ಈ ಊರು ಮರಾಠಿ ನಾಟಕಗಳ ತವರೂರು, ಹಾಗಾಗಿ ಈ ಹೆಸರು ಬಂದಿತ್ತು.

ಸಾಂಗ್ಲಿ -  ಒಂದು ಸಂಸ್ಥಾನ

12ನೇ ಶತಮಾನದಲ್ಲಿ ಈಗ ಸಣ್ಣ ಪಟ್ಟಣವಾಗಿರುವ ಸಾಂಗ್ಲಿಯು ಚಾಲುಕ್ಯರ ನೆಲೆಯಾಗಿತ್ತು. ಬ್ರಿಟೀಷರ ಆಳ್ವಿಕೆಯ ಅವಧಿಯಲ್ಲಿ ಸಾಂಗ್ಲಿಯು ಇತರ 11 ಸಂಸ್ಥಾನಗಳ ಜೊತೆಗೆ ಬ್ರೀಟೀಷ್ ಸಾಮ್ರಾಜ್ಯದಲ್ಲಿ ಲೀನವಾಯಿತು. ಮರಾಠರ ಆಡಳಿತಾವಧಿಯಲ್ಲಿ ಸಾಂಗ್ಲಿಯು ಮರಾಠ ಜಾಗೀರ್ ಆಗಿ ಸಹ ಸೇವೆ ಸಲ್ಲಿಸಿತ್ತು.

ಸ್ವಾತಂತ್ರ್ಯ ಪೂರ್ವದಲ್ಲಿ ಸಾಂಗ್ಲಿಯು ಪಟವರ್ಧನ್ ರಾಜ ಮನೆತನದವರ ಆಳ್ವಿಕೆಗೆ ಒಳಪಟ್ಟಿತ್ತು.

ನೀವು ನೋಡಲು ಮರೆಯದ ಸಾಂಗ್ಲಿಯಲ್ಲಿನ ಪ್ರವಾಸಿ ಹೆಗ್ಗುರುತುಗಳು

ಸಾಂಗ್ಲಿಯು, ಹಲವಾರು ದೇವಾಲಯಗಳು, ಸೇತುವೆಗಳು ಮತ್ತು ವನ್ಯ ಜೀವಿ ಧಾಮಗಳಿಂದ ತುಂಬಿ ತುಳುಕುತ್ತಿದೆ. ಸಗರೇಶ್ವರ ವನ್ಯ ಜೀವಿಧಾಮವು ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಈ ವನ್ಯ ಜೀವಿಧಾಮದಲ್ಲಿ ಅಂದಾಜು 52 ಬಗೆಯ ಬೆರಗುಗೊಳಿಸುವ ಪ್ರಾಣಿ ಮತ್ತು ಸಸ್ಯ ಸಂಪತ್ತಿದೆ. ಈ ವನ್ಯ ಜೀವಿಧಾಮದಲ್ಲಿ ಹಲವಾರು ದೇವಾಲಯಗಳು ಮತ್ತು ಪೂಜಾ ಸ್ಥಳಗಳು ನೆಲೆಗೊಂಡಿವೆ.

ಸಂಗಮೇಶ್ವರ ದೇವಾಲಯ ಮತ್ತು ಗಣಪತಿ ದೇವಾಲಯಗಳು ಈ ಪ್ರಾಂತ್ಯದ ಪ್ರಸಿದ್ಧ ದೇವಾಲಯಗಳಾಗಿವೆ. ಈ ಪ್ರಾಚೀನ ಗುಡಿಯು ಶಿವನಿಗಾಗಿ ನಿರ್ಮಿಸಲ್ಪಟ್ಟಿದೆ. ಇದರ ಹೊರಭಾಗವನ್ನು ಕಪ್ಪು ಕಲ್ಲಿನಿಂದ ನಿರ್ಮಿಸಲಾಗಿದ್ದು, ಇಡೀ ದೇವಾಲಯ ಸುಮಾರು ಎರಡು ಎಕರೆಗಳಿಗು ಮಿಗಿಲಾದ ಜಾಗದಲ್ಲಿ ವ್ಯಾಪಿಸಿದೆ. ಹಬ್ಬ ಹರಿದಿನಗಳಂದು ಈ ಎರಡು ದೇವಾಲಯಗಳು ಪ್ರತಿವರ್ಷ ಸಹಸ್ರಾರು ಭಕ್ತರನ್ನು ಆಕರ್ಷಿಸುತ್ತವೆ. ಸಂಗಮೇಶ್ವರ ದೇವಾಲಯವು ಶ್ರಾವಣ ಮಾಸದಲ್ಲಿ ಭಕ್ತಾಧಿಗಳಿಂದ ತುಂಬಿ ತುಳುಕುತ್ತಿರುತ್ತದೆ. ಕಾಶಿ ವಿಶ್ವೇಶ್ವರ ದೇವಾಲಯ, ರಾಮಲಿಂಗ ದೇವಾಲಯ ಮತ್ತು ದತ್ತದೇವ ದೇವಾಲಯವು ಇಲ್ಲಿರುವ ಇನ್ನಿತರ ದೇವಾಲಯಗಳಾಗಿವೆ.

