ರಾಂಚಿ ಪ್ರವಾಸೋದ್ಯಮ - ಜಲಪಾತಗಳ ನಗರ

ಜಾರ್ಖಂಡ್ ರಾಜ್ಯದ ರಾಜಧಾನಿಯಾಗಿರುವ ರಾಂಚಿಯು ಜಲಪಾತಗಳ ನಗರವೆಂಬ ಖ್ಯಾತಿಗೆ ಪಾತ್ರವಾಗಿದೆ. ಇದು ಈ ರಾಜ್ಯದ ಎರಡನೆ ಅತ್ಯಂತ ಜನಸಂಖ್ಯೆಯನ್ನು ಹೊಂದಿರುವ ನಗರವಾಗಿ ಸಹ ಗುರುತಿಸಲ್ಪಟ್ಟಿದೆ. ರಾಂಚಿಯು ಛೋಟಾ ನಾಗ್ಪುರ್ ಪ್ರಸ್ಥಭೂಮಿಯ ದಕ್ಷಿಣ ಭಾಗದಲ್ಲಿ ನೆಲೆಗೊಂಡಿದೆ. ಈ ನಗರವು ಸಮುದ್ರ ಮಟ್ಟದಿಂದ 2140 ಅಡಿ ಎತ್ತರದಲ್ಲಿ ನೆಲೆಗೊಂಡಿದ್ದು, ಅತ್ಯಂತ ನಯನ ಮನೋಹರವಾದ ಪರಿಸರವನ್ನು ಹೊಂದಿದೆ. ಅಲ್ಲದೆ ಇಲ್ಲಿ ನಗರ ಜೀವನಕ್ಕೆ ಬೇಕಾದ ಎಲ್ಲ ರೀತಿಯ ಸೌಲಭ್ಯಗಳು ದೊರೆಯುತ್ತವೆ.  ಈ ನಗರದ ಸುತ್ತಮುತ್ತ ಹಲವಾರು ಜಲಪಾತಗಳು, ಶಿಲಾ ರಚನೆಗಳು ಮತ್ತು ದಿಬ್ಬಗಳು ಕಂಡು ಬರುತ್ತವೆ. ಇದರ ಜೊತೆಗೆ ಈ ಊರಿನಲ್ಲಿ ಹಲವಾರು ಕೈಗಾರಿಕೆಗಳು ಸಹ ನೆಲೆಗೊಂಡಿವೆ ಇವುಗಳು ಸಹ ಭೇಟಿ ನೀಡಲು ಯೋಗ್ಯವಾಗಿವೆ. ಇಡೀ ವರ್ಷವು ಇಲ್ಲಿ ಆಹ್ಲಾದಕರವಾದ ವಾತಾವರಣವಿರುತ್ತದೆ.

ರಾಂಚಿ ಜಿಲ್ಲೆಯನ್ನು ಮೊದಲು ಲೋಹರ್ಡಗ ಎಂದು ಕರೆಯಲಾಗುತ್ತಿತ್ತು. ಹಳೆಯ ರಾಂಚಿ ಜಿಲ್ಲೆಯು 1831 - 32 ರಲ್ಲಿ ಉಂಟಾದ ಕೋಲ್ ದಂಗೆಯ ಪರಿಣಾಮವಾಗಿ ಅಸ್ತಿತ್ವಕ್ಕೆ ಬಂದಿತು. 1899ರಲ್ಲಿ ಲೋಹರ್ಡಗ ಎಂಬ ಹೆಸರನ್ನು ಇಲ್ಲಿ ನೆಲೆಗೊಂಡಿದ್ದ ಸಣ್ಣ ಹಳ್ಳಿಯಾಗಿದ್ದ ರಾಂಚಿಯ ಹೆಸರಿನಿಂದ ಕರೆಯಲಾಯಿತು.

ರಾಂಚಿಯ ಸುತ್ತ ಮುತ್ತ ಇರುವ ಪ್ರವಾಸಿ ಸ್ಥಳಗಳು

ಜಾರ್ಖಂಡಿನ ರಾಜಧಾನಿ ರಾಂಚಿಯನ್ನು ಜಲಪಾತಗಳ ಮತ್ತು ಕೆರೆಗಳ ನಗರವೆಂದು ಕರೆಯಲಾಗುತ್ತದೆ. ಡಸ್ಸಮ್ ಜಲಪಾತವು ರಾಂಚಿಯಿಂದ 34 ಕಿ.ಮೀ ದೂರದಲ್ಲಿ, ರಾಂಚಿ - ಟಾಟಾ ರಸ್ತೆಯಲ್ಲಿ ಬರುವ ಟೈಮರ ಎಂಬ ಹಳ್ಳಿಯ ಬಳಿಯಲ್ಲಿ ನೆಲೆಗೊಂಡಿದೆ. ಇಲ್ಲಿ ಸುಬರ್ ನರೆಖ ನದಿಯ ಉಪನದಿಯಾದ ಕಚ್ನಿ ನದಿಯು 144 ಅಡಿ ಎತ್ತರದಿಂದ ಜಲಪಾತವಾಗಿ ಧುಮ್ಮಿಕ್ಕುತ್ತದೆ.

ಇದನ್ನು ಡಸ್ಸಂ ಗಾಘ್ ಎಂದು ಸಹ ಕರೆಯುತ್ತಾರೆ. ಇದರಂತೆಯೇ ಹುಂಡ್ರು ಜಲಪಾತವು ರಾಂಚಿಯಿಂದ 45 ಕಿ.ಮೀ ದೂರದಲ್ಲಿ ರಾಂಚಿ - ಪುರುಲಿಯ ರಸ್ತೆಯಲ್ಲಿ ಕಂಡುಬರುತ್ತದೆ. ಇಲ್ಲಿ ಸುಬರ್ ನರೆಖ ನದಿಯು 320 ಅಡಿ ಎತ್ತರದಿಂದ ಜಲಪಾತವಾಗಿ ಧುಮ್ಮಿಕ್ಕುತ್ತದೆ.

ಜೋಹ್ನ ಜಲಪಾತ ಅಥವಾ ಗೌತಮಧಾರ ಜಲಪಾತವು ರಾಂಚಿಯಿಂದ 40 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇಲ್ಲಿಗೆ ಬಸ್ ಅಥವಾ ರೈಲಿನ ಮೂಲಕ ತಲುಪಬಹುದು. 500 ಮೆಟ್ಟಿಲುಗಳನ್ನು ಇಳಿದು ಈ ಜಲಪಾತದ ವೈಭವವನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿ ಒಂದು ಬುದ್ಧನ ದೇವಾಲಯವಿದ್ದು, ಒಂದು ಪ್ರವಾಸಿ ಮಂದಿರ ಸಹ ಇದೆ. ಇಲ್ಲಿಗೆ ಸಮೀಪದಲ್ಲಿ ಕಂಚಿ ನದಿಯು ಹರಿಯುತ್ತದೆ. ನಕ್ಷತ್ರ ವನ್. ಗೊಂಡಾ ಮತ್ತು ಟಾಗೂರ್ ಬೆಟ್ಟಗಳು ಇಲ್ಲಿರುವ ಮತ್ತಿತರ ಪ್ರವಾಸಿ ತಾಣಗಳಾಗಿವೆ.

ಭೂಗೋಳ

ರಾಂಚಿಯು ಛೋಟಾ ನಾಗ್ಪುರ್ ಪ್ರಸ್ಥಭೂಮಿಯ ದಕ್ಷಿಣ ಭಾಗದಲ್ಲಿ ನೆಲೆಗೊಂಡಿದೆ. ಇದು ದಖನ್ ಪ್ರಸ್ಥಭೂಮಿಯ ಪೂರ್ವ ಭಾಗದಲ್ಲಿ ನೆಲೆಗೊಂಡಿದೆ. ಸುಬರ್ನರೆಖ ನದಿ ಮತ್ತು ಅದರ ಉಪನದಿಗಳು ಇಲ್ಲಿನ ನದಿ ನೀರಿನ ವ್ಯವಸ್ಥೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿವೆ. ಕಂಕೆ, ಹಟಿಯ ಮತ್ತು ರುಕ್ಕ ಜಲಾಶಯಗಳನ್ನು ಇಲ್ಲಿ ನಿರ್ಮಿಸಲಾಗಿದೆ. ಇವುಗಳ ಕಾಲುವೆಗಳು ಇಲ್ಲಿನ ನೀರಾವರಿ ಬೇಡಿಕೆಗಳನ್ನು ಪೂರೈಸುತ್ತಿವೆ.

ರಾಂಚಿಯು ಬೆಟ್ಟಗಾಡು ಕಾಡುಗಳನ್ನು ಹೊಂದಿದೆ. ಇಲ್ಲಿನ ದಟ್ಟವಾದ ಅರಣ್ಯಗಳು ಇಲ್ಲಿ ವಿಶ್ರಾಂತಿ ಬಯಸಿ ಬರುವ ಪ್ರವಾಸಿಗರಿಗೆ ಆಹ್ಲಾದಕರವಾದ ವಾತಾವರಣವನ್ನು ನೀಡುವಲ್ಲಿ ಪ್ರಭಾವ ಬೀರುತ್ತವೆ. ಬ್ರಿಟೀಷರ ಅವಧಿಯಲ್ಲಿ ಈ ಸ್ಥಳಕ್ಕೆ "ಗಿರಿಧಾಮ" ವೆಂಬ ಸ್ಥಾನಮಾನ ಲಭಿಸಿತ್ತು.