ಈ ಹಲವಾರು ದೇವಾಲಯಗಳ ನಡುವೆ ಮೀರಜ್ ದರ್ಗಾ ಸಹ ಪ್ರಸಿದ್ಧಿಯಲ್ಲಿ ಸಮಪಾಲು ಪಡೆದಿದೆ. ಹಲವಾರು ಜನ ಜಾತಿ ಮತ ಧರ್ಮದ ಭೇಧವಿಲ್ಲದೆ ಈ ಭಾವೈಕ್ಯತೆ ಸಾರುವ ದರ್ಗಾಕ್ಕೆ ಅನುಗ್ರಹ ಕೋರಿ ಆಗಮಿಸುತ್ತಾರೆ. ಸಾಂಗ್ಲಿ ಕೋಟೆಯು ಮರಾಠರ ಆಡಳಿತದ ಅವಧಿಯಲ್ಲಿ ನಿರ್ಮಿಸಲ್ಪಟ್ಟ ಒಂದು ಹೆಮ್ಮೆಯ ಕೋಟೆಯಾಗಿದೆ. ಇಂದು ಈ ಕೋಟೆ ಜಿಲ್ಲಾಧಿಕಾರಿಗಳ ಕಛೇರಿಯಾಗಿ ಕಾರ್ಯ ನಿರ್ವಹಿಸುತ್ತಿದೆ.

ಚಾರಣಿಗರಾದವರು, ಇಲ್ಲಿ ಚಾರಣಕ್ಕೆ ಮತ್ತು ಆರೋಹಣದ ಅವಕಾಶಕ್ಕಾಗಿ ಇಲ್ಲಿನ ಡಂಡೊಬ ಬೆಟ್ಟ ವನ್ಯಧಾಮಕ್ಕೆ ಭೇಟಿಕೊಡುವುದು ಉತ್ತಮ. ಇಲ್ಲಿ ಅವರಿಗಾಗಿ ಹೇಳಿ ಮಾಡಿಸಿದ ತಾಣಗಳು ಇವೆ.

ಸಾಂಗ್ಲಿಗೆ ಏಕೆ ಹೋಗಬೇಕು?

ಸಾಂಗ್ಲಿ ಏಶಿಯಾದಲ್ಲಿಯೆ ಅತ್ಯಧಿಕ ಅರಿಷಿಣ ಉತ್ಪಾದಿಸುವ ತಾಣವಾಗಿದೆ. ನೀವು ಇಲ್ಲಿಗೆ ಆಗಮಿಸಿದಾಗ ಇಲ್ಲಿನ ಮಹಾವೀರ್ ನಗರದ ಮಾರುಕಟ್ಟೆಯಿಂದ ಕೆಲವು ಮಸಾಲೆ ಪದಾರ್ಥಗಳ ನಮೂನೆಯನ್ನು ಮನೆಗೆ ತೆಗೆದುಕೊಂಡು ಹೋಗಬಹುದು.