ಕ್ಷಿಪ್ರಗತಿಯಲ್ಲಿ ಏರುತ್ತಿರುವ ಜನಸಂಖ್ಯೆ ಮತ್ತು ಕೈಗಾರೀಕರಣವು ಇಲ್ಲಿನ ಹವಾಮಾನದ ಮೇಲೆ ಗಣನೀಯವಾದ ಪರಿಣಾಮವನ್ನು ಬೀರಿದೆ. ಇದರಿಂದಾಗಿ ಇಲ್ಲಿನ ಉಷ್ಣಾಂಶವು ಸಹ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ. ಇದರ ಪರಿಣಾಮವಾಗಿ ಈ ನಗರವು ಇಂದು ಗಿರಿಧಾಮವೆಂಬ ಸ್ಥಾನಮಾನವನ್ನು ಕಳೆದುಕೊಂಡಿದೆ.

ರಾಂಚಿಗೆ ಭೇಟಿ ನೀಡಲು ಅತ್ಯುತ್ತಮ ಅವಧಿ

ರಾಂಚಿಗೆ ಭೇಟಿ ನೀಡಲು ಅಕ್ಟೋಬರ್ ನಿಂದ ಮೇ ತಿಂಗಳ ನಡುವಿನ ಅವಧಿಯು ಅತ್ಯುತ್ತಮ ಅವಧಿಯಾಗಿದೆ.

ರಾಂಚಿಗೆ ತಲುಪುವುದು ಹೇಗೆ

ರಾಂಚಿಗೆ ಈ ರಾಜ್ಯದ ಎಲ್ಲಾ ಪ್ರಮುಖ ನಗರಗಳಿಂದ ರಸ್ತೆ ಮತ್ತು ರೈಲು ಮಾರ್ಗಗಳು ಉತ್ತಮವಾಗಿದ್ದು, ಉತ್ತಮ ಸಂಪರ್ಕವನ್ನು ಹೊಂದಿದೆ.

ರಾಂಚಿ ಹವಾಮಾನ

ರಾಂಚಿಯಲ್ಲಿ ಹವಾಮಾನವು ಸಾಮಾನ್ಯವಾಗಿ ಬಿಸಿಲಿನಿಂದ ಕೂಡಿದ, ಆರ್ದ್ರತೆಯಿರುವ ಬೇಸಿಗೆ ಮತ್ತು ಮಿತವಾದ ಚಳಿಯಿಂದ ಕೂಡಿದ ಚಳಿಗಾಲಗಳು ಕಂಡುಬರುತ್ತವೆ.  ಬೇಸಿಗೆಯಲ್ಲಿ ಇಲ್ಲಿನ ಉಷ್ಣಾಂಶವು 42 ರಿಂದ 20° ಸೆಲ್ಶಿಯಸ್ ಇರುತ್ತದೆ. ಚಳಿಗಾಲದಲ್ಲಿ ಇಲ್ಲಿನ ಉಷ್ಣಾಂಶವು 25 ರಿಂದ 0° ಸೆಲ್ಶಿಯಸ್ ಇರುತ್ತದೆ. ಡಿಸೆಂಬರ್ ಮತ್ತು ಜನವರಿಗಳು ಇಲ್ಲಿನ ಅತ್ಯಂತ ಚಳಿಯ ತಿಂಗಳುಗಳಾಗಿರುತ್ತವೆ. ಆಗ ಈ ನಗರದ ಕೆಲವು ಭಾಗಗಳಲ್ಲಿ ಉಷ್ಣಾಂಶವು ಹೆಪ್ಪುಗಟ್ಟುವ ಚಳಿಯನ್ನು ಹೊಂದಿರುತ್ತದೆ. ಮಳೆಗಾಲದಲ್ಲಿ ರಾಂಚಿಯಲ್ಲಿ ಅಧಿಕ ಪ್ರಮಾಣದ ಮಳೆಯನ್ನು ನಾವು ಕಾಣಬಹುದು. ಮಳೆಗಾಲವು ಇಲ್ಲಿ ಸಾಮಾನ್ಯವಾಗಿ ಜೂನ್‍ನಿಂದ ಸೆಪ್ಟೆಂಬರ್ ವರೆಗೆ ಇರುತ್ತದೆ.

Please Wait while comments are loading...