ಸಾಂಗ್ಲಿಯನ್ನು ಕೊಳ್ಳುವವರ ಸ್ವರ್ಗವೆಂದು ಕರೆಯಬಹುದು. ಇಲ್ಲಿನ ಕೆಲವೊಂದು ವ್ಯಾಪಾರಿ ಕೇಂದ್ರಗಳು ಭೇಟಿಕೊಡುವ ಪ್ರತಿಯೊಬ್ಬ ಗ್ರಾಹಕರ ಕನಸುಗಳನ್ನು ತೃಪ್ತಿಗೊಳಿಸುತ್ತವೆ. ಹಾಗಾಗಿ ನೀವು ಒಂದೊಮ್ಮೆ ಆಭರಣಗಳನ್ನು ಕೊಳ್ಳುವುದಿದ್ದರೆ ಸರಫ್ ಬಜಾರ್ ಕಡೆ ಹೋಗಿ. ಕಪಡ್ ಪೇಟ್ ಪ್ರದೇಶವು ನಿಮಗೆ ಬೇಕಾಗಿರುವ ಸಿದ್ಧ ಮತ್ತು ಜವಳಿಗಳನ್ನು ಕೊಳ್ಳುವ ವಿಪುಲ ಆಯ್ಕೆಯ ಅವಕಾಶಗಳನ್ನು ಒದಗಿಸುತ್ತದೆ. ಮಾರುತಿ ರಸ್ತೆಯು ನೀವು ಬಟ್ಟೆ ಬರೆ ಅಥವಾ ಪಾದರಕ್ಷೆಗಳನ್ನು ಕೊಳ್ಳಲು ಉತ್ತಮ ಸ್ಥಳವಾಗಿದೆ. ಇಲ್ಲಿ ಸೌಂದರ್ಯವರ್ಧಕ ಸಹ ಸಿಗುತ್ತವೆ. ವಸಂತ್ ಮಾರುಕಟ್ಟೆ ಪ್ರದೇಶವು ಒಣ ಹಣ್ಣು ಕೊಳ್ಳಲು ಉತ್ತಮವಾಗಿದ್ದರೆ, ಮಿರಜ್ ಮಾರುಕಟ್ಟೆ ಎಲ್ಲ ಬಗೆಯ ಸಂಗೀತ ಉಪಕರಣಗಳನ್ನು ಕೊಳ್ಳಲು ಸೂಕ್ತವಾದ ಸ್ಥಳವಾಗಿದೆ.

ಸಾಂಗ್ಲಿಯು ಮರಾಠಿ ಸಂಗೀತ ಮತ್ತು ನಾಟಕಗಳ ಹಿನ್ನಿಲೆಯು ಈರ್ಷೆ ಪಡುವಷ್ಟರ ಮಟ್ಟಿಗೆ ಇತಿಹಾಸವನ್ನು ಹೊಂದಿದೆ. ಅದನ್ನು ಇಂದಿಗು ಈ ನಗರದಲ್ಲಿ ಸೂಕ್ಷ್ಮವಾಗಿ ಗಮನಿಸಬಹುದು.

ಈ ನಗರದ ಕುರಿತಾದ ಪುಟ್ಟ ಮಾಹಿತಿಯೇನೆಂದರೆ, ಈ ಊರು ಸಾಮಾಜಿಕ ಮತ್ತು ರಾಜಕೀಯವಾಗಿ ಹಲವಾರು ಜೀವಂತ ದಂತಕಥೆಗಳ ತವರೂರಾಗಿದೆ. ಶ್ರೀ ಆರ್.ಆರ್.ಪಾಟೀಲ್ , ಆಶಾ ಭೋಸ್ಲೆ ಮತ್ತು ವಸಂತದಾದ ಪಾಟೀಲ್ ರಂತಹ ಧೀಮಂತರು ಈ ಊರಿಗೆ ಸೇರಿದವರಾಗಿದ್ದಾರೆ.

ಇನ್ನೂ ಹೆಚ್ಚಿನ ವಿಚಾರಗಳು

ಸಾಂಗ್ಲಿಯು ಸ್ವಲ್ಪ ಮಟ್ಟಿಗೆ ಬಿಸಿಲಿನಿಂದ ಕೂಡಿದ ಮತ್ತು ಶುಷ್ಕ ಹವಾಗುಣವನ್ನು ವರ್ಷದ ವಿವಿಧ ಸಮಯದಲ್ಲಿ ಹೊಂದಿರುತ್ತದೆ. ಬೇಸಿಗೆಕಾಲದಲ್ಲಿ ಇಲ್ಲಿನ ಉಷ್ಣಾಂಶವು ಹಗಲಿನಲ್ಲಿ ಮೈಸುಡುವ 40 ° ಸೆಲ್ಶಿಯಸ್ ವರೆಗೆ ತಲುಪುತ್ತದೆ. ಹಾಗಾಗಿ ಈ ಸಮಯದಲ್ಲಿ ಇಲ್ಲಿಗೆ ಭೇಟಿಕೊಡುವುದು ಅಷ್ಟೊಂದು ಸಮಂಜಸವಲ್ಲ.ಆದರೆ ಮಳೆಗಾಲವು ಈ ಬಿಸಿಲಿನಿಂದ ಸ್ವಲ್ಪ ಮಟ್ಟಿಗೆ ಬಿಡುವು ಕೊಡುತ್ತದೆ.

ಈ ಪ್ರಾಂತ್ಯವು ಸ್ವಲ್ಪಮಟ್ಟಿಗೆ ಉದಾರವಾದ ಮಳೆಯನ್ನು ಕಾಣುತ್ತದೆ. ಸಾಂಗ್ಲಿಯ ಚಳಿಗಾಲವು ತನ್ನ ತಂಪಾದ ಮತ್ತು ಹಿತವಾದ ಹವೆಯಿಂದಾಗಿ ಇಲ್ಲಿ ಸುತ್ತಾಡಲು ಉತ್ತಮ ಸಮಯಾವಕಾಶವನ್ನು ಒದಗಿಸುತ್ತದೆ.

ಸಾಂಗ್ಲಿಗೆ ವಿಮಾನದಲ್ಲಿ , ರೈಲಿನಲ್ಲಿ ಮತ್ತು ರಸ್ತೆ ಮಾರ್ಗದ ಮೂಲಕ ಆರಾಮವಾಗಿ ತಲುಪಬಹುದು. ನೀವು ಇಲ್ಲಿಗೆ ವಿಮಾನದಲ್ಲಿ ತಲುಪಲು ಇಚ್ಛಿಸಿದರೆ ಕೊಲ್ಹಾಪುರ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ. ರೈಲಿನಲ್ಲಾದರೆ ಸಾಂಗ್ಲಿಯು ಮುಂಬೈ, ಪುಣೆ, ಹೈದರಾಬಾದ್ , ಕೊಚ್ಚಿನ್ ಮತ್ತು ದೆಹಲಿಯಂತಹ ಮಹಾರಾಷ್ಟ್ರದ ಒಳಗಿನ ಮತ್ತು ಹೊರಗಿನ ಪ್ರಮುಖ ನಗರಗಳೊಂದಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ರಸ್ತೆಯ ಮೂಲಕವಾದರೆ ಬಾಂಬೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮತ್ತು ರತ್ನಗಿರಿ – ನಾಗ್ಪುರ್ ರಾಷ್ಟ್ರೀಯ ಹೆದ್ದಾರಿಯಂತಹ ಎರಡು ಮಾರ್ಗಗಳು ನೀವು ಸಾಂಗ್ಲಿ ಜಿಲ್ಲೆಗೆ ತಲುಪಲು ನೆರವಾಗುತ್ತವೆ.

ಸಾಂಗ್ಲಿ ಎಂಬ ಸಣ್ಣ ಪಟ್ಟಣವು ಅಭಿವೃದ್ಧಿ ಪಥದಲ್ಲಿ ವೇಗವಾಗಿ ಸಾಗುತ್ತಿರುವ ಪಟ್ಟಣವಾಗಿದೆ. ಇನ್ನಿತರ ವಿಚಾರಗಳ ಜೊತೆಗೆ ಸಾಂಗ್ಲಿಯು ತನ್ನ ಐತಿಹಾಸಿಕ ಹಿನ್ನಲೆಯಿಂದಾಗಿ, ಪ್ರಶಾಂತವಾದ ಸ್ಥಳಗಳಿಂದಾಗಿ, ಕಠಿಣವಾದ ಬೆಟ್ಟಗಳಿಂದಾಗಿ ಮತ್ತು ವ್ಯಾಪಾರಿ ಕೇಂದ್ರಗಳಿಂದಾಗಿ ಪ್ರಸಿದ್ಧಿ ಪಡೆದಿದೆ. ಹೀಗೆ ಹಲವಾರು ಕಾರಣಗಳಿಂದಾಗಿ ಸಾಂಗ್ಲಿಯು ನಿಮ್ಮನ್ನು ಮರಳು ಮಾಡುತ್ತದೆ. ನೀವೇನಾದರು ನಿಮ್ಮ ರಜಾ ದಿನಗಳನ್ನು ಈ ಪಟ್ಟಣದಲ್ಲಿ ಕಳೆಯುವ ಯೋಜನೆ ಹಾಕಿಕೊಂಡಿದ್ದೆ ಆದಲ್ಲಿ, ಖಂಡಿತವಾಗಿ ಈ ಊರು ನಿಮ್ಮ ನಿರೀಕ್ಷೆಗಳನ್ನು ನಿರಾಸೆಗೊಳಿಸಲಾರದು.

Please Wait while comments are loading